ವಿದ್ಯಾರ್ಥಿಗಳ ಮಧ್ಯೆ ಜಗಳ – ಸ್ನೇಹಿತನಿಗೆ ಕೈವಾರದಿಂದ 108 ಬಾರಿ ಚುಚ್ಚಿದ 4 ನೇತರಗತಿ ವಿದ್ಯಾರ್ಥಿಗಳು!
ಶಾಲೆಗಳಲ್ಲಿ ವಿದ್ಯಾರ್ಥಿಗಳು ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಡುವುದು ಕಾಮನ್. ಈ ವೇಳೆ ಮಕ್ಕಳು ಟೀಚರ್ ಬಳಿ ದೂರು ಹೇಳುತ್ತಾರೆ. ಇನ್ನೂ ಕೆಲವು ವಿದ್ಯಾರ್ಥಿಗಳು ಹೊಡೆದಾಡಿಕೊಳ್ಳುತ್ತಾರೆ. ಇದೀಗ ಮಧ್ಯಪ್ರದೇಶದ ಇಂದೋರ್ನ ಖಾಸಗಿ ಶಾಲೆಯೊಂದರಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. 4 ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಹಪಾಠಿ ಮೇಲೆ ಕೈವಾರದಿಂದ ಚುಚ್ಚಿ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಇದನ್ನೂ ಓದಿ: ಪ್ರೊಫೈಲ್ ಪಿಕ್ ನೋಡಿ ಬೆತ್ತಲಾದ.. – ನಗ್ನ ಯುವತಿಯ ಮೈಮಾಟಕ್ಕೆ ಲಕ್ಷ ಲಕ್ಷ ಕಳೆದುಕೊಂಡ!
ನವೆಂಬರ್ 24ರಂದು ಏರೋಡ್ರೋಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಶಾಲೆಯೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಜಗಳ ಏರ್ಪಟ್ಟಿತ್ತು. ಈ ವಿದ್ಯಾರ್ಥಿಯ ಮೇಲೆ ಇತರ ಮೂವರು ಸಹಪಾಠಿಗಳು ಜ್ಯಾಮಿಟ್ರಿ ಕಂಪಾಸ್ನಿಂದ 108 ಬಾರಿ ಹಲ್ಲೆ ನಡೆಸಿರುವುದಾಗಿ ವರದಿಯಾಗಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪಲ್ಲವಿ ಪೋರ್ವಾಲ್, ಈ ಪ್ರಕರಣ ಆಘಾತಕಾರಿಯಾಗಿದೆ. ಇಷ್ಟು ಚಿಕ್ಕ ವಯಸ್ಸಿನ ಮಕ್ಕಳು ಹಿಂಸಾತ್ಮಕ ವರ್ತನೆ ತೋರಿರುವುದರ ಹಿಂದಿನ ಕಾರಣವನ್ನು ಕಂಡುಹಿಡಿಯಲು ನಾವು ಪೊಲೀಸರಿಂದ ತನಿಖಾ ವರದಿಯನ್ನು ಕೇಳಿದ್ದೇವೆ ಎಂದು ಅವರು ಹೇಳಿದರು.
ಘಟನೆಗೆ ಸಂಬಂಧಿಸಿದಂತೆ ಸಿಡಬ್ಲ್ಯುಸಿ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಸಲಹೆ ನೀಡಲಿದೆ. ಮಕ್ಕಳು ಹಿಂಸಾತ್ಮಕ ದೃಶ್ಯಗಳನ್ನು ಒಳಗೊಂಡಿರುವ ವೀಡಿಯೋ ಗೇಮ್ಗಳನ್ನು ಆಡುತ್ತಾರೆಯೇ ಎಂಬುದನ್ನು ಕಂಡುಹಿಡಿಯಲಾಗುತ್ತಿದೆ ಎಂದು ಪೋರ್ವಾಲ್ ಹೇಳಿದರು.
ನಡೆದ ಘಟನೆ ಬಳಿಕ ನನ್ನ ಮಗನಿಗೆ ಭೀತಿ ಉಂಟಾಗಿದೆ. ನನ್ನ ಮಗ ಮನೆಗೆ ಹಿಂದಿರುಗಿದಾಗ ನಡೆದ ಘಟನೆ ಬಗ್ಗೆ ವಿವರಿಸಿದ್ದಾನೆ. ಅವನ ಸಹಪಾಠಿಗಳು ಏಕೆ ಹಿಂಸಾತ್ಮಕವಾಗಿ ನಡೆಸಿಕೊಂಡರು ಎಂಬುದು ನನಗೆ ಇನ್ನೂ ತಿಳಿದುಬಂದಿಲ್ಲ. ಶಾಲೆಯ ಆಡಳಿತ ಮಂಡಳಿಯೂ ಕೂಡಾ ತರಗತಿಯ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುತ್ತಿಲ್ಲ ಎಂದು ಸಂತ್ರಸ್ತ ಬಾಲಕನ ತಂದೆ ಹೇಳಿಕೆ ನೀಡಿದ್ದಾರೆ.
ಘಟನೆಯ ಬಗ್ಗೆ ಏರೋಡ್ರೋಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ನೀಡಿದ ಬಳಿಕ ಗಾಯಗೊಂಡ ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಘಟನೆಯಲ್ಲಿ ಭಾಗಿಯಾದ ಎಲ್ಲಾ ಮಕ್ಕಳು ಕೂಡಾ 10 ವರ್ಷದೊಳಗಿನವರು. ಈ ಬಗ್ಗೆ ಕಾನೂನು ನಿಬಂಧನೆಗಳ ಪ್ರಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ವಿವೇಕ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.