ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್ – ಆಸೀಸ್ ಆಟಗಾರನ ಅತಿರೇಕದ ವರ್ತನೆಗೆ ಆಕ್ರೋಶ

ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಮಿಚೆಲ್ ಮಾರ್ಷ್ – ಆಸೀಸ್ ಆಟಗಾರನ ಅತಿರೇಕದ ವರ್ತನೆಗೆ ಆಕ್ರೋಶ

ವಿಶ್ವಕಪ್ ಗೆದ್ದ ಮೇಲೆ ಆಸ್ಟ್ರೇಲಿಯಾ ಆಟಗಾರರ ಸಂಭ್ರಮಾಚರಣೆ ಅತಿರೇಕಕ್ಕೇರಿದೆ. ಅದರಲ್ಲೂ ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಮಾರ್ಷ್ ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟ್ರೋಫಿಗೆ ಅಗೌರವ ಸೂಚಿಸಿರುವ ಮಿಚೆಲ್ ನಡೆಯನ್ನು ಅನೇಕರು ಖಂಡಿಸಿದ್ದಾರೆ. ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಫೈನಲ್‌ಗೆ ಈ ರೀತಿ ಪಿಚ್ ಬೇಕಿತ್ತಾ? –ಬ್ಯಾಟ್ ಬೀಸಲು ಒದ್ದಾಡಿದ ಭಾರತದ ದಿಗ್ಗಜ ಬ್ಯಾಟರ್‌ಗಳು

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ ವಿರುದ್ಧ ಬ್ಯಾಟಿಂಗ್-ಬೌಲಿಂಗ್-ಫೀಲ್ಡಿಂಗ್ ಮೂರೂ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿದ ಕಾಂಗರೂ ಪಡೆ ಆರನೇ ಬಾರಿ ಟ್ರೋಫಿ ಗೆದ್ದ ಸಾಧನೆ ಮಾಡಿತು. ಟ್ರೋಫಿ ಗೆದ್ದ ಬಳಿಕ ಕೆಲ ಆಸ್ಟ್ರೇಲಿಯಾ ಆಟಗಾರರ ಸಂಭ್ರಮಾಚರಣೆ ಮಾತ್ರ ಅತಿರೇಕಕ್ಕೇರಿದೆ. ಕೆಲ ಪ್ಲೇಯರ್ಸ್ ಟ್ರೋಫಿ ಜೊತೆ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. ಆದರೆ, ಆಸೀಸ್ ಆಟಗಾರ ಮಿಚೆಲ್ ಮಾರ್ಷ್ ಕೈಯಲ್ಲಿ ಬಿಯರ್ ಬಾಟಲ್ ಹಿಡಿದು ಟ್ರೋಫಿಯ ಮೇಲೆ ಪಾದವನ್ನಿಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಮಿಚೆಲ್ ಮಾರ್ಷ್ ಅವರು ಕೈಯಲ್ಲಿ ಬಿಯರ್ ಬಾಟಲ್ ಹಿಡಿದುಕೊಂಡು, ವಿಶ್ವಕಪ್ ಟ್ರೋಫಿಯ ಮೇಲೆ ಎರಡೂ ಕಾಲುಗಳನ್ನು ಇಟ್ಟು ಸೋಫಾ ಮೇಲೆ ವಿಶ್ರಾಂತಿ ಮಾಡುವುದನ್ನು ಕಾಣಬಹುದು. ಈ ಫೋಟೋವನ್ನು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮಾರ್ಷ್ ಅವರ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಮಂದಿ ಮಾರ್ಷ್ ನಡೆಗೆ ಕಿಡಿ ಕಾರಿದ್ದು, ಟ್ರೋಫಿಗೆ ಈರೀತಿ ‘ಅಗೌರವ’ ತೋರುವುದು ಸರಿಯಲ್ಲ ಎಂದಿದ್ದಾರೆ. ಅಲ್ಲದೆ ಸಚಿನ್ ತೆಂಡೂಲ್ಕರ್ ಟ್ರೋಫಿಗೆ ಗೌರವ ನೀಡುವ ಫೋಟೋ ಹಂಚಿಕೊಂಡು ಮಾರ್ಷ್ಗೆ ತಿರುಗೇಟು ನೀಡುತ್ತಿದ್ದಾರೆ. ಅದು ವಿಶ್ವಕಪ್, ಸ್ವಲ್ಪ ಗೌರವ ಕೊಡಿ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. “ವಿಶ್ವಕಪ್ ಟ್ರೋಫಿಗೆ ಸ್ವಲ್ಪ ಗೌರವ ತೋರಿಸಿ. ಈ ಟ್ರೋಫಿಯ ಮೌಲ್ಯದ ಬಗ್ಗೆ ಭಾರತೀಯ ಅಭಿಮಾನಿಗಳು ಅಥವಾ ಟೀಮ್ ಇಂಡಿಯಾವನ್ನು ಕೇಳಿ,”ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ವೈಯಕ್ತಿಕ ಕಾರಣಗಳಿಂದ ಮಾರ್ಷ್ ವಿಶ್ವಕಪ್‌ನ ಮಧ್ಯದಲ್ಲಿ ಮನೆಗೆ ಮರಳಿದ್ದರು. ಬಳಿಕ ನಾನು ಈ ವಿಶ್ವಕಪ್ ಗೆಲ್ಲಲು ಹಿಂತಿರುಗುತ್ತೇನೆ ಎಂದು ಹೇಳಿ ತಂಡ ಸೇರಿಕೊಂಡಿದ್ದರು. ವಿಶ್ವಕಪ್ ಗೆದ್ದ ಮೇಲೆ ಹೋಟೆಲ್‌ಗೆ ತೆರಳಿದ ಬಳಿಕ ಈ ಫೋಟೋ ತೆಗೆಯಲಾಗಿದೆ ಎನ್ನಲಾಗಿದೆ. ಮಾರ್ಷ್ ಅವರು ತಮ್ಮ ಚಿನ್ನದ ಪದಕವನ್ನು ತೋರಿಸುವ ಜೊತೆಗೆ ಎರಡೂ ಕಾಲುಗಳನ್ನು ಟ್ರೋಫಿಯ ಮೇಲೆ ಇಟ್ಟಿದ್ದಾರೆ.

Sulekha