ನಿಯಂತ್ರಣ ಕಳೆದುಕೊಂಡು ಮತ್ತೆ ಭೂಮಿಗೆ ಬಿತ್ತು ಚಂದ್ರಯಾನ – 3 ನೌಕೆಯ ಒಂದು ಭಾಗ!
ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ 3 ಯಶಸ್ಸು ಕಂಡಿದ್ದು, ಇಡೀ ವಿಶ್ವವೇ ಕೊಂಡಾಡುತ್ತಿದೆ. ಚಂದ್ರಯಾನ 3 ಬಾಹ್ಯಾಕಾಶ ನೌಕೆಯಯನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಯಲ್ಲಿ ಇರಿಸಿದ್ದ ಎಲ್ವಿಎಂ ಎಂ4 ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಭಾಗವು ಅನಿಯಂತ್ರಿತವಾಗಿ ಭೂಮಿಯ ಕಡೆ ಮರಳಿದೆ. ಈ ಕುರಿತು ಇಸ್ರೋ ಮಾಹಿತಿ ನೀಡಿದೆ.
ಈ ರಾಕೆಟ್ ಜುಲೈ 14 ರಂದು ಚಂದ್ರಯಾನ-3 ನೌಕೆಯನ್ನು ಕಕ್ಷೆಗೆ ಸೇರಿಸಿತ್ತು. ಇದಾಗ 124 ದಿನಗಳ ಬಳಿಕ ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಹಂತವು ಭೂಮಿಯನ್ನು ತಲುಪಿದೆ. ಅದು ಭಾರತದ ಭೂಭಾಗದ ಮೇಲೆ ಬೀಳದೆ ಉತ್ತರ ಪೆಸಿಫಿಕ್ ಸಾಗರದಲ್ಲಿ ಬಿದ್ದಿದೆ. ಬುಧವಾರ ಮಧ್ಯಾಹ್ನ 2:42ರ ವೇಳೆಗೆ ಅದು ಭೂಮಿಯ ವಾತಾವರಣವನ್ನು ಪುನಃ ಪ್ರವೇಶಿಸಿದೆ ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ: ಚಂದ್ರಯಾನ – 3 ಬೆನ್ನಲ್ಲೇ ಇಸ್ರೋಗೆ ಮತ್ತೊಂದು ಸಕ್ಸಸ್ – ಮೊದಲ ಬಾರಿಗೆ ಸೌರ ಜ್ವಾಲೆ ಸ್ಫೋಟ ಸೆರೆಹಿಡಿದ ಆದಿತ್ಯ L1
ವಿಶ್ವಸಂಸ್ಥೆ ಮತ್ತು ಐಎಡಿಸಿ ಸೂಚಿಸಿದ ಬಾಹ್ಯಾಕಾಶ ಶಿಲಾಖಂಡಗಳನ್ನು ತಗ್ಗಿಸುವ ಮಾರ್ಗಸೂಚಿಗಳ ಪ್ರಕಾರ ಆಕಸ್ಮಿಕ ಸ್ಫೋಟಗಳ ಅಪಾಯವನ್ನು ಕಡಿಮೆ ಮಾಡಲು ರಾಕೆಟ್ನಲ್ಲಿರುವ ಎಲ್ಲಾ ಇಂಧನ ಮತ್ತು ಶಕ್ತಿಯ ಮೂಲಗಳನ್ನು ತೆಗೆದುಹಾಕಲಾಗಿತ್ತು. ಇದು ಬಾಹ್ಯಾಕಾಶದಲ್ಲಿ ಅಂತಾರಾಷಷ್ಟ್ರೀಯ ಕಾನೂನನ್ನು ಗೌರವಿಸಿ ನಡೆದುಕೊಳ್ಳುವ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಇಸ್ರೋ ಹೇಳಿದೆ.
ಜುಲೈ 14 ರಂದು ಶ್ರೀಹರಿಕೋಟಾದಿಂದ ಚಂದ್ರಯಾನ ನೌಕೆಯನ್ನು ಹೊತ್ತ ಎಲ್ಎಂವಿ ರಾಕೆಟ್ ಯಶಸ್ವಿಯಾಗಿ ನೌಕೆಯನ್ನು ಕಕ್ಷೆಗೆ ಸೇರಿಸಿತ್ತು. ನಂತರ ನೌಕೆಯನ್ನು ಅಂತಿಮ ಹಂತಕ್ಕೆ ಕೊಂಡುಹೋಗಿದ್ದ ರಾಕೆಟ್ನ ಮುಂಭಾಗ ಬಾಹ್ಯಾಕಾಶದಲ್ಲೇ ಉಳಿದುಕೊಂಡಿತ್ತು. ಇದೀಗ ಯಾವುದೇ ನಿಯಂತ್ರಣವಿಲ್ಲದೇ ಇದು ಭೂಮಿಗೆ ಬಿದ್ದಿದೆ.