ಅತ್ತಿಬೆಲೆ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟ ನಿಷೇಧ – ಜಪ್ತಿಯಾದ 50 ಟನ್‌ ಪಟಾಕಿ ಠುಸ್‌..!

ಅತ್ತಿಬೆಲೆ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟ ನಿಷೇಧ – ಜಪ್ತಿಯಾದ 50 ಟನ್‌ ಪಟಾಕಿ ಠುಸ್‌..!

ಬೆಂಗಳೂರು: ಅತ್ತಿಬೆಲೆ ಪಟಾಕಿ ಗೋದಾಮು ಅಗ್ನಿ ದುರಂತದಲ್ಲಿ ತಮಿಳುನಾಡಿನ 14 ಜನರು ಸಜೀವ ದಹನವಾಗಿದ್ದರು. ಈ ಘಟನೆ ಇಡೀ ರಾಜ್ಯವನ್ನೇ ಬೆಚಿಬೀಳುವಂತೆ ಮಾಡಿತ್ತು. ಈ ದುರಂತದಿಂದ ಎಚ್ಚೆತ್ತುಕೊಂಡಿರುವ ರಾಜ್ಯಸರ್ಕಾರ ಅಗ್ನಿ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಇದೀಗ ನಗರದ ಪ್ರಮುಖ ಪಟಾಕಿ ಮಾರಾಟ ವಾಣಿಜ್ಯ ಕೇಂದ್ರವಾಗಿದ್ದ ಅತ್ತಿಬೆಲೆ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದರಿಂದಾಗಿ ಪೊಲೀಸರು ಜಪ್ತಿ ಮಾಡಿದ್ದ ಸುಮಾರು 50 ಟನ್‌ ಪಟಾಕಿ ಸ್ಫೋಟಗೊಳ್ಳುವ ಸಾಧ್ಯತೆಗಳು ಕಾಣಿಸುತ್ತಿಲ್ಲ.

ಅಕ್ಟೋಬರ್‌ 7 ರಂದು ಅತ್ತಿಬೆಲೆಯಲ್ಲಿ ಪಟಾಕಿ ಮಾರಾಟ ಮಳಿಗೆದಾರನ ನಿರ್ಲಕ್ಷ್ಯದಿಂದ 17 ಮಂದಿ ಅಸುನೀಗಿದ್ದರು. ಜತೆಗೆ, ಸೂಕ್ತ ಪರಿಶೀಲನೆ ನಡೆಸದೆ ಲೈಸೆನ್ಸ್‌ ಮಂಜೂರು ಮಾಡಿದ್ದ ಪೊಲೀಸ್‌ ಇಲಾಖೆ, ಅಗ್ನಿಶಾಮಕ, ಜಿಲ್ಲಾಡಳಿತದ ವಿರುದ್ಧವೂ ನಾಗರಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯ ಸರಕಾರ ಹಿಂದಿನ ತಹಸೀಲ್ದಾರ್‌ ಸೇರಿ ಮೂವರು ಕಂದಾಯ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿತ್ತು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುವ ಪೊಲೀಸರು ‘ರಿಸ್ಕ್‌’ ತೆಗೆದುಕೊಳ್ಳಲು ಹಿಂದೇಟು ಹಾಕಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿಲ್ಲ. ಅತ್ತಿಬೆಲೆ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟಕ್ಕೆ ಅನುಮತಿ ಕೋರಿ ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿದ್ದ 100ಕ್ಕೂ ಹೆಚ್ಚು ಅರ್ಜಿಗಳಿಗೆ ಅನುಮತಿ ಮಂಜೂರಾಗಿಲ್ಲ. ಜತೆಗೆ, ಪೊಲೀಸ್‌ ಇಲಾಖೆಗೆ ಸಲ್ಲಿಕೆಯಾಗಿದ್ದ 45 ಅರ್ಜಿಗಳು ತಿರಸ್ಕೃತಗೊಂಡಿವೆ. ಹೀಗಾಗಿ ಅತ್ತಿಬೆಲೆಯಲ್ಲಿ ಪಟಾಕಿ ಮಾರಾಟದ ಭರಾಟೆಗೆ ಸದ್ದಿಲ್ಲದಂತಾಗಿದೆ.

ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ! – ಮಾದಪ್ಪನ ಬೆಟ್ಟಕ್ಕೆ ದ್ವಿಚಕ್ರ ವಾಹನ, ಆಟೋಗಳಿಗೆ ನಿರ್ಬಂಧ!

ಪಟಾಕಿ ದುರಂತದ ಬಳಿಕ ಪೊಲೀಸರು ಎಲೆಕ್ಟ್ರಾನಿಕ್‌ ಸಿಟಿ, ಅತ್ತಿಬೆಲೆ ವ್ಯಾಪ್ತಿಯ ಮಳಿಗೆಗಳಲ್ಲಿ 50 ಟನ್‌ ಪಟಾಕಿ ಜಪ್ತಿ ಮಾಡಿದ್ದರು. ಜಪ್ತಿ ಮಾಡಿರುವ ಪಟಾಕಿ ಬಿಡುಗಡೆ ಮಾಡಿಸಿಕೊಳ್ಳಲು ಮಳಿಗೆದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದು, ನಿಯಮ ಪಾಲನೆ ಮಾಡಿದ ಲೈಸೆನ್ಸ್‌ದಾರರಿಗೆ ಪಟಾಕಿ ಹಿಂತಿರುಗಿಸುವಂತೆ ಕೋರ್ಟ್‌ ಸೂಚಿಸಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಆಡಳಿತ ಹಾಗೂ ಗ್ರಾಮಾಂತರ ಪೊಲೀಸರು ಲೈಸೆನ್ಸ್‌ದಾರರಿಗೆ ಯಾವ ಮಾನದಂಡಗಳಲ್ಲಿ ಪಟಾಕಿ ಹಿಂದಿರುಗಿಸಬೇಕು ಎಂಬ ಜಿಜ್ಞಾಸೆಗೆ ಬಿದ್ದಿದ್ದಾರೆ.

ಪರವಾನಗಿದಾರರು ನಿಯಮ ಉಲ್ಲಂಘನೆ ಆರೋಪ ಮಾಡಿದ ಆರೋಪದ ಮೇರೆಗೆ ಪಟಾಕಿ ಜಪ್ತಿ ಮಾಡಲಾಗಿತ್ತು. ಈಗ ಮತ್ತೊಮ್ಮೆ ಅವರ ನಿಯಮಾವಳಿ ಪರಿಶೀಲಿಸಬೇಕು. ಹೊಸದಾಗಿ ಅನುಮತಿ ಮಂಜೂರು ಮಾಡಿ ಪಟಾಕಿ ನೀಡುವ ಅನಿವಾರ್ಯತೆ ಇದೆ. ಆದರೆ, ಶನಿವಾರದಿಂದ ಮೂರು ದಿನಗಳ ಸರಕಾರಿ ರಜೆ ಇದೆ. ಈ ಬಿಕ್ಕಟ್ಟುಗಳ ನಡುವೆ ಪಟಾಕಿ ಹಿಂದಿರುಗಿಸುವುದು ಬಹುತೇಕ ಕಠಿಣವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Shwetha M