ಗಾಜಾದ ಅತಿ ದೊಡ್ಡ ಆಸ್ಪತ್ರೆ ಕೆಳಗೆ ಹಮಾಸ್ ಕೇಂದ್ರ ಕಚೇರಿ – ಉಗ್ರರಿಗಾಗಿ ರೋಗಿಗಳ ಮಾರಣಹೋಮ?
ಪ್ಯಾಲೆಸ್ತೀನ್ ನ ಗಾಜಾಪಟ್ಟಿಯಲ್ಲಿ ನೆಲೆಯೂರಿರುವ ಹಮಾಸ್ ಬಂಡುಕೋರರನ್ನ ನಿರ್ನಾಮ ಮಾಡಲು ಇಸ್ರೇಲ್ ಸೇನೆ ಪಣ ತೊಟ್ಟಿದೆ. ಈಗಾಗಲೇ ಗಾಜಾನಗರವನ್ನು ಛಿದ್ರ ಮಾಡಿರುವ ಇಸ್ರೇಲ್ ಇಡೀ ನಗರವನ್ನ ತನ್ನ ವಶಕ್ಕೆ ಪಡೆದಿರೋದಾಗಿ ಘೋಷಿಸಿಕೊಂಡಿದೆ. ಬಲಿಷ್ಠ ಸೇನೆ ಇಸ್ರೇಲ್ ವಿರುದ್ಧ ಒಂದು ಹಂತಕ್ಕೆ ಸೋಲೊಪ್ಪಿಕೊಂಡಿರುವ ಹಮಾಸ್ ಉಗ್ರರು ಗಾಜಾದ ಆಸ್ಪತ್ರೆಗಳಲ್ಲಿ ಅಡಗಿ ಕುಳಿತಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಇಸ್ರೇಲ್ ಸೇನೆ ಆಸ್ಪತ್ರೆಗಳ ಮೇಲೂ ಕಾರ್ಯಾಚರಣೆ ಶುರು ಮಾಡಿದೆ. ಗಾಜಾ ನಗರದ ಅತಿದೊಡ್ಡ ಆಸ್ಪತ್ರೆ ಅಲ್ ಶಿಫಾ ಒಳಗೆ ಇಸ್ರೇಲ್ ಸೇನೆ ನುಗ್ಗಿದೆ. ಸಾವಿರಾರು ರೋಗಿಗಳು, ನಿರಾಶ್ರಿತರು ಇರುವ ಇದೇ ಆಸ್ಪತ್ರೆಯಲ್ಲಿ ಮಾರಣಹೋಮ ನಡೆಯುವ ಆತಂಕ ಎದುರಾಗಿದೆ.
ಗಾಜಾಪಟ್ಟಿಯ ಅತಿ ದೊಡ್ಡ ಆಸ್ಪತ್ರೆಯಾಗಿರುವ ಅಲ್-ಶಿಫಾ ಕೆಳಗೆ ಹಮಾಸ್ ಉಗ್ರರ ಕೇಂದ್ರ ಕಚೇರಿ ಇದೆ ಇಸ್ರೇಲ್ ಸೇನೆ ಮೊದಲಿನಿಂದಲೂ ಆರೋಪಿಸುತ್ತಿದೆ. ಇದೇ ಕಾರಣಕ್ಕೆ ಇಸ್ರೇಲ್ ಸೇನೆ ಇಡೀ ಆಸ್ಪತ್ರೆಯನ್ನ ಸುತ್ತುವರಿದಿದೆ. ಗುಪ್ತಚರ ಮತ್ತು ಅಗತ್ಯತೆಯ ಆಧಾರದ ಮೇಲೆ, IDF ಪಡೆಗಳು ಅಲ್-ಶಿಫಾ ಆಸ್ಪತ್ರೆಯ ನಿರ್ದಿಷ್ಟ ಪ್ರದೇಶದಲ್ಲಿ ಹಮಾಸ್ ವಿರುದ್ಧ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ತಿಳಿಸಿದೆ. ಆದ್ರೆ ಅಲ್ ಶಿಫಾ ಆಸ್ಪತ್ರೆಯ ಪರಿಸ್ಥಿತಿಯೂ ರಣಭೀಕರವಾಗಿದೆ. ಇಸ್ರೇಲ್ ಸೇನೆ ದಾಳಿಗೆ ಹೆದರಿ ಹಲವು ಕುಟುಂಬಗಳು ಆಸ್ಪತ್ರೆಯ ಕಾರಿಡಾರ್ನಲ್ಲಿ ವಾಸಿಸುತ್ತಿವೆ. ಯುದ್ಧದಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಇಂಧನ ಪೂರೈಕೆಯನ್ನೂ ಸ್ಥಗಿತಗೊಳಿಸಲಾಗಿದೆ. ಪರಿಣಾಮ ಸೂಕ್ತ ಚಿಕಿತ್ಸೆ ಸಿಗದೆ ಹಲವರು ಸಾವನ್ನಪ್ಪಿದ್ದು, ಶವಗಳು ಕೊಳೆತು ದುರ್ವಾಸನೆ ಹರಡಿದೆ. ಆಸ್ಪತ್ರೆಯ ಆವರಣದಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿದ್ದು, ಶವಾಗಾರದಲ್ಲಿ ವಿದ್ಯುತ್ ಇಲ್ಲ ಎಂದು ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸಲ್ಮಿಯಾ ತಿಳಿಸಿದ್ದಾರೆ. ಹೀಗಾಗಿ ಮೃತದೇಹಗಳನ್ನ ಸಾಮೂಹಿಕವಾಗಿ ಸಮಾಧಿ ಮಾಡಲಾಗುತ್ತಿದೆ. ಇದರ ನಡುವೆ ಇಸ್ರೇಲ್ ಸೇನೆ ಆಸ್ಪತ್ರೆಗೆ ನುಗ್ಗಿದ್ದು ಗುಂಡಿನ ದಾಳಿ ನಡೆಸಿದೆ. 12ಕ್ಕೂ ಹೆಚ್ಚು ಇಸ್ರೇಲಿ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸುತ್ತಾ ಆಸ್ಪತ್ರೆಗೆ ನುಗ್ಗಿ ಯುವಕರನ್ನು ಶರಣಾಗುವಂತೆ ಹೇಳಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೆ ಆಸ್ಪತ್ರೆಯ ಸಂಕೀರ್ಣದಲ್ಲಿ ಇಸ್ರೇಲ್ ಯುದ್ಧ ಟ್ಯಾಂಕರ್ಗಳನ್ನು ನಿಲ್ಲಿಸಲಾಗಿದೆ. ಅಲ್ ಶಿಫಾ ಆಸ್ಪತ್ರೆಯನ್ನು ರಕ್ಷಿಸಬೇಕಾಗಿದೆ ಎಂದು ಅಮೆರಿಕ ಎಚ್ಚರಿಸಿದರೂ, ಇಸ್ರೇಲ್ ಈ ದಾಳಿ ನಡೆಸಿದೆ. ಆದರೆ ಕಾರ್ಯಾಚರಣೆ ಅಗತ್ಯವಾಗಿತ್ತು ಎಂದು ಇಸ್ರೇಲ್ ಹೇಳಿದೆ.
ಇದನ್ನೂ ಓದಿ : ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ ಭಾರತದ ಮತ! – ಗಾಜಾ ಗಾಯಕ್ಕೆ ಮೋದಿ ಮುಲಾಮು?
ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ಇದೀಗ ಮತ್ತೊಂದು ಘಟ್ಟಕ್ಕೆ ತಲುಪಿದೆ. ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್-ಶಿಫಾಗೆ ಇಸ್ರೇಲ್ ಸೇನೆ ನುಗ್ಗಿದೆ. ಆಸ್ಪತ್ರೆ ಸಮೀಪದಲ್ಲೇ ವೈಮಾನಿಕ ದಾಳಿ ಸೇರಿದಂತೆ ಬಾಂಬ್ ಸ್ಫೋಟಗಳು ನಡೆಯುತ್ತಿರುವುದರಿಂದ ಆಸ್ಪತ್ರೆಯ ಕಾರ್ಡಿಯಾಕ್ ವಾರ್ಡ್ ಸಂಪೂರ್ಣ ನಾಶವಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸಲ್ಮಿಯಾ ಹೇಳಿದ್ದಾರೆ. ಆಸ್ಪತ್ರೆಯೊಳಗೆ ಶಸ್ತ್ರ ಚಿಕಿತ್ಸೆಯಾದ 600 ರೋಗಿಗಳು, 37 ರಿಂದ 40 ಶಿಶುಗಳು ಮತ್ತು 17 ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಆದ್ರೆ ಅವರಿಗೆ ನೀರು, ವಿದ್ಯುತ್, ಆಹಾರವೂ ಸಿಗ್ತಿಲ್ಲ. ರೋಗಿಗಳು, ಸಿಬ್ಬಂದಿ ಮತ್ತು ಸ್ಥಳಾಂತರಗೊಂಡ ನಾಗರಿಕರು ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದಾರೆ. ಒಂದು ಅಂದಾಜಿನ ಪ್ರಕಾರ ಆಸ್ಪತ್ರೆ ಮೇಲೆ ದಾಳಿ ಮಾಡಲ್ಲ ಅನ್ನೋ ಧೈರ್ಯದಲ್ಲಿ 10,000 ಕ್ಕೂ ಹೆಚ್ಚು ಜನ ಅಲ್ ಶಿಫಾದೊಳಗೆ ಇರಬಹುದು ಎನ್ನಲಾಗಿದೆ. ಆದ್ರೆ ಇದೀಗ ಇಸ್ರೇಲ್ ಸೇನೆ ಆಸ್ಪತ್ರೆ ಸುತ್ತ ಸುತ್ತುವರಿದಿರೋ ಕಾರಣ ಅಲ್ಲಿನ ಜನರನ್ನ ಸ್ಥಳಾಂತರಗೊಳಿಸೋದು ಸಮಸ್ಯೆಯಾಗುತ್ತಿದೆ.
ಅಲ್ ಶಿಫಾ ಆಸ್ಪತ್ರೆಯು ಗಾಜಾ ನಗರದ ಅತಿದೊಡ್ಡ ಆಸ್ಪತ್ರೆಯಾಗಿದೆ. ಯುದ್ಧದ ಪರಿಣಾಮ ಆಮ್ಲಜನಕದ ಕೊರತೆಯಿಂದ ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ. ಐಸಿಯು ಘಟಕಗಳ ಸ್ಥಗಿತದಿಂದ ರೋಗಿಗಳೂ ಉಸಿರು ಚೆಲ್ಲುತ್ತಿದ್ದಾರೆ. ಗಾಜಾದ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ರಕ್ಷಿಸಬೇಕಿದೆ ಮತ್ತು ಅವರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬೇಕು. ರೋಗಿಗಳು, ಸಿಬ್ಬಂದಿ ಮತ್ತು ಇತರ ನಾಗರಿಕರನ್ನು ರಕ್ಷಿಸಬೇಕು ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಕಚೇರಿ ತಿಳಿಸಿದೆ. ಆದ್ರೆ ಇದ್ಯಾವುದಕ್ಕೂ ಕೇರ್ ಮಾಡದ ಇಸ್ರೇಲ್ ಯುದ್ಧ ಮುಂದುವರಿಸಿದೆ. ಇದರ ನಡುವೆ ಇಸ್ರೇಲ್ ಸೇನೆ ಹೊಸ ವಿಡಿಯೋ ಹಂಚಿಕೊಂಡಿದೆ. ವಿಡಿಯೋದಲ್ಲಿ ಗಾಜಾದ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಸುರಂಗವೊಂದು ಇರುವುದು ಕಂಡು ಬಂದಿದ್ದು, ಇಲ್ಲಿ ಹಮಾಸ್ ಉಗ್ರರು ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು ಎಂದು ಇಸ್ರೇಲ್ ಹೇಳಿದೆ.
ಗಾಜಾದ ಮಕ್ಕಳ ಆಸ್ಪತ್ರೆ ಕೆಳಗೆ ಸುರಂಗ ಇರುವುದನ್ನ ಇಸ್ರೇಲ್ ಸೇನೆ ಪತ್ತೆ ಹಚ್ಚಿದೆ. ಸುರಂಗದ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಉಗ್ರ ಕೃತ್ಯವನ್ನ ಬಹಿರಂಗಪಡಿಸಿದೆ. ಗಾಜಾದಲ್ಲಿನ ರಾಂಟಿಸ್ಸಿ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಉಗ್ರರು ಸಂಗ್ರಹಿಸಿಟ್ಟಿರುವ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾಗಿ ವಿಡಿಯೋ ಮತ್ತು ಫೋಟೋಗಳನ್ನ ಇಸ್ರೇಲ್ ಸೈನೆ ಬಿಡುಗಡೆ ಮಾಡಿದೆ. ಸುರಂಗಕ್ಕೆ ಸೋಲಾರ್ ಮೂಲಕ ವಿದ್ಯುತ್ ಸಂಚಾರವಾಗುತ್ತಿದ್ದು ಸುಮಾರು 20 ಅಡಿ ಆಳದಲ್ಲಿದೆ. ಈ ಮಾರ್ಗ ನೇರವಾಗಿ ಆಸ್ಪತ್ರೆಯ ನೆಲಮಹಡಿ ತಲುಪಿರುವುದು ಗೊತ್ತಾಗಿದೆ. ಸುರಂಗದ ಬಾಗಿಲು ಬುಲೆಟ್ ಪ್ರೂಫ್ ಹಾಗೂ ದಾಳಿಯನ್ನು ತಡೆದುಕೊಳ್ಳಬಹುದುದಾಗಿದೆ. ಅಲ್ಲದೆ ಮೇಲ್ನೋಟಕ್ಕೆ ಸುರಂಗ ಪತ್ತೆ ಮಾಡಲು ಕಷ್ಟವಾಗುವ ರೀತಿ ಸುರಂಗವನ್ನ ನಿರ್ಮಾಣ ಮಾಡಲಾಗಿದೆ. ಸುರಂಗ ಮಾರ್ಗದಿಂದ ರಾಂಟಿಸಿ ಆಸ್ಪತ್ರೆಯು ಕೇವಲ 183 ಮೀಟರ್ ದೂರದಲ್ಲಿದೆ. ಹಮಾಸ್ ಆಸ್ಪತ್ರೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೇಲ್ ಆರೋಪ ಮಾಡುತ್ತಲೇ ಇದೆ. ಈ ಹಿಂದೆ ಕೂಡ ಆಸ್ಪತ್ರೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ್ದ ಇಸ್ರೇಲ್ ಸುರಂಗ ಪತ್ತೆ ಮಾಡಲು ವಿಫಲವಾಗಿತ್ತು. ಆದ್ರೀಗ ಆಸ್ಪತ್ರೆಯು ಶಾಲೆ ಮತ್ತು ಯುಎನ್ ಕಟ್ಟಡದ ಪಕ್ಕದಲ್ಲಿದೆ ಎಂದು ಇಸ್ರೇಲಿ ಪಡೆ ಹೇಳಿಕೆ ನೀಡಿದೆ. ಸುರಂಗ ಪ್ರವೇಶಿಸಿದ ಇಸ್ರೇಲಿ ಪಡೆ ಗ್ರೆನೇಡ್, ಬಾಂಬ್ಗಳು, ನೆಲ ಬಾಂಬ್, ಬುಲೆಟ್ ಪ್ರೂಫ್ ಜಾಕೆಟ್, ರಾಕೆಟ್ ಲಾಂಚರ್ಗಳು ಸೇರಿ ಹಲವು ಗನ್ ಗಳನ್ನ ವಶಪಡಿಸಿಕೊಂಡಿದೆ. ಗಾಜಾದಲ್ಲಿರುವ ಇತರೆ ಸುರಂಗಗಳಲ್ಲೂ ಈ ರೀತಿ ಶಸ್ತ್ರಾಸ್ತ್ರಗಳನ್ನ ಸಂಗ್ರಹಿಸಿರಬಹುದೆಂದು ಅಂದಾಜಿಸಲಾಗಿದೆ.
ರಾಂಟಿಸ್ಸಿ ಆಸ್ಪತ್ರೆ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಶೇಷ ಮಕ್ಕಳ ಆಸ್ಪತ್ರೆಯಾಗಿದ್ದು, ಇಲ್ಲಿ ಗ್ರೆನೇಡ್ಗಳು ಮತ್ತು ಇತರ ಸ್ಫೋಟಕಗಳು ಪತ್ತೆಯಾಗಿದೆ. ಇಲ್ಲಿ ಸಣ್ಣ ಸಣ್ಣ ಅಡುಗೆಮನೆ ಇದ್ದು, ಸುರಂಗದ ಬಳಿಯಲ್ಲೇ ಹಿರಿಯ ಹಮಾಸ್ ಕಮಾಂಡರ್ ಮನೆ ಇತ್ತು ಎನ್ನಲಾಗಿದೆ. ಹಮಾಸ್ ಬಂದೂಕುಧಾರಿಗಳು ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ಗೆ ನುಗ್ಗಿ, ಸುಮಾರು 1,200 ಜನರನ್ನು ಹತ್ಯೆ ಮಾಡಿದ್ದರು. ನಂತರ 240 ಮಂದಿ ಇಸ್ರೇಲಿಗರನ್ನು ಗಾಜಾಕ್ಕೆ ತಂದು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಸದ್ಯ ಅಲ್ ಶಿಫಾದಲ್ಲಿ ಹಮಾಸ್ ಉಗ್ರರ ಕಮಾಂಡ್ ಸೆಂಟರ್ ಕಾರ್ಯಾಚರಿಸುತ್ತಿರುವ ಬಗ್ಗೆ ಸ್ವತಹ ಅಮೆರಿಕಾದ ಗುಪ್ತಚರ ಸಂಸ್ಥೆಯೇ ಬಹಿರಂಗಪಡಿಸಿದ್ದು, ಜಾಗತಿಕ ವಲಯವೇ ಬೆಚ್ಚಿಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಸೇನಾ ಪಡೆ ಅಲ್ ಶಿಫಾ ಆಸ್ಪತ್ರೆಗೆ ನುಗ್ಗಿದ್ದು, ಹಮಾಸ್ ಉಗ್ರರು ಶರಣಾಗುವಂತೆ ಸೂಚಿಸಿದೆ. ಆಸ್ಪತ್ರೆ ಮೇಲೆ ದಾಳಿ ನಡೆಸಲಾಗುವುದು ಎಂದು ಇಸ್ರೇಲ್ ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ ಒಂದೇ ಗಂಟೆಯೊಳಗೆ ಈ ಬೆಳವಣಿಗೆ ನಡೆದಿದೆ. ಆಸ್ಪತ್ರೆ ಮೇಲಿನ ಇಸ್ರೇಲ್ ಸೇನೆ ದಾಳಿಯನ್ನ ಪ್ಯಾಲೆಸ್ತೀನಿಯನ್ ಆರೋಗ್ಯ ಸಚಿವಾಲಯವು ತೀವ್ರವಾಗಿ ಖಂಡಿಸಿದೆ. ಒಟ್ಟಾರೆ 16 ವರ್ಷಗಳ ಕಾಲ ಗಾಜಾ ಪಟ್ಟಿಯನ್ನ ಆಳಿದ ಹಮಾಸ್ ಇದೀಗ ಕಂಪ್ಲೀಟ್ ನಿಯಂತ್ರಣ ಕಳೆದುಕೊಂಡಿದೆ. ಶಿಫಾ ಆಸ್ಪತ್ರೆ ಮೇಲಿನ ದಾಳಿಯನ್ನು ಉಗ್ರವಾಗಿ ಖಂಡಿಸಿರುವ ಹಮಾಸ್ ನಾಯಕರು, ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅವರೇ ಈ ದಾಳಿಯ ಹೊಣೆಗಾರರು ಎಂದು ಕಟು ಮಾತುಗಳಲ್ಲಿ ಟೀಕಿಸಿದ್ದಾರೆ. ಅದೇನೇ ಇದ್ರೂ ಹಮಾಸ್ ಇಸ್ರೇಲ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ತೀನ್ ನ ಅನಾಯಕರು ಬಲಿಯಾಗುತ್ತಿರೋದು ನಿಜಕ್ಕೂ ವಿಪರ್ಯಾಸ.