ಮಲೆನಾಡಿನಲ್ಲಿ ಕಾಡಾನೆ ಸೆರೆಗೆ ಭರ್ಜರಿ ಕಾರ್ಯಾಚರಣೆ – ರೇಡಿಯೋ ಕಾಲರ್ ಅಳವಡಿಕೆಗೂ ಸೂಚನೆ

ಮಲೆನಾಡಿನಲ್ಲಿ ಕಾಡಾನೆ ಸೆರೆಗೆ ಭರ್ಜರಿ ಕಾರ್ಯಾಚರಣೆ – ರೇಡಿಯೋ ಕಾಲರ್ ಅಳವಡಿಕೆಗೂ ಸೂಚನೆ

ಮಲೆನಾಡು ಭಾಗದಲ್ಲಿ ಮೂವರನ್ನು ಬಲಿಪಡೆದ ಒಂಟಿ ಸಲಗವನ್ನು ಸೆರೆ ಹಿಡಿಯುವಂತೆ ಆದೇಶ ನೀಡಲಾಗಿದೆ. ಇದರೊಂದಿಗೆ ಇನ್ನೂ ಎರಡು ಕಾಡಾನೆಗಳ  ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜೊತೆಗೆ  ಪುಂಡಾನೆಗಳನ್ನು ಸೆರೆಹಿಡಿದು ರೆಡಿಯೋ ಕಾಲರಿಂಗ್ ಅಳವಡಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: ಆಲ್ದೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ – ಇಬ್ಬರಿಗೆ ಗಂಭೀರ ಗಾಯ.. ಇನ್ನೆಷ್ಟು ಬಲಿ ಬೇಕು ಎಂದು ಸ್ಥಳೀಯರ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬು..!

ಮಲೆನಾಡು ಭಾಗದಲ್ಲಿ ಕಳೆದ 2 ತಿಂಗಳಲ್ಲಿ ಆನೆ ದಾಳಿಗೆ ಒಟ್ಟು ಮೂವರು ಸಾವನ್ನಪ್ಪಿದ್ದಾರೆ.  ಕಾಡಾನೆಗಳ ಕಾಟಕ್ಕೆ ಜನ ಕಂಗಾಲಾಗಿದ್ದಾರೆ. ಅದರಲ್ಲೂ ನಿರಂತರ ಕಾಡಾನೆ ದಾಳಿಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಜನರ ಆತಂಕ ಹೇಳತೀರದಾಗಿದೆ. ಕೊನೆಗೂ ಜನರ ಆಕ್ರೋಶ, ಪ್ರತಿಭಟನೆಯಿಂದ ಆನೆ ಸೆರೆಹಿಡಿಯಲು ಆದೇಶ ನೀಡಲಾಗಿದೆ. ನವೆಂಬರ್ 24ರಿಂದಲೇ ಒಂಟಿ ಸಲಗ ಸೇರಿದಂತೆ 2 ಕಾಡಾನೆ ಸೆರೆಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಪುಂಡಾನೆಗಳನ್ನು ಸೆರೆಹಿಡಿದು ರೆಡಿಯೋ ಕಾಲರಿಂಗ್ ಅಳವಡಿಸಲು ಸೂಚಿಸಲಾಗಿದೆ. ಕಾಡಾನೆಗಳನ್ನು ಸೆರೆಹಿಡಿದ ಬಳಿಕ ಭದ್ರಾ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿದೆ. ಸಾಕಾನೆಗಳ ಮೂಲಕ ಒಂಟಿ ಸಲಗವನ್ನು ಸೆರೆಹಿಡಿಯುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಸಕಲೇಶಪುರ- ಆಲೂರು ತಾಲೂಕಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಪೈಕಿ ಒಂಬತ್ತು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಜ್ಜಾಗಿದೆ. ಆನೆಗಳ ಸೆರೆ ಹಾಗೂ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ನ. 24ರಿಂದ ಡಿ. 15ವರೆಗೆ ನಡೆಯಲಿದೆ. ಇದಕ್ಕಾಗಿ ಕೊಡಗಿನ ದುಬಾರೆ ಆನೆ ಶಿಬಿರದಿಂದ ಸಾಕಾನೆಗಳು, ಮಾವುತರು, ಕವಾಡಿಗಳ ತಂಡ ಈಗಾಗಲೇ ಆಗಮಿಸಿದ್ದು, ಸಿದ್ಧತೆ ಕೈಗೊಳ್ಳಲಾಗಿದೆ. ಕೆಲ ತಿಂಗಳ ಹಿಂದೆ ಕಾರ್ಯಾಚರಣೆ ಆರಂಭಿಸಿದ್ದ ವೇಳೆ ಕಾಡಾನೆ ದಾಳಿಗೆ ಶಾರ್ಪ್ ಶೂಟರ್ ವೆಂಕಟೇಶ್ ಬಲಿಯಾಗಿದ್ದರು. ಈ ಕಾರಣ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಕಾಡಾನೆ ಗುಂಪು ಯಾವ ಪ್ರದೇಶದಲ್ಲಿ ಇದೆ ಎಂಬುದನ್ನು ತಿಳಿದು ಕಾಡಾನೆ ಪ್ರದೇಶದ ಜನರಿಗೆ ಮಾಹಿತಿ ಜತೆಗೆ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ. ಅಷ್ಟರ ಮಟ್ಟಿಗೆ ಅಷ್ಟೇ ರೇಡಿಯೋ ಕಾಲರ್ ಸಹಕಾರಿ. ಆಲೂರು, ಬೇಲೂರು, ಸಕಲೇಶಪುರ, ಯಸಳೂರು ಮತ್ತು ಅರಕಲಗೂಡು ವಲಯ ವ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿದು, ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ನಡೆಯಲಿದೆ. ಈ ಅವಧಿಯಲ್ಲಿ ನಿರ್ಧರಿಸಿದ ಸ್ಥಳಗಳಲ್ಲಿ ರೈತರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮನವಿ ಮಾಡಿದ್ದಾರೆ.

Sulekha