ಜೆಡಿಎಸ್ – ಬಿಜೆಪಿ ಮೈತ್ರಿ ಎರಡು ಪಕ್ಷದ ನಾಯಕರಿಗೆ “ಒಲ್ಲದ ಸಂಸಾರ ಒತ್ತಾಯದ ಬಾಳ್ವೆ”ಯಂತಾಗಿದೆ – ಕಾಂಗ್ರೆಸ್‌ ವ್ಯಂಗ್ಯ

ಜೆಡಿಎಸ್ – ಬಿಜೆಪಿ ಮೈತ್ರಿ ಎರಡು ಪಕ್ಷದ ನಾಯಕರಿಗೆ “ಒಲ್ಲದ ಸಂಸಾರ ಒತ್ತಾಯದ ಬಾಳ್ವೆ”ಯಂತಾಗಿದೆ – ಕಾಂಗ್ರೆಸ್‌ ವ್ಯಂಗ್ಯ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಿನಿಂದಲೇ ತಯಾರಿ ನಡೆಸುತ್ತಿವೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಅಧಿಕಾರದ ಹಪಹಪಿಯಲ್ಲಿರುವ ಬಿಜೆಪಿಯವರು ಪಕ್ಷಕ್ಕೆ ಸೆಳೆಯುವಾಗ ಜಾಮೂನು ಕೊಡ್ತಾರೆ. ನಂತರ ವಿಷ ಕೊಡುತ್ತಾರೆ.. ಇದನ್ನು ಬಿಜೆಪಿಯವರೇ ಹೇಳಿದ್ದು ಎಂದು ಟ್ವೀಟ್ ಮಾಡಿದೆ.

ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ್ದು, ಕಾಂಗ್ರೆಸ್‌ಗೆ ನಾನು ರಾಜೀನಾಮೆ ಕೊಟ್ಟು ಬಿಜೆಪಿಗೆ ಬರುವಾಗ ಜಾಮೂನು ಕೊಟ್ಟರು. ಆದರೆ ಅಧಿಕಾರ ಮುಗಿದ ಮೇಲೆ ವಿಷ ಕೊಟ್ಟರು. ನನ್ನನ್ನ ಪಕ್ಷದಿಂದ ಹೊರಹಾಕಲು ಕೆಲವರು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆಯನ್ನು ಇಟ್ಟುಕೊಂಡು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಇದನ್ನೂ ಓದಿ: ಪಟಾಕಿ ಮಾರಾಟಕ್ಕೆ ರಾಜ್ಯ ಪೊಲೀಸ್ ಇಲಾಖೆಯಿಂದ ಹೊಸ ರೂಲ್ಸ್! – ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ

ಕಾಂಗ್ರೆಸ್‌ ಟ್ವೀಟ್‌ ನಲ್ಲಿ, ಈಗ ಬಿಜೆಪಿಯ ಜಾಮೂನು ತಿನ್ನುತ್ತಿರುವ ಕುಮಾರಸ್ವಾಮಿಯವರು ಮುಂದೆ ವಿಷ ತಿನ್ನಲು ತಯಾರಿರುವುದು ಒಳ್ಳೆಯದು! ಬಿಜೆಪಿಯವರು ಜಾಮೂನಿನ ಒಳಗೆ ವಿಷ ಬೆರೆಸಿರುತ್ತಾರೆ ಎಂಬ ಸತ್ಯ ವಲಸಿಗರಿಗೆ ಅರಿವಾಗಿದೆ. ಮುಂದೆ ಕುಮಾರಸ್ವಾಮಿಯವರಿಗೂ ಅರಿವಾಗಲಿದೆ… ಆದರೆ ಅರಿವಾಗುವುದರೊಳಗೆ ಜೆಡಿಎಸ್ ಪ್ರಾಣ ಹೋಗಿರುತ್ತದೆ ಎಂದು ಲೇವಡಿ ಮಾಡಿದೆ.

ಮತ್ತೊಂದು ಟ್ವೀಟ್‌ ನಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಬಿಜೆಪಿ ನಾಯಕರಿಗೆ, ಜೆಡಿಎಸ್ ಶಾಸಕರಿಗೆ “ಒಲ್ಲದ ಸಂಸಾರ ಒತ್ತಾಯದ ಬಾಳ್ವೆ”ಯಂತಾಗಿದೆ. ಜೆಡಿಎಸ್ ಶಾಸಕರು ಬಿಜೆಪಿಯೊಂದಿಗಿನ ಮೈತ್ರಿ ಆತ್ಮಹತ್ಯೆಗೆ ಸಮ ಎಂದು ತಿಳಿದಿದ್ದಾರೆ. ಇತ್ತ ಬಿಜೆಪಿ ನಾಯಕರು ಕುಮಾರಸ್ವಾಮಿ ನಮ್ಮ ಜಾಗವನ್ನು ಅತಿಕ್ರಮಿಸಿಸುತ್ತಿದ್ದಾರೆ ಎಂದು ಒಳಗೊಳಗೇ ಕೈ ಹಿಸುಕುತ್ತಿದ್ದಾರೆ. ಶರಣಗೌಡ ಕಂದನೂರು ಹಾಗೂ ಸದಾನಂದಗೌಡರ ಮಾತುಗಳಲ್ಲೇ ಈ ಸಂಗತಿ ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಮೈತ್ರಿಗೆ ಖಾತ್ರಿ ಇಲ್ಲದೆ ಕತ್ತರಿ ಬೀಳುವ ಕಾಲ ಸನ್ನಿಹಿತವಾಗಿದೆ ಎಂದು ಕಾಂಗ್ರೆಸ್‌ ವಂಗ್ಯವಾಡಿದೆ.

Shwetha M