ಯುದ್ಧ ನಿಲ್ಲಿಸುವ ಸಾಮರ್ಥ್ಯ ಮೋದಿಗಿದೆ ಎಂದ ಇರಾನ್ ಅಧ್ಯಕ್ಷ – ಗಾಜಾವನ್ನೇ ಸೀಳಿದ್ದೇಕೆ ಇಸ್ರೇಲ್ ಸೇನೆ?
ಹಮಾಸ್ ಹಾಗೂ ಇಸ್ರೇಲ್ ನಡುವೆ ಯುದ್ಧ ಶುರುವಾಗಿ ತಿಂಗಳೇ ಕಳೆದ್ರೂ ದಾಳಿ, ಪ್ರತಿದಾಳಿ ನಿಂತಿಲ್ಲ. ಪ್ಯಾಲೆಸ್ತೀನ್ ನ ಗಾಜಾಪಟ್ಟಿ ಎಂಬ ಜನಸಂದಣಿಯ ತುಂಡುಭೂಮಿಯಲ್ಲಿ ಮಾರಣಹೋಮವೇ ನಡೆಯುತ್ತಿದೆ. ಆಹಾರ, ನೀರು, ಇಂಧನ, ವೈದ್ಯಕೀಯ ಸೌಲಭ್ಯದ ಅಭಾವ ಕೂಡ ಜನರ ಜೀವ ತೆಗೆಯುತ್ತಿದೆ. ಗಾಜಾಪಟ್ಟಿ ತೊರೆಯದ ವಿನಾ ಅಲ್ಲಿನ ಜನರಿಗೆ ಯಾವ ಆಯ್ಕೆಯೂ ಉಳಿದಿಲ್ಲ. ಹಮಾಸ್ ನಿರ್ನಾಮವೇ ಗುರಿ ಎನ್ನುತ್ತಿರೋ ಇಸ್ರೇಲ್ ಪ್ಯಾಲೆಸ್ತೀನ್ ನಾಗರಿಕರನ್ನ ಅಮಾನವೀಯವಾಗಿ ಕೊಲ್ಲುತ್ತಿದೆ. ರಾಕೆಟ್ಗಳ ದಾಳಿ, ಬಾಂಬ್ಗಳ ಸ್ಫೋಟ, ಭೂಸೇನೆಯ ಗುಂಡೇಟು ಗಾಜಾ ನಗರವನ್ನೇ ಛಿದ್ರ ಛಿದ್ರ ಮಾಡಿದೆ. ಇಡೀ ನಗರವನ್ನ ಇಬ್ಭಾಗ ಮಾಡಿದ್ದೇವೆ ಅಂತಾ ಇಸ್ರೇಲ್ ಕೇಕೆ ಹಾಕಿದೆ.
ಇಸ್ರೇಲ್ ಮೇಲೆ 5 ಸಾವಿರಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿದ್ದ ಗಾಜಾದ ಹಮಾಸ್ ಬಂಡುಕೋರರು ಸುರಂಗಗಳಲ್ಲಿ ಅಡಗಿ ಕುಳಿತಿದ್ದಾರೆ. ಅವರ ನಿರ್ನಾಮಕ್ಕೆ ಪಣ ತೊಟ್ಟಿರೋ ಇಸ್ರೇಲ್ ಇಡೀ ಗಾಜಾ ನಗರವನ್ನೇ ಸರ್ವನಾಶ ಮಾಡಲು ಹೊರಟಿದೆ. ಬಲಿಷ್ಠ ಸೇನೆ, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಇಸ್ರೇಲ್ ಬಹುತೇಕ ಗಾಜಾನಗರವನ್ನು ತೆಕ್ಕೆಗೆ ತೆಗೆದುಕೊಂಡಿದೆ. ಅಕ್ಟೋಬರ್ 7 ರಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ರಾಕೆಟ್ಗಳ ದಾಳಿಗೆ ಕಟ್ಟಡಗಳು ಅಸ್ತಿಪಂಜರದಂತಾಗಿವೆ. ಪುಟ್ಟ ಪುಟ್ಟ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಸಿಗ್ತಿಲ್ಲ. ಬದುಕುಳಿದವರಿಗೆ ನಿಲ್ಲೋಕೆ ನೆಲೆ ಇಲ್ಲ. ಯಾಕಂದ್ರೆ ಗಾಜಾಪಟ್ಟಿಯ ಒಟ್ಟು ವಿಸ್ತೀರ್ಣವೇ 365 ಚದರ ಕಿಲೋಮೀಟರ್. ಕರ್ನಾಟಕದ ರಾಜಧಾನಿ ಬೆಂಗಳೂರು ವಿಸ್ತೀರ್ಣವೇ 741 ಚದರ ಕಿಲೋ ಮೀಟರ್ ಇದೆ. ಇದರ ಅರ್ಧದಷ್ಟೂ ಗಾಜಾನಗರವಿಲ್ಲ. ಅದ್ರಲ್ಲೂ ಶೇಕಡಾ 40ರಷ್ಟು ಕೃಷಿಭೂಮಿ ಇದೆ. ಇಷ್ಟು ಸಣ್ಣ ಪ್ರದೇಶದಲ್ಲೇ 23 ಲಕ್ಷ ಜನರ ವಾಸ ಮಾಡ್ತಿದ್ದಾರೆ. ಗಾಜಾ ಪ್ರದೇಶವೂ 52 ಕಿಲೋ ಮೀಟರ್ ನಷ್ಟು ಉದ್ದದ ಭೂಗಡಿ ಹೊಂದಿದ್ದು, ಗಡಿ ಉದ್ದಕ್ಕೂ ಇಸ್ರೇಲ್ 18 ಅಡಿ ಎತ್ತರದ ಬೇಲಿ ನಿರ್ಮಿಸಿದೆ. ಅಲ್ಲದೆ ಎಲ್ಲಾ ಮೂಲಭೂತ ಸೌಕರ್ಯಗಳನ್ನ ಇಸ್ರೇಲ್ ಬಂದ್ ಮಾಡಿದೆ. ಹೀಗಾಗೇ ತುತ್ತು ಅನ್ನಕ್ಕೂ ಹಾಹಾಕಾರ ಭುಗಿಲೆದ್ದಿದೆ. ಆದ್ರೆ ಇಸ್ರೇಲ್ ಸೇನೆ ಮಾತ್ರ ದಾಳಿ ಮುಂದುವರಿಸಿದ್ದು, ಇದೀಗ ಇಡೀ ಗಾಜಾ ನಗರವನ್ನ ಇಬ್ಭಾಗ ಮಾಡಿದ್ದೇವೆ ಎಂದು ಘೋಷಿಸಿದೆ.
ಇದನ್ನೂ ಓದಿ : ICC ವಿಶ್ವಕಪ್ ಫೈನಲ್ ದಿನವೇ ಏರ್ ಇಂಡಿಯಾ ವಿಮಾನ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ – ಕೆನಡಾಗೆ ಎಚ್ಚರಿಕೆ ಕೊಟ್ಟಿದ್ದೇಕೆ ಮೋದಿ?
ಹಮಾಸ್ ಉಗ್ರರ ವಿರುದ್ಧದ ಇಸ್ರೇಲ್ ಸೇನಾದಾಳಿ ನಿರ್ಣಾಯಕ ಹಂತ ತಲುಪಿದ್ದು, ಇಡೀ ಗಾಜಾ ಪಟ್ಟಿ ಇಬ್ಭಾಗ ಮಾಡಿರೋದಾಗಿ ಇಸ್ರೇಲ್ ಸೇನೆ ಘೋಷಣೆ ಮಾಡಿದೆ. ಇಸ್ರೇಲ್ ಸೇನಾ ದಾಳಿಗೆ ಉತ್ತರ ಗಾಜಾ ಪಟ್ಟಿಯಲ್ಲಿ ಅಕ್ಷರಶಃ ಅಸ್ತಿಪಂಜರದಂತಾಗಿದೆ. ಇಡೀ ಗಾಜಾ ನಗರವನ್ನು ಇಸ್ರೇಲ್ ಸೇನೆ ಸುತ್ತುವರೆದಿದ್ದು, ಉತ್ತರ ಗಾಜಾ ಸಂಪೂರ್ಣ ವಶಕ್ಕೆ ಪಡೆದಿದೆ. ಇದೀಗ ದಕ್ಷಿಣ ಗಾಜಾ ಭಾಗದ ಮೇಲೂ ದಾಳಿ ನಡೆಸಲು ಇಸ್ರೇಲ್ ಸೇನಾ ಪಡೆ ಸಿದ್ಧತೆ ನಡೆಸಿರೋದಾಗಿ ಇಸ್ರೇಲ್ ಸೇನೆ ಮುಖ್ಯ ವಕ್ತಾರ ರೇರ್ ಅಡ್ಮಿರಲ್ ಡೇನಿಯಲ್ ಹಗಾರಿ ಘೋಷಣೆ ಮಾಡಿದ್ದಾರೆ. ಗಾಜಾಪಟ್ಟಿ ಮೇಲೆ ಹಮಾಸ್ ಬಂಡುಕೋರರ ಹಿಡಿತ ಸಡಿಲಗೊಳಿಸಲು ಗಾಜಾವನ್ನು ಇಬ್ಭಾಗ ಮಾಡಿದ್ದೇವೆ. ಇಸ್ರೇಲಿ ಪಡೆ ಗಾಜಾ ಕರಾವಳಿ ಪ್ರದೇಶ ತಲುಪಿದ್ದು ಯಾವುದೇ ಕ್ಷಣದಲ್ಲಿ ಕಾರ್ಯಾಚರಣೆ ನಡೆಸುತ್ತೇವೆ. ದಕ್ಷಿಣ ಗಾಜಾದ ಸುರಂಗ ಮತ್ತು ಹಮಾಸ್ ಮೂಲಸೌಕರ್ಯಗಳೇ ಇಸ್ರೇಲಿ ಪಡೆಗಳ ಗುರಿ ಎಂದಿದ್ದಾರೆ. ಅಸಲಿಗೆ ಇಲ್ಲಿ ಹಮಾಸ್ ಮೇಲೆ ಯುದ್ಧ ಸಾರಿದ್ದ ಇಸ್ರೇಲ್ ಗೆ ಆರಂಭದಲ್ಲಿ ಅಮೆರಿಕ, ಭಾರತ, ಇಸ್ರೇಲ್ ಸೇರಿದಂತೆ ಹಲವು ರಾಷ್ಟ್ರಗಳು ಬೆಂಬಲ ನೀಡಿದ್ದವು. ಆದ್ರೀಗ ಇದೇ ರಾಷ್ಟ್ರಗಳು ಇಸ್ರೇಲ್ ರೋಷಾವೇಶವನ್ನ ತೀವ್ರವಾಗಿ ಖಂಡಿಸುತ್ತಿವೆ. ಕದನವಿರಾಮಕ್ಕೆ ಆಗ್ರಹಿಸುತ್ತಿವೆ. ಇಸ್ರೇಲ್ ಬೆಂಬಲಿತ ರಾಷ್ಟ್ರಗಳ ಈ ನಿಲುವಿಗೆ ಕಾರಣವೂ ಇದೆ. ಅದೇ ಗಾಜಾಪಟ್ಟಿಯಲ್ಲಿನ ಮಕ್ಕಳ ಮಾರಣಹೋಮ. ಗಾಜಾನಗರದ ನರಕಯಾತನೆ. ಇಸ್ರೇಲ್ ದಾಳಿಯಲ್ಲಿ ಗಾಜಾ ನಗರದ ಪುಟ್ಟ ಪುಟ್ಟ ಮಕ್ಕಳು ಬಲಿಯಾಗುತ್ತಿವೆ. ಜನರೇ ತುಂಬಿದ್ದ ಗಾಜಾ ನಗರದ ಸ್ಥಿತಿ ವಿಶ್ವಮಟ್ಟದಲ್ಲಿ ಟೀಕೆಗೆ ಗುರಿಯಾಗಿದೆ. ಅಷ್ಟಕ್ಕೂ ಈಗ ಗಾಜಾ ಸ್ಥಿತಿ ಹೇಗಿದೆ ಅನ್ನೋದನ್ನ ನಾವಿಲ್ಲಿ ತಿಳಿಯಲೇಬೇಕು.
ಹಮಾಸ್ ನಾಶಕ್ಕೆ ಪಣ ತೊಟ್ಟಿರುವ ಇಸ್ರೇಲ್ ಸೇನೆ ಇಡೀ ಗಾಜಾ ನಗರವನ್ನು ಸುತ್ತುವರೆದಿದೆ. ಈವರೆಗೂ ಹಮಾಸ್ ಹಿಡಿತದಲ್ಲಿದ್ದ ಬಹುತೇಕ ನೆಲೆಗಳು ಇಸ್ರೇಲ್ ಸೇನೆ ವಶಕ್ಕೆ ಬಂದಿವೆ. ಯುದ್ಧ ಭಯದಲ್ಲಿ ಪ್ಯಾಲೆಸ್ತೀನ್ ನ ಸುಮಾರು 15 ಲಕ್ಷ ಪ್ಯಾಲೆಸ್ತೀನಿಯರು ಪಲಾಯನ ಮಾಡಿದ್ದಾರೆ. ಅಂದ್ರೆ ಗಾಜಾಪಟ್ಟಿ ಭಾಗದಲ್ಲಿ ವಾಸವಿದ್ದ ಶೇಕಡಾ 70ರಷ್ಟು ಜನರು ಗಾಜಾ ನಗರ ತೊರೆದಿದ್ದಾರೆ. ಜೀವದ ಭಯ ಬಿಟ್ಟು ಅಲ್ಲೇ ಉಳಿದವರಿಗೆ ರಾಕೆಟ್, ಇಸ್ರೇಲ್ ಸೇನೆ ದಾಳಿ ಭಯ ಕಾಡುತ್ತಿದೆ. ಅನ್ನ, ನೀರು, ಔಷಧ, ಇಂಧನ, ಚಿಕಿತ್ಸೆ ಸೇರಿದಂತೆ ಸೌಲಭ್ಯಗಳಿಲ್ಲದೆ ಬದುಕೋದೇ ಕಷ್ಟವಾಗಿದೆ. ಇನ್ನೊಂದು ಭಯಾನಕ ಸಂಗತಿ ಅಂದ್ರೆ ರಾಕೆಟ್, ಬಾಂಬ್ ಗಳ ಸ್ಫೋಟದಲ್ಲಿ ಪ್ರತೀ 10 ನಿಮಿಷಕ್ಕೊಮ್ಮೆ 1 ಮಗು ಸಾವನ್ನಪ್ಪುತ್ತಿದೆ, ಇಬ್ಬರು ಗಾಯಗೊಳ್ತಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯದ ತುರ್ತು ವೈದ್ಯಕೀಯ ಕೇಂದ್ರ ವರದಿ ಬಿಡುಗಡೆ ಮಾಡಿದೆ. ಅಕ್ಟೋಬರ್ 7ರಿಂದ ಆರಂಭವಾದ ಯುದ್ಧದಲ್ಲಿ ಈವರೆಗೂ 10 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಈ ಪೈಕಿ 4,100ಕ್ಕೂ ಅಧಿಕ ಮಕ್ಕಳೇ ಬಲಿಯಾಗಿದ್ದಾರೆ. ಆಸ್ಪತ್ರೆಗಳು, ಆಂಬ್ಯುಲೆನ್ಸ್, ನಿರಾಶ್ರಿತರ ಶಿಬಿರಗಳ ಮೇಲೆಯೂ ಬಾಂಬ್ ದಾಳಿ ನಡೆಯುತ್ತಿದ್ದು, ಗಾಜಾ ನಗರದಲ್ಲಿ ಯಾವುದೇ ಸ್ಥಳವೂ ಸುರಕ್ಷಿತ ಅಲ್ಲ ಎಂದು ವಿಶ್ವಸಂಸ್ಥೆ ಅಭಿಪ್ರಾಯ ಪಟ್ಟಿದೆ. ವಿಶ್ವಸಂಸ್ಥೆಯ ಬಾವುಟ ಇದ್ರೂ, ಆ ಪ್ರದೇಶದಲ್ಲಿ ಸುರಕ್ಷಿತವಾಗಿ ಹೊರಗೆ ಬರಲು ಆಗುತ್ತಿಲ್ಲ ಎಂದು ವಿಶ್ವಸಂಸ್ಥೆ ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ. ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇಸ್ರೇಲ್ ಯುದ್ಧ ನಿಲ್ಲಿಸಬೇಕೆಂಬ ಕೂಗು ಜೋರಾಗುತ್ತಿದೆ. ವಿಶ್ವನಾಯಕರು ಒಗ್ಗಟ್ಟಾಗಿ ಸಂಘರ್ಷವನ್ನು ಕೊನೆಗಾಣಿಸಿ ಎಂದು ಪ್ರತಿಭಟನೆಗಳು ನಡೆಯುತ್ತಿದೆ. ಇಂಥ ಸಂದಿಗ್ಧ ಸ್ಥಿತಿಯ ನಡುವೆ ಇರಾನ್ ಅಧ್ಯಕ್ಷರು ಯುದ್ಧ ನಿಲ್ಲಿಸುವಂತೆ ಭಾರತವನ್ನ ಒತ್ತಾಯಿಸಿದ್ದಾರೆ. ಇರಾನ್ ಹೇಳಿ ಕೇಳಿ ಹಮಾಸ್ ಗೆ ಬೆಂಬಲ ನೀಡುತ್ತಿರುವ ರಾಷ್ಟ್ರ. ಇಸ್ರೇಲ್ ನ ಬದ್ಧವೈರಿ ರಾಷ್ಟ್ರ. ಹೀಗಿದ್ರೂ ಭಾರತ ಪ್ರಧಾನಿ ಬಳಿ ಕದನ ವಿರಾಮಕ್ಕೆ ಒತ್ತಾಯಿಸಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ದೂರವಾಣಿ ಮೂಲಕ ಮಾತುಕತೆ ನಡೆಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ & ಇರಾನ್ ಅಧ್ಯಕ್ಷ ಡಾ.ಸೈಯ್ಯದ್ ಇಬ್ರಾಹಿಂ ರೈಸಿ, ಇಸ್ರೇಲ್-ಹಮಾಸ್ ನಡುವಣ ಸಂಘರ್ಷದ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಗಾಜಾದಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸಲು ಭಾರತವು ‘ತನ್ನ ಎಲ್ಲಾ ಸಾಮರ್ಥ್ಯಗಳನ್ನು’ ಬಳಸಬೇಕೆಂದು ಇರಾನ್ ಅಧ್ಯಕ್ಷರು ಮನವಿ ಮಾಡಿದ್ದಾರೆ. ಇದೇ ವೇಳೆ ಪಾಶ್ಚಿಮಾತ್ಯ ವಸಾಹತುಶಾಹಿ ವಿರುದ್ಧದ ಭಾರತದ ಹೋರಾಟಗಳು ಹಾಗೂ ಹಿಂದಿನ ವಿಶ್ವದ ಅಲಿಪ್ತ ಚಳವಳಿಯ ಸಂಸ್ಥಾಪಕರಲ್ಲಿ ಒಬ್ಬರಾಗಿ ಭಾರತದ ಸ್ಥಾನವನ್ನ ಇರಾನ್ ಅಧ್ಯಕ್ಷರು ನೆನಪಿಸಿಕೊಂಡಿದ್ದಾರೆ. ಗಾಜಾದ ತುಳಿತಕ್ಕೊಳಗಾದವರ ವಿರುದ್ಧ ಝಿಯೋನಿಸ್ಟ್ ಅಪರಾಧಗಳನ್ನು ಕೊನೆಗೊಳಿಸಬೇಕು. ಇದನ್ನ ಕೊನೆಗೊಳಿಸಲು ಭಾರತವು ತನ್ನ ಎಲ್ಲಾ ಸಾಮರ್ಥ್ಯಗಳನ್ನು ಬಳಸುವ ನಿರೀಕ್ಷೆಯಿದೆ. ತಕ್ಷಣದ ಕದನ ವಿರಾಮಕ್ಕಾಗಿ ಯಾವುದೇ ಜಾಗತಿಕ ಜಂಟಿ ಪ್ರಯತ್ನವನ್ನು ನಾವು ಬೆಂಬಲಿಸುತ್ತೇವೆ. ಇಸ್ರೇಲ್ ಸೇನೆಯ ದಿಗ್ಬಂಧನವನ್ನು ತೆಗೆದುಹಾಕಿ ಗಾಜಾದಲ್ಲಿ ತುಳಿತಕ್ಕೊಳಗಾದ ಜನರಿಗೆ ನೆರವು ನೀಡಬೇಕು. ಪ್ಯಾಲೆಸ್ತೀನ್ ಜನರ ಹತ್ಯೆಯನ್ನ ಇಸ್ರೇಲ್ ಮುಂದುವರಿಸಿರೋದು ಪ್ರಪಂಚದ ಎಲ್ಲಾ ಸ್ವತಂತ್ರ ರಾಷ್ಟ್ರಗಳನ್ನು ಕೆರಳಿಸಿದೆ. ಇದು ಹೀಗೇ ಕಂಟಿನ್ಯೂ ಆದ್ರೆ ಇತರೆ ದೇಶಗಳ ಮೇಲೆ ಪರಿಣಾಮಗಳನ್ನು ಬೀರುತ್ತದೆ ಎಂದಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಭಯೋತ್ಪಾದಕ ಕೃತ್ಯಗಳು, ಹಿಂಸಾಚಾರ, ನಾಗರಿಕರ ಜೀವಹಾನಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇಸ್ರೇಲ್ – ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತ ದೀರ್ಘಕಾಲದ ಮತ್ತು ಸ್ಥಿರವಾದ ನಿಲುವು ಹೊಂದಿದೆ ಎಂದು ಇರಾನ್ ಅಧ್ಯಕ್ಷರಿಗೆ ತಿಳಿಸಿದ್ದಾರೆ.
ಇರಾನ್ ಅಧ್ಯಕ್ಷರ ಜೊತೆಗಿನ ಮಾತುಕತೆ ಬಗ್ಗೆ ಸೋಶಿಯಲ್ ಮೀಡಿಯಾ Xನಲ್ಲಿ ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಕಠಿಣ ಪರಿಸ್ಥಿತಿ ಮತ್ತು ಇಸ್ರೇಲ್-ಹಮಾಸ್ ಸಂಘರ್ಷದ ಬಗ್ಗೆ ಉತ್ತಮ ದೃಷ್ಟಿಕೋನಗಳ ವಿನಿಮಯ ಮಾಡಿಕೊಂಡಿದ್ದೇವೆ. ಭಯೋತ್ಪಾದಕ ಘಟನೆಗಳು, ಹಿಂಸಾಚಾರ ಮತ್ತು ನಾಗರಿಕ ಜೀವಗಳ ನಷ್ಟ ಕಳವಳಕಾರಿಯಾಗಿದೆ. ನಿರಂತರ ಮಾನವೀಯ ನೆರವು ಮತ್ತು ಶಾಂತಿ, ಸ್ಥಿರತೆಯ ಆರಂಭಿಕ ಮರುಸ್ಥಾಪನೆಯಾಗಬೇಕು. ಚಬಹಾರ್ ಬಂದರು ಸೇರಿದಂತೆ ನಮ್ಮ ದ್ವಿಪಕ್ಷೀಯ ಸಹಕಾರದಲ್ಲಿನ ಪ್ರಗತಿಯನ್ನು ಸ್ವಾಗತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ಇಸ್ರೇಲ್ ದಾಳಿಗೆ ಗಾಜಾಪಟ್ಟಿ ಸ್ಮಶಾನದ ರೂಪ ಪಡೆದಿದ್ದು, ಯುದ್ಧ ನಿಲ್ಲಿಸಬೇಕು ಎನ್ನುವ ಪ್ರಯತ್ನಗಳು ಹೆಚ್ಚುತ್ತಿವೆ. ಆದ್ರೆ ಇಸ್ರೇಲ್ ಮಾತ್ರ ಇದಕ್ಕೆ ಒಪ್ಪಿಕೊಳ್ಳುತ್ತಿಲ್ಲ. ಈ ನಡುವೆ ಹಮಾಸ್ ಉಗ್ರರು ಕೂಡ, ದಾಳಿ ಮುಂದುವರಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಹೀಗಾಗಿ ಗಾಜಾಪಟ್ಟಿಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದೆ. ಈ ಪರಿಸ್ಥಿತಿ ಹೀಗೆ ಮುಂದುವರಿದರೆ ಇಡೀ ಗಾಜಾ ನಗರ ಸಂಪೂರ್ಣ ಬೂದಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.