ಕಾಂತಾರ ಸಿನಿಮಾ ಯಶಸ್ಸಿಗೆ ಶ್ರೀವಿನಾಯಕನೇ ಕಾರಣ – ಆನೆಗುಡ್ಡೆ ದೇವರ ಮಹಿಮೆ ಬಗ್ಗೆ ಪ್ರಗತಿ ಶೆಟ್ಟಿ ಹೇಳಿದ್ದೇನು?
ನಟ ರಿಷಬ್ ಶೆಟ್ಟಿ ‘ಕಾಂತಾರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ಸು ಗಳಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅವರ ವೈಯಕ್ತಿಕ ಜೀವನದಲ್ಲೂ ಒಳ್ಳೆಯದೇ ಆಗಿದೆ. ಈ ಎಲ್ಲ ಅಭಿವೃದ್ಧಿಗೆ ಅವರ ಪರಿಶ್ರಮದ ಜೊತೆಗೆ ದೇವರ ಆಶೀರ್ವಾದ ಕೂಡ ಇದೆ. ನಮ್ಮ ಕುಟುಂಬದ ಏಳಿಗೆಗೆ, ಸಿನಿಮಾ ರಂಗದ ಯಶಸ್ಸಿಗೆ ಆನೆಗುಡ್ಡೆ ಶ್ರೀವಿನಾಯಕನೇ ಕಾರಣ ಅಂತಿದ್ದಾರೆ ರಿಷಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ.
ಇದನ್ನೂ ಓದಿ: ಕಾಂತಾರ ಚಾಪ್ಟರ್-2 ಚಿತ್ರಕ್ಕೆ ಮುಹೂರ್ತ.. ಪೋಸ್ಟರ್ ರಿಲೀಸ್ – ತ್ರಿಶೂಲ, ಖಡ್ಗ ಹಿಡಿದು ಉಗ್ರಾವತಾರ ತಾಳಿದ ರಿಷಬ್ ಶೆಟ್ಟಿ
ನವೆಂಬರ್ 27ರಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಮುಹೂರ್ತ ನೆರವೇರಿದೆ. ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಬಗ್ಗೆ ತಮಗೆ ಇರುವ ನಂಬಿಕೆ ಬಗ್ಗೆ ಮಾತಾನಾಡಿದರು. ‘ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಎಂದರೆ ಒಂದು ವಿಶೇಷವಾದ ನಂಬಿಕೆ ಇದೆ. ನಮ್ಮ ಜೀವನದಲ್ಲಿ ಏನೇ ಒಳ್ಳೆಯದು ಆಗಿದ್ದರೂ ಅದನ್ನು ಇಲ್ಲಿಂದಲೇ ಶುರು ಮಾಡಿರುವುದು. ರಿಷಬ್ ಶೆಟ್ಟಿ ಅವರು ನನ್ನನ್ನು ಮೊದಲ ಬಾರಿ ಇಲ್ಲಿಯೇ ನೋಡಿದ್ದು. ಆನಂತರ ‘ಕಾಂತಾರ’ ಸಿನಿಮಾದ ಮುಹೂರ್ತ ಕೂಡ ಇಲ್ಲಿಯೇ ಮಾಡಿದ್ದೆವು. ಈ ದೇವರ ದಯೆಯಿಂದ ಆ ಸಿನಿಮಾ ತುಂಬ ಚೆನ್ನಾಗಿ ಆಯಿತು ಎಂಬುದು ನಿಮಗೆಲ್ಲರಿಗೂ ಗೊತ್ತು. ಅದೇ ನಂಬಿಕೆಯಿಂದ ಇಂದು ಕೂಡ ಪೂಜೆ ಮಾಡಿಸಿ, ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಮುಹೂರ್ತ ಮಾಡಿದ್ದೇವೆ’ ಎಂದು ಪ್ರಗತಿ ಶೆಟ್ಟಿ ಹೇಳಿದ್ದಾರೆ.
‘ದೈವ, ದೇವರು ಮತ್ತು ಜನರ ಆಶೀರ್ವಾದದಿಂದ ಈ ಬಾರಿ ಕೂಡ ಯಾವುದೇ ವಿಘ್ನಗಳು ಇಲ್ಲದೇ ಸಿನಿಮಾ ತುಂಬ ಚೆನ್ನಾಗಿ ಆಗಲಿ ಎಂದು ಕೇಳಿಕೊಳ್ಳುತ್ತೇನೆ. ‘ಕಾಂತಾರ: ಚಾಪ್ಟರ್ 1’ ವಿಚಾರದಲ್ಲಿ ಒತ್ತಡ ಏನೂ ಇಲ್ಲ. ಜನರ ಕೊಟ್ಟಿರುವ ಪ್ರೀತಿ ಮತ್ತು ನಂಬಿಕೆಯನ್ನು ನಾವು ಉಳಿಸಿಕೊಂಡು ಹೋಗಬೇಕು’ ಎಂದಿದ್ದಾರೆ ಪ್ರಗತಿ ಶೆಟ್ಟಿ.
ಈ ಸಿನಿಮಾವನ್ನು ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆಯ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರಗತಿ ಶೆಟ್ಟಿ ಕೂಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ಆಗಿ ಅವರು ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ‘ಕಾಂತಾರ’ ಸಿನಿಮಾಗೆ ಪ್ರಗತಿ ಶೆಟ್ಟಿ ವಸ್ತ್ರ ವಿನ್ಯಾಸಕಿ ಆಗಿದ್ದರು ಹಾಗೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ಅವರು ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಪಾತ್ರ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಈಗಲೇ ಮಾಹಿತಿ ಸಿಕ್ಕಿಲ್ಲ.