ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ಗಡಿ ದಾಟಿ ಇತಿಹಾಸ – ಮೋದಿಯ ಮೌನ.. ಸತ್ಯವೋ, ಸುಳ್ಳೋ?
ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಭಾರತವೂ ಒಂದು. ಬಾಹ್ಯಾಕಾಶ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹತ್ವದ ಮೈಲುಗಲ್ಲು ಸಾಧಿಸುತ್ತಿದೆ. ಶಕ್ತಿಶಾಲಿ ದೇಶಗಳೂ ಕೂಡ ಇಂಡಿಯಾದತ್ತ ತಿರುಗಿ ನೋಡುವಂಥ ಅಭಿವೃದ್ಧಿ ಕಾಣುತ್ತಿದೆ. ಇತ್ತೀಚೆಗಷ್ಟೇ ಜಗತ್ತಿನ ‘ಟಾಪ್-5′ ಆರ್ಥಿಕತೆ ಎಂಬ ಹೆಗ್ಗಳಿಕೆ ಪಡೆದಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಟಾಪ್-4 ಸ್ಥಾನಕ್ಕೆ ಭಾರತ ಜಿಗಿದಿದೆ ಎಂಬ ಸುದ್ದಿ ಸುನಾಮಿಯಂತೆ ಹಬ್ಬಿದೆ. ಇದೇ ಮೊದಲ ಬಾರಿಗೆ, ಭಾರತದ ಜಿಡಿಪಿ 4 ಟ್ರಿಲಿಯನ್ ಡಾಲರ್ ಗಡಿ ದಾಟಿದೆ ಎಂದು ವರದಿಯಾಗಿದೆ. ಈ ಮೂಲಕ ಶತಕೋಟಿ ಭಾರತೀಯರ ಬಹುದೊಡ್ಡ ಕನಸೊಂದು ನನಸಾಗಿದೆ ಎನ್ನಲಾಗುತ್ತಿದೆ.
ವಿಶ್ವದ ಪ್ರಮುಖ ಆರ್ಥಿಕತೆಯ ದೇಶಗಳ ಪೈಕಿ ಭಾರತ ಅತಿವೇಗವಾಗಿ ಬೆಳೆಯುತ್ತಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಶೇಕಡಾ 6ಕ್ಕಿಂತಲೂ ಹೆಚ್ಚು ವೇಗದಲ್ಲಿ ಭಾರತದ ಆರ್ಥಿಕತೆ ಬೆಳೆಯಲಿದೆ ಎನ್ನಲಾಗ್ತಿದೆ. ಆರ್ಬಿಐ ಮಾತ್ರವಲ್ಲ, ವಿಶ್ವದ ಪ್ರಮುಖ ಹಣಕಾಸು ವಿಶ್ಲೇಷಣಾ ಸಂಸ್ಥೆಗಳು ಇದೇ ರೀತಿಯ ಅಂದಾಜು ಮಾಡಿವೆ. 2027 ರ ವೇಳೆಗೆ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ. ಇದರ ನಡುವೆ ಭಾರತ ಅತಿದೊಡ್ಡ ಆರ್ಥಿಕತೆಯಲ್ಲಿ ವಿಶ್ವದ 5ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಂಪ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಸ್ತುವ ಅಮೆರಿಕ ವಿಶ್ವದ ಅತಿದೊಡ್ಡ ಆರ್ಥಿಕತೆ ಹೊಂದಿದ್ದು ಎರಡನೇ ಸ್ಥಾನದಲ್ಲಿ ಚೀನಾ ಇದೆ. ನಂತರದ ಸ್ಥಾನದಲ್ಲಿ ಜರ್ಮನಿ ಮತ್ತು ಜಪಾನ್ ದೇಶಗಳಿದ್ದು, ಭಾರತವು ಜಪಾನ್ನ ಜಿಡಿಪಿಯನ್ನು ಹಿಂದಿಕ್ಕಿದೆ ಎಂಬ ಪೋಸ್ಟ್ಗಳು ವೈರಲ್ ಆಗಿವೆ. ಆದ್ರೆ ಈ ಬಗ್ಗೆ ಕೇಂದ್ರ ಅಧಿಕೃತ ಮಾಹಿತಿ ನೀಡಿಲ್ಲ. ಅಷ್ಟಕ್ಕೂ ಯಾವ ಯಾವ ರಾಷ್ಟ್ರಗಳು ಎಷ್ಟು ಆರ್ಥಿಕತೆ ಹೊಂದಿವೆ. ಯಾವ ಸ್ಥಾನದಲ್ಲಿವೆ ಅನ್ನೋದನ್ನ ಮೊದಲು ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತೆ.
ಇದನ್ನೂ ಓದಿ : ಮೀನುಗಾರಿಕಾ ಬಂದರಿನಲ್ಲಿ ಭೀಕರ ಅಗ್ನಿ ಅವಘಡ – ಸುಟ್ಟು ಕರಕಲಾದ 40 ದೋಣಿಗಳು
ಜಗತ್ತಿನ ಟಾಪ್ ಆರ್ಥಿಕತೆಯಲ್ಲಿ ಮೊದಲ ಸ್ಥಾನದಲ್ಲಿ ಅಮೆರಿಕ ಗಟ್ಟಿಯಾಗಿ ಕೂತಿದ್ದು, ಅಮೆರಿಕ ಸುಮಾರು 25 ಟ್ರಿಲಿಯನ್ ಗೂ ಹೆಚ್ಚು ದೊಡ್ಡ ಆರ್ಥಿಕತೆ ಹೊಂದಿದೆ. ಹಾಗೂ ಚೀನಾ 17.96 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಆಗಿದೆ. ಚೀನಾ ನಂತರ ಜಪಾನ್ 4.23 ಟ್ರಿಲಿಯನ್ ಮತ್ತೆ ಜರ್ಮನಿ 4.07 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿದೆ. ಹೀಗೆ ಜಪಾನ್ ಮತ್ತು ಜರ್ಮನಿ ದೇಶಗಳು ಕ್ರಮವಾಗಿ 3 ಮತ್ತು 4 ನೇ ಸ್ಥಾನ ಪಡೆದಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಜಪಾನ್ ಮತ್ತು ಜರ್ಮನಿ ದೇಶಗಳ ಆರ್ಥಿಕತೆ ತೀವ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಇನ್ನು ಭಾರತ 3,38 ಟ್ರಿಲಿಯನ್ ಡಾಲರ್ ಮೂಲಕ ಐದನೇ ಸ್ಥಾನದಲ್ಲಿದೆ. ಇದೀಗ 4.00 ಟ್ರಿಲಿಯನ್ ಡಾಲರ್ ಮೂಲಕ ಭಾರತ 4ನೇ ಸ್ಥಾನಕ್ಕೇರಿದೆ ಎಂದು ವರದಿಯಾಗುತ್ತಿದೆ.
ಭಾರತದ ಜಿಡಿಪಿ 4 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ಹಲವಾರು ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಶೇರ್ ಮಾಡಲಾಗುತ್ತಿದೆ. ಸ್ಕ್ರೀನ್ ಶಾಟ್ ಷೇರ್ ಮಾಡಿಕೊಂಡಿರುವ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು, ಜಾಗತಿಕ ವೇದಿಕೆಯಲ್ಲಿ ಭಾರತದ ಮಹತ್ವದ ಪಾತ್ರ ಎಂದು ಟ್ವೀಟ್ ಮಾಡಿದ್ದಾರೆ. ಹಾಗೇ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮಟ್ಟವನ್ನು ಮುಟ್ಟುವ ಮೂಲಕ, ಭಾರತವು ದೇಶದ 4 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಬರೆದುಕೊಂಡಿದ್ದಾರೆ. ಹಾಗೇ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ಜಗತ್ತಿನಲ್ಲೇ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಲು ಇನ್ನು ಕೇವಲ ಎರಡು ವರ್ಷಗಳು ಸಾಕು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಾತರ 4 ಟ್ರಿಲಿಯನ್ ಡಾಲರ್ ಜಿಡಿಪಿ ಸಾಧಿಸಿದೆ ಅಂತಾ ಹೇಳಲಾಗ್ತಿದೆಯಾದ್ರೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೆ ಭಾರತವನ್ನು ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಕೇಂದ್ರ ಸರ್ಕಾರ ಹಲವಾರು ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ. ದೇಶವು ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಬೇಕಾದರೆ, ಜಿಡಿಪಿ ಐದು ಟ್ರಿಲಿಯನ್ ತಲುಪಬೇಕು. 2027ರ ವೇಳೆಗೆ ದೇಶವು ಐದು ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಬೇಕು ಎಂಬುದು ಸರ್ಕಾರದ ಗುರಿಯಾಗಿದೆ. 2027ರ ವೇಳೆಗೆ ಜಪಾನ್ ಮತ್ತು ಜರ್ಮನಿಯನ್ನು ಬಿಟ್ಟು ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಭಾರತ ಸರ್ಕಾರವು ತನ್ನ ಮಾರ್ಗಸೂಚಿಯ ಪ್ರಕಾರ 2027ರ ವೇಳೆಗೆ ಜಪಾನ್ ಮತ್ತು ಜರ್ಮನಿ ಎರಡನ್ನೂ ಹಿಂದಿಕ್ಕಲಿದೆ ಎನ್ನಲಾಗುತ್ತಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ ಕೂಡ ಇಂತಹ ಅಂದಾಜುಗಳನ್ನು ನೀಡಿದೆ. ಅಸಲಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದಂತೆ ಭಾರತದ ಗುರಿ 5 ಟ್ರಿಲಿಯನ್ ಡಾಲರ್. ಈ ಗುರಿಯನ್ನು ಸಾಧಿಸಲುಈ ಹಿಂದೆ ನೀಲನಕ್ಷೆಯನ್ನೂ ರೂಪಿಸಿತ್ತು.
ಪ್ರಸ್ತುತ ದೇಶದಲ್ಲಿ ಅಭಿವೃದ್ಧಿ ಹಾಗೂ ಆರ್ಥಿಕತೆಗೆ ತೊಡಕಾಗಿರುವ ಅತಿದೊಡ್ಡ ಸಮಸ್ಯೆ ಅಂದ್ರೆ ನಿರುದ್ಯೋಗ. ಹೀಗಾಗೇ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮಧ್ಯಮ, ಸಣ್ಣ & ಅತಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ವಿದ್ಯಾವಂತ ಯುವಕರು ಸರ್ಕಾರದ ಸಹಾಯದೊಂದಿಗೆ ಉದ್ದಿಮೆ ಸ್ಥಾಪಿಸಲು ಮತ್ತು ಹಣ ಗಳಿಸುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಯ ಪಾಲುದಾರರಾಗಲು ಹಲವು ಯೋಜನೆಗಳನ್ನ ರೂಪಿಸಲಾಗಿದೆ. ಆಶ್ವಾಸ್ ವಿಶ್ವಾಸ್ ಆಕಾಂಕ್ಷ ಘೋಷಣೆಯ ಮೂಲಕ ನಿರುದ್ಯೋಗ ನಿವಾರಣೆಗೆ ಒತ್ತು ನೀಡಲಾಗಿದೆ. ಭಾರತ್ ಮಾಲಾ, ಸಾಗರ್ ಮಾಲಾ ಯೋಜನೆಗಳ ಮೂಲಕ ರಸ್ತೆ, ರೈಲು, ಜಲ, ವಿಮಾನಯಾನ ಸಂಪರ್ಕ, ಮೆಟ್ರೋ ವಿಸ್ತಾರ ಹೆಚ್ಚಿಸಲಾಗುತ್ತಿದೆ. ಮಾತ್ರವಲ್ಲದೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸಾಕಾರಕ್ಕಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯ, ರಿಯಲ್ ಎಸ್ಟೇಟ್, ಜೀವವಿಮೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಶೇ.100 ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿದೆ. ಬೃಹತ್ ಯೋಜನೆಗಳಿಗೆ ಆದ್ಯತೆ ನೀಡಲಾಗಿದ್ದು, ಅಂತರಿಕ್ಷ ತಂತ್ರಜ್ಞಾನದಲ್ಲಿ ಸಾರ್ವಭೌಮತ್ವ, ಆಹಾರ ಸ್ವಾವಲಂಭನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹೀಗೆ 5 ಟ್ರಿಲಿಯನ್ ಆರ್ಥಿಕತೆ ಸಾಧನೆಗೆ ಗುರಿ ಹೊಂದಲಾಗಿದೆ.
ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಪ್ರಕಾರ 2023-24ರಿಂದ ಹಿಡಿದು 2025-26ರವರೆಗೆ ಮೂರು ವರ್ಷ ಶೇ. 6ರಿಂದ ಶೇ. 7.1ರವರೆಗಿನ ದರದಲ್ಲಿ ಭಾರತದ ಆರ್ಥಿಕತೆ ಬೆಳೆಯಬಹುದು. ಜಾಗತಿಕವಾಗಿ ಅನಿಶ್ಚಿತ ವಾತಾವರಣ ಇದ್ದರೂ ಭಾರತದ ಆರ್ಥಿಕ ಪ್ರಗತಿಯ ಮೇಲೆ ಹೆಚ್ಚೇನೂ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಆ ವರದಿಯಲ್ಲಿ ಹೇಳಲಾಗಿದೆ. ಜಾಗತಿಕ ಬೆಳವಣಿಗಳಿಂದ ಹಣದುಬ್ಬರ ಹೆಚ್ಚಬಹುದು. ಇದರಿಂದ ಆರ್ಥಿಕತೆಯ ವೇಗ ತಗ್ಗಬಹುದು. ಆದರೆ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಬೆಳವಣಿಗೆ ಉತ್ತಮ ವೇಗದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಮಾರ್ಗನ್ ಸ್ಟಾನ್ಲೀ ರೀಸರ್ಚ್, ಮೂಡೀಸ್ ಇನ್ವೆಸ್ಟರ್ಸ್ ಸರ್ವಿಸಸ್, ಐಎಂಎಫ್ ಮೊದಲಾದ ಅಂತಾರಾಷ್ಟ್ರೀಯ ಸಂಸ್ಥೆಗಳೂ ಕೂಡ ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ. ಭಾರತದ ಈ ಯಶಸ್ಸಿನ ಹಿಂದೆ ಹಲವು ದಶಕಗಳ ಪರಿಶ್ರಮವೂ ಅಡಗಿದೆ.
ಭಾರತದ ಆರ್ಥಿಕತೆಯು ಸ್ವಾತಂತ್ರ್ಯ ಬಂದಾಗಿನಿಂತ 1990 ರ ದಶಕದವರೆಗೆ 1 ಟ್ರಿಲಿಯನ್ ಡಾಲರ್ ಅಷ್ಟೇ ಆರ್ಥಿಕತೆ ಹೊಂದಿತ್ತು. ನಂತರದ ಕೆಲವೇ ಕೆಲವು ವರ್ಷಗಳಲ್ಲಿ ಮತ್ತೊಂದು ಟ್ರಿಲಿಯನ್ ಸಾಧಿಸಿತು. 2014 ರಲ್ಲಿ 2-ಟ್ರಿಲಿಯನ್ ಡಾಲರ್ ಮಾರ್ಕ್ ದಾಟಿದ ಭಾರತದ ಜಿಡಿಪಿ ಪ್ರಸ್ತುತ 3.38 ಟ್ರಿಲಿಯನ್ ಡಾಲರ್ ಮೂಲಕ ವಿಶ್ವದ ಐದನೇ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿದೆ. ಇನ್ನು ಭಾರತವು 2025 ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿ ಹೊಂದಿದೆ. ಹಾಗೇ 2030 ರ ವೇಳೆಗೆ 7 ಟ್ರಿಲಿಯನ್ ಆರ್ಥಿಕತೆಯನ್ನು ತಲುಪುವ ಗುರಿಯೊಂದಿಗೆ ಯೋಜನೆ ರೂಪಿಸಿದೆ. ಪ್ರಸ್ತುತ ಬೆಳವಣಿಗೆಯ ಪಥವನ್ನು ಉಳಿಸಿಕೊಂಡರೆ ಮುಂದಿನ ಏಳು ವರ್ಷಗಳಲ್ಲಿ ಭಾರತವು 7-ಟ್ರಿಲಿಯನ್ ಆರ್ಥಿಕತೆಯಾಗಲಿದೆ ಎಂದು ಭಾರತದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವ ಅನಂತ ನಾಗೇಶ್ವರನ್ ಅಭಿಪ್ರಾಯ ಪಟ್ಟಿದ್ದಾರೆ.
ಅಸಲಿಗೆ ಭಾರತವು 2014ರಲ್ಲಿ ಜಗತ್ತಿನಲ್ಲಿ 10ನೇ ಬೃಹತ್ ಆರ್ಥಿಕತೆ ಹೊಂದಿದ ರಾಷ್ಟ್ರ ಎನಿಸಿತ್ತು. ಈಗ ಜಗತ್ತಿನೇ ಐದನೇ ಬಲಿಷ್ಠ ಆರ್ಥಿಕತೆಯ ರಾಷ್ಟ್ರವಾಗಿದೆ. ಆರ್ಥಿಕತೆಯಲ್ಲಿ ದಾಪುಗಾಲು ಹಾಕುತ್ತಿರುವ ಭಾರತದ ಈ ಯಶಸ್ಸಿನ ಹಿಂದೆ ಎಲ್ಲ ಸರ್ಕಾರಗಳ ಪಾಲಿದೆ. 1990ರ ದಶಕದಲ್ಲಿ ಜಾಗತಿಕರಣಕ್ಕೆ ಮುಕ್ತಗೊಂಡ ಬಳಿಕ ಭಾರತದ ಬೆಳವಣಿಗೆಯ ದಿಕ್ಕೇ ಬದಲಾಯಿತು. ಒಂದು ಹಂತದಲ್ಲಿ ಸಾಲ ಮಾಡಿ ಗೋಧಿ ತರುತ್ತಿದ್ದ ರಾಷ್ಟ್ರ ಇಂದು ಹಲವು ದೇಶಗಳಿಗೆ ನೆರವಿನ ಹಸ್ತ ನೀಡುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದೆ. ಆರ್ಬಿಐನ ಇತ್ತೀಚಿನ ಅಂದಾಜಿನ ಪ್ರಕಾರ, ಭಾರತೀಯ ಆರ್ಥಿಕತೆಯು ಈ ಹಣಕಾಸು ವರ್ಷದಲ್ಲಿ ಶೇಕಡಾ 6.5 ರಷ್ಟು ಬೆಳೆಯುವ ನಿರೀಕ್ಷೆಯಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ 2028 ರವರೆಗೆ ಪ್ರತಿ ವರ್ಷ 6.3 ಶೇಕಡಾ ಬೆಳವಣಿಗೆಯನ್ನು ನಿರೀಕ್ಷಿಸಿದೆ. ಒಟ್ಟಾರೆ ಭಾರತ ತನ್ನ ಜಿಡಿಪಿಯಲ್ಲಿ ಒಂದೊಂದೇ ಮೆಟ್ಟಿಲು ಹತ್ತುತ್ತಿದೆ. ಈ ಮೂಲಕ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳಿಗೆ ಸಮಾನವಾಗಿ ನಿಲ್ಲುವ ತಾಕತ್ತು ಭಾರತೀಯರಲ್ಲೂ ಇದೆ ಎನ್ನುವುದು ಸಾಬೀತಾಗುತ್ತಿದೆ.