ಇಸ್ರೇಲ್ ಶತ್ರುಗಳಿಗೆ ಕ್ಷಿಪಣಿಗಳನ್ನು ಕಳುಹಿಸಿದೆಯಾ ರಷ್ಯಾ – ಹೆಜ್ಬುಲ್ಲಾ ಬೆನ್ನಿಗೆ ನಿಂತಿದ್ದೇಕೆ ವ್ಯಾಗ್ನರ್?

ಇಸ್ರೇಲ್ ಶತ್ರುಗಳಿಗೆ ಕ್ಷಿಪಣಿಗಳನ್ನು ಕಳುಹಿಸಿದೆಯಾ ರಷ್ಯಾ – ಹೆಜ್ಬುಲ್ಲಾ ಬೆನ್ನಿಗೆ ನಿಂತಿದ್ದೇಕೆ ವ್ಯಾಗ್ನರ್?

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಭಯಾನಕ ರೂಪ ಪಡೆಯುತ್ತಿದೆ. ಎರಡು ರಾಷ್ಟ್ರಗಳ ನಡುವಿನ ಸಂಘರ್ಷ ಇತರೆ ದೇಶಗಳಿಗೆ ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ. ಈಗಾಗಲೇ ಯೆಮೆನ್ ದೇಶ ಹಮಾಸ್ ಪರವಾಗಿ ಯಹೂದಿಗಳ ನಾಡಿನ ಮೇಲೆ ಮಿಸೈಲ್ ದಾಳಿ ಆರಂಬಿಸಿದೆ. ಮತ್ತೊಂದೆಡೆ ಗಲ್ಫ್ ರಾಷ್ಟ್ರಗಳು ಯಾವ ಕ್ಷಣದಲ್ಲಿ ಬೇಕಾದ್ರೂ ಯುದ್ಧಕ್ಕೆ ಧುಮುಕಲು ತುದಿಗಾಲಲ್ಲಿ ನಿಂತಿವೆ. ಇಂಥಾ ಟೈಮಲ್ಲೇ ರಷ್ಯಾದ ವ್ಯಾಗ್ನರ್ ಪಡೆ ಫುಲ್ ಌಕ್ಟಿವ್ ಆಗಿದೆ. ಇಸ್ರೇಲ್ ವಿರುದ್ಧ ಬುಸುಗುಡುತ್ತಿರುವ ಲೆಬೆನಾನ್ ನ ಹಿಜ್ಬುಲ್ಲಾ ಸಂಘಟನೆಗೆ ರಕ್ಷಣಾ ನೆರವು ನೀಡಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಯುದ್ಧ ನಡೆಯುತ್ತಿರೋದು ಇಸ್ರೇಲ್-ಹಮಾಸ್ ನಡುವೆಯೇ ಆದ್ರೂ ಹಲವು ರಾಷ್ಟ್ರಗಳು ಚಳಿ ಕಾಯಿಸಿಕೊಳ್ತಿವೆ. ಜಗತ್ತಿನ ಬಲಾಡ್ಯ ರಾಷ್ಟ್ರಗಳು ಎರಡೂ ದೇಶಗಳ ಬೆನ್ನಿಗೆ ನಿಂತು ತಮ್ಮ ಬೇಳೆ ಬೇಯಿಸಿಕೊಳ್ತಿವೆ. ಯುದ್ಧಕ್ಕೆ ಬೇಕಾಗುವ ಮಿಲಿಟರಿ ಸಹಾಯ ಮಾಡುವ ಮೂಲಕ ಎರಡು ದೇಶಗಳ ನಡುವಿನ ಯುದ್ಧವನ್ನ ಜಗತ್ತಿಗೆ ಹಬ್ಬಿಸೋಕೆ ಏನೇನೋ ಬೇಕೋ ಎಲ್ಲವನ್ನೂ ಮಾಡುತ್ತಿದ್ದಾರೆ. ಬಲಿಷ್ಠ ಸೇನಾಸಾಮರ್ಥ್ಯ ಹೊಂದಿರುವ ಇಸ್ರೇಲ್​ ಇಡೀ ಗಾಜಾಪಟ್ಟಿಯನ್ನ ಸುತ್ತುವರಿದಿದೆ. ಯಹೂದಿಗಳ ನಾಡಿಗೆ ವಿಶ್ವದ ದೊಡ್ಡಣ್ಣ ಅಮೆರಿಕ ಬೆನ್ನುಲುಬಾಗಿ ನಿಂತಿದ್ದಾರೆ. ಮತ್ತೊಂದೆಡೆ ಹಮಾಸ್ ಪರ ಗಲ್ಫ್ ರಾಷ್ಟ್ರಗಳು ಸೇರಿದಂತೆ ಅಮೆರಿಕದ ಬದ್ಧ ವೈರಿಗಳ ಕೂಟ ಬೆಂಬಲ ನೀಡುತ್ತಿದೆ. ಜೊತೆಗೆ ರಷ್ಯಾ, ಚೀನಾ, ಉತ್ತರ ಕೊರಿಯಾ ರಾಷ್ಟ್ರಗಳು ಪ್ಯಾಲೆಸ್ತೀನ್ ಪರ ಒಲವು ತೋರಿಸಿವೆ. ಇದೀಗ ರಷ್ಯಾದ ವ್ಯಾಗ್ನರ್ ಪಡೆ ಹಿಜ್ಬುಲ್ಲಾ ಸಂಘಟನೆಗೆ ನೆರವು ನೀಡಲು ಹೊರಟಿದೆ. ಇದೇ ನೆರವು ಹತ್ತಾರು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.

ಇದನ್ನೂ ಓದಿ : ಹಿರೋಶಿಮಾ ಬಾಂಬ್ ಗಿಂತ 24 ಪಟ್ಟು ಶಕ್ತಿಶಾಲಿ ಪರಮಾಣು ಬಾಂಬ್ – ‘ರಷ್ಯಾ, ಚೀನಾ’ ಅಮೆರಿಕ ಟಾರ್ಗೆಟ್?

ರಷ್ಯಾದ ಅರೆ ಮಿಲಿಟರಿ ಸಂಘಟನೆಯಾಗಿರುವ ವ್ಯಾಗ್ನರ್ ಗುಂಪು ಲೆಬನಾನ್​ನ ಮಿಲಿಟರಿ ಸಂಘಟನೆಯಾದ ಹೆಜ್ಬುಲ್ಲಾಗೆ ವಾಯು ರಕ್ಷಣಾ ವ್ಯವಸ್ಥೆ ಪೂರೈಕೆ ಮಾಡಲಿದೆ. ಹೆಜ್ಬುಲ್ಲಾಗೆ ಎಸ್ ಎ-22 ಎಂಬ ವ್ಯವಸ್ಥೆಯನ್ನು ಒದಗಿಸಲು ಸಜ್ಜಾಗಿದೆ. ಈ ಆಯುಧಗಳು ವಿಮಾನಗಳನ್ನು ಹೊಡೆದುರುಳಿಸಲು ಆ್ಯಂಟಿ ಏರ್‌ ಕ್ರಾಫ್ಟ್ ಕ್ಷಿಪಣಿಗಳು ಹಾಗೂ ವಾಯು ರಕ್ಷಣಾ ಬಂದೂಕುಗಳನ್ನ ಪೂರೈಸುವ ಒಪ್ಪಂದ ಮಾಡಿಕೊಂಡಿದ್ಯಂತೆ.  ವ್ಯಾಗ್ನರ್ ಮತ್ತು ಹೆಜ್ಬುಲ್ಲಾಗಳ ನಡುವೆ ನಡೆಯುತ್ತಿರುವ ಮಾತುಕತೆ ಮೇಲೆ ಅಮೆರಿಕದ ಅಧಿಕಾರಿಗಳು ತೀವ್ರ ನಿಗಾ ಇಟ್ಟಿದ್ದಾರೆ. ಹಾಗೂ ಎರಡೂ ಸಂಘಟನೆಗಳ ನಡುವಿನ ಸಂಭಾವ್ಯ ಸಶಸ್ತ್ರ ಒಪ್ಪಂದದ ಕುರಿತು ಅಮೆರಿಕ ಅಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕಾದ ಶ್ವೇತ ಭವನದ ರಾಷ್ಟ್ರೀಯ ಸುರಕ್ಷತಾ ಸಮಿತಿ ವಕ್ತಾರೆ ಆಡ್ರೀನ್ ವ್ಯಾಟ್ಸನ್ ಅವರು ಹೆಜ್ಬುಲ್ಲಾ ಸಂಘಟನೆಗೆ ವ್ಯಾಗ್ನರ್ ಪಡೆ ಶಸ್ತ್ರಾಸ್ತ್ರಗಳನ್ನು ವರ್ಗಾವಣೆ ಮಾಡಿದೆ ಎಂದು ಆರೋಪಿಸಿದ್ದಾರೆ. ಆದ್ರೆ ಈ ವಿಚಾರವಾಗಿ ರಷ್ಯಾ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಸಲಿಗೆ ಈ ಹಿಜ್ಬುಲ್ಲಾ ಪಡೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಿತ್ರರಾಗಿರುವ ಸಿರಿಯಾ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ಅವರನ್ನು ಬೆಂಬಲಿಸುವಲ್ಲಿ ಸಕ್ರಿಯ ಪಾತ್ರ ನಿರ್ವಹಿಸಿತ್ತು. ಇದೇ ವ್ಯಾಗ್ನರ್ ಗ್ರೂಪ್ ಹೆಜ್ಬುಲ್ಲಾಗಳಿಗೆ ಬೆಂಬಲವಾಗಿ ನಿಲ್ಲುತ್ತಿದೆ ಎನ್ನಲಾಗಿದೆ. ವಿದೇಶಾಂಗ ನೀತಿ ತಜ್ಞರ ಪ್ರಕಾರ, ಇರಾನಿನ ಬೆಂಬಲ ಹೊಂದಿರುವ ಹೆಜ್ಬುಲ್ಲಾದಂತಹ ಮಿಲಿಟರಿ ಗುಂಪಿಗೆ ರಷ್ಯನ್ ವಾಯು ರಕ್ಷಣಾ ವ್ಯವಸ್ಥೆಗಳನ್ನು ಒದಗಿಸುವುದು ಒಂದು ರೀತಿ ಇರಾನ್ ಒದಗಿಸಿರುವ ಸಹಕಾರಕ್ಕೆ ರಷ್ಯಾ ಕೊಡುಗೆ ನೀಡಿದಂತೆ ಕಾಣುತ್ತದೆ ಎಂದಿದ್ದಾರೆ. ಇಸ್ರೇಲ್ ಮೇಲೆ ಕೆಂಡ ಕಾರುತ್ತಿರುವ ಹೆಜ್ಬುಲ್ಲಾ ಸಂಘಟನೆ ಉತ್ತರ ಗಡಿ ಭಾಗದಿಂದ ದಾಳಿ ನಡೆಸುವ ಸಾಧ್ಯತೆ ಇದ್ದು, ಇದನ್ನ ತಡೆಯಲು ಪೂರ್ವ ಮೆಡಿಟರೇನಿಯನ್ ಭಾಗದಲ್ಲಿ ಅಮೆರಿಕ ಯುದ್ಧ ನೌಕೆಗಗಳನ್ನು ನಿಯೋಜನೆ ಮಾಡಿದೆ. ಮತ್ತೊಂದೆಡೆ ಹಮಾಸ್ ಮೇಲಿನ ಇಸ್ರೇಲ್ ದಾಳಿಯನ್ನ ರಷ್ಯಾ ಆರಂಭದಿಂದಲೂ ವಿರೋಧಿಸುತ್ತಲೇ ಬರುತ್ತಿದೆ. ಇತ್ತೀಚೆಗಷ್ಟೇ ಮಾಸ್ಕೋದಲ್ಲಿ ಹಮಾಸ್ ಅಧಿಕಾರಿಗಳಿಗೆ ಆತಿಥ್ಯವನ್ನೂ ನೀಡಲಾಗಿತ್ತು. ಇಸ್ರೇಲ್​ಗೆ ವೈರಿಗಳು ಹೆಚ್ಚಾದಂತೆಲ್ಲಾ ಅಮೆರಿಕ ಕೈ ಕಟ್ಟಿ ಕೂರುತ್ತಿಲ್ಲ. ಮೊದಲ ದಿನದಿಂದಲೂ ಇಸ್ರೇಲ್ ಪರ ಗಟ್ಟಿಯಾಗಿ ನಿಂತಿರುವ ಅಮೆರಿಕ ಮಿಲಿಟರಿ ನೆರವು ನೀಡಲು ಮೂಲಕ ಮತ್ತಷ್ಟು ಬಲ ಹೆಚ್ಚಿಸುತ್ತಿದೆ. ಬೃಹತ್ ನೆರವು ಘೋಷಣೆ ಮಾಡಿದೆ.

ಹಮಾಸ್‌ ವಿರುದ್ಧ ಹೋರಾಡುತ್ತಿರುವ ಇಸ್ರೇಲ್‌ ಗೆ 14.5 ಬಿಲಿಯನ್‌ ಅಮೆರಿಕನ್‌ ಡಾಲರ್‌ ಅಂದ್ರೆ ಭಾರತೀಯ ಕರೆನ್ಸಿ ಪ್ರಕಾರ 1.19 ಲಕ್ಷ ಕೋಟಿ ರೂಪಾಯಿಯ ಮಿಲಿಟರಿ ನೆರವು ನೀಡೋದಾಗಿ ಘೋಷಣೆ ಮಾಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಡಳಿತ ಇಸ್ರೇಲ್‌ಗೆ ಮಿಲಿಟರಿ ನೆರವು ನೀಡುವ ಸಂಬಂಧ ಹೌಸ್‌ ಆಫ್‌ ರೆಪ್ರೆಸೆಂಟಿಟಿವ್ಸ್ ಸಭೆಯಲ್ಲಿ ವಿಧೇಯಕ ಮಂಡಿಸಿತ್ತು. ಸ್ಪೀಕರ್‌ ಮೈಕ್‌ ಜಾನ್ಸನ್‌ ಮಂಡಿಸಿದ ಪ್ರಸ್ತಾವಕ್ಕೆ ಜನಪ್ರತಿನಿಧಿ ಸಭೆಯಿಂದ ಅಂಗೀಕಾರ ದೊರೆತಿದೆ. ಸೆನೆಟ್‌ ವಿಧೇಯಕಕ್ಕೆ ಅನುಮೋದನೆ ನೀಡದಿದ್ದರೆ ‘ವಿಟೋ’ ಅಧಿಕಾರ ಬಳಸೋದಾಗಿ ಅಧ್ಯಕ್ಷ ಬೈಡೆನ್ ಎಚ್ಚರಿಕೆ ನೀಡಿದ್ದರು. ಪರಿಣಾಮ ಜನ ಪ್ರತಿನಿಧಿ ಸಭೆಯಲ್ಲಿ 226-196 ಮತಗಳಿಂದ ವಿಧೇಯಕ ಅಂಗೀಕಾರಗೊಂಡಿದೆ.

ಇನ್ನು ಇಸ್ರೇಲ್ ಗೆ ನೆರವು ನೀಡಲು ಅಮೆರಿಕ ಸಂಸತ್ ಒಪ್ಪಿಗೆ ನೀಡಿದ್ರೂ ಕೂಡ ಗದ್ದಲ ಉಂಟಾಗಿದೆ. ಅಮೆರಿಕದ ಹೌಸ್ ಆಫ್ ಕಾಮನ್ಸ್ ನಲ್ಲಿ ನಿರ್ಣಯವನ್ನ ಅಂಗೀಕರಿಸಿದ್ರೂ ಕೂಡ ಸೆನೆಟ್​ನಲ್ಲಿ ಭಾರೀ ವಾಗ್ದಾಳಿಗಳೇ ನಡೆದಿವೆ. ಮಸೂದೆಗೆ ಡೆಮಾಕ್ರಟಿಕ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಇಸ್ರೇಲ್​ಗೆ ಅಮೆರಿಕ ನೀಡುತ್ತಿರುವ ನೆರವು ನಿಲ್ಲಿಸಬೇಕು. ಸಂಘರ್ಷವನ್ನು ನಿಲ್ಲಿಸಬೇಕೆಂದು  ಅಮೆರಿಕದಲ್ಲಿ ಪ್ರತಿಭಟನೆಗಳು ಜೋರಾಗುತ್ತಿವೆ. ಇಸ್ರೇಲ್‌ಗೆ ನೆರವು ನೀಡಲು ಶಸ್ತ್ರಾಸ್ತ್ರ ಮತ್ತು ಇತರೆ ಸಾಮಗ್ರಿಗಳನ್ನು ತುಂಬಿಕೊಂಡು ಹೊರಡಲು ಸಿದ್ಧವಾಗಿದ್ದ ಅಮೆರಿಕದ ಹಡಗು, ಇಸ್ರೇಲ್‌ಗೆ ತೆರಳದಂತೆ ತಡೆಯಲಾಗಿದೆ. ಹಡಗಿನಲ್ಲಿ ನೇತಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್ ಬಂದರಿನಲ್ಲಿ ಯುದ್ಧ ಸಾಮಗ್ರಿಯೊಂದಿಗೆ ತೆರಳುತ್ತಿದ್ದ ಅಮೆರಿಕ ಸೇನೆಗೆ ಅಡ್ಡಿಪಡಿಸಿದ್ದಾರೆ.  ಅಮೆರಿಕವು ಗಾಜಾದ ಅಮಾಯಕರನ್ನು ಕೊಲ್ಲಲು ಇಸ್ರೇಲ್‌ಗೆ ನೆರವು ನೀಡುತ್ತಿದೆ. ಇಸ್ರೇಲ್‌ಗೆ ಈ ನೆರವು ಸಿಗಬಾರದು. ಸಂಘರ್ಷ ನಿಲ್ಲಿಸಲು ಅಮೆರಿಕವು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತೊಂದೆಡೆ ಉಕ್ರೇನ್ ಮೇಲೆ 2022ರ ಫೆಬ್ರವರಿಯಿಂದಲೂ ಯುದ್ಧ ನಡೆಸುತ್ತಿರುವ ರಷ್ಯಾ ಈಗಾಗಲೇ ಅರ್ಧ ಸೋತು ಹೋಗಿದೆ. ತನ್ನ ಬಳಿಯೇ ಶಸ್ತ್ರಾಸ್ತ್ರಗಳಿಲ್ಲದೆ ತನ್ನ ಮಿತ್ರರಾಷ್ಟ್ರಗಳ ಮೊರೆ ಹೋಗ್ತಿದೆ. ಇಷ್ಟಾದ್ರೂ ಇಸ್ರೇಲ್ ವಿರುದ್ಧ ಹೋರಾಡುತ್ತಿರುವ ಸಂಘಟನೆಗಳಿಗೆ ಬೆಂಬಲ ನೀಡಲು ಹೊರಟಿದೆ. ಆದ್ರೆ ರಷ್ಯಾವನ್ನ ಬಗ್ಗುಬಡಿಯಲು ಮತ್ತೊಂದು ತಂತ್ರ ರೂಪಿಸಿರುವ ಅಮೆರಿಕ ಉಕ್ರೇನ್ ಬಲಪಡಿಸಲು ಹೊರಟಿದೆ. ನೂರಾರು ಮಿಲಿಯನ್ ಮಿಲಿಟರಿ ನೆರವು ಪ್ಯಾಕೇಜ್ ಘೋಷಣೆಗೆ ಸಿದ್ಧವಾಗಿದೆ. ರಷ್ಯಾ ವಿರುದ್ಧ ಹೋರಾಡುತ್ತಿರುವ ಉಕ್ರೇನ್ ಗೆ ಅಮೆರಿಕ ಡ್ರೋನ್ ರಾಕೆಟ್‌ ಗಳು ಮತ್ತು ಯುದ್ಧಸಾಮಗ್ರಿಗಳ ಮಿಲಿಟರಿ ವಿಶೇಷ ಪ್ಯಾಕೇಜ್ ನೀಡಲು ಮುಂದಾಗಿದೆ. ಉಕ್ರೇನ್‌ ಗೆ 425 ಮಿಲಿಯನ್ ಮೌಲ್ಯದ ಮಿಲಿಟರಿ ನೆರವು ಪ್ಯಾಕೇಜ್ ಘೋಷಣೆಗೆ ಬೈಡೆನ್ ಆಡಳಿತ ಯೋಜಿಸಿದೆ ಎಂದು ಅಮೆರಿಕದ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಹಾರಿಸುತ್ತಿರುವ ಡ್ರೋನ್‌ ಗಳನ್ನು ಹೊಡೆದುರುಳಿಸಲು 300 ಮಿಲಿಯನ್ ಮೌಲ್ಯದ ಲೇಸರ್-ಮಾರ್ಗದರ್ಶಿತ ಯುದ್ಧಸಾಮಗ್ರಿಗಳನ್ನ ಅಮೆರಿಕ ಉಕ್ರೇನ್ ಗೆ ನೀಡುತ್ತಿದೆ. ಹಾಗೇ 125 ಮಿಲಿಯನ್ ಮೌಲ್ಯದ ವಾಯು ಕ್ಷಿಪಣಿ, ವಾಯು ರಕ್ಷಣೆಗಾಗಿ ಹೆಚ್ಚುವರಿ ಯುದ್ಧಸಾಮಗ್ರಿಮ, ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್ಸ್, 105 ಮತ್ತು 155 ಮಿಲಿಮೀಟರ್ ಫಿರಂಗಿ, ಸಣ್ಣ ಶಸ್ತ್ರಾಸ್ತ್ರಗಳು ಮತ್ತು 12 ಟ್ರಕ್‌ ಗಳನ್ನು ಉಕ್ರೇನ್ ಗೆ ನೀಡಲು ಅಮೆರಿಕ ನಿರ್ಧರಿಸಿದೆ.

ಫೆಬ್ರವರಿಯಲ್ಲಿ ಉಕ್ರೇನ್ ಮತ್ತು ರಷ್ಯಾ ಯುದ್ಧ ಆರಂಭವಾದ ಬಳಿಕ ಅಮೆರಿಕ ಈವರೆಗೂ ಸುಮಾರು 44 ಶತಕೋಟಿ ಮೌಲ್ಯದ ಭದ್ರತಾ ಸಹಾಯವನ್ನು ಉಕ್ರೇನ್‌ ಗೆ ಕಳುಹಿಸಿದೆ. ಆದ್ರೆ ಇಷ್ಟೊಂದು ಪ್ರಮಾಣದ ನೆರವು ನೀಡಲು ಮುಂದಾಗಿರುವ ಬೈಡೆನ್ ಸರ್ಕಾರದ ವಿರುದ್ಧ ಅಪಸ್ವರವೂ ಕೇಳಿ ಬಂದಿದೆ. ಇಷ್ಟಾದ್ರೂ ಅಮೆರಿಕ ಮಾತ್ರ ಮಿಲಿಟರಿ ನೆರವು ನೀಡೋದನ್ನ ನಿಲ್ಲಿಸುತ್ತಿಲ್ಲ. ಮತ್ತೊಂದೆಡೆ ರಷ್ಯಾ ಕೂಡ ಹಮಾಸ್ ಪರ ಆಟಕ್ಕೆ ಇಳಿದಿದೆ. ಹೀಗಾಗಿ ಇಸ್ರೇಲ್ – ಪ್ಯಾಲೆಸ್ತೀನ್ ಯುದ್ಧ ಕೇವಲ ಎರಡು ರಾಷ್ಟ್ರಗಳಿಗೆ ಸೀಮಿತವಾಗಿ ಉಳಿಯದೇ ಇತರೆ ರಾಷ್ಟ್ರಗಳಿಗೂ ಹಬ್ಬುತ್ತಿರುವುದು ಆತಂಕ ಮೂಡಿಸಿದೆ.

Shantha Kumari