ಇನ್ನುಮುಂದೆ ವೀಸಾ ಇಲ್ಲದೇ ಭಾರತೀಯರು ಈ ದೇಶದಲ್ಲಿ 30 ದಿನ ಉಳಿಯಬಹುದು!

ಇನ್ನುಮುಂದೆ ವೀಸಾ ಇಲ್ಲದೇ ಭಾರತೀಯರು ಈ ದೇಶದಲ್ಲಿ 30 ದಿನ ಉಳಿಯಬಹುದು!

ಅನೇಕ ರಾಷ್ಟ್ರಗಳು ಈಗ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳುನ್ನು ಕೈಗೆತ್ತಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಥೈಲ್ಯಾಂಡ್, ಶ್ರೀಲಂಕಾ, ವಿಯೆಟ್ನಾಂ ಸೇರಿದಂತೆ ಸಾಕಷ್ಟು ದೇಶಗಳು ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ನೀಡಲು ಅವಕಾಶ ಮಾಡಿಕೊಡುತ್ತಿದೆ. ಪ್ರಸ್ತುತ ಆ ಸಾಲಿನಲ್ಲಿ ಮಲೇಷ್ಯಾ ಕೂಡ ಸೇರಿದೆ.

ಹೌದು, ಪ್ರಧಾನಿ ಅನ್ವರ್ ಇಬ್ರಾಹಿಂ ನೇತೃತ್ವದ ಮಲೇಷ್ಯಾ ಸರ್ಕಾರವು ಚೀನಾ ಮತ್ತು ಭಾರತೀಯ ನಾಗರಿಕರಿಗೆ ಪ್ರವೇಶ ವೀಸಾಗಳಿಗೆ ಸಂಬಂಧಿಸಿದಂತೆ ಮಹತ್ವದ ನೀತಿ ಬದಲಾವಣೆಯನ್ನು ಘೋಷಿಸಿದೆ. ಮಲೇಷ್ಯಾ ಸರ್ಕಾರ ಡಿಸೆಂಬರ್ 1ರಿಂದ 30 ದಿನಗಳವರೆಗೆ ವಾಸ್ತವ್ಯ ಹೂಡಲು ಚೀನಾ ಮತ್ತು ಭಾರತದ ನಾಗರಿಕರಿಗೆ ವೀಸಾಮುಕ್ತ ಪ್ರವೇಶವನ್ನು ಘೋಷಿಸಿದೆ. ಪುತ್ರಜಯದಲ್ಲಿ ನಡೆದ ಪೀಪಲ್ಸ್ ಜಸ್ಟಿಸ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ಭಾಷಣ ಮಾಡುವ ಸಂದರ್ಭ ಇಬ್ರಾಹಿಂ ಈ ಘೋಷಣೆ ಮಾಡಿದರು.

ಇದನ್ನೂಓದಿ:ಇನ್ನು ಮುಂದೆ ಈ ದೇಶಕ್ಕೂ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ!

ಭಾರತೀಯ ಪ್ರಯಾಣಿಕರಿಗೆ ಏನು ಬದಲಾವಣೆ?

ವೀಸಾ ನಿರ್ಮೂಲನೆ: ಮಲೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ ಇನ್ನು ಮುಂದೆ ಡಿಸೆಂಬರ್ 1 ರಿಂದ ಪ್ರವೇಶ ವೀಸಾಗಳ ಅಗತ್ಯವಿಲ್ಲ.

ವೀಸಾ-ಮುಕ್ತ ವಾಸ್ತವ್ಯ: ಭಾರತೀಯರು ವೀಸಾ ಪಡೆಯದೆ 30 ದಿನಗಳವರೆಗೆ ಮಲೇಷ್ಯಾದಲ್ಲಿ ಉಳಿಯಬಹುದು.

ಭದ್ರತಾ ಸ್ಕ್ರೀನಿಂಗ್: ಮಲೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ಪ್ರಜೆಗಳಿಗೆ ಭದ್ರತಾ ಸ್ಕ್ರೀನಿಂಗ್ ಇರುತ್ತದೆ.

ಈ ಕ್ರಮ ಕೈಗೊಳ್ಳಲು ಕಾರಣವೇನು?

ವಿಶೇಷವಾಗಿ ಭಾರತ ಮತ್ತು ಚೀನಾದಿಂದ ಪ್ರವಾಸಿಗರು ಮತ್ತು ಹೂಡಿಕೆದಾರರ ಒಳಹರಿವನ್ನು ಮತ್ತಷ್ಟು ಉತ್ತೇಜಿಸಲು ಮುಂಬರುವ ವರ್ಷದಲ್ಲಿ ವೀಸಾ ಸೌಲಭ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ಪ್ರಧಾನಿ ಇಬ್ರಾಹಿಂ ಈ ಹಿಂದೆ ಬಹಿರಂಗಪಡಿಸಿದ್ದರು.

ಚೀನಾ ಮತ್ತು ಭಾರತವು ಮಲೇಷ್ಯಾಕ್ಕೆ ನಿರ್ಣಾಯಕ ಮಾರುಕಟ್ಟೆಗಳಾಗಿದ್ದು, ಪ್ರವಾಸಿಗರ ಆಗಮನದ ನಾಲ್ಕನೇ ಮತ್ತು ಐದನೇ ಅತಿದೊಡ್ಡ ಮೂಲಗಳಾಗಿವೆ. ಈ ವರ್ಷದ ಜನವರಿ ಮತ್ತು ಜೂನ್ ನಡುವೆ, ಮಲೇಷ್ಯಾವು ಒಟ್ಟು 9.16 ಮಿಲಿಯನ್ ಪ್ರವಾಸಿಗರ ಆಗಮನವನ್ನು ದಾಖಲಿಸಿದೆ. ಭಾರತದಿಂದ ಮಲೇಷ್ಯಾಗೆ ಒಟ್ಟು 2,83,885 ಪ್ರವಾಸಿಗರು ಆಗಮಿಸಿದ್ದು, ಚೀನಾದಿಂದ ಒಟ್ಟು 4,98,540 ಪ್ರವಾಸಿಗರು ಭೇಟಿ ನೀಡಿದ್ದಾರೆ.

ಪ್ರವೇಶ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ, ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ಮತ್ತು ದೇಶದೊಳಗೆ ಅವರ ವೆಚ್ಚವನ್ನು ಹೆಚ್ಚಿಸಬಹುದು. ಆ ಮೂಲಕ ಮಲೇಷ್ಯಾದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದು ಸರ್ಕಾರ ಭರವಸೆ ಹೊಂದಿದೆ. ಪ್ರಸ್ತುತ, ಚೀನಾ ಮತ್ತು ಭಾರತೀಯ ಪ್ರಜೆಗಳು ಮಲೇಷ್ಯಾ ಪ್ರವೇಶಿಸಲು ವೀಸಾಗಳಿಗೆ ಅರ್ಜಿ ಸಲ್ಲಿಸಬೇಕು.

ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶವನ್ನು ಘೋಷಿಸಿದ ಶ್ರೀಲಂಕಾ, ವಿಯೆಟ್ನಾಂ ಮತ್ತು ಥೈಲ್ಯಾಂಡ್ ನಂತರ ಮಲೇಷ್ಯಾ ನಾಲ್ಕನೇ ದೇಶವಾಗಿದೆ. ನವೆಂಬರ್ 10 ರಿಂದ ಥೈಲ್ಯಾಂಡ್ ಭಾರತೀಯರಿಗೆ ವೀಸಾಮುಕ್ತ ಪ್ರವೇಶವನ್ನು ನೀಡಿದ್ದು, 30 ದಿನಗಳ ವಾಸ್ತವ್ಯವನ್ನು ಘೋಷಿಸಿದೆ. ಈ ನೀತಿಯು ಮುಂದಿನ ವರ್ಷದ ಮೇ 10 ರವರೆಗೆ ಜಾರಿಯಲ್ಲಿರುತ್ತದೆ. ಥಾಯ್ ಸರ್ಕಾರವು ಸೂಚಿಸಿದಂತೆ ಬೇಡಿಕೆಯ ಆಧಾರದ ಮೇಲೆ ವಿಸ್ತರಣೆಯ ಸಾಧ್ಯತೆಯಿದೆ.

Shwetha M