ಕರ್ನಾಟಕದ ಸಂಸ್ಕೃತಿ ಜಗತ್ತಿಗೆ ಸಾರಿದ ಸ್ವರ ಸಾಮ್ರಾಜ್ಞಿ – ಕಿರಾಣಾ ಘರಾಣಾದ ಮೇರು ಕಲಾವಿದೆ ಡಾ. ಗಂಗೂಬಾಯಿ ಹಾನಗಲ್

ಕರ್ನಾಟಕದ ಸಂಸ್ಕೃತಿ ಜಗತ್ತಿಗೆ ಸಾರಿದ ಸ್ವರ ಸಾಮ್ರಾಜ್ಞಿ – ಕಿರಾಣಾ ಘರಾಣಾದ ಮೇರು ಕಲಾವಿದೆ ಡಾ. ಗಂಗೂಬಾಯಿ ಹಾನಗಲ್

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜೆ, ಕಿರಾಣಾ ಘರಾಣಾದ ಮೇರು ಕಲಾವಿದೆ ಡಾ. ಗಂಗೂಬಾಯಿ ಹಾನಗಲ್. ಜೀವನದಲ್ಲಿ ಎಷ್ಟೇ ಸಮಸ್ಯೆ ಎದುರಾದರೂ ಹಿಂದೂಸ್ತಾನಿ ಸಂಗೀತವನ್ನು ರಕ್ತದಲ್ಲೇ ಕರಗತ ಮಾಡಿಕೊಂಡು ಯಶಸ್ಸಿನ ಉತ್ತುಂಗಕ್ಕೆ ಏರಿದ ಧೀರ ಹೆಣ್ಣು ಮಗಳು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪುರುಷ ನಿರ್ಮಿತ ಕೋಟೆಯನ್ನು ಪ್ರವೇಶಿಸಿದ ಕರ್ನಾಟಕ ಮೊದಲ ಗಾಯಕಿ ಗಂಗೂಬಾಯಿ ಹಾನಗಲ್.

ಇದನ್ನೂ ಓದಿ:ನಡೆದಾಡುವ ವಿಶ್ವಕೋಶ ಶಿವರಾಮ ಕಾರಂತರು – ಕರುನಾಡಿನ ಹೆಮ್ಮೆ ಕಡಲತೀರದ ಭಾರ್ಗವ

1913ರ ಮಾರ್ಚ್ 5 ರಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಹುಟ್ಟಿದರೂ ಇವರು ಬೆಳೆದಿದ್ದು ಧಾರವಾಡದಲ್ಲಿ. 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆಗ ಸ್ವಾಗತಗೀತೆ ಹಾಡಿದವರು ಪುಟ್ಟ ಗಾನಕೋಗಿಲೆ ಗಂಗೂಬಾಯಿ. ಗಾಂಧೀಜಿ ಅವರೆದುರಿಗೆ ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ ಎಂದು ಹಾಡಿ ಗಾಂಧೀಜಿಯವರ ಮನಗೆದ್ದಿದ್ದರು. ಅಂದು ನೆರೆದಿದ್ದ ಗಣ್ಯರು ಕೂಡಾ ಗಂಗೂಬಾಯಿಯವರ ಗಾಯನಕ್ಕೆ ತಲೆದೂಗಿದ್ದರು. ಅದೇ ಪುಟ್ಟಬಾಲಕಿ ನಂತರ ತನ್ನ ಗಾಯನದ ಮೂಲಕವೇ ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದ ಉದ್ದಗಲಕ್ಕೂ ಹಾರಿಸಿದ್ದರು.

ಗಂಗೂಬಾಯಿಯವರ ಸಂಗೀತ ಸಾಧನೆಯ ಹಿಂದಿರುವ ಪ್ರೇರಕ ಶಕ್ತಿಯೇ ಅವರ ತಾಯಿ ಅಂಬಾಬಾಯಿ. ಅವರು ಸ್ವತಃ ಕರ್ನಾಟಕ ಸಂಗೀತದ ಗಾಯಕಿ. ಗಂಗೂಬಾಯಿಯವರು ಸುಪ್ರಸಿದ್ಧ ಕಿರಾಣಾ ಘರಾಣಾ ಗಾಯಕರಾದ ಸವಾಯಿ ಗಂಧರ್ವರ ಶಿಷ್ಯೆಯೂ ಹೌದು. ಮದುವೆಯಾದ ಮೇಲೂ ಗಂಗೂಬಾಯಿಯವರಿಗೆ ಅವರ ಪತಿ ಗುರುನಾಥ ಕೌಲಗಿ ಕೂಡಾ ಸಂಗೀತಕ್ಕೆ ಆಸರೆಯಾಗಿ ನಿಂತರು.

1932ರಲ್ಲಿ ಗಂಗೂಬಾಯಿಯವರು ಮುಂಬಯಿಗೆ ತೆರಳಿದರು. ಅಲ್ಲಿಂದ ಗಂಗೂಬಾಯಿಯವರ ಸಂಗೀತ ದಿಗ್ವಿಜಯ ಪ್ರಾರಂಭವಾಯಿತು. ಮುಂಬಯಿಯಲ್ಲಿ ಕಚೇರಿಗಳನ್ನು ನೀಡಿದ ಗಂಗೂಬಾಯಿಯವರು ಮುಂಬಯಿ ಆಕಾಶವಾಣಿಯಲ್ಲಿ ಸಹ ಹಾಡತೊಡಗಿದರು. ಗಂಗೂಬಾಯಿಯವರ ಹಾಡುಗಾರಿಕೆಯನ್ನು ಆ ಕಾಲದ ಸಂಗೀತ ಸಾಧಕರಾದ ಉಸ್ತಾದ್ ಫಯಾಜ್ ಖಾನ್, ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಮೊದಲಾದವರು ಮೆಚ್ಚಿಕೊಂಡಿದ್ದರು. ನಾಡು ನುಡಿಯ ಬಗ್ಗೆ ಅಪಾರ ಕಾಳಜಿಯಿದ್ದ ಗಂಗೂಬಾಯಿಯವರು ಗೋಕಾಕ್ ಚಳವಳಿ ಸಮಯದಲ್ಲಿ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಕನ್ನಡತನವನ್ನು ಎತ್ತಿಹಿಡಿದಿದ್ದರು. ಒಮ್ಮೆ ಮೈಸೂರು ದಸರೆಯ ಸಂದರ್ಭದಲ್ಲಿ ಮೈಸೂರಿನ ಅರಮನೆಯಲ್ಲಿ ಇಡೀ ವಾತಾವರಣವನ್ನೆಲ್ಲಾ ತಮ್ಮ ದೇವಗಾನದಲ್ಲಿ ತುಂಬಿಸಿದ್ದರು ಗಂಗೂಬಾಯಿ ಹಾನಗಲ್ಲರು.

ಇವರ ಸಂಗೀತಯಾತ್ರೆ ಉತ್ಸಾಹದಿಂದಲೆ ಸಾಗಿತಾದರೂ, ಜೀವನಯಾತ್ರೆಯಲ್ಲಿ ಅನೇಕ ಎಡರು ತೊಡರುಗಳು ಎದುರಾದವು. ಅದನ್ನೆಲ್ಲಾ ಮೀರಿ ಗಂಗೂಬಾಯಿಯವರು ಸಂಗೀತ ಕ್ಷೇತ್ರಕ್ಕೆ ತನ್ನನ್ನು ಸಂಪೂರ್ಣ ಅರ್ಪಿಸಿಕೊಂಡರು. ಗಂಗೂಬಾಯಿಯವರು ರಾಷ್ಟ್ರೀಯ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ವರಕವಿ ದ.ರಾ.ಬೇಂದ್ರೆಯವರು ಇವರ ಗುರುಗಳಾಗಿದ್ದರು. ಈ ಗುರು ಶಿಷ್ಯ ಸಂಬಂಧ ಬೇಂದ್ರೆಯವರ ಜೀವಿತದವರೆಗೂ ಮುಂದುವರಿದಿತ್ತು. ತೊಂಬತ್ತೆಳು ವರ್ಷದ ಬದುಕನ್ನು ನಡೆಸಿದ ಗಂಗೂಬಾಯಿ ಹಾನಗಲ್ಲರು 2009ರ ಜುಲೈ 21ರಂದು ನಿಧನರಾದರು. ಗಂಗೂಬಾಯಿ ತಮ್ಮ ಜೀವನಪರ್ಯಂತ ಸೀದಾ ಸಾದಾ ವ್ಯಕ್ತಿತ್ವವನ್ನೇ ರೂಪಿಸಿಕೊಂಡವರು. ಅವರಿಗೆ ಸಿಕ್ಕ ಪ್ರಶಸ್ತಿಗಳು ಅದೆಷ್ಟೋ.  ರಾಷ್ಟ್ರಮಟ್ಟದಲ್ಲೂ ಮೇರುಮಟ್ಟದ ಪ್ರಶಸ್ತಿಗಳು ಮುಡಿಗೇರಿದ್ದವು. ಸಾವಿರಾರು ಬಿರುದು ಸನ್ಮಾನಗಳು ಸ್ವರಸಾಮ್ರಾಜ್ಞಿಯನ್ನು ಅರಸಿಕೊಂಡು ಬಂದಿತ್ತು. ಹಿಂದೂಸ್ಥಾನೀ ಸಂಗೀತದ ಮೂಲಕ ಸಂಗೀತಾಸಕ್ತರ ಹೃದಯ ಗೆದ್ದು ಆ ಮೂಲಕ ಕರ್ನಾಟಕದ ಘನತೆ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಜಗತ್ಪ್ರಸಿದ್ಧ ಮಾಡಿದ ಕೀರ್ತಿ ಸಂಗೀತ ಕಲಾರತ್ನ ಗಂಗೂಬಾಯಿ ಹಾನಗಲ್ ಅವರದ್ದು. ಗಂಗೂಬಾಯಿಯವರು ನಮ್ಮ ಕರುನಾಡಿನ ಹೆಮ್ಮೆ.

Sulekha