20 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳಲು ಭಾರತದ ತವಕ – ಆಸೀಸ್ ವಿರುದ್ಧ ಲೆಕ್ಕ ಚುಕ್ತಾ ಮಾಡುತ್ತಾ ಟೀಮ್ ಇಂಡಿಯಾ?
ಇಂಡಿಯಾ VS ಆಸ್ಟ್ರೇಲಿಯಾ.. ನವೆಂಬರ್ 19.. ಮಧ್ಯಾಹ್ನ 2 ಗಂಟೆಗೆ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ.. 20 ವರ್ಷಗಳ ಬಳಿಕ ಟೀಂ ಇಂಡಿಯಾದ ಹುಲಿಗಳು ಮತ್ತು ಆಸ್ಟ್ರೇಲಿಯಾದ ಕಾಂಗಾರೂಗಳ ಮಧ್ಯೆ ಮತ್ತೊಂದು ಮೆಗಾ ಫೈನಲ್.. ವಿಶ್ವಕಪ್ನ್ನ ರೋಹಿತ್ & ಟೀಂ ಎತ್ತಿ ಹಿಡಿಯುತ್ತಾ? ಇಲ್ಲಾ ಪ್ಯಾಟ್ ಕಮಿನ್ಸ್ ಟೀಂ ಗೆಲ್ಲುತ್ತಾ?
ಇದನ್ನೂ ಓದಿ: ಚೋಕರ್ಸ್ ಹಣೆಪಟ್ಟಿಯನ್ನು ತನ್ನಲ್ಲೇ ಉಳಿಸಿಕೊಂಡ ಹರಿಣಗಳು – ಕೊನೇ ತನಕ ಪಟ್ಟುಬಿಡದೆ ಹೋರಾಡಿ ಗೆದ್ದ ಕಾಂಗರೂಗಳು
ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಬಳಿಕ ಆಸ್ಟ್ರೇಲಿಯ 8ನೇ ಬಾರಿ ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟಿದೆ. 2023ರ ವಿಶ್ವಕಪ್ನ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಎದುರಿಸಲಿದೆ. ಇದರೊಂದಿಗೆ 20 ವರ್ಷಗಳ ಬಳಿಕ ಮತ್ತೊಮ್ಮೆ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವೆ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. 2003ರ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ಪಂದ್ಯ ನಡೆದಿತ್ತು. ಆಗ ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ 125 ರನ್ಗಳ ಜಯ ಸಾಧಿಸಿತ್ತು. ಹೀಗಾಗಿ ಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ 20 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಅವಕಾಶ ಟೀಂ ಇಂಡಿಯಾಕ್ಕಿದೆ.
2003ರಲ್ಲಿ ಸೌತ್ ಆಫ್ರಿಕಾದ ಜೊಹಾನ್ಸ್ಬರ್ಗ್ನಲ್ಲಿ ವರ್ಲ್ಡ್ಕಪ್ ಫೈನಲ್ನಲ್ಲಿ ಎರಡೂ ಟೀಂಗಳು ಮುಖಾಮುಖಿಯಾಗಿದ್ದವು. ಸೌರವ್ ಗಂಗೂಲಿ ಟೀಂ ಇಂಡಿಯಾದ ನಾಯಕರಾಗಿದ್ದರು. ರಿಕ್ಕಿ ಪಾಂಟಿಂಗ್ ಆಸ್ಟ್ರೇಲಿಯಾದ ಕ್ಯಾಪ್ಟನ್ ಆಗಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಕೇವಲ 2 ವಿಕೆಟ್ಗಳನ್ನ ಕಳೆದುಕೊಂಡು 359 ರನ್ ಮಾಡಿತ್ತು. ಆದರೆ, ಟೀಂ ಇಂಡಿಯಾ 234ಕ್ಕೆ ಆಲೌಟ್ ಆಗಿ, 125 ರನ್ಗಳಿಂದ ಸೋತಿತ್ತು. ಇದೀಗ 20 ವರ್ಷಗಳ ಹಿಂದಿನ ಸೇಡನ್ನ ತೀರಿಸಿಕೊಳ್ಳೋ ಟೈಮ್ ಬಂದಿದೆ. ಇಡೀ ಜಗತ್ತಿನ ಚಿತ್ತ ಈಗ ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಟೀಂಗಳ ಮೇಲೆ ನೆಟ್ಟಿದೆ.
ಬಲಿಷ್ಠ ದಕ್ಷಿಣ ಆಫ್ರಿಕಾವನ್ನ ಮಣಿಸಲು ಆಸ್ಟ್ರೇಲಿಯಾಗೆ ಅಷ್ಟೇನು ಸುಲಭವಾಗಿರಲಿಲ್ಲ. ಆದರೆ, ಆಸೀಸ್ ತಂಡ ಮೋಸ್ಟ್ ಡೇಂಜರಸ್ ಟೀಂ. ಆಸ್ಟ್ರೇಲಿಯಾ ಮ್ಯಾಚ್ನಿಂದ ಮ್ಯಾಚ್ಗೆ ಸ್ಟ್ರಾಂಗ್ ಆಗುತ್ತಲೇ ಹೋಗುವ ತಂಡವೂ ಹೌದು. ವರ್ಲ್ಡ್ಕಪ್ ಲೀಗ್ ಸ್ಟೇಜ್ನಲ್ಲಿ ಮೊದಲು ಎರಡು ಮ್ಯಾಚ್ಗಳನ್ನ ಸೋತ ಬಳಿಕ ಯಾವ ರೀತಿ ಕಮ್ಬ್ಯಾಕ್ ಮಾಡಿದ್ರು ಅನ್ನೋದನ್ನು ಎಲ್ಲರೂ ನೋಡಿರುತ್ತೀರಿ. ಕೊಲ್ಕತ್ತಾದಲ್ಲಿ ನಡೆದ ಹೈವೋಲ್ಟೇಜ್ ಸೆಮಿಫೈನಲ್ ಮ್ಯಾಚ್ನಲ್ಲಿ ಟಾಸ್ ಗೆದ್ದು ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ತು. ಬ್ಯಾಟಿಂಗ್ ಪಿಚ್..ಹೈಸ್ಕೋರ್ ಮಾಡಬಹುದು ಅನ್ನೋದು ಸೌತ್ ಆಫ್ರಿಕಾ ಲೆಕ್ಕಾಚಾರವಾಗಿತ್ತು. ಆದ್ರೆ, ಅವರ ಲೆಕ್ಕಾಚಾರವನ್ನೆಲ್ಲಾ ಉಲ್ಟಾ ಮಾಡಿದ್ದು ಕಾಂಗರೂಗಳು. ಕೊನೆಗೂ ಹರಿಣಗಳನ್ನು ಸೋಲಿಸಿದ ಕಾಂಗರೂಗಳು ಭಾರತದ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಇತ್ತ ಟೀಮ್ ಇಂಡಿಯಾ ಕೂಡಾ 20 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಆಸೀಸ್ ವಿರುದ್ಧ ಲೆಕ್ಕ ಚುಕ್ತಾ ಮಾಡಲು ಭಾರತ ಕೂಡಾ ಕಾಯುತ್ತಿದೆ. ಈ ರೋಚಕ ಕ್ಷಣ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.