ಭಾರತದ ಮೋಸ್ಟ್ ವಾಂಟೆಡ್ ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್ ಅಕ್ರಮ್ ಘಾಜಿ ಹತ್ಯೆ
ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮಾಜಿ ಕಮಾಂಡರ್ ಅಕ್ರಮ್ ಖಾನ್ ಅಲಿಯಾಸ್ ಅಕ್ರಮ್ ಘಾಜಿ ಎಂಬಾತನನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಒಂದು ವಾರದ ಅವಧಿಯಲ್ಲಿ ನಡೆದ ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಎರಡನೇ ಹತ್ಯೆ ಇದಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಬಜೌರ್ ಜಿಲ್ಲೆಯಲ್ಲಿ ಅಕ್ರಮ್ ಖಾನ್ ನನ್ನು ಹತ್ಯೆ ಮಾಡಲಾಗಿದೆ. ಗುರುವಾರ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗನ್ನಿಂದ ಶೂಟ್ ಮಾಡಿ ಕೊಂದಿದ್ದಾರೆ. ಬಳಿಕ ಆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಅಕ್ರಮ್ ಖಾನ್ ಯಾರು?
ಅಕ್ರಮ್ ಖಾನ್ ಅಲಿಯಾಸ್ ಘಾಜಿ 2018-2020 ರ ಅವಧಿಯಲ್ಲಿ ಲಷ್ಕರ್ಗೆ ಉನ್ನತ ನೇಮಕಾತಿದಾರರಲ್ಲಿ ಒಬ್ಬನಾಗಿದ್ದ. ಕಳೆದ ಎರಡು ವರ್ಷಗಳಲ್ಲಿ ಕಾಶ್ಮೀರ ಕಣಿವೆಗೆ ಅನೇಕ ಬ್ಯಾಚ್ಗಳಲ್ಲಿ ನುಸುಳಿದ ಹಲವಾರು ಭಯೋತ್ಪಾದಕರ ಜವಾಬ್ದಾರಿಯನ್ನು ಹೊತ್ತಿದ್ದ. ಈ ವೇಳೆ ಉಗ್ರ ಸಂಘಟನೆಗೆ ಬೇಕಾದ ಯುವಕರನ್ನು ಉದ್ಯೋಗದ ಹೆಸರಲ್ಲಿ ನೇಮಕ ಮಾಡಿಕೊಂಡು ಅವರಿಗೆ ಭಯೋತ್ಪಾದನೆ ಬಗ್ಗೆ ತರಬೇತಿ ಕೊಡುತ್ತಿದ್ದನು ಎನ್ನಲಾಗಿದೆ.
ಇದನ್ನೂ ಓದಿ: ಪೀಣ್ಯ ಮೇಲ್ಸೇತುವೆ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್ – ಏಪ್ರಿಲ್ವರೆಗೂ ಮೇಲ್ಸೇತುವೆಗೆ ನೋ ಎಂಟ್ರಿ..!
ಜಮ್ಮು ಮತ್ತು ಕಾಶ್ಮೀರದಲ್ಲಿ 2018 ರ ಸುಂಜ್ವಾನ್ ಭಯೋತ್ಪಾದನಾ ದಾಳಿಯ ಮಾಸ್ಟರ್ಮೈಂಡ್ಗಳಲ್ಲಿ ಒಬ್ಬನಾಗಿದ್ದ ಖ್ವಾಜಾ ಶಾಹಿದ್ನನ್ನು ಭಾನುವಾರ ಅಪಹರಿಸಲಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಶಿರಚ್ಛೇದ ಮಾಡಲಾಗಿತ್ತು. ಈ ಹತ್ಯೆ ಸಂಭವಿಸಿದ ಒಂದು ವಾರಲ್ಲೇ ಅಕ್ರಮ್ ಖಾನ್ ನನ್ನು ಹತ್ಯೆ ಮಾಡಲಾಗಿದೆ. ಘಾಜಿ ಹತ್ಯೆಯಲ್ಲಿ ವಿವಿಧ ಭಯೋತ್ಪಾದಕ ಗುಂಪುಗಳು ಸೇರಿದಂತೆ ಸ್ಥಳೀಯ ವಿರೋಧಿಗಳ ಪಾತ್ರ ಇರಬಹುದು ಎನ್ನಲಾಗಿದೆ. ಘಾಜಿ ಲಷ್ಕರ್ನ ಕೇಂದ್ರ ನೇಮಕಾತಿ ಸೆಲ್ನ ಪ್ರಮುಖ ಸದಸ್ಯನಾಗಿದ್ದ. ಭಾರತದ ವಿರುದ್ಧ ದ್ವೇಷ ತುಂಬಿದ ಭಾಷಣಗಳಿಗೆ ಹೆಸರುವಾಸಿಯಾಗಿದ್ದ.