68 ಸಾವಿರ ರೂ. ದಂಡ ಕಟ್ಟಿದ್ದೇನೆ.. ಕಳ್ಳ ಕಳ್ಳ ಎಂದು ಕರೆಯುವವರು  ಲುಲು ಮಾಲ್ ನ 6 ತಿಂಗಳ ಬಿಲ್ ಪಾವತಿಸಲಿ – ಕುಮಾರಸ್ವಾಮಿ ಕಿಡಿ

68 ಸಾವಿರ ರೂ. ದಂಡ ಕಟ್ಟಿದ್ದೇನೆ.. ಕಳ್ಳ ಕಳ್ಳ ಎಂದು ಕರೆಯುವವರು  ಲುಲು ಮಾಲ್ ನ 6 ತಿಂಗಳ ಬಿಲ್ ಪಾವತಿಸಲಿ – ಕುಮಾರಸ್ವಾಮಿ ಕಿಡಿ

ಬೆಂಗಳೂರು: ದೀಪವಾಳಿ ಹಬ್ಬದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಮನೆಯನ್ನು ವಿದ್ಯುತ್​ ದೀಪಗಳಿಂದ ಶೃಂಗರಿಸಲಾಗಿತ್ತು. ಈ ವಿದ್ಯುತ್​ ದೀಪಗಳಿಗೆ ಅನಧಿಕೃತವಾಗಿ ಕರೆಂಟ್​ ಕಂಬದಿಂದ ಸಂಪರ್ಕ ಪಡೆಯಲಾಗಿತ್ತು. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿ ಬೆಸ್ಕಾಂ ಹೇಳಿದಷ್ಟು ದಂಡ ದಂಡ ಕಟ್ಟಲು ಸಿದ್ಧನಿದ್ದೇನೆ ಅಂತಾ ಹೇಳಿದ್ದರು. ಇದೀಗ ಬೆಸ್ಕಾಂ 68 ಸಾವಿರ ರೂ. ದಂಡ ವಿಧಿಸಿದ್ದು, ಕುಮಾರಸ್ವಾಮಿ ದಂಡ ಪಾವತಿಸಿದ್ದಾರೆ.

ಈ ಬಗ್ಗೆ ಹೆಚ್‌. ಡಿ ಕುಮಾರಸ್ವಾಮಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, 71 ಯೂನಿಟ್‌ ವಿದ್ಯುತ್‌ಗೆ 3 ಪಟ್ಟು ದಂಡ ವಿಧಿಸಿದ್ದಾರೆ. ಒಟ್ಟು 2,526 ರೂಪಾಯಿ ದಂಡ ಹಾಕಬೇಕಿತ್ತು. ಆದರೆ ನನ್ನ ಮನೆಗೆ ತೆಗೆದುಕೊಂಡಿರುವ 33 kV ವಿದ್ಯುತ್‌ ಬಳಕೆ ಸೇರಿ 68,526 ರೂ. ದಂಡ ವಿಧಿಸಿದ್ದಾರೆ. ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು ಅಂತಾ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕರೆಂಟ್‌ ಕಳ್ಳ ಕುಮಾರಸ್ವಾಮಿ ಎಂಬ ಆರೋಪ – ಶುರುವಾಯ್ತು ಮತ್ತೊಂದು ಸುತ್ತಿನ ಕಾಂಗ್ರೆಸ್‌ – ಜೆಡಿಎಸ್‌ ಕಾಳಗ!

ನನಗೆ ವಿಧಿಸಿದ ದಂಡವನ್ನು ನಾನು ಪಾವತಿ ಮಾಡಿದ್ದೇನೆ. ವಿದ್ಯುತ್‌ ಬಿಲ್‌ನಲ್ಲಿ ಲೋಪ ಇರುವ ಹಿನ್ನೆಲೆಯಲ್ಲಿ ನಿಮ್ಮ ನಿಯಮ ಏನಿದೆ? ನಿಯಮದ ಲೆಕ್ಕಾಚಾರದಲ್ಲಿ ಪರಿಶೀಲನೆ ಮಾಡಿ ಎಂದು ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.

ನನ್ನನ್ನ ಕಳ್ಳ ಕಳ್ಳ ಎಂದು ಕರೆಯುತ್ತಾರೆ. ಆದರೆ ಲುಲು ಮಾಲ್ 6 ತಿಂಗಳು ಬಿಲ್ ಪಾವತಿಸಿಲ್ಲ. ಲುಲು ಮಾಲ್ ಪ್ರಾರಂಭಕ್ಕೂ ಮುನ್ನ 6 ತಿಂಗಳು ಬಳಕೆ ಮಾಡಿದಕ್ಕೆ ಬಿಲ್ ಹಾಕ್ತಾರಾ? ನನ್ನನ್ನು ಕಳ್ಳ ಎಂದು ಹೇಳುವುದನ್ನು ಬಿಡಿ. ನಾನು ನಿಮ್ಮಷ್ಟು ದೊಡ್ಡ ಕಳ್ಳ ಅಲ್ಲ. ನೀವು ಹಗಲು ದರೋಡೆಕೋರರು. ನಾನು ದಂಡ ಕಟ್ಟಿದ್ದೇನೆ. ನೀವು ಲುಲು ಮಾಲ್ ಕರೆಂಟ್ ಕಳ್ಳತನದ ಬಗ್ಗೆ ತನಿಖೆಮಾಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಸವಾಲು ಎಸೆದರು.

ಮೇಕೆದಾಟು ಪಾದಯಾತ್ರೆಗೆ ಯಾವ ಕರೆಂಟ್ ತಗೊಂಡಿದ್ದೀರಿ. ಕನಕಪುರದಲ್ಲಿ ಕನಕೋತ್ಸವ ನಡೆಯುತ್ತದೆ. ಅದಕ್ಕೆ ಕರೆಂಟ್ ಎಲ್ಲಿಂದ ಬಂತು? ಯಾರು ದೊಡ್ಡ ಕಳ್ಳ? ಹೇಗೆ ಮಾಡಿದರೂ ಉತ್ತರ ಕೊಡಬೇಕು. ಎಲ್ಲವೂ ಕಣ್ಣ ಮುಂದೆ ಇದೆ. ಬೇಕಿದ್ರೆ ವಿಡಿಯೋ ಕೊಡೋಣ. ನನ್ನನ್ನು ಬೆದರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

Shwetha M