ಕಾಂಗ್ರೆಸ್ ಸರ್ಕಾರ ಭ್ರಷ್ಟರ ಕೂಟ.. ಕಳ್ಳರಸಂತೆಯಲ್ಲಿ ಕಡುಭ್ರಷ್ಟ ಮಹಾರಾಜರು ಶ್ರೀ ಡಿ.ಕೆ ಶಿವಕುಮಾರ್ – ಬಿಜೆಪಿ ಲೇವಡಿ
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧದ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದ ನಿರ್ಧಾರವನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧಾರ ಕೈಗೊಂಡಿರುವುದರ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಅಕ್ರಮ ಆಸ್ತಿಯ ಸಿಬಿಐ ತನಿಖೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಸಾರಸಗಟಾಗಿ ಹಿಂಪಡೆದು, ರಾಜ್ಯವನ್ನು ಗೂಂಡಾ, ಭ್ರಷ್ಟಚಾರಿಗಳ ಅಡುಗುದಾಣ ಮಾಡುತ್ತಿದೆ. ನ್ಯಾಯ, ಪ್ರಾಮಾಣಿಕತೆ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯರವರೇ, ಡಿ. ಕೆ. ಶಿವಕುಮಾರ್ 5 ವರ್ಷಗಳಲ್ಲಿ 380 ಪಟ್ಟು ಅಕ್ರಮ ಆಸ್ತಿಯ ಗಂಟು ಮಾಡಿಕೊಂಡರೂ ಚಕಾರ ಎತ್ತದ ನೀವು, ಈಗ ಅವರ ಮೇಲಿನ ಸಿಬಿಐ ತನಿಖೆಯನ್ನೇ ಹಿಂಪಡೆದು ಭ್ರಷ್ಟರ ಮಹಾಪೋಷಣೆ ಮಾಡುತ್ತಿದ್ದೀರಿ. ಕಾಂಗ್ರೆಸ್ ಸರ್ಕಾರ ಒಂದು ಭ್ರಷ್ಟರ ಕೂಟ ಎಂದು ಕಿಡಿಕಾರಿದೆ.
ಇನ್ನು ಮತ್ತೊಂದು ಟ್ವೀಟ್ ನಲ್ಲಿ ಕಾರ್ಟೂನ್ ಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಕರ್ನಾಟಕವನ್ನು ರೌಡಿಗಳ, ಗೂಂಡಾಗಳ, ಭಯೋತ್ಪಾದಕರ ನಾಡನ್ನಾಗಿಸುತ್ತಿದೆ ಕಾಂಗ್ರೆಸ್ ಸರ್ಕಾರ ಎಂದು ಆರೋಪಿಸಿದೆ. ಈ ಕಾರ್ಟೂನ್ನಲ್ಲಿ ರೌಡಿಗಳ ವ್ಯಂಗ್ಯ ಚಿತ್ರವನ್ನು ಬರೆಯಲಾಗಿದೆ. ನಮ್ಮ ಸರ್ಕಾರ ಬಂದಿದೆ.. ಇನ್ನೇನಿದ್ದರೂ ನಮ್ದೇ ರಾಜ್ಯಭಾರ.. ಅಮಾಯಕರು ಕೆಟಗೆರಿಯಲ್ಲಿ ಬಿಡ್ಸೋಕೆ ನಮ್ಮವರಿದ್ದಾರೆ ಮಚ್ಚಾ.. ಎಂದು ಬರೆಯಲಾಗಿದೆ. ಮತ್ತೊಂದು ಪೋಸ್ಟ್ನಲ್ಲಿ “ಕಾಂಗ್ರೆಸ್ ಕಳ್ಳರಸಂತೆಯಲ್ಲಿ ಕಡುಭ್ರಷ್ಟ ಮಹಾರಾಜರು” ಶ್ರೀ ಡಿ.ಕೆ ಶಿವಕುಮಾರ್ ಎಂದು ಶೀರ್ಷಿಕೆ ನೀಡಿ.. ಇದರಲ್ಲಿ ಡಿಕೆ ಶಿವಕುಮಾರ್ ʼನಾನು ಭ್ರಷ್ಟನಲ್ಲʼ ಎಂಬ ಐಡಿ ಕಾರ್ಡ್ ಹಾಕುತ್ತಿರುವಂತೆ ಫೋಟೋ ಎಡಿಟ್ ಮಾಡಲಾಗಿದೆ.