ಕೊವಿಡ್ ನಂತೆಯೇ ಮತ್ತೊಂದು ವೈರಸ್ ಮುಚ್ಚಿಟ್ಟಿತಾ ಚೀನಾ – ನಿಗೂಢ ಸೋಂಕಿನ ಭೀತಿ ಹಿನ್ನೆಲೆ ಭಾರತದಲ್ಲಿ ಹೈ ಅಲರ್ಟ್
ಚೀನಾ ಸರ್ಕಾರ ಈ ಹಿಂದೆ ಕೋವಿಡ್ ಸೋಂಕನ್ನೂ ಮುಚ್ಚಿಟ್ಟಿತ್ತು. ಇದೀಗ ಇದೇ ಮಾದರಿಯಲ್ಲಿ ಹೊಸ ಸೋಂಕಿನ ವಿಚಾರವನ್ನೂ ಮುಚ್ಚಿಡುತ್ತಿದ್ಯಾ ಎಂಬ ಆತಂಕ ಶುರುವಾಗಿದೆ. ಇದರ ನಡುವೆ ಸೋಂಕಿನ ಆರ್ಭಟ ಭಾರತಕ್ಕೂ ವ್ಯಾಪಿಸಬಹುದೇ? ಇದೇ ಭೀತಿ ಈ ಭಾರತೀಯರಲ್ಲಿ ಶುರುವಾಗಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುತ್ತೋಲೆ ಹೊರಡಿಸಿದೆ. ಅಷ್ಟಕ್ಕೂ ಚೀನಾ ಮಾದರಿ ಸೋಂಕು ಭಾರತದಲ್ಲಿ ಇನ್ನೂ ದಾಖಲಾಗಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಆತಂಕ ಪಡುವ ಅಗತ್ಯ ಇಲ್ಲ ಎನ್ನಲಾಗಿದೆ. ಇಷ್ಟಾದ್ರೂ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಲ್ಲಿ ಪತ್ರ ಬರೆದಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಔಷಧಗಳು, ಇನ್ಫ್ಲ್ಯುಯೆನ್ಸಾ ಲಸಿಕೆಗಳು, ಆಕ್ಸಿಜನ್, ಆ್ಯಂಟಿಬಯೊಟಿಕ್, ವೈಯಕ್ತಿಕ ಸುರಕ್ಷತೆಯ ಸಾಧನಗಳನ್ನ ಹೆಚ್ಚಿಸಿಕೊಳ್ಳಿ. ಹಾಗೇ ಇತರೆ ಪರೀಕ್ಷಾ ಕಿಟ್ಗಳಂತಹ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಸೋಂಕು ನಿಯಂತ್ರಿಸುವ ಅಗತ್ಯ ಕ್ರಮಗಳ ಬಗ್ಗೆ ಎಚ್ಚರ ವಹಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ. ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯವಿದ್ದರೆ ಕೋವಿಡ್ ಸಂದರ್ಭದಲ್ಲಿ ಅನುಸರಿಸಲಾದ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು. ಅಲ್ಲದೇ ಸೋಂಕಿನ ಲಕ್ಷಣಗಳು ಮತ್ತು ತೀವ್ರ ಉಸಿರಾಟದ ಸಮಸ್ಯೆಗಳು ಹೊಂದಿರುವವರ ಮೇಲೆ ತೀವ್ರ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಯೋಜನೆ ಅಡಿಯಲ್ಲಿ ಹದಿಹರೆಯದವರು ಮತ್ತು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಜೊತೆಗೆ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಇತರೇ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಐಎಲ್ಐ ಮತ್ತು ಸಾರಿ ಪ್ರಕರಣಗಳು ಪತ್ತೆಯಾದಲ್ಲಿ ಅಂತಹ ಪ್ರಕರಣಗಳ ಮಾಹಿತಿಯನ್ನ ಐಡಿಎಸ್ಪಿ-ಐಹೆಚ್ಐಪಿ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ಅಲ್ಲದೇ ಗಂಟಲು ದ್ರವ ಮತ್ತು ಸಾರಿ ಪ್ರಕರಣಗಳ ಪರೀಕ್ಷೆ ಕೈಗೊಳ್ಳಬೇಕು. ಅದರಲ್ಲೂ ಮಕ್ಕಳ ಮಾದರಿ ಪರೀಕ್ಷೆ ಮಾಡಿ ಮಾದರಿಗಳನ್ನು ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳಿಗೆ ಕಳುಹಿಸಬೇಕು ಎಂದು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ : CBI ಕಗ್ಗಂಟು.. ಡಿಕೆಶಿ ಮುಂದಿವೆ ಸಾಲು ಸಾಲು ಸವಾಲು – ಡಿಸಿಎಂಗೆ ಅಕ್ರಮ ಆಸ್ತಿಯೇ ಉರುಳು?
ಕೊರೊನಾದಿಂದ ಈಗಾಗಲೇ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ತಿಂಗಳುಗಟ್ಟಲೆ ಲಾಕ್ಡೌನ್ ಹೇರಿ ಸಾಕಷ್ಟು ಹೊಡೆತ ತಿಂದಿವೆ. ಐಸೋಲೇಷನ್, ಸೀಲ್ಡೌನ್, ಲಾಕ್ಡೌನ್, ವ್ಯಾಕ್ಸಿನೇಷನ್ ಹೊರತಾಗಿಯೂ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟಾದ್ರೂ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಚೀನಾದಲ್ಲಿ ಹುಟ್ಟಿದ್ದ ಈ ಕೊವಿಡ್ 19 ವೈರಸ್ ಮನುಕುಲಕ್ಕೆ ನರಕ ತೋರಿಸಿದೆ. ಇನ್ನೇನು ವೈರಸ್ ಹಾವಳಿ ತಗ್ಗಿತು ಅನ್ನೋವಾಗಲೇ ಚೀನಾದ ಮತ್ತೊಂದು ನಿಗೂಢ ವೈರಸ್ ಜಗತ್ತಿನಾದ್ಯಂತ ಭಯ ಸೃಷ್ಟಿಸಿದೆ. ಹೀಗಾಗೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಚೀನಾದಿಂದ ವರದಿ ತರಿಸಿಕೊಂಡಿದೆ. ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಳ್ತಿರುವ ಈ ಸೋಂಕು ಶ್ವಾಸಕೋಶದ ಮೇಲೆ ಪರಿಣಾಮ ಬೀರಲಿದ್ದು, ಉಸಿರಾಟದ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಚೀನಾದಲ್ಲಿ ಈಗಾಗಲೇ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳೂ ಫಿಲ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕೇಂದ್ರ ನಿಗಾ ವಹಿಸಿದೆ. ಹಾಗೇ ಬೆಂಗಳೂರಿನಲ್ಲೂ ಕೂಡ ಹೊಸ ರೋಗದ ಭೀತಿ ಆವರಿಸಿದ್ದು, ಬಿಬಿಎಂಪಿ ಕೂಡ ಅಲರ್ಟ್ ಆಗಿದೆ.
ಕೊರೊನಾ ವಿಚಾರದಲ್ಲಿ ಸಾಕಷ್ಟು ಕಳ್ಳಾಟ ಆಡಿದ್ದ ಚೀನಾ ಇಡೀ ದೇಶಾದ್ಯಂತ ಸೋಂಕು ಹಬ್ಬಿಸಿತ್ತು. ಮೊದಲಿಗೆ ಚೀನಾದ ವುಹಾನ್ನಲ್ಲಿ ಪತ್ತೆಯಾದ ಕೊರೊನಾ ವೈರಸ್ ಬಳಿಕ ವಿಶ್ವದಾದ್ಯಂತ ಸುಮಾರು 25 ಲಕ್ಷ ಮಂದಿಯನ್ನ ಬಲಿ ಪಡೆದಿತ್ತು. ಇದೀಗ ಚೀನಾದಲ್ಲಿ ಹೊಸದಾಗಿ ಹುಟ್ಟಿಕೊಂಡಿರುವ ನ್ಯುಮೋನಿಯಾ ಮತ್ತೊಮ್ಮೆ ಕೊರೊನಾ ವೈರಸ್ನಂತೆ ಇಡೀ ಜಗತ್ತಿಗೆ ಮಾರಕವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಯಾಕಂದ್ರೆ ಮಕ್ಕಳಲ್ಲಿ ಮೈಕೋಪ್ಲಾಸ್ಮಾದಿಂದ ಉಂಟಾಗುವ ನ್ಯುಮೋನಿಯಾ ರೀತಿಯ ಸೋಂಕು ಉಲ್ಬಣವಾಗಿದೆ. ವೈದ್ಯರ ಭೇಟಿ ಮಾಡಲು ಮಕ್ಕಳು ಗಂಟೆಗಟ್ಟಲೆ ಕಾಯಬೇಕಾಗಿದೆ. ಆಸ್ಪತ್ರೆಯಲ್ಲಿ ಒಂದು ಕೈಗೆ ಡ್ರಿಪ್ಸ್ ಹಾಕ್ಕೊಂಡು ಹೋಂ ವರ್ಕ್ ಮುಂತಾದ ಕೆಲಸಗಳನ್ನು ಮಕ್ಕಳು ಅಲ್ಲೇ ಮಾಡುತ್ತಿರುವ ವಿಡಿಯೋಗಳು ವೈರಲ್ ಆಸುತ್ತಿವೆ. ಇದೆಲ್ಲದರ ಮಧ್ಯೆ ಚೀನಾದಲ್ಲಿ ಮಾಸ್ಕ್ ಕಡ್ಡಾಯ ನಿಯಮವನ್ನು ಸಹ ಮರಳಿ ತರಲಾಗಿದೆ. ಜನರು ಆಸ್ಪತ್ರೆಗಳಲ್ಲಿ ಮಾಸ್ಕ್ಗಳನ್ನು ಧರಿಸಿ ಓಡಾಡುತ್ತಿದ್ದಾರೆ. ಮಾತ್ರವಲ್ಲ ಸಾಮಾಜಿಕ ಅಂತರ ಪಾಲನೆ ಮಾಡುವುದು ಸಹ ಕಡ್ಡಾಯವಾಗಿದೆ. ಒಟ್ಟಾರೆ ಕೊರೊನಾ ಕಡಿಮೆಯಾದ ಬಳಿಕ ನಿಟ್ಟುಸಿರು ಬಿಟ್ಟಿದ್ದ ಜನರಿಗೆ ಈಗ ಚೀನಾದ ಮತ್ತೊಂದು ನಿಗೂಢ ವೈರಸ್ ಭಯ ಬೀಳುವಂತೆ ಮಾಡಿದೆ. ಇದೇ ಕಾರಣಕ್ಕೆ ಭಾರತದಲ್ಲೂ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲು ಸೂಚನೆ ನೀಡಲಾಗಿದೆ.