ದೆಹಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿ ಶಾಶ್ವತ ಬಂದ್! – ಕಾರಣವೇನು ಗೊತ್ತಾ?
ನವದೆಹಲಿ: ಅಫ್ಘಾನಿಸ್ತಾನ ರಾಷ್ಟ್ರರಾಜಧಾನಿ ದೆಹಲಿಯಲ್ಲಿರುವ ತನ್ನ ರಾಯಭಾರಿ ಕಚೇರಿಯನ್ನು ಶಾಶ್ವತವಾಗಿ ಮುಚ್ಚಲಾಗಿದೆ ಎಂದು ಅಫ್ಘಾನಿಸ್ತಾನದ ರಾಜತಾಂತ್ರಿಕ ಮಿಷನ್ ಹೇಳಿಕೆ ನೀಡಿದೆ.
ರಾಯಭಾರ ಕಚೇರಿಯನ್ನು ಮುಚ್ಚುವ ಅವರ ನಿರ್ಧಾರವು ನವೆಂಬರ್ 23, 2023 ರಿಂದ ಜಾರಿಗೆ ಬಂದಿದೆ ಎಂದು ಅಫ್ಘಾನಿಸ್ತಾನದ ಹೇಳಿಕೆಯಲ್ಲಿ ಉಲ್ಲೇಖವಾಗಿದೆ. ಅಫ್ಘಾನಿಸ್ತಾನ ಸರ್ಕಾರವು ಭಾರತ ಸರ್ಕಾರದಿಂದ ನಿರಂತರ ಸವಾಲುಗಳನ್ನು ಎದುರಿಸುತ್ತಿದೆ. ಈ ಕಾರಣದಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಚೀನಾದಲ್ಲಿ ನ್ಯುಮೋನಿಯಾ ಹೆಚ್ಚಾಗಲು ಯಾವುದೇ ನಿಗೂಢ ವೈರಸ್ ಪ್ರಭಾವ ಕಾರಣವಲ್ಲ – WHO ಸ್ಪಷ್ಟನೆ
ಅಫ್ಘಾನಿಸ್ತಾನದ ರಾಜತಾಂತ್ರಿಕ ಮಿಷನ್ ಹೇಳಿಕೆಯಲ್ಲಿ ಏನಿದೆ?
ನವದೆಹಲಿಯಲ್ಲಿರುವ ಅಫ್ಘಾನಿಸ್ತಾನ ರಾಯಭಾರ ಕಚೇರಿಯ ಕಾರ್ಯಾಚರಣೆಗಳನ್ನು ಸೆಪ್ಟೆಂಬರ್ 30 ರಿಂದ ಕ್ಲೋಸ್ ಮಾಡಲಾಗಿದ್ದು, ಭಾರತ ಸರ್ಕಾರದಿಂದ ಸಹಕಾರ ಪಡೆಯಲು ಸಾಧ್ಯವಾಗಲಿಲ್ಲ ಎಂದು ಆಫ್ಘಾನಿಸ್ತಾನ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಎಂಟು ವಾರಗಳ ಕಾಲ ಕಾದ ನಂತರ ನವದೆಹಲಿಯಲ್ಲಿರುವ ಅಫ್ಘಾನಿಸ್ತಾನದ ರಾಯಭಾರ ಕಚೇರಿಯನ್ನು ಮುಚ್ಚಲು ನಿರ್ಧರಿಸಿದೆ. ವಿಯೆನ್ನಾ ಕನ್ವೆನ್ಷನ್ 1961 ರ ಪ್ರಕಾರ, ಅಫ್ಘಾನಿಸ್ತಾನದ ರಾಯಭಾರ ಕಚೇರಿಯ ಆಸ್ತಿ, ಬ್ಯಾಂಕ್ ಖಾತೆಗಳು, ವಾಹನಗಳು ಮತ್ತು ಇತರ ಆಸ್ತಿಗಳ ಕಸ್ಟಡಿಯನ್ನು ಭಾರತ ಸರ್ಕಾರಕ್ಕೆ ನೀಡುವಂತೆ ಬೇಡಿಕೆಯಿಟ್ಟಿದೆ ಎಂದು ಅಫ್ಘಾನಿಸ್ತಾನ ಹೇಳಿದೆ. ಮಿಷನ್ನ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿರುವ ಸುಮಾರು ಐದು ಲಕ್ಷ ಡಾಲರ್ಗಳ ಮೊತ್ತವನ್ನು ಕೂಡ ಅಫ್ಘಾನಿಸ್ತಾನ ಕ್ಲೈಮ್ ಮಾಡಿದೆ.
ಹಿತಾಸಕ್ತಿಗಳಲ್ಲಿನ ಪ್ರಮುಖ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿನ ರಾಯಭಾರ ಕಚೇರಿಯನ್ನು ಮುಚ್ಚುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಆಫ್ಘನ್ ಸರ್ಕಾರ ಹೇಳಿದೆ. ರಾಯಭಾರ ಕಚೇರಿಗೆ ಬೆಂಬಲ ನೀಡಿದ ಭಾರತ ಸರ್ಕಾರಕ್ಕೆ ಆಫ್ಘನ್ ಸರ್ಕಾರ ಕೃತಜ್ಞತೆಯನ್ನೂ ತಿಳಿಸಿದೆ. ಕಳೆದ ಎರಡು ವರ್ಷ ಮತ್ತು ಮೂರು ತಿಂಗಳಲ್ಲಿ ಭಾರತದಲ್ಲಿ ಆಫ್ಘನ್ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಆಗಸ್ಟ್ 2021 ಕ್ಕೆ ಹೋಲಿಸಿದರೆ, ಈ ಅಂಕಿಅಂಶವು ಅರ್ಧದಷ್ಟು ಕಡಿಮೆಯಾಗಿದೆ ಮತ್ತು ಈ ಅವಧಿಯಲ್ಲಿ ಬಹಳ ಕಡಿಮೆ ಸಂಖ್ಯೆಯ ಹೊಸ ವೀಸಾಗಳನ್ನು ನೀಡಲಾಗಿದೆ ಎಂದು ಅಫ್ಘಾನಿಸ್ತಾನ ಹೇಳಿಕೆಯಲ್ಲಿ ತಿಳಿಸಿದೆ.
ಮಾಮುಂಡ್ಜಾಯ್ ವಿರುದ್ಧ ಆರೋಪ!
ಭಾರತದಲ್ಲಿ ಅಫ್ಘಾನಿಸ್ತಾನದ ಉಸ್ತುವಾರಿ ರಾಯಭಾರಿ ಫರೀದ್ ಮಾಮುಂಡ್ಜಾಯ್. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳುವ ಮೊದಲು ಅವರ ನೇಮಕಾತಿಯನ್ನು ಮಾಡಲಾಯಿತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವು ಅಧಿಕಾರಕ್ಕೆ ಬಂದ ನಂತರ, ಅವರಿಗೆ ಯಾವುದೇ ಬೆಂಬಲ ಅಥವಾ ರಾಜತಾಂತ್ರಿಕ ಸಹಾಯವನ್ನು ನೀಡಲಿಲ್ಲ ಎಂದು ಮಾಮುಂಡ್ಜಾಯ್ ಆರೋಪಿಸಿದರು. ಇದರಿಂದಾಗಿ ಅವರು ತಮ್ಮ ಕೆಲಸವನ್ನು ಮಾಡಲು ಸಾಧ್ಯವಾಗಲಿಲ್ಲ. ಭಾರತ ಸರ್ಕಾರ ಮತ್ತು ತಾಲಿಬಾನ್ ಸರ್ಕಾರದ ನಡುವೆ ಉದ್ವಿಗ್ನತೆಯನ್ನು ಸೃಷ್ಟಿಸಲು ಮಾಮುಂಡ್ಜಾಯ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಂತಿಮವಾಗಿ, ಸೆಪ್ಟೆಂಬರ್ 30 ರಂದು, ಅಫ್ಘಾನಿಸ್ತಾನ ರಾಯಭಾರ ಕಚೇರಿಯು ಭಾರತದಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸಿತು ಮತ್ತು ರಾಯಭಾರ ಕಚೇರಿಯ ಸಿಬ್ಬಂದಿ ಅಮೆರಿಕ ಅಥವಾ ಯುರೋಪ್ಗೆ ತೆರಳಿದರು.