ಪಟಾಕಿ ಮಾರಾಟಕ್ಕೆ ರಾಜ್ಯ ಪೊಲೀಸ್ ಇಲಾಖೆಯಿಂದ ಹೊಸ ರೂಲ್ಸ್! – ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ
ಬೆಂಗಳೂರು: ದೇಶದಾದ್ಯಂತ ದೀಪಾವಳಿ ಹಬ್ಬ ಆಚರಿಸಲಾಗುತ್ತಿದ್ದು, ಸಂಭ್ರಮ ಮನೆಮಾಡಿದೆ. ಹಬ್ಬ ಆಚರಿಸಲು ಜನರು ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡುತ್ತಿದ್ದಾರೆ. ಹೂವು, ಹಣ್ಣು, ಪಟಾಕಿಯನ್ನು ಖರೀದಿಸುತ್ತಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭ ಪಟಾಗಿ ಅವಘಡಗಳನ್ನು ತಡೆಯಲು ಸುಪ್ರೀಂಕೋರ್ಟ್ ಕೂಡ ಹಸಿರು ಪಟಾಕಿ ಮಾರಾಟ ಮಾಡುವಂತೆ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಪಟಾಕಿ ಮಾರಾಟಕ್ಕೆ ರಾಜ್ಯ ಪೊಲೀಸ್ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದೆ.
ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಸಂಭವಿಸಿದ್ದ ಎರಡು ಪಟಾಕಿ ದುರಂತದಿಂದ ಸಾವು-ನೋವುಗಳಾಗಿದ್ದವು. ಇದರಿಂದ ಎಚ್ಚೆತ್ತ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಸುಪ್ರಿಂ ಕೋರ್ಟ್ನ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಇದೀಗ ಪಟಾಕಿ ಮಾರಾಟಕ್ಕೆ ಹೊಸ ಮಾರ್ಗಸೂಚಿಯನ್ನು ರಾಜ್ಯ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ದೀಪಾವಳಿಯಂದೇ ದಾಖಲೆ ಬರೆಯಲಿದೆ ಅಯೋಧ್ಯೆ ರಾಮಮಂದಿರ – ರಾಮನಗರಿಯನ್ನು ಬೆಳಗಲಿವೆ 24 ಲಕ್ಷ ದೀಪಗಳು!
- ರಾಜ್ಯ ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ ಸುತ್ತೋಲೆಯ ನಿಬಂಧನೆಗಳು ಮತ್ತು ಷರತ್ತುಗಳು ಹೀಗಿವೆ..
- ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು.
- ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ ಇರಬೇಕು ಹಾಗೂ ಕ್ಯೂಆರ್ ಕೋಡ್ ಸಹ ಇರಬೇಕು.
- ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು.
- ಮಳಿಗೆಗಳನ್ನು ನಿರ್ಮಿಸಲು ಉಪಯೋಗಿಸುವ ಸಾಧನಗಳು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ರೀತಿಯದ್ದಾಗಿರಬಾರದು. ಸಾಧ್ಯವಾದರೆ ಬೆಂಕಿಯನ್ನು ತಡೆಗಟ್ಟುವ ಸಾಧನಗಳನ್ನೇ ನಿರ್ಮಾಣಕ್ಕೆ ಉಪಯೋಗಿಸಬೇಕು.
- ಪ್ರತಿಯೊಂದು ಮಳಿಗೆಗೆ ಮುಂದಿನಿಂದ ಹಾಗೂ ಹಿಂದಿನಿಂದ ಪ್ರವೇಶಿಸುವ ವ್ಯವಸ್ಥೆ ಇರಬೇಕು. ಇದರಿಂದ ಅಪಘಾತ ಸಂದರ್ಭದಲ್ಲಿ ಮಳಿಗೆಗಳನ್ನು ಪರಿಸ್ಥಿತಿಗನುಗುಣವಾಗಿ ಪ್ರವೇಶಿಸಿ, ಒಳಗಿದ್ದವರನ್ನು ರಕ್ಷಿಸಬಹುದು ಹಾಗೂ ಅವಶ್ಯಕತೆ ಬಿದ್ದರೆ ಮಳಿಗೆಗಳನ್ನು ಒಡೆದು ಒಳ ಪ್ರವೇಶಿಸಬಹುದು.
- ಪ್ರತಿಯೊಂದು ಮಳಿಗೆಗಳ ಗಾತ್ರ 10 x 10 ಅಡಿಗೆ ಸೀಮಿತಗೊಳಿಸಿರಬೇಕು ಮತ್ತು ಒಳಗೆ ಯಾವುದೇ ಹೆಚ್ಚಿನ ದಾಸ್ತಾನಿನ ವ್ಯವಸ್ಥೆ ಇರಬಾರದು.
- ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ 3 ಮೀಟರ್ ಅಂತರವಿರಬೇಕು ಹಾಗೂ ಮಾರಾಟ ಮಳಿಗೆಯು ಯಾವುದೇ ರಕ್ಷಿತ ಕಾರ್ಯದಿಂದ ಅಥವಾ ಸ್ಥಳದಿಂದ 50 ಮೀಟರ್ ದೂರದಲ್ಲಿರಬೇಕು.
- ಪ್ರತಿಯೊಂದು ಮಳಿಗೆಗಳಲ್ಲಿ ಕಚೇರಿಯಿಂದ ನೀಡಿರುವ ಪರವಾನಿಗೆ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು.
- ಕಚೇರಿಯಿಂದ ಪರವಾನಿಗೆ ಪತ್ರ ಪಡೆದಿರುವವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು.
- ಮಾರಾಟ ಮಳಿಗೆಗಳಲ್ಲಿ ಭಾರತೀಯ ತಯಾರಿಕಾ ಕಂಪನಿಗಳ ಪಟಾಕಿಗಳನ್ನು ಮಾತ್ರ ಮಾರಾಟ ಮಾಡುವುದು. ವಿದೇಶಿ ತಯಾರಿಕ ಪಟಾಕಿಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿದೆ.
- ಪ್ರತಿಯೊಂದು ಮಳಿಗೆಗಳಲ್ಲಿ ಕೆಳಗೆ ಸೂಚಿಸಿರುವ ಅಗ್ನಿ ನಿವಾರಣಾ ಹಾಗೂ ಅಗ್ನಿಶಮನ ವ್ಯವಸ್ಥೆ ಇರಬೇಕು.
- ಪ್ರತಿಯೊಂದು ಮಳಿಗೆಯಲ್ಲಿ ಒಂದು 9 ಲೀಟರ್ ಸಾಮರ್ಥ್ಯದ ವಾಟರ್ ಪ್ರಜರ್ ಮಾದರಿ ಅಗ್ನಿನಂದಕ ಹಾಗೂ ಎರಡು ಬಕೆಟ್‌ಗಳಲ್ಲಿ ನೀರನ್ನು ಇಟ್ಟಿರಬೇಕು.
- ಪ್ರತಿಯೊಂದು ಮಳಿಗೆ ಪಕ್ಕದಲ್ಲಿ ಎರಡು ಡ್ರಮ್‌ನಲ್ಲಿ ಕನಿಷ್ಟ 400 ಲೀಟರ್ ನೀರನ್ನು ಶೇಖರಿಸಿಟ್ಟಿರಬೇಕು ಹಾಗೂ ಬೆಂಕಿ ನಂದಿಸಲು ಸಾಕಷ್ಟು ಮರಳನ್ನು ಶೇಖರಿಸಿ ಇಟ್ಟಿರಬೇಕು.
- ಮಳಿಗೆಯಲ್ಲಿ ಅಡಿಗೆ ಅಥವಾ ಧೂಮಪಾನಕ್ಕೆ ಅವಕಾಶ ನೀಡಬಾರದು ಸಂಬಂಧಿತ ಸೂಚನಾ ಫಲಕವನ್ನು ಹಾಕಿರಬೇಕು.
- ಪಟಾಕಿಗಳನ್ನು ಹಗಲಿನ ವೇಳೆಯಲ್ಲಿ ಮಾತ್ರ ಮಾರಾಟ ಮಾಡುವುದು.
- ರಾತ್ರಿ ವೇಳೆ ಮಳಿಗೆಯಲ್ಲಿ ಯಾರು ಮಲಗದಂತೆ ನೋಡಿಕೊಳ್ಳತಕ್ಕದ್ದು.
- ಮಾರಾಟ ಮಳಿಗೆಗಳಲ್ಲಿ ಸೂಕ್ತ ಎಲೆಕ್ಟ್ರಿಕಲ್ ವೈರಿಂಗ್ ಮತ್ತು ಫಿಟಿಂಗ್ಸ್ ವ್ಯವಸ್ಥೆ ಮಾಡಿಕೊಳ್ಳುವುದು.
- ಪರವಾನಿಗೆದಾರರು ಕಚೇರಿಯಿಂದ ನೀಡಿರುವ ಪರವಾನಗಿಯಲ್ಲಿ ನಿಗಧಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು ಬೇರೆ ಸ್ಥಳದಲ್ಲಿ ಮತ್ತು ದಿನಾಂಕಗಳಲ್ಲಿ ಮಳಿಗೆ ಹಾಕಬಾರದು.
ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಸೂಚನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆ ಸುತ್ತೋಲೆ ಹೊರಡಿಸಿದೆ.