ಹುತಾತ್ಮ ಯೋಧ ಕ್ಯಾ. ಪ್ರಾಂಜಲ್ಗೆ ಕಣ್ಣೀರ ವಿದಾಯ – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಬೆಂಗಳೂರು: ಜಮ್ಮು ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧದ ಹೋರಾಟದ ವೇಳೆ ಹುತಾತ್ಮರಾಗಿದ್ದ ಕ್ಯಾಪ್ಟನ್ ಪ್ರಾಂಜಲ್ ಅವರ ಅಂತಿಮ ಸಂಸ್ಕಾರ ನೆರವೇರಿದೆ. ಶನಿವಾರ ಕೂಡ್ಲುಗೇಟ್ನ ಸೋಮಸುಂದರ್ ಪಾಳ್ಯ ರಸ್ತೆಯ ವಿದ್ಯುತ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಇದನ್ನೂ ಓದಿ: 3ನೇ ತರಗತಿಯಲ್ಲೇ ಯೋಧನಾಗುವ ಕನಸು.. 2 ವರ್ಷಗಳ ಹಿಂದಷ್ಟೇ ಮದುವೆ – ‘ಆಲ್ ಓಕೆ’ ಎಂದು ತಂದೆಗೆ ಮೆಸೇಜ್ ಕಳಿಸಿದ್ದರು ಪ್ರಾಂಜಲ್
ಜಮ್ಮುವಿನ ರಜೌರಿಯಲ್ಲಿ ಬುಧವಾರ (ನ.22) ದಂದು ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಹುತಾತ್ಮರಾಗಿದ್ದರು. ಶುಕ್ರವಾರ ಕ್ಯಾಪ್ಟನ್ ಪ್ರಾಂಜಲ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಬಳಿಯ ನಂದನವನ ಲೇಔಟ್ನ ನಿವಾಸಕ್ಕೆ ತರಲಾಗಿತ್ತು. ಶನಿವಾರ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನ 12.30ಕ್ಕೆ ನಿವಾಸದಿಂದ ತೆರೆದ ವಾಹನದಲ್ಲಿ ಕಲ್ಲುಬಾಳು ರಸ್ತೆ ಮೂಲಕ ಜಿಗಣಿಯ ಒಡಿಸಿ ಸರ್ಕಲ್, ಜಿಗಣಿ ರಸ್ತೆ ಮೂಲಕ ಹರಪನ್ನಹಳ್ಳಿ – ಕೊಪ್ಪ ಗೇಟ್ – ಬೇಗಿಹಳ್ಳಿ – ಬನ್ನೇರುಘಟ್ಟ ರಸ್ತೆ – ನೈಸ್ ರೋಡ್ – ಕೂಡ್ಲುಗೇಟ್ ಮೂಲಕ ಸುಮಾರು 30 ಕಿ.ಮೀ ವರೆಗೆ ಅಂತಿಮ ಯಾತ್ರೆ ನಡೆಸಲಾಗಿತ್ತು. ಬಳಿಕ ಸರ್ಕಾರಿ ಗೌರವಗಳೊಂದಿಗೆ ಸೋಮಸುಂದರಪಾಳ್ಯ ವಿದ್ಯುತ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಕ್ಯಾಪ್ಟನ್ ಪ್ರಾಂಜಲ್ ಅವರ ಅಂತ್ಯಕ್ರಿಯೆ ನೆರವೇರಿದೆ.
ಬ್ರಾಹ್ಮಣ ಸಂಪ್ರದಾಯದಂತೆ ಎಂ.ವಿ ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಅಂತಿಮ ವಿಧಿವಿಧಾನ ಪೂರೈಸಿದರು. ಭಾರತೀಯ ಸೇನೆಯಿಂದ ಕುಶಾಲ ತೋಪು ಸಿಡಿಸಿದ ಸೇನಾಧಿಕಾರಿಗಳು, ಎಂ.ವಿ ಪ್ರಾಂಜಲ್ಗೆ ಅಂತಿಮ ನಮನ ಸಲ್ಲಿಸಿದರು. ಬಳಿಕ ಪ್ರಾಂಜಲ್ ಪಾರ್ಥಿವ ಶರೀರದ ಮೇಲಿದ್ದ ತ್ರಿವರ್ಣಧ್ವಜವನ್ನು ಪೋಷಕರಿಗೆ ಹಸ್ತಾಂತರಿಸಿದರು. ಎಲ್ಲೇಡೆ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅಮರ್ ರಹೇ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.
ಇನ್ನು ಹುತಾತ್ಮ ಯೋಧ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ಗೆ ಸರ್ಕಾರಿ ಗೌರವ ಸಲ್ಲಿಸಿದ್ದು, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ನಂದನವನ ಲೇಔಟ್ನ ನಿವಾಸದ ಎದುರು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಹಾಗೂ ಬೆಂಗಳೂರು ಗ್ರಾಮಾಂತರ SP ಮಲ್ಲಿಕಾರ್ಜುನ ಬಾಲದಂಡಿ ಅವರು ಅಂತಿಮ ನಮನ ಸಲ್ಲಿಸಿದರು. ಜೊತೆಗೆ ಮೆರವಣಿಗೆ ವೇಳೆ ಮಹಿಳೆ, ಮಕ್ಕಳು ಸೇರಿದಂತೆ ಸಾವಿರಾರು ಜನ ದರ್ಶನ ಪಡೆದುಕೊಂಡರು.