ಯುವಕರೊಂದಿಗೆ ಡ್ಯಾನ್ಸ್ ಮಾಡಿದ್ದಕ್ಕೆ ಯುವತಿಯನ್ನು ಕೊಂದ ಗ್ರಾಮಸ್ಥರು!
ಫ್ರೆಂಡ್ಸ್ ಅಂದಮೇಲೆ ಯುವಕ, ಯುವತಿಯರನ್ನದೇ ತುಂಬಾ ಕ್ಲೋಸ್ ಆಗಿ ಇರ್ತಾರೆ. ಇಲ್ಲಿ ಹುಡುಗ, ಹುಡುಗಿ ಅನ್ನೋ ಮ್ಯಾಟರ್ ಇರಲ್ಲ. ಸಿಕ್ಕಾಗ ಫುಲ್ ಖುಷಿಯಿಂದ ಮಾತಾಡುತ್ತಾ, ಸುತ್ತಾಡುತ್ತಾ ಇರುತ್ತಾರೆ. ಈಗಿನ ಯುವಕ, ಯುವತಿಯರ ಬಗ್ಗೆ ಕೇಳಬೇಕೆ? ಪಾರ್ಟಿ, ಪಬ್ ಅಂತಾ ಹೋಗಿ ಸಿಕ್ಕಾಪಟ್ಟೆ ಕುಣಿದು ಮಜಾ ಮಾಡುತ್ತಾರೆ. ಬಳಿಕ ಎಲ್ಲವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ತಾರೆ. ಇದೀಗ ಇಲ್ಲೊಬ್ಬಳಿಗೆ ಇದೇ ಮುಳುವಾಗಿದೆ. ಯುವಕರ ಜೊತೆ ಡ್ಯಾನ್ಸ್ ಮಾಡಿದ್ದಾಳೆ ಅನ್ನೋ ಕಾರಣಕ್ಕೆ ಆಕೆಯನ್ನು ಕೊಂದು ಹಾಕಿದ್ದಾರೆ.
ಹೌದು, ಅಚ್ಚರಿಯಾದ್ರೂ ಸತ್ಯ. ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ಯುವಕರೊಂದಿಗೆ ಕಾಣಿಸಿಕೊಂಡ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿದ ಘಟನೆ ಪಾಕಿಸ್ತಾನದ ಕೊಹಿಸ್ತಾನ್ ಎಂಬಲ್ಲಿ ನಡೆದಿದೆ. ಜಿರ್ಗಾ ಎಂದು ಕರೆಯಲ್ಪಡುವ ಹಿರಿಯರ ಮಂಡಳಿಯು ಆಕೆಯನ್ನು ಕೊಲ್ಲಲು ಆದೇಶಿಸಿದ ನಂತರ ಈ ಕೃತ್ಯ ಎಸಗಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ 1 ವರ್ಷದ ಬಳಿಕ ಮುಕ್ತಾಯ – ಕೊಲೆಯಲ್ಲ.. ಅಪಘಾತದಿಂದಲೇ ಸಾವು ಎಂದು ವರದಿ
ಇತ್ತೀಚೆಗೆ ಯುವತಿ ಸ್ಥಳೀಯ ಯುವಕರೊಂದಿಗೆ ನೃತ್ಯ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. ಬಳಿಕ ಆ ವೀಡಿಯೋ ವೈರಲ್ ಆಗಿತ್ತು. ಈ ವಿಚಾರ ಸ್ಥಳೀಯ ಮುಖಂಡರ ಕೋಪಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯೊಂದಿಗೆ ವಿಡಿಯೋದಲ್ಲಿ ಕಾಣಿಸಿಕೊಂಡ ಇನ್ನೊಬ್ಬ ಯುವತಿಗೂ ಜೀವ ಬೆದರಿಕೆ ಹಾಕಲಾಗಿದ್ದು, ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಬಳಿಕ ನ್ಯಾಯಾಲಯ ಆಕೆಯ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ ಆಕೆಯ ತಂದೆಯೊಂದಿಗೆ ಮನೆಗೆ ಕಳುಹಿಸಿಕೊಟ್ಟಿದೆ ಎಂದು ವರದಿಯಾಗಿದೆ.