ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ ಭಾರತದ ಮತ! – ಗಾಜಾ ಗಾಯಕ್ಕೆ ಮೋದಿ ಮುಲಾಮು?
ಹಮಾಸ್ ಮೇಲೆ ಯುದ್ಧ ಸಾರಿದ್ದ ಇಸ್ರೇಲ್ ಇದೀಗ ಇಡೀ ಗಾಜಾಪಟ್ಟಿಯನ್ನೇ ತನ್ನ ಕಂಟ್ರೋಲ್ ಗೆ ತೆಗೆದುಕೊಂಡಿದೆ. ಖುದ್ದು ಇಸ್ರೇಲ್ ರಕ್ಷಣಾ ಸಚಿವರೇ ಗಾಜಾಪಟ್ಟಿ ನಮ್ಮ ಹಿಡಿತದಲ್ಲಿದೆ ಎಂದು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಮತ್ತೊಂದೆಡೆ ಪ್ಯಾಲೆಸ್ತೀನ್ನಲ್ಲಿ ಇಸ್ರೇಲ್ನ ವಸಾಹತುಗಳನ್ನು ಖಂಡಿಸಿ ವಿಶ್ವಸಂಸ್ಥೆಯಲ್ಲಿ ಕೈಗೊಂಡ ನಿರ್ಣಯದ ಪರ ಭಾರತ ಮತ ಚಲಾಯಿಸಿದೆ. ಪೂರ್ವ ಜೆರುಸಲೆಂ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶ ಹಾಗೂ ಆಕ್ರಮಿತ ಸಿರಿಯನ್ ಗೋಲನ್ನಲ್ಲಿನ ವಸಾಹತು ಚಟುವಟಿಕೆಗಳನ್ನು ಖಂಡಿಸಿದ ನಿರ್ಣಯವನ್ನು ಅಂಗೀಕರಿಸಲಾಗಿದೆ. ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ ಆರಂಭದಿಂದಲೂ ತಟಸ್ಥ ನಿಲುವು ತಾಳಿದ್ದ ಭಾರತದ ಈ ಹೊಸ ನಡೆ ಹಲವು ಅಚ್ಚರಿಗಳಿಗೆ ಕಾರಣವಾಗಿದೆ.
ಅಕ್ಟೋಬರ್ 7ರಿಂದ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಪ್ಯಾಲೆಸ್ತೀನ್ನ ಗಾಜಾ ಪಟ್ಟಿ ಬಹುತೇಕ ಛಿದ್ರವಾಗಿದೆ. ಇಸ್ರೇಲ್ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸುವಂತೆ ಮತ್ತು ಗಾಜಾಗೆ ಮಾನವೀಯ ಕಾರಿಡಾರ್ ತೆರೆಯುವಂತೆ ಇತ್ತೀಚೆಗಷ್ಟೇ ವಿಶ್ವಸಂಸ್ಥೆ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯದ ಮತದಾನದಿಂದ ಭಾರತ ದೂರವೇ ಉಳಿದಿತ್ತು. ಇದಾಗಿ ಕೆಲವೇ ದಿನಗಳಲ್ಲಿ ವಿಶ್ವಸಂಸ್ಥೆಯ ಇನ್ನೊಂದು ನಿರ್ಣಯದ ಪರ ಭಾರತ ಮತ ಚಲಾಯಿಸಿದೆ. ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಭೂಪ್ರದೇಶ ಹಾಗೂ ಆಕ್ರಮಿತ ಸಿರಿಯನ್ ಗೋಲನ್ನಲ್ಲಿ ಇಸ್ರೇಲಿ ವಸಾಹತುಗಳು ಶೀರ್ಷಿಕೆಯ ವಿಶ್ವಸಂಸ್ಥೆಯ ಕರಡು ನಿರ್ಣಯವನ್ನು ಭಾರತ ಸೇರಿದಂತೆ 145 ದೇಶಗಳ ಬೃಹತ್ ಬಹುಮತದೊಂದಿಗೆ ಅಂಗೀಕರಿಸಿವೆ. ಆದ್ರೆ ಅಮೆರಿಕ, ಕೆನಡಾ, ಇಸ್ರೇಲ್, ಹಂಗೇರಿ, ಮಾರ್ಷಲ್ ಐಲ್ಯಾಂಡ್ಸ್, ಮೈಕ್ರೋನೇಷಿಯಾ, ನೌರು ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿವೆ.
ಇದನ್ನೂ ಓದಿ : ಗಾಜಾ ಪಟ್ಟಿಯಲ್ಲಿ ಹಮಾಸ್ ನ 16 ವರ್ಷಗಳ ಆಳ್ವಿಕೆ ಅಂತ್ಯವಾಯ್ತಾ? – ಗಾಜಾ ಸಂಸತ್ ಕಟ್ಟಡ ವಶಪಡಿಸಿಕೊಂಡ ಇಸ್ರೇಲ್ ಸೇನೆ!
ಪೂರ್ವ ಜೆರುಸಲೆಮ್ ಸೇರಿದಂತೆ ಆಕ್ರಮಿತ ಪ್ಯಾಲೇಸ್ತೀನಿಯನ್ ಪ್ರಾಂತ್ಯದಲ್ಲಿ ಮತ್ತು ಆಕ್ರಮಿತ ಸಿರಿಯನ್ ಗೋಲನ್ನಲ್ಲಿ ವಸಾಹತು ಚಟುವಟಿಕೆಗಳನ್ನು ಖಂಡಿಸುತ್ತದೆ ಮತ್ತು ಭೂಮಿಯನ್ನು ವಶಪಡಿಸಿಕೊಳ್ಳುವುದು, ಸಂರಕ್ಷಿತ ವ್ಯಕ್ತಿಗಳ ಜೀವನೋಪಾಯಕ್ಕೆ ಅಡ್ಡಿ, ನಾಗರಿಕರ ಬಲವಂತದ ವರ್ಗಾವಣೆಯನ್ನು ಒಳಗೊಂಡಿರುವ ಯಾವುದೇ ಚಟುವಟಿಕೆಗಳನ್ನು ಖಂಡಿಸುತ್ತದೆ ಎಂದು ವಿಶ್ವಸಂಸ್ಥೆಯ ಹೇಳಿಕೆಯಲ್ಲಿ ಸೇರಿಸಲಾಗಿದೆ. ಈ ನಿರ್ಣಯಕ್ಕೆ ಭಾರತ ಸೇರಿ 145 ದೇಶಗಳು ನಿರ್ಣಯದ ಪರ ಮತ ಚಲಾವಣೆ ಮಾಡಿವೆ. ಆದರೆ ಅಮೆರಿಕ, ಕೆನಡಾ, ಇಸ್ರೇಲ್ ಸೇರಿ 7 ದೇಶಗಳು ವಿರುದ್ಧ ಮತ ಹಾಕಿದ್ದು, 18 ದೇಶಗಳು ತಟಸ್ಥವಾಗಿ ಉಳಿದಿವೆ. ಈ ಮೂಲಕ ನಿರ್ಣಯ ಅಂಗೀಕಾರ ಮಾಡಲಾಗಿದೆ.
ಕಳೆದ ತಿಂಗಳಷ್ಟೇ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ತಕ್ಷಣದ ಮಾನವೀಯ ಒಪ್ಪಂದಕ್ಕೆ ಕರೆ ನೀಡುವಂತೆ ಜೋರ್ಡಾನ್ ಪ್ರಸ್ತಾಪಿಸಿದ ನಿರ್ಣಯ ಕುರಿತು ಭಾರತವು ವಿಶ್ವಸಂಸ್ಥೆಯಲ್ಲಿ ನಡೆದ ಮತದಾನದಿಂದ ದೂರ ಉಳಿದಿತ್ತು. ಈಗ ನಿರ್ಣಯದ ಪರ ಮತ ಚಲಾಯಿಸಿದ ಬಗ್ಗೆ ಭಾರತ ಸರ್ಕಾರದ ಮೂಲಗಳು ಪ್ರತಿಕ್ರಿಯೆ ನೀಡಿವೆ. ಗಾಜಾದಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟಿನ ಹಿನ್ನೆಲೆಯಿಂದಾಗಿ ನಿರ್ಣಯದ ಪರ ಮತ ಚಲಾಯಿಸಿದ್ದೇವೆ. ಆದರೆ ಭಯೋತ್ಪಾದನೆ ಜೊತೆ ಯಾವುದೇ ರಾಜಿಯಿಲ್ಲಾ ಎಂದು ಖಡಕ್ಕಾಗಿ ಹೇಳಿದೆ. ಇನ್ನು ಪ್ಯಾಲೆಸ್ತೀನ್ನಲ್ಲಿ ಇಸ್ರೇಲ್ ವಸಾಹತುಶಾಹಿಗಳ ವಿರುದ್ಧ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿರುವುದನ್ನು ಜಮಾತ್-ಎ-ಇಸ್ಲಾಮಿ ಹಿಂದ್ ಸ್ವಾಗತಿಸಿದೆ. ಸ್ವಾತಂತ್ರ್ಯವನ್ನು ಪಡೆಯಲು ಮತ್ತು ಆಕ್ರಮಣ, ವರ್ಣಭೇದ ನೀತಿಯನ್ನು ಕೊನೆಗೊಳಿಸಲು ಪ್ಯಾಲೆಸ್ತೀನಿಯ ಹೋರಾಟವು ಭಾರತದ ಅಡಿಪಾಯದ ತತ್ವಗಳಿಗೆ ಅನುಗುಣವಾಗಿದೆ. ನಾವು ಅವರ ನಿರ್ಧಾರವನ್ನು ಬೆಂಬಲಿಸಲು ಕರ್ತವ್ಯ ಬದ್ಧರಾಗಿದ್ದೇವೆ. ಈ ಪ್ರದೇಶದಲ್ಲಿ ಶಾಂತಿಯನ್ನು ಸ್ಥಾಪಿಸಲು ಭಾರತ ಸರ್ಕಾರ ಸಕ್ರಿಯ ಮತ್ತು ಪ್ರಮುಖ ಪಾತ್ರವನ್ನು ವಹಿಸುವಂತೆ ಮನವಿ ಮಾಡುತ್ತೇವೆ ಎಂದಿದ್ದಾರೆ. ಆದ್ರೆ ಇಸ್ರೇಲ್ ಮಾತ್ರ ಯುದ್ಧ ನಿಲ್ಲಿಸುವ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಹಮಾಸ್ ನಿರ್ನಾಮಕ್ಕಾಗಿ ಪಣ ತೊಟ್ಟಿರುವ ಇಸ್ರೇಲ್ ಇಡೀ ಗಾಜಾಪಟ್ಟಿಯನ್ನೇ ಛಿದ್ರ ಮಾಡಿದೆ. ಇದೀಗ ಯುದ್ಧ ಪೀಡಿತ ಗಾಜಾ ಮೇಲಿನ ನಿಯಂತ್ರಣವನ್ನು ಹಮಾಸ್ ಉಗ್ರರ ಗುಂಪು ಕಡಿದುಕೊಂಡಿದೆ ಎಂದು ಇಸ್ರೇಲ್ ರಕ್ಷಣಾ ಸಚಿವರು ಘೋಷಿಸಿದ್ದಾರೆ. ಹಮಾಸ್ ನಿಯಂತ್ರಣದಲ್ಲಿದ್ದ ಗಾಜಾವನ್ನು ಇದೀಗ ಇಸ್ರೇಲ್ ತನ್ನ ಕೈವಶ ಮಾಡಿಕೊಂಡಿದೆ.
ಸತತ 40 ದಿನಗಳಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಯುದ್ಧದಲ್ಲಿ ಹಮಾಸ್ ಹಿನ್ನಡೆ ಅನುಭವಿಸಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಗಾಜಾ ಮೇಲಿನ ಸಂಪೂರ್ಣ ಹಿಡಿತವನ್ನು ಹಮಾಸ್ ಗುಂಪು ಕಡಿದುಕೊಂಡಿದ್ದು, ಉಗ್ರರು ದಕ್ಷಿಣದ ಕಡೆ ಕಾಲ್ಕಿತ್ತಿದ್ದಾರೆ. ಹೀಗಾಗಿ ಪ್ಯಾಲೆಸ್ತೀನ್ ನಾಗರಿಕರು ಹಮಾಸ್ ಅಡಗುತಾಣಗಳನ್ನ ಲೂಟಿ ಮಾಡುತ್ತಿದ್ದಾರೆ. ಗಾಜಾ ಪಟ್ಟಿಯ ಮೇಲೆ ಹಮಾಸ್ ಹೊಂದಿದ್ದ 16 ವರ್ಷಗಳ ಹಿಡಿತ ಕೈ ತಪ್ಪಿ ಹೋಗಿದೆ. ಅವರ ಸರ್ಕಾರದ ಮೇಲೆ ಅವರಿಗೇ ನಂಬಿಕೆ ಇಲ್ಲ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗಾಲಂಟ್ ಅಧಿಕೃತವಾಗಿ ಘೋಷಿಸಿದ್ದಾರೆ. ಇನ್ನು ಗಾಜಾವನ್ನ ಸಂಪೂರ್ಣ ಸುತ್ತುವರೆದಿರುವ ಇಸ್ರೇಲ್ ಸೇನೆ ರಾಕೆಟ್ ದಾಳಿಯನ್ನ ಮುಂದುವರಿಸಿದೆ. ಆಹಾರ, ಇಂಧನ ಮತ್ತು ಇತರ ಮೂಲಭೂತ ಸರಬರಾಜುಗಳ ತೀವ್ರ ಕೊರತೆ ಉಂಟಾಗಿದೆ.
ಕಳೆದ 40 ದಿನಗಳಿಂದ ಗಾಜಾಪಟ್ಟಿ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಯಿಂದ ಮೂರನೇ ಎರಡರಷ್ಟು ಕಟ್ಟಡಗಳು ಧ್ವಂಸವಾಗಿದೆ. 15 ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದಾರೆ. 11 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಗಾಜಾ ಮೇಲೆ ಇಸ್ರೇಲ್ ದಾಳಿ ನಿಲ್ಲಿಸಿ ಕದನ ವಿರಾಮ ಘೋಷಿಸಬೇಕು ಎನ್ನುವ ಬೇಡಿಕೆಯನ್ನು ಹಮಾಸ್ ಮಾಡುತ್ತಲೇ ಬಂದಿದೆ. ಆದ್ರೆ ಇಸ್ರೇಲ್ ಮಾತ್ರ ಇದನ್ನ ಒಪ್ಪಲಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಒತ್ತೆ ಇಟ್ಟುಕೊಂಡಿರುವ 240 ಮಂದಿಯನ್ನು ಮೊದಲು ಬಿಡುಗಡೆ ಮಾಡಿ. ನಂತರ ಕದನವಿರಾಮನದ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದರು. ಆದ್ರೆ ಹಮಾಸ್ ಕೂಡ ಒತ್ತೆಯಾಳುಗಳನ್ನ ಬಿಡುಗಡೆ ಮಾಡಿಲ್ಲ. ಹೀಗಾಗಿ ಇಸ್ರೇಲ್ ಇಡೀ ಗಾಜಾವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೊರಟಿದೆ. ವಿಶ್ವಯುದ್ಧದ ವೇಳೆ ಅಸ್ತಿತ್ವದಲ್ಲೇ ಇಲ್ಲದ ಇಸ್ರೇಲ್ ಇಂದು ಜಗತ್ತಿನ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆದಿರೋದು ನಿಜಕ್ಕೂ ರೋಚಕ. ಕೋಟಿ ಜನಸಂಖ್ಯೆಯೂ ಇಲ್ಲದ ಯಹೂದಿಗಳ ನಾಡು ಜಗತ್ತನ್ನೇ ಬೆರಗಾಗುವಂತೆ ಮಾಡಿರೋದು ಅಚ್ಚರಿಯೇ ಸರಿ.
ಯಹೂದಿಗಳು ಅತ್ಯಂತ ಸಣ್ಣ ಜನಾಂಗದವರಾಗಿದ್ದು ಇವರ ಉಳಿವಿಗಾಗಿ ವಿದೇಶಗಳಿಂದ ದೇಣಿಗೆ ನೀಡಲಾಗಿತ್ತು. ಮೊದಲ ಮಹಾಯುದ್ಧಕ್ಕೆ ಮುಂಚೆ ಇಸ್ರೇಲ್ ಮತ್ತು ಯಹೂದಿಗಳ ಅಸ್ತಿತ್ವವೇ ಇರಲಿಲ್ಲ. ಆದ್ರೆ ಎರಡನೆ ಮಹಾಯುದ್ಧದ ನಂತರ 14 ಮೇ 1948 ರಲ್ಲಿ ಇಸ್ರೇಲ್ ದೇಶ ಘೋಷಣೆ ಮಾಡಲಾಯ್ತು. ಜಗತ್ತಿನ ಉದ್ದಗಲಕ್ಕೂ ಹರಿದು ಹಂಚಿಹೋಗಿದ್ದ ಯಹೂದಿಗಳು ತಮ್ಮ ನೆಲಕ್ಕೆ ವಾಪಸ್ ಆಗಿ ಇಸ್ರೇಲ್ ದೇಶ ಕಟ್ಟಿದ್ರು. ದೇಶ ಘೋಷಣೆಯಾದ ವೇಳೆ ಇಸ್ರೇಲ್ ನಲ್ಲಿ ಇವರ ಜನಸಂಖ್ಯೆ 6 ಲಕ್ಷಕ್ಕಿಂತ ಕಡಿಮೆ ಇತ್ತು. ಇಷ್ಟಾದ್ರೂ ಎದೆಗುಂದರೆ ನಿಧಾನವಾಗಿ ಕಾರ್ಖಾನೆಗಳು, ಯೂನಿವರ್ಸಿಟಿ ಸೇರಿದಂತೆ ತಮ್ಮ ನೆಲೆ ಕಂಡುಕೊಳ್ಳಲು ಶುರು ಮಾಡಿದ್ರು. 90ರ ದಶಕದ ವೇಳೆಗೆ ಜಗತ್ತಿನ ಅತ್ಯಂತ ಉನ್ನತ ತಂತ್ರಜ್ಞಾನ ಇಸ್ರೇಲಿಗರಿಂದ ಸೃಷ್ಟಿಯಾಯ್ತು. ತನ್ನ ಸುತ್ತಲೂ ವೈರಿಗಳೇ ತುಂಬಿದ್ದು ನೀರು ಆಹಾರ ನಿಲ್ಲಿಸಿಬಿಟ್ಟರೆ ಎನ್ನುವ ಭಯದ ನಡುವೆಯೂ ವಿದೇಶಗಳಿಗೆ ಆಹಾರ ಎಕ್ಸ್ ಪೋರ್ಟ್ ಮಾಡುವ ಮಟ್ಟಕ್ಕೆ ಇಸ್ರೇಲಿಗರು ಬೆಳವಣಿಗೆ ಕಂಡ್ರು. ಇಷ್ಟೆಲ್ಲಾ ಅಭಿವೃದ್ಧಿಯಾದ್ರೂ ಇಸ್ರೇಲಿಗರ ಪ್ರಸ್ತುತ ಜನಸಂಖ್ಯೆ 1 ಕೋಟಿಯೂ ದಾಟಿಲ್ಲ ಅನ್ನೋದೇ ಅಚ್ಚರಿಯ ವಿಚಾರ. ಯಾಕಂದ್ರೆ 93 ಲಕ್ಷ ಜನಸಂಖ್ಯೆ ಹೊಂದಿರುವ ಇವರ ತಲಾದಾಯ ಅನೇಕ ಯೂರೋಪಿಯನ್ ದೇಶಗಳನ್ನ ಹಿಂದಿಕ್ಕಿದೆ. ಪ್ರತಿಯೊಬ್ಬ ನಾಗರಿಕನೂ ವಿದೇಶಿ ಪ್ರಯಾಣವನ್ನು ಕೂಡ ಮಾಡಬಲ್ಲಷ್ಟು ಸ್ಥಿತಿವಂತನಾಗಿ ಬೆಳೆದಿದ್ದಾನೆ. ಮೂಲ ಸೌಕರ್ಯ ಜಗತ್ತಿನ ಮುಂದುವರೆದ ದೇಶಗಳಿಗೆ ಸೆಡ್ಡು ಹೊಡೆಯುವಂತೆ ನಿರ್ಮಿಸಲಾಗಿದೆ. ಅಷ್ಟೇ ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯವೂ ಇಸ್ರೇಲ್ ನಲ್ಲಿ ತಲೆ ಎತ್ತಿದೆ. ಹಾಗೇ ಟೆಲ್ ಅವಿವ್ ಜಗತ್ತಿನ ಅತ್ಯುತ್ತಮ ವ್ಯಾಪಾರ ಕೇಂದ್ರದಲ್ಲಿ ಒಂದಾಗಿದೆ. ಜಾಗತಿಕ ಮಟ್ಟದಲ್ಲಿ ತಮಗೆ ಬೇಕಾದುದನ್ನ ಪಡೆಯುವ ಲಾಬಿ ಮಾಡುವ ಹಂತಕ್ಕೆ ಯಹೂದಿಗಳ ನಾಡು ಬೆಳವಣಿಗೆ ಕಂಡಿದೆ.
ವಿಸ್ತೀರ್ಣದಲ್ಲಿ ನಮ್ಮ ಮಿಝೋರಾಂ ರಾಜ್ಯಕ್ಕಿಂತ ಕಡಿಮೆ ಭೂಪ್ರದೇಶ ಹೊಂದಿರುವ ಇಸ್ರೇಲ್ ಗೌರವದಲ್ಲಿ ಮಾತ್ರ ಜಗತ್ತನ್ನೇ ಆಕ್ರಮಿಸಿದೆ. ಅಮೇರಿಕಾದ ಸಂಸತ್ತು , ಅಮೆರಿಕಾದ ಮೀಡಿಯಾ ಹೌಸ್, ಅಮೆರಿಕಾದ ಬಹುಪಾಲು ವ್ಯಾಪಾರ ಇಸ್ರೇಲ್ ಯಹೂದಿಗಳ ಕೈಲಿದೆ. ಅಮೇರಿಕಾದ ಮೀಡಿಯಾ ಹೌಸ್ ಗಳಲ್ಲಿ 90 ಕ್ಕೂ ಅಧಿಕ ಇಸ್ರೇಲಿಗಳ ಆಡಳಿತದಲ್ಲಿದೆ. ಹೀಗಾಗಿ ಅಮೇರಿಕಾ ಹಮಾಸ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಪರ ಗಟ್ಟಿಯಾಗಿ ನಿಂತಿದೆ. ಜಗತ್ತನ್ನ ಆಳಲು ಬೇಕಿರುವುದು ಆರ್ಥಿಕ ಸಬಲತೆ ಮಾತ್ರವಲ್ಲ ಅದರ ಜೊತೆಗೆ ತಂತ್ರಜ್ಞಾನದ ನಿಪುಣತೆ ಎನ್ನುವ ಇಸ್ರೇಲಿಗರ ಆತ್ಮಸ್ಥೈರ್ಯ ಎದೆ ಝಲ್ ಎನ್ನಿಸುವಂತಿದೆ. ಯಾಕಂದ್ರೆ ಇಸ್ರೇಲ್ ವಿರುದ್ಧ ಯಾರಾದ್ರೂ ಯುದ್ಧ ಸಾರಿದ್ರೆ ಅಲ್ಲಿನ ಪ್ರತಿಯೊಬ್ಬರೂ ಸೈನಿಕನಾಗಿ ಬದಲಾಗ್ತಾರೆ. ತಮ್ಮ ದೇಶ ರಕ್ಷಣೆಗಾಗಿ ಯುದ್ಧಕ್ಕೆ ಧುಮುಕುತ್ತಾರೆ. ಆದ್ರೆ ಬಲಿಷ್ಠ ಸೇನೆ ಹೊಂದಿರುವ ಇಸ್ರೇಲ್ ಈಗ ಗಾಜಾಪಟ್ಟಿ ಮೇಲೆ ಅಮಾನವೀಯವಾಗಿ ದಾಳಿ ಮಾಡುತ್ತಿರೋದು ಜಗತ್ತಿನ ಮುಂದೆ ಬಯಲಾಗಿದೆ. ಇದೇ ಕಾರಣಕ್ಕೆ ಇಸ್ರೇಲ್ ವಿರುದ್ಧದ ನಿರ್ಣಯಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿ ಮತ ಚಲಾವಣೆ ಮಾಡಿದೆ.