ಪಟಾಕಿ ಸಿಡಿಸುವಾಗ ಉಸಿರಿನ ಬಗ್ಗೆ ಇರಲಿ ಎಚ್ಚರ! – ದೆಹಲಿಯಂತಾಗುತ್ತಿದೆ ಬೆಂಗಳೂರಿನ ವಾಯುಗುಣಮಟ್ಟ
ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆಗೆ ಶಾಕಿಂಗ್ ಸುದ್ದಿಯೊಂದಿದೆ. ಉದ್ಯಾನನಗರಿಯಲ್ಲಿ ಹವಾಮಾನ ಗುಣಮಟ್ಟ ತೀವ್ರಪ್ರಮಾಣದಲ್ಲಿ ಕುಸಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿನ ವಾಯು ಗುಣಮಟ್ಟ ಸೂಚ್ಯಂಕ 193ಕ್ಕೇರಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಆಕ್ಯು ವೆದರ್ ವರದಿ ಮಾಡಿದೆ. ಬೆಂಗಳೂರಿನ ಇಂದಿನ ಗಾಳಿಯ ಗುಣಮಟ್ಟ ಮಾಲಿನ್ಯ ಮಟ್ಟವನ್ನು ತಲುಪಿದ್ದು, ಇದು ತುಂಬಾ ಅನಾರೋಗ್ಯಕರವಾಗಿದೆ. ಉಸಿರಾಟದ ತೊಂದರೆ ಅಥವಾ ಗಂಟಲಿನ ಕಿರಿಕಿರಿಯಂತಹ ರೋಗಲಕ್ಷಣಗಳನ್ನು ನೀವು ಅನುಭವಿಸುತ್ತಿದ್ದರೆ ಅನಾವಶ್ಯಕ ಹೊರಗಿನ ಓಡಾಟ ತಪ್ಪಿಸಿ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
ಇದನ್ನೂ ಓದಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆ – ವಿಷಕಾರಿಯಾಗಿದ್ದ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆ!
ಅಲ್ಲದೆ ಆರೋಗ್ಯವಂತ ವ್ಯಕ್ತಿಗಳೂ ಕೂಡ ವಾಯುಮಾಲಿನ್ಯದಿಂದಾಗಿ ಉಸಿರಾಟದ ತೊಂದರೆ ಮತ್ತು ಗಂಟಲಿನ ಕಿರಿಕಿರಿಯನ್ನು ಅನುಭವಿಸುವ ಸಾಧ್ಯತೆಯಿದೆ ಎಂದೂ ಎಚ್ಚರಿಸಿದೆ. ಬೆಂಗಳೂರಿನ ಇಂದಿನ ವಾಯು ಗುಣಮಟ್ಟ PM 2.6 (Fine Particulate Matter) 193 ಆಗಿದ್ದು, PM 10 ನ ಪ್ರಮಾಣ 152ರಷ್ಟಿದೆ. ಈ ಎರಡೂ ಅಂಶಗಳ ಪ್ರಮಾಣ ತುಂಬಾ ಅನಾರೋಗ್ಯಕರ ಎಂದು ಆ್ಯಕ್ಯುವೆದರ್ ವರದಿ ಮಾಡಿದೆ.
ಉಳಿದಂತೆ ನಗರದಲ್ಲಿನ ಗಾಳಿಯಲ್ಲಿನ ಎನ್ಒ2 (NO2-Nitrogen Dioxide) ಪ್ರಮಾಣ 49ರಷ್ಟಿದ್ದು, ಇದು ಉತ್ತಮ ಪ್ರಮಾಣದಲ್ಲಿದೆ. ಅಂತೆಯೇ ಓಜೋನ್ ನ ಪ್ರಮಾಣ 31ರಷ್ಟಿದ್ದು, ಕಾರ್ಬನ್ ಮಾನಾಕ್ಸೈಡ್ 3ರಷ್ಟಿದ್ದು, ಈ ಎರಡೂ ಅಂಶಗಳ ಪ್ರಮಾಣ ಉತ್ತಮವಾಗಿದೆ ಎಂದು ಆ್ಯಕ್ಯು ವೆದರ್ ವರದಿ ಮಾಡಿದೆ.