ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ಮರು ಆಯ್ಕೆ ಮಾಡಲು ಕಾರಣಗಳೇನು? – ಎಷ್ಟು ವರ್ಷ ಟೀಮ್ ಇಂಡಿಯಾದಲ್ಲೇ ಇರ್ತಾರೆ ದ್ರಾವಿಡ್?
ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರೇ ಮುಂದುವರಿಯಲಿದ್ದಾರೆ. ಕೇವಲ ದ್ರಾವಿಡ್ ಮಾತ್ರವಲ್ಲ. 2021ರಿಂದ ದ್ರಾವಿಡ್ ಜೊತೆಗೆ ಕೋಚ್ ಸ್ಟಾಫ್ಗಳಾಗಿ ಯಾರೆಲ್ಲಾ ಇದ್ದರೋ, ಅವರೆಲ್ಲರೂ ಕೂಡಾ ಮುಂದುವರೆಯುತ್ತಾರೆ. ಟೀಂ ಇಂಡಿಯಾದ ಕೋಚಿಂಗ್ ಸ್ಟಾಫ್ನಲ್ಲಿ ಯಾವುದೇ ಬದಲಾವಣೆಗಳಾಗೋದಿಲ್ಲ. ಹಾಗಿದ್ರೆ ರಾಹುಲ್ ದ್ರಾವಿಡ್ ಇನ್ನೂ ಎಷ್ಟು ವರ್ಷಗಳ ಕಾಲ ಟೀಂ ಇಂಡಿಯಾದ ಕೋಚ್ ಆಗಿರ್ತಾರೆ. ದ್ರಾವಿಡ್ರನ್ನೇ ಕೋಚ್ ಆಗಿ ಕಂಟಿನ್ಯೂ ಮಾಡೋಕೆ ಕಾರಣವೇನು? ಎಂಬ ಬಗ್ಗೆ ವರದಿ ಇಲ್ಲಿದೆ.
ಇದನ್ನೂ ಓದಿ: ಟಿ-20 ಸೀರಿಸ್ನಲ್ಲಿ ಬೌಲಿಂಗ್ ವಿಭಾಗದಲ್ಲಿ ವೈಫಲ್ಯ – ಟೀಮ್ ಇಂಡಿಯಾದ ಬೌಲರ್ಗಳು ಎಡವುತ್ತಿರುವುದು ಎಲ್ಲಿ?
ಬಿಸಿಸಿಐ ಜೊತೆಗಿನ ಒಪ್ಪಂದದ ಪ್ರಕಾರ ಈ ಬಾರಿಯ ವಂಡೇ ವರ್ಲ್ಡ್ಕಪ್ಗೆ ದ್ರಾವಿಡ್ ಕೋಚಿಂಗ್ ಅವಧಿ ಮುಕ್ತಾಯವಾಗಿತ್ತು. ಎರಡು ವರ್ಷಗಳ ಕಾಲ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ಕಾಂಟ್ರಾಕ್ಟ್ಗೆ ಸಹಿ ಹಾಕಿದ್ದರು. ಈ ಬಾರಿ ವರ್ಲ್ಡ್ಕಪ್ ಫೈನಲ್ ಮ್ಯಾಚ್ನ್ನ ಗೆದ್ದಿಲ್ಲ ಅನ್ನೋದನ್ನು ಬಿಟ್ಟರೆ, ದ್ರಾವಿಡ್ ಕೋಚಿಂಗ್ನಲ್ಲಿ ಟೀಂ ಇಂಡಿಯಾ ಬೆಸ್ಟ್ ಪರ್ಫಾಮ್ ಮಾಡಿದೆ. ಟಿ-20..ವಂಡೇ ಮತ್ತು ಟೆಸ್ಟ್..ಈ ಮೂರೂ ವಿಭಾಗಗಳಲ್ಲೂ ಭಾರತವೇ ನಂಬರ್-1 ಟೀಂ ಆಗಿದೆ. ಇದರ, ಕ್ರೆಡಿಟ್ ರಾಹುಲ್ ದ್ರಾವಿಡ್ಗೆ ಕೂಡ ದೊಡ್ಡ ಮಟ್ಟದಲ್ಲಿ ಸಲ್ಲಲೇಬೇಕು. ಟ್ರ್ಯಾಕ್ ರೆಕಾರ್ಡ್ ಹೀಗಿರೋವಾಗ ಈಗಲೇ ಹೊಸ ಕೋಚ್ನ್ನ ನೇಮಕ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ. ಆಪ್ಷನ್ ಬಿಸಿಸಿಐ ಬಳಿಯೂ ಇತ್ತು. ವಿವಿಎಸ್ ಲಕ್ಷ್ಮಣ್ರನ್ನ ಹೆಡ್ ಕೋಚ್ ಆಗಿ ಮಾಡಬಹುದಾಗಿತ್ತು. ಈ ಬಗ್ಗೆ ಬಿಸಿಸಿಐ ಚಿಂತನೆ ಕೂಡ ನಡೆಸಿತ್ತು. ಏಕದಿನ ಮತ್ತು ಟೆಸ್ಟ್ ಫಾರ್ಮೆಟ್ಗೆ ಲಕ್ಷ್ಮಣ್ರನ್ನ ಕೋಚ್ ಮಾಡಿ, ಟಿ-20ಗೆ ಆಶಿಶ್ ನೆಹ್ರಾರನ್ನ ಕೋಚ್ ಆಗಿ ಆಯ್ಕೆ ಮಾಡಲು ಬಿಸಿಸಿಐ ಯೋಚಿಸಿತ್ತು. ಈ ಬಗ್ಗೆ ನೆಹ್ರಾಗೆ ಆಫರ್ ಕೂಡ ಮಾಡಿತ್ತು. ಆದ್ರೆ ಆಶಿಶ್ ನೆಹ್ರಾ ಸದ್ಯ ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ಕೋಚ್ ಆಗಿಯೇ ಮುಂದುವರಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ರಾಹುಲ್ ದ್ರಾವಿಡ್ರನ್ನೇ ಹೆಡ್ ಕೋಚ್ ಆಗಿ ಮುಂದುವರಿಸಲು ನಿರ್ಧರಿಸಿದೆ. ಹಾಗಂತಾ ಬಿಸಿಸಿಐ ಏನು ತನ್ನ ಪಾಡಿಗೆ ಈ ಡಿಸೀಶನ್ನನ್ನ ತೆಗೆದುಕೊಂಡಿಲ್ಲ. ಈ ಬಗ್ಗೆ ರಾಹುಲ್ ದ್ರಾವಿಡ್ ಜೊತೆಗೆ ಚರ್ಚೆ ನಡೆಸಿದೆ. ಯಾಕಂದ್ರೆ ರಾಹುಲ್ ದ್ರಾವಿಡ್ ಒಪ್ಪಿಕೊಂಡ್ರೆ ಮಾತ್ರ ಬಿಸಿಸಿಐ ಈ ನಿರ್ಧಾರ ತೆಗೆದುಕೊಳ್ಳೋಕೆ ಸಾಧ್ಯವಾಗುತ್ತೆ. ಕೋಚ್ ಆಗಿ ಮುಂದುವರಿಯಲು ದ್ರಾವಿಡ್ ಒಪ್ಪಿಕೊಂಡಿದ್ದಾರೆ. ಬಳಿಕ ಈ ಬಗ್ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆಗೂ ಬಿಸಿಸಿಐ ಮಾತುಕತೆ ನಡೆಸಿದೆ. ರೋಹಿತ್ ಶರ್ಮಾ ಅಂತೂ ರಾಹುಲ್ ದ್ರಾವಿಡ್ ಅವರೇ ಮುಂದುವರಿಯಲಿ ಅಂತಾ ಬಯಸಿದ್ದರು. ಯಾಕಂದ್ರೆ ಕ್ಯಾಪ್ಟನ್ ಮತ್ತು ಕೋಚ್ ಇಬ್ಬರ ನಡುವೆಯೂ ಉತ್ತಮ ಅಂಡರ್ಸ್ಟ್ಯಾಂಡಿಂಗ್ ಇದೆ. ಹಾಗೆಯೇ ಕಳೆದ ಎರಡು ವರ್ಷಗಳಲ್ಲಿ ದ್ರಾವಿಡ್ ಒಂದು ಸಾಲಿಡ್ ಟೀಂನ್ನ ಕಟ್ಟಿದ್ದಾರೆ. ಟೀಂ ಇಂಡಿಯಾದಲ್ಲಿ ಒಂದು ಬೆಸ್ಟ್ ಸಿಸ್ಟಮ್ನ್ನ, ಸ್ಟ್ರಕ್ಚರ್ನ್ನ ನಿರ್ಮಾಣ ಮಾಡಿದ್ದಾರೆ. ಒಂದು ವೇಳೆ ಈಗ ಇದ್ದಕ್ಕಿದ್ದಂತೆ ಹೊಸ ಕೋಚ್ನ್ನ ನೇಮಕ ಮಾಡಿದರೆ ಟೀಮ್ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಇನ್ನೆಷ್ಟು ವರ್ಷ ದ್ರಾವಿಡ್ ಕೋಚ್ ಆಗಿರ್ತಾರೆ?
ಇನ್ನು ಎಷ್ಟು ವರ್ಷ ರಾಹುಲ್ ದ್ರಾವಿಡ್ ಕೋಚ್ ಆಗಿರ್ತಾರೆ ಅನ್ನೋದು ಇಲ್ಲಿರುವ ಪ್ರಶ್ನೆ. ಈ ಬಗ್ಗೆ ಬಿಸಿಸಿಐ ಕೂಡ ಯಾವುದೇ ಕ್ಲ್ಯಾರಿಟಿ ಕೊಟ್ಟಿಲ್ಲ. 2021ರಲ್ಲಿ ದ್ರಾವಿಡ್ರನ್ನ ಎರಡು ವರ್ಷಗಳವರೆಗೆ ಕೋಚ್ ಆಗಿ ನೇಮಕ ಮಾಡಲಾಗಿತ್ತು. ಆದ್ರೀಗ ಕೋಚಿಂಗ್ ಅವಧಿಯನ್ನ ಇನ್ನೆಷ್ಟು ವರ್ಷ ವಿಸ್ತರಿಸಲಾಗಿದೆ ಅನ್ನೋ ಬಗ್ಗೆ ಬಿಸಿಸಿಐ ಮಾಹಿತಿ ನೀಡಿಲ್ಲ. ಸಾಮಾನ್ಯವಾಗಿ ಟೀಂ ಇಂಡಿಯಾದ ಕೋಚಿಂಗ್ ಕಾಂಟ್ರ್ಯಾಕ್ಟ್ ಎರಡು ವರ್ಷಗಳವರೆಗೆ ಇರುತ್ತೆ. ಆದ್ರೀಗ ದ್ರಾವಿಡ್ ವಿಚಾರದಲ್ಲಿ ಇನ್ನೂ ಎರಡು ವರ್ಷಕ್ಕೆ ನಿಗದಿಪಡಿಸಲಾಗಿದ್ಯೋ? ಇಲ್ವೋ ಅನ್ನೋದು ಈಗಿರುವ ಪ್ರಶ್ನೆ.
ಒಂದಂತೂ ಗ್ಯಾರಂಟಿ, ಕನಿಷ್ಠ ಒಂದು ವರ್ಷವಾದ್ರೂ ದ್ರಾವಿಡ್ ಟೀಂ ಇಂಡಿಯಾದ ಹೆಡ್ ಕೋಚ್ ಆಗಿರ್ತಾರೆ. ಅಂದ್ರೆ 2024ರಲ್ಲಿ ನಡೆಯಲಿರುವ ಟಿ-20 ವರ್ಲ್ಡ್ಕಪ್ವರೆಗೆ. ಟಿ-20 ವಿಶ್ವಕಪ್ವರೆಗೆ ಕೋಚ್ ಆಗಿ ಮುಂದುವರಿಯಿರಿ ಅಂತಾ ದ್ರಾವಿಡ್ಗೆ ಬಿಸಿಸಿಐ ಸೂಚನೆ ಕೊಟ್ಟಿರಲೂಬಹುದು. ಒಂದು ವೇಳೆ ಇನ್ನೂ ಎರಡು ವರ್ಷಗಳ ಕಾಲ ದ್ರಾವಿಡ್ ಕೋಚ್ ಆಗಿ ಇರ್ತಾರೆ ಅಂದ್ರೆ, ದ್ರಾವಿಡ್ ಗರಡಿಯಲ್ಲೇ ಟೀಂ ಇಂಡಿಯಾ ಒಟ್ಟು ಮೂರು ಐಸಿಸಿ ಟೂರ್ನಿಗಳನ್ನ ಆಡಲಿದೆ. 2024ರ ಜೂನ್ನಲ್ಲಿ ಟಿ-20 ವರ್ಲ್ಡ್ಕಪ್ ನಡೆಯುತ್ತೆ. 2025ರ ಜೂನ್ನಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಡೆಯುತ್ತೆ. ಅದೇ ವರ್ಷ ಅಂದ್ರೆ 2025ರ ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ನಡೆಯುತ್ತೆ. ಹೀಗಾಗಿ ಈ ಮೂರು ಮೇಜರ್ ಐಸಿಸಿ ಟೂರ್ನಿಗಳು ರಾಹುಲ್ & ಟೀಂ ಮುಂದೆ ಬರುತ್ತೆ. ಒಂದು ವೇಳೆ ಇನ್ನೂ ಎರಡು ವರ್ಷಗಳ ಕಾಲ ದ್ರಾವಿಡ್ ಕೋಚ್ ಆಗಿದ್ರೆ ಮಾತ್ರ. ಅದ್ರಲ್ಲೂ ಟಿ-20 ವರ್ಲ್ಡ್ಕಪ್ ವೇಳೆಗಂತೂ ದ್ರಾವಿಡ್ ಅವರೇ ಹೆಡ್ ಕೋಚ್ ಆಗಿರೋದು ಗ್ಯಾರಂಟಿ.
ಇನ್ನು ದ್ರಾವಿಡ್ ಜೊತೆಗೆ ಕಳೆದ ಎರಡು ವರ್ಷಗಳಿಂದ ಇದ್ದ ಇಡೀ ಕೋಚಿಂಗ್ ಸ್ಟಾಫ್ ಮೆಂಬರ್ಸ್ ಕಾಂಟ್ರ್ಯಾಕ್ಟ್ನ್ನ ಕೂಡ ರಿನೀವಲ್ ಮಾಡಲಾಗಿದೆ. ಫೀಲ್ಡಿಂಗ್ ಕೋಚ್ ಟಿ.ದಿಲೀಪ್ ಅಂತೂ ವರ್ಲ್ಡ್ಕಪ್ ಟೈಮ್ನಲ್ಲಿ ಸ್ಟಾರ್ ಆಗಿದ್ರು. ಬೆಸ್ಟ್ ಫೀಲ್ಡಿಂಗ್ ಮಾಡಿದವರಿಗೆ ಯುನೀಕ್ ಸ್ಟೈಲ್ನಲ್ಲಿ ಮೆಡಲ್ ಕೊಡಿಸ್ತಿದ್ರು. ಬೌಲಿಂಗ್ ಕೋಚ್ ಪಾರಸ್ ಮಾಮ್ರೆ ಅಂಡರ್ನಲ್ಲಿ ನಮ್ಮ ಬೌಲರ್ಸ್ಗಳು ಅಕ್ಷರಶ: ಪಳಗಿದ್ದಾರೆ. ಅದಕ್ಕೆ ವರ್ಲ್ಡ್ಕಪ್ನಲ್ಲಿ ಬೌಲರ್ಸ್ಗಳ ಪರ್ಫಾಮೆನ್ಸೇ ಸಾಕ್ಷಿ. ಆಸ್ಟ್ರೇಲಿಯಾ ವಿರುದ್ಧ ಟಿ-20 ಸೀರಿಸ್ನಲ್ಲಿ ಆಡ್ತಿರೋ ಬೌಲರ್ಸ್ಗಳಲ್ಲ. ಈಗ ಆಡ್ತಾ ಇರೋದು ಆಲ್ಮೋಸ್ಟ್ ಇಂಡಿಯಾ-ಎ ಟೀಂ. ಆದ್ರೆ ಶಮಿ, ಸಿರಾಜ್, ಬುಮ್ರಾ ಸೇರಿದಂತೆ ನಮ್ಮ ಸೀನಿಯರ್ಸ್ ಟೀಮ್ನ ಬೌಲಿಂಗ್ ಯುನಿಟ್ ಇಷ್ಟು ಸ್ಟ್ರಾಂಗ್ ಆಗೋಕೆ ಪಾರಸ್ ಮಾಮ್ರೆ ಕೂಡ ಕಾರಣ. ಜೊತೆಗೆ ಕೋಚ್ಗಳಾಗಿ ಪಾರಸ್ ಮಾಮ್ರೆ ಮತ್ತು ರಾಹುಲ್ ದ್ರಾವಿಡ್ ಲಾಂಗ್ಟೈಮ್ನಿಂದ ಜೊತೆಗೆ ಇದ್ದಾರೆ. ದ್ರಾವಿಡ್ ಇಂಡಿಯಾ ಅಂಡರ್-19 ಕೋಚ್ ಆಗಿದ್ದಾಗಲೂ ಪಾರಸ್ ಮಾಮ್ರೆ ಬೌಲಿಂಗ್ ಕೋಚ್ ಆಗಿ ದ್ರಾವಿಡ್ ಟೀಂನಲ್ಲೇ ಇದ್ರು. ಇನ್ನು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಕಳೆದ 3-4 ವರ್ಷಗಳಿಂದ ಟೀಂ ಇಂಡಿಯಾದಲ್ಲೇ ಇದ್ದಾರೆ. ಹೀಗಾಗಿ ಒಂದು ಬೆಸ್ಟ್ ಸೆಟ್ ಆಫ್ ಕೋಚ್ಗಳು ಟೀಂ ಇಂಡಿಯಾವನ್ನ ಗೈಡ್ ಮಾಡ್ತಾ ಇದ್ದಾರೆ. ಹೀಗಾಗಿಯೇ ದ್ರಾವಿಡ್ ನೇತೃತ್ವದ ಈ ಎಲ್ಲಾ ಕೋಚಿಂಗ್ ಸ್ಟಾಫ್ಗಳ ಕಾಂಟ್ರ್ಯಾಕ್ಟ್ನ್ನ ಕೂಡ ವಿಸ್ತರಿಸಲಾಗಿದೆ. ಇನ್ನು ವರ್ಲ್ಡ್ಕಪ್ ಫೈನಲ್ ಸೋತ ಮಾತ್ರಕ್ಕೆ ಕೋಚ್ಗಳನ್ನ, ಕ್ಯಾಪ್ಟನ್ನನ್ನ ಬದಲಾಯಿಸಿದ್ರೆ ಅಲ್ಲಿ ರಾಂಗ್ ಮೆಸೇಜ್ ಪಾಸ್ ಆಗುತ್ತೆ. ಜೊತೆಗೆ ಟೀಂ ಮೇಲೂ ನೆಗೆಟಿವ್ ಎಫೆಕ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಅಂಥಾ ಯಾವುದೇ ರಿಸ್ಕ್ ತೆಗೆದುಕೊಳ್ಳೋಕೆ ಬಿಸಿಸಿಐ ಮುಂದಾಗಿಲ್ಲ. ಇಲ್ಲಿ ಬಿಸಿಸಿಐ ನಿಜಕ್ಕೂ ರೈಟ್ ಡಿಸೀಶನ್ ತೆಗೆದುಕೊಂಡಿದೆ.
ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದೆ ನಿಜಕ್ಕೂ ಈಗ ದೊಡ್ಡ ಸವಾಲಿದೆ. ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ, ಟಿ-20, ವಂಡೇ ಮತ್ತು ಟೆಸ್ಟ್ ಸೀರಿಸ್ನ್ನ ಆಡಲಿದೆ. 2022ರಲ್ಲಿ ಸೌತ್ ಆಫ್ರಿಕಾದಲ್ಲಿ ಟೀಂ ಇಂಡಿಯಾ 3-0 ಅಂತರದಿಂದ ವಂಡೇ ಸೀರಿಸ್ ಸೋತಿತ್ತು. ಟೆಸ್ಟ್ ಸೀರಿಸ್ನ್ನ ಕೂಡ ಸೋತಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಇದುವರೆಗೂ ಒಂದೇ ಒಂದು ಸೀರಿಸ್ ಗೆಲ್ಲೋಕೆ ನಮ್ಮಿಂದ ಸಾಧ್ಯವಾಗಿಲ್ಲ. ಹರಿಣಗಳನ್ನ ಅವರದ್ದೇ ನೆಲದಲ್ಲಿ ಸದೆಬಡಿಯೋಕೆ ಟೀಂ ಇಂಡಿಯಾಗೆ ಈವರೆಗೂ ಆಗಿಲ್ಲ. ಹೀಗಾಗಿ ಈ ಬಾರಿಯಾದ್ರೂ ಆ ಸಾಧನೆ ಮಾಡುತ್ತಾ ನೋಡಬೇಕಿದೆ. ಹೀಗಾಗಿ ಕೋಚ್ ಆಗಿ ದ್ರಾವಿಡ್ ಮುಂದೆ ಇರುವ ನೆಕ್ಟ್ಸ್ ಟಾರ್ಗೆಟ್ ಇದೇ.