ಐಸಿಸಿ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೋತರೂ ಹಣದ ಹೊಳೆ – ಎಷ್ಟು ಕೋಟಿಯ ಬ್ಯುಸಿನೆಸ್ ಗೊತ್ತಾ?

ಐಸಿಸಿ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೋತರೂ ಹಣದ ಹೊಳೆ – ಎಷ್ಟು ಕೋಟಿಯ ಬ್ಯುಸಿನೆಸ್ ಗೊತ್ತಾ?

ಭಾರತದ ಪರ ಬ್ಯಾಟರ್ ಗಳ ಸಿಡಿಲಬ್ಬರ, ಬೌಲರ್ ಗಳ ಮಾರಕ ದಾಳಿಯಿಂದಲೇ 2023ರ ಐಸಿಸಿ ವಿಶ್ವಕಪ್ ಕೋಟ್ಯಂತರ ಭಾರತೀಯರಿಗೆ ರಸದೌತಣ ಬಡಿಸಿತ್ತು. ಸರಣಿಯುದ್ದಕ್ಕೂ ಅಜೇಯವಾಗಿ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ಈ ಬಾರಿಯ ತಂಡಗಳಲ್ಲಿ ಹಾಟ್ ಫೇವರಿಟ್ ಆಗಿತ್ತು. ಕ್ರೀಡಾಭಿಮಾನಿಗಳಲ್ಲಿ ನಿರೀಕ್ಷೆಯೂ ಮುಗಿಲು ಮುಟ್ಟಿತ್ತು. ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಮ್ಯಾಚ್ ನಲ್ಲಿ ಭಾರತ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲಲಿ ಎಂದು ಇಡೀ ಭಾರತ ಪ್ರಾರ್ಥಿಸುತ್ತಿತ್ತು. ಆದರೆ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಾಂಗರೂಗಳ ವಿರುದ್ಧ ಭಾರತ ಮುಗ್ಗರಿಸಿತು. ಭಾರತದ ನೆಲದಲ್ಲೇ ಭಾರತೀಯರನ್ನ ಸೋಲಿಸಿದ ಪ್ಯಾಟ್ ಕಮಿನ್ಸ್ ಪಡೆ ಆರನೇ ಬಾರಿಗೆ ವರ್ಲ್ಡ್ ಕಪ್ ಟ್ರೋಫಿ ಎತ್ತಿ ಹಿಡಿಯಿತು. ಭಾರತದಲ್ಲಿ ಆಯೋಜನೆಗೊಂಡಿದ್ದ ಐಸಿಸಿ ವಿಶ್ವಕಪ್ 2023 ಭಾರತದ ಪಾಲಿಗೆ ಬರೀ ಆಟವಾಗಿ ಉಳಿದಿರಲಿಲ್ಲ. ಭಾರತಕ್ಕೆ ಸಾವಿರಾರು ಕೋಟಿ ರೂಪಾಯಿಯ ಆದಾಯ ತಂದು ಕೊಟ್ಟಿದೆ. ಜಿಡಿಪಿ, ಷೇರುಮಾರುಕಟ್ಟೆಗಳಲ್ಲಿ ಗಣನೀಯ ಏರಿಕೆ ಕಂಡಿದ್ದು ಹಣದ ಹೊಳೆಯನ್ನೂ ಹರಿಸಿದೆ.

ವಿಶ್ವದಲ್ಲಿ ಅತೀ ಹೆಚ್ಚು ಜನ ವೀಕ್ಷಿಸುವ ಆಟಗಳಲ್ಲಿ ಕ್ರಿಕೆಟ್ ಕೂಡ ಒಂದು. ಅದ್ರಲ್ಲೂ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಐಸಿಸಿ ವಿಶ್ವಕಪ್​ನ 13ನೇ ಆವೃತ್ತಿಯು ಈ ಬಾರಿ ಭಾರತದಲ್ಲಿ ಆಯೋಜನೆಗೊಂಡಿದ್ದು ಮತ್ತೊಂದು ವಿಶೇಷವಾಗಿತ್ತು. ಅಕ್ಟೋಬರ್ 5ರಂದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಆರಂಭಗೊಂಡಿದ್ದ ಟೂರ್ನಿ ನವೆಂಬರ್ 19ರಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಸೆಣಸಾಟದೊಂದಿಗೆ ಮುಕ್ತಾಯ ಕಂಡಿದೆ. ಭಾರತ, ಅಫಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಿದ್ದವು. ಆದ್ರೆ ಅಂತಿಮವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದ್ದವು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ಪವರ್ ಫುಲ್ ಪರ್ಫಾಮೆನ್ಸ್ ನೀಡಿತ್ತು. ಮಾರಕ ಬೌಲಿಂಗ್ ದಾಳಿ ಮೂಲಕ ಟೀಂ ಇಂಡಿಯಾವನ್ನ 240 ರನ್​ಗಳಿಗೆ ಕಟ್ಟಿ ಹಾಕಿದ್ರು. ಭಾರತ ನೀಡಿದ 241 ರನ್ ಗಳ ಗುರಿಯನ್ನು ಬೆನ್ನತ್ತಿದ ಆಸ್ಚ್ರೇಲಿಯಾ ತಂಡ ಟ್ರಾವಿಸ್ ಹೆಡ್ ಶತಕ ಮತ್ತು ಲಬುಶೇನ್ ರ ಅರ್ಧಶತಕದ ನೆರವಿನಿಂದ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಅಲ್ಲಿಗೆ ಕೋಟ್ಯಂತರ ಭಾರತೀಯರ ಪ್ರಾರ್ಥನೆ ವಿಫಲವಾಗಿತ್ತು.  ಭಾರತ ಫೈನಲ್ ನಲ್ಲಿ ಸೋತರೂ ಇದು ಭಾರತದ  ಆರ್ಥಿಕತೆಗೆ ದೊಡ್ಡ ಬೂಸ್ಟ್ ನೀಡಿದೆ. ವಿಶ್ವಕಪ್​ನಿಂದಾಗಿ ಭಾರತದ ಜಿಡಿಪಿಗೆ 2.65 ಬಿಲಿಯನ್ ಡಾಲರ್ ಅಂದ್ರೆ ಭಾರತದ ರೂಪಾಯಿಗಳಲ್ಲಿ 22,000 ಕೋಟಿ ರೂಪಾಯಿ ಕೊಡುಗೆ ಸಿಕ್ಕಿದೆ.

ಇದನ್ನೂ ಓದಿ : WALLನಂಥಾ ಟೀಂ ಕಟ್ಟಿದ್ದು ಹೇಗೆ ರಾಹುಲ್ ದ್ರಾವಿಡ್? ಕನ್ನಡಿಗನ ಕೋಚಿಂಗ್ ಹೇಗಿತ್ತು?

ಭಾರತದಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಆಯೋಜನೆಗೊಂಡಿದ್ದು ಇದು ನಾಲ್ಕನೇ ಬಾರಿ. 45 ದಿನಗಳ ಕಾಲ ದೇಶದ ವಿವಿಧ ರಾಜ್ಯಗಳ ಕ್ರೀಡಾಂಗಣದಲ್ಲಿ 10 ದೇಶಗಳ ನಡುವೆ ಒಟ್ಟು 48 ಪಂದ್ಯಗಳು ನಡೆದಿವೆ. ವರದಿಯ ಪ್ರಕಾರ, ಕನಿಷ್ಠ 25 ಲಕ್ಷಕ್ಕೂ ಹೆಚ್ಚು ಜನ ದೇಶದ 10 ಸ್ಥಳಗಳ ಕ್ರೀಡಾಂಗಣಗಳಲ್ಲಿ 48 ಪಂದ್ಯಗಳನ್ನು ನೇರವಾಗಿ ವೀಕ್ಷಿಸಿದ್ದಾರೆ. ಪ್ರಪಂಚದಾದ್ಯಂತ ಕೋಟ್ಯಂತರ ಜನ ತಮ್ಮ ಮನೆಗಳಲ್ಲಿ ಕುಳಿತು ಮ್ಯಾಚ್ ನೋಡಿದ್ದಾರೆ. ವಿಶ್ವಕಪ್ ಪಂದ್ಯಗಳನ್ನ ವೀಕ್ಷಿಸಲು ವಿಶ್ವದ ಹಲವು ರಾಷ್ಟ್ರಗಳಿಂದ ಭಾರತಕ್ಕೆ ಸಾವಿರಾರು ಕ್ರೀಡಾಭಿಮಾನಿಗಳು ಭೇಟಿ ನೀಡಿದ್ದಾರೆ. ಟಿಕೆಟ್ ಖರೀದಿಗೆ ಹೆಚ್ಚು ಖರ್ಚು ಮಾಡಿದ್ದು, ವಿಮಾನಯಾನ ಉದ್ಯಮಕ್ಕೆ ಇದರಿಂದ ದೊಡ್ಡ ಮಟ್ಟದ ಲಾಭವಾಗಿದೆ. ಅಲ್ಲದೆ ಆತಿಥ್ಯ ವಲಯವಾದ ಹೋಟೆಲ್ಗಳು, ಆಹಾರ ಉದ್ಯಮಗಳು ಮತ್ತಯ ವಿತರಣಾ ಸೇವೆಗಳ ವ್ಯವಹಾರದಲ್ಲೂ ಭಾರೀ ಏರಿಕೆ ಕಂಡಿದೆ. ಸರಕುಗಳ ಖರೀದಿಯೂ ಜಾಸ್ತಿಯಾಗಿದ್ದು, ಹಬ್ಬದ ಸೀಸನ್ ಇದ್ದಿದ್ದರಿಂದ ಸ್ಥಳೀಯವಾಗಿಯೂ ಚಿಲ್ಲರೆ ವಸ್ತುಗಳ ಬೇಡಿಕೆ ಹೆಚ್ಚಳವಾಗಿತ್ತು. ಸ್ಟೇಡಿಯಂಗಳಲ್ಲಿ ಪಂದ್ಯಗಳ ಟಿಕೆಟ್ ಮಾರಾಟದಿಂದಲೇ 1,600 ರಿಂದ 2,200 ಕೋಟಿ ರೂಪಾಯಿ ಆದಾಯ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಟಿವಿ ಹಾಗೂ OTT ಯಲ್ಲಿ ಪಂದ್ಯಾಗಳನ್ನ ವೀಕ್ಷಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 2019 ರ ವಿಶ್ವಕಪ್ ನ 552 ಮಿಲಿಯನ್ ಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಮಾಡಿದ್ದರು. ಈ ಬಾರಿಯ ವಿಶ್ವಕಪ್ ಕಳೆದ ಬಾರಿಗಿಂತಲೂ ಹೆಚ್ಚಿನ ವೀಕ್ಷಣೆ ಪಡೆದಿದೆ. ಹೀಗಾಗಿ ಪ್ರಾಯೋಜಕತ್ವದ ಟಿವಿ ಹಕ್ಕುಗಳಿಂದ ಏನಿಲ್ಲ ಅಂದ್ರೂ 10,500 ರಿಂದ 12,000 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಹಾಗೇ ವಿಶ್ವಕಪ್ ಸಮಯದಲ್ಲಿ ಕ್ರಿಕೆಟ್  ತಂಡಗಳು ದೇಶದ ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣ ಮಾಡಿವೆ. ಈ ಪ್ರಯಾಣಕ್ಕೆ 150 ರಿಂದ 250 ಕೋಟಿ ರೂಪಾಯಿ ವೆಚ್ಚವಾಗಿರಬಹುದು ಎನ್ನಲಾಗಿದೆ. ಹಾಗೇ ವಿಶ್ವಕಪ್ ನೋಡಲು ಪ್ರತಿ ಪಂದ್ಯಕ್ಕೆ 1,000ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ವಿದೇಶಗಳಿಂದ ಭಾರತಕ್ಕೆ ಬಂದಿದ್ದಾರೆ. ಈ ಪ್ರವಾಸಿಗರು ಹೋಟೆಲ್, ಆಹಾರ, ಪ್ರಯಾಣ ಮತ್ತು ಶಾಪಿಂಗ್ ಗೆ ಅಂತಾ ಸುಮಾರು 450 ರಿಂದ 600 ಕೋಟಿ ರೂಪಾಯಿ ಖರ್ಚು ಮಾಡಿರುವ ಸಾಧ್ಯತೆ ಇದೆ. ಮಾತ್ರವಲ್ಲದೇ ನಮ್ಮದೇ ದೇಶದ ಕ್ರೀಡಾಭಿಮಾನಿಗಳು ಸಹ ಮ್ಯಾಚ್ ನೋಡಲು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣ ಮಾಡಿದ್ದಾರೆ. ಇವರು ಆಹಾರ ಮತ್ತು ಹೋಟೆಲ್ ಗಳಿಗಾಗಿ 150 ರಿಂದ 250 ಕೋಟಿ ರೂಪಾಯಿ ಖರ್ಚು ಮಾಡಿದಬಹುದು. ಅಲ್ಲದೇ ಅದೇ ರಾಜ್ಯಗಳ ಜನ ಕೂಡ ಪಂದ್ಯ ನೋಡಲು ಆಹಾರ ಮತ್ತು ಇಂಧನಕ್ಕಾಗಿ 300 ರಿಂದ 500 ಕೋಟಿ ರೂಪಾಯಿ ವೆಚ್ಚ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಹಾಗೇ ಐಸಿಸಿ ಕ್ರಿಕೆಟ್ ವಿಶ್ವಕಪ್ಗೆ ಪ್ರಾಯೋಜಕತ್ವ ಪಡೆದಿರುವ ಪ್ರಮುಖ ಬ್ರ್ಯಾಂಡ್ಗಳ ಪೈಕಿ ಎಂಆರ್ಎಫ್ ಟಯರ್ಸ್ ಹಾಗೂ ಬುಕಿಂಗ್.ಕಾಂ, ಇಂಡಸ್ಲ್ಯಾಂಡ್ ಬ್ಯಾಂಕ್, ಮಾಸ್ಟರ್ ಕಾರ್ಡ್, ಅರಾಮ್ಕೋ, ಎಮಿರೇಟ್ಸ್ ಸಹ ಸೇರಿವೆ. ಈ 6 ಬ್ರ್ಯಾಂಡ್ಗಳು 8ರಿಂದ 10 ಮಿಲಿಯನ್ ಡಾಲರ್ನಷ್ಟು ಕೊಡುಗೆ ನೀಡಿರಬಹುದು ಎಂದು ಅಂದಾಜಿಸಲಾಗಿದೆ. ಇಷ್ಟೇ ಅಲ್ಲದೆ ಹತ್ತಾರು ಬ್ರ್ಯಾಂಡ್ ಮೂಲಕ ಸುಮಾರು 1,248 ಕೋಟಿ ರೂ. ಮೊತ್ತವು ಪ್ರಾಯೋಜಕತ್ವ ರೂಪದಲ್ಲಿ ಬಂದಿದೆ ಎನ್ನಲಾಗಿದೆ. ಇದರ ಜೊತೆಗೆ ಐಸಿಸಿಗೆ ಅತೀ ಹೆಚ್ಚು ಆದಾಯ ತಂದುಕೊಡುವುದೇ ಭಾರತ. ಹಾಗೆಯೇ ಕಳೆದ 16 ವರ್ಷಗಳಲ್ಲಿ ಭಾರತ ಕ್ರಿಕೆಟ್ ತಂಡ ಕೂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ, ಐಸಿಸಿಯ ಆದಾಯದಲ್ಲಿ ಬಿಸಿಸಿಐಗೆ ಸಿಂಹಪಾಲು ಸಿಗುತ್ತಿದೆ. 2018ರಿಂದ 2022ರವರೆಗೆ ಬಿಸಿಸಿಐ ಬರೋಬ್ಬರಿ 27,411 ಕೋಟಿ ರೂಪಾಯಿ ಆದಾಯ ಗಳಿಸಿದೆ. ಅದರ ಜೊತೆಗೆ ಟಿವಿ ಪಂದ್ಯಗಳ ಪ್ರಸಾರ ಹಕ್ಕು ಇತ್ಯಾದಿ ಮೂಲಕ ಬಿಸಿಸಿಐಗೆ ಅತೀಹೆಚ್ಚು ಲಾಭ ಸಿಗುತ್ತಿದೆ. ಇದೇ ಕಾರಣಕ್ಕೆ ಬಿಸಿಸಿಐ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿಕೊಂಡಿದೆ.

ಸ್ಪಾನ್ಸರ್ ಶಿಪ್ ಮೂಲಕ ಬರೋಬ್ಬರಿ 1,250 ಕೋಟಿ ರೂಪಾಯಿ ಆದಾಯ ಬಂದಿರಬಹುದು. ಅಲ್ಲದೆ ಟಿವಿ ಮತ್ತು ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಅತೀ ಹೆಚ್ಚು ಜನ ವೀಕ್ಷಣೆ ಮಾಡಿರೋದ್ರಿಂದ ಜಾಹೀರಾತಿಗೆ ಭಾರೀ ಬೇಡಿಕೆ ಇದೆ. ಹೀಗಾಗಿ ಟಿವಿ ಪ್ರಸಾರ ಹಕ್ಕು ಮತ್ತು ಪಾಯೋಜಕತ್ವದಿಂದ ಸುಮಾರು 12,000 ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ಊಹಿಸಲಾಗಿದೆ. ಸ್ಟೇಡಿಯಂ ಟಿಕೆಟ್ ಗಳ ಮಾರಾಟದಿಂದಲೇ 800 ಕೋಟಿಗೂ ಅಧಿಕ ಆದಾಯ ಬಂದಿರಬಹುದು ಎನ್ನಲಾಗಿದೆ. ಪಂದ್ಯದ ಪ್ರಸಾರದ ಸಮಯದಲ್ಲಿ ಪ್ರಸಾರವಾಗುವ ಜಾಹೀರಾತುಗಳಲ್ಲೇ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ. ಹೈ-ಪ್ರೊಫೈಲ್ ಪಂದ್ಯಗಳ ಸಮಯದಲ್ಲಿ 10-ಸೆಕೆಂಡ್ ಜಾಹೀರಾತು ಸ್ಲಾಟ್ಗೆ ಇಂಡಿಯನ್ ಕರೆನ್ಸಿ ಪ್ರಕಾರ ಸುಮಾರು 30 ಲಕ್ಷ ರೂಪಾಯಿವರೆಗೆ ಹಣ ಪಾವತಿಸಲಾಗಿದೆ. ಇದಿಷ್ಟೇ ಅಲ್ಲದೆ ವಿಶ್ವಕಪ್ ನಲ್ಲಿ ಈವೆಂಟ್ ಮ್ಯಾನೇಜ್ಮೆಂಟ್ ಭದ್ರತೆಗಾಗಿ 750 ರಿಂದ 1,000 ಕೋಟಿ ರೂಪಾಯಿ ಖರ್ಚು ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ರೆಸ್ಟೋರೆಂಟ್​ಗಳು, ಕೆಫೆಗಳಲ್ಲಿ ಪಂದ್ಯವನ್ನು ಪ್ರದರ್ಶಿಸುವುದು ಮತ್ತು ಮನೆಯಲ್ಲಿ ಕುಳಿತು ಆ್ಯಪ್ ಮೂಲಕ ಆಹಾರವನ್ನು ಆರ್ಡರ್ ಮಾಡುವುದರಿಂದ ಇಡೀ ಪಂದ್ಯಾವಳಿಯಲ್ಲಿ 4,000 ರಿಂದ 5,000 ಕೋಟಿ ರೂಪಾಯಿಗಳ ವ್ಯವಹಾರ ನಡೆದಿರಬಹುದು. ಈ ಎಲ್ಲಾ ಖರ್ಚುಗಳನ್ನು ಸೇರಿಸಿದರೆ, ವಿಶ್ವಕಪ್ ಕ್ರಿಕೆಟ್ ನಲ್ಲಿ ಒಟ್ಟು 18,000 ರಿಂದ 22,000 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಇದರ ಲಾಭವು 2023-24 ರ ಆರ್ಥಿಕ ವರ್ಷದಲ್ಲಿ ಜಿಡಿಪಿಯಲ್ಲಿ ಭಾರೀ ಬೆಳವಣಿಗೆಗೆ ಕಾರಣವಾಗುತ್ತದೆ. ಟಿಕೆಟ್ ಮಾರಾಟ, ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಆಹಾರ ವಿತರಣೆಯ ಮೇಲಿನ ಜಿಎಸ್ಟಿ ಸಂಗ್ರಹದ ಮೂಲಕ ಸರ್ಕಾರವು ತೆರಿಗೆ ಆದಾಯದ ರೂಪದಲ್ಲಿ ದೊಡ್ಡ ಆದಾಯವನ್ನು ಗಳಿಸಿದೆ. ಅಲ್ಲದೆ ಭಾರತ ಆಸ್ಟ್ರೇಲಿಯಾ ಫೈನಲ್ ಪಂದ್ಯದಲ್ಲೂ ಅಹಮದಾಬಾದ್ ಗೆ ಗಣನೀಯ ಪ್ರಮಾಣದಲ್ಲಿ ವಿಮಾನಗಳ ಸಂಚಾರವನ್ನ ನಿಗದಿ ಪಡಿಸಲಾಗಿತ್ತು.

ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆದ ಚಾಂಪಿಯನ್ ಶಿಪ್ ಮ್ಯಾಚ್ ನಡೆದಿದ್ದು, ಭಾರತದ ಡಿಸೆಂಬರ್ ತ್ರೈಮಾಸಿಕದಲ್ಲಿನ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮವನ್ನೇ ಬೀರಿದೆ. ವಿಶ್ವಕಪ್ ಗೂ ಶುರುವಾದ ನಂತರದಲ್ಲಿ ಭಾರತಕ್ಕೆ ಬರುವ ಫ್ಲೈಟ್ ಗಳ ಹುಡುಕಾಟದಲ್ಲಿ ಶೇಕಡಾ 110 ರಿಂದ 130 ರವರೆಗೆ ಏರಿಕೆಯಾಗಿದೆ.  ನವೆಂಬರ್ 19ರಂದು ಅಹಮದಾಬಾದ್ ನಲ್ಲಿ ಭಾರತ ಆಸ್ಟ್ರೇಲಿಯಾ ಫೈನಲ್ ಮ್ಯಾಚ್ ನಡೆದಿತ್ತು. ಟ್ರಾವೆಲ್ ಅನಾಲಿಟಿಕ್ಸ್ ಸಂಸ್ಥೆ ಸಿರಿಯಮ್ ಪ್ರಕಾರ ಅಹಮದಾಬಾದ್ಗೆ ನವೆಂಬರ್ 13 ರಿಂದ 19 ರವರೆಗೆ 787 ವಿಮಾನಗಳನ್ನು ನಿಗದಿಪಡಿಸಲಾಗಿತ್ತು. ಅಷ್ಟೇ ಅಲ್ಲದೆ ಆರಂಭಿಕ ಪಂದ್ಯಗಳಿಂದಲೂ ಆಸ್ಟ್ರೇಲಿಯಾ, ಯುಕೆ, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ ನ ಪ್ರಯಾಣಿಕರಿಂದಾಗಿ ಭಾರತಕ್ಕೆ ಅಂತರಾಷ್ಟ್ರೀಯ ವಿಮಾನಗಳ ಬೇಡಿಕೆಯು ಶೇಕಡಾ 15 ರಷ್ಟು ಹೆಚ್ಚಾಗಿತ್ತು.

ಇನ್ನೊಂದು ವಿಶೇಷ ಅಂದ್ರೆ ಪ್ರತೀ ಮ್ಯಾಚ್ ನಲ್ಲೂ ಭಾರತ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತು. ತವರು ನೆಲದಲ್ಲಿ ಕ್ರೀಡಾಪಟುಗಳು ತೋರಿದ ಪ್ರದರ್ಶನ ಭಾರತೀಯ ಕ್ರೀಡಾಭಿಮಾನಿಗಳ ಉತ್ಸಾಹ ಹೆಚ್ಚಿಸಿತ್ತು. ಇದೇ ಕಾರಣಕ್ಕೆ ಫೈನಲ್ ಪಂದ್ಯ ನೋಡಲು ನರೇಂದ್ರ ಮೋದಿ ಸ್ಟೇಡಿಯಂ ಸುತ್ತ ಜನಸಾಗರವೇ ಸೇರಿತ್ತು. 1ಲಕ್ಷದ 30 ಸಾವಿರ ಕ್ರೀಡಾಭಿಮಾನಿಗಳು ಕ್ರೀಡಾಂಗಣದ ಒಳಗೆ ಪಂದ್ಯ ವೀಕ್ಷಿಸಿದ್ರೆ ಲಕ್ಷಾಂತರ ಜನ ಕ್ರೀಡಾಂಗಣದ ಹೊರಗೆ ಜಮಾಯಿಸಿದ್ರು. ಭಾರತ ಫೈನಲ್ ಗೆಲ್ಲುತ್ತದೆ ಎಂಬ ನಿರೀಕ್ಷೆಯೊಂದಿಗೆ ಅಹ್ಮದಾಬಾದ್ ನಗರದಲ್ಲಿ ಜನ ಕಿಕ್ಕಿರಿದು ಸೇರಿದ್ರು. ಆದರೆ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಒಪ್ಪಿಕೊಳ್ಳಬೇಕಾಯ್ತು. ಒಟ್ಟಾರೆ ಉತ್ತಮ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ ಅಂತಿಮವಾಗಿ ಸೋಲೊಪ್ಪಿಕೊಂಡಿದೆ. ಆದರೆ ಐಸಿಸಿ ವಿಶ್ವಕಪ್ ಪಂದ್ಯಗಳ ಆಯೋಜನೆ ಭಾರತದ ಆರ್ಥಿಕತೆಗೆ ಬೂಸ್ಟ್ ನೀಡಿರೋದಂತೂ ಸುಳ್ಳಲ್ಲ.

 

Shantha Kumari