ರೀಲ್ಸ್‌ ಮಾಡಿ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ ಹೆಂಡ್ತಿ – ಸಿಟ್ಟಲ್ಲಿ ಕತ್ತು ಸೀಳಿ ಕೊಂದೇ ಬಿಟ್ಟ ಪಾಪಿ ಗಂಡ!

ರೀಲ್ಸ್‌ ಮಾಡಿ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಮಾಡಿದ ಹೆಂಡ್ತಿ – ಸಿಟ್ಟಲ್ಲಿ ಕತ್ತು ಸೀಳಿ ಕೊಂದೇ ಬಿಟ್ಟ ಪಾಪಿ ಗಂಡ!

ಇದು ಡಿಜಿಟಲ್‌ ಯುಗ. ಕೈಯಲ್ಲೊಂದು ಫೋನ್‌ ಇದ್ರೆ ಸಾಕು. ದಿನವಿಡಿ ಅದ್ರಲ್ಲೇ ಕಾಲ ಕಳೆಯುತ್ತಿರುತ್ತಾರೆ. ದಿನ ಬೆಳಗಾದ್ರೆ ಸಾಕು ಸೋಶಿಯಲ್‌ ಮೀಡಿಯಾದಲ್ಲಿ ಸ್ಕ್ರಾಲ್‌ ಮಾಡ್ತಾ ಇರ್ತಾರೆ. ಇನ್ನು ಅನೇಕರಿಗೆ ರೀಲ್ಸ್‌ ಹುಚ್ಚು ಇರುತ್ತೆ. ತಾವು ಕೂತ್ರೂ, ನಿಂತ್ರೂ ರೀಲ್ಸ್‌ ಮಾಡಿ ಪೋಸ್ಟ್‌ ಮಾಡುತ್ತಿರುತ್ತಾರೆ. ತಾವು ಒಂದು ದಿನ ರೀಲ್ಸ್‌ ಮಾಡಿಲ್ಲ ಅಂದ್ರೂ ಪ್ರಳಯಾನೇ ಆಗೋಗುತ್ತೆ ಅನ್ನೋ ತರ ಕೆಲವರು ಕೆಲವರು ಆಡ್ತಾರೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮೊದಲಾದ ಕಡೆ ವೈರಲ್ ಆಗೋ ರೀಲ್ಸ್‌ಗಳು ವೈರಲ್ ಆಗೋದರ ಜೊತೆಗೆ ನೇಮು-ಫೇಮು ತಂದು ಕೊಡೋ ಕಾರಣ ಕೇವಲ ಯುವಕ-ಯುವತಿಯರು ಮಾತ್ರವಲ್ಲ ಎಲ್ಲಾ ವಯಸ್ಸಿನ ಜನರೂ ಸಹ ಇಂಥಾ ವೀಡಿಯೋಗಳನ್ನು ಮಾಡ್ತಿದ್ದಾರೆ. ಇದೀಗ ಇಲ್ಲೊಬ್ಬಳು ರೀಲ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾಳೆ. ಆಕೆ ರೀಲ್ಸ್ ಪೋಸ್ಟ್ ಮಾಡಿದ್ದಕ್ಕೆ ಸಿಟ್ಟುಗೊಂಡ ಪತಿ ಆಕೆಯ ಕತ್ತುಸೀಳಿ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುತ್ತಾ ಫ್ರಿಡ್ಜ್ ನಲ್ಲಿ ಅಡಗಿ ಕುಳಿತ ಸಹೋದರಿಯರು – ಬಾಗಿಲು ಲಾಕ್ ಆಗಿ ಉಸಿರುಗಟ್ಟಿ ಇಬ್ಬರು ಸಾವು

ಹೌದು, ಈ ಘಟನೆ ಕೋಲ್ಕತ್ತಾದಲ್ಲಿ ನಡದಿದೆ. ಆ ಮಹಿಳೆ ಸಾಮಾಜಿಕ ಜಾಲತಾಣಗಳಲ್ಲೂ ಫುಲ್ ಆಕ್ಟಿವ್ ಆಗಿದ್ದಳು. ಆಕೆ ಆಗಾಗ ರೀಲ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಪತಿ ಪತ್ನಿಯನ್ನು ಕತ್ತು ಸೀಳಿ ಕೊಂದು ಹಾಕಿದ್ದಾನೆ. ಇದೀಗ ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕೋಲ್ಕತ್ತಾದ ಜೋಯನಗರದ ಹರಿನಾರಾಯಣಪುರದಲ್ಲಿನ ನಿವಾಸಿಯಾಗಿರುವ ಅಪರ್ಣಾ ಎಂಬ ಮಹಿಳೆ ಇನ್‌ಸ್ಟಾಗ್ರಾಂನಲ್ಲಿ ಎರಡು ರೀಲ್ಸ್ ಪೋಸ್ಟ್ ಮಾಡಿದ್ದಳು. ಇದರಿಂದ ಸಿಟ್ಟಿಗೆದ್ದ ಪತಿ ಪರಿಮಳ್ ಬೈದ್ಯ ಆಕೆಗೆ ಯಾರೊಂದಿಗೂ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ್ದಾನೆ. ಈ ವೇಳೆ ಇವರಿಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಆತ ಸಿಟ್ಟಿನಿಂದ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಸದ್ಯ ಪರಿಮಳ್‌ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಕಾರ, ಅಪರ್ಣಾ ಸಾಮಾಜಿಕ ಮಾಧ್ಯಮದಲ್ಲಿ ರೀಲ್‌ಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಪ್ರಾರಂಭಿಸಿದಾಗಲೇ ದಂಪತಿಗಳ ಮಧ್ಯೆ ಜಗಳ ಆರಂಭವಾಗಿತ್ತು. ಇದರಿಂದ ಅಪರ್ಣಾಗೆ ಹಣ ಸಾಲ ನೀಡುವ ಏಜೆನ್ಸಿಯ ಅಧಿಕಾರಿಯೊಂದಿಗೆ ಸ್ನೇಹ ಬೆಳೆದಿತ್ತು. ಈ ಬಗ್ಗೆ ಪರಿಮಳ್ ಸಿಟ್ಟುಗೊಂಡಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಜಗಳವಾಗಿ ಕೊಲೆಯಲ್ಲಿ ಕೊನೆಗೊಂಡಿದೆ.

ಟ್ಯೂಷನ್ ತರಗತಿಯಿಂದ ಮನೆಗೆ ಹಿಂದಿರುಗಿದ ಮಗ ತನ್ನ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದನು. ಪೊಲೀಸರು ಆಗಮಿಸಿದಾಗ ಬಾಲಕ, ತನ್ನ ಹೆತ್ತವರ ನಡುವೆ ಆಗಾಗ ಜಗಳ ನಡೆಯುತ್ತಿದ್ದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಈ ಹಿಂದೆ ಒಂದು ಸಾರಿ ಜಗಳವಾದಾಗ ಮಹಿಳೆ ಮನೆಬಿಟ್ಟು ತವರು ಮನೆಗೆ ತೆರಳಿದ್ದಳು ಎಂಬುದು ತನಿಖೆಯಿಂದ ಬಯಲಾಗಿದೆ. ‘ನಾವು ಕೊಲೆಯ ಆಯುಧವನ್ನು ವಶಪಡಿಸಿಕೊಂಡಿದ್ದೇವೆ. ಪರಿಮಳ್‌ ಬೈದ್ಯಗೆ ಹುಡುಕಾಟವನ್ನು ಪ್ರಾರಂಭಿಸಿದ್ದೇವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Shwetha M