ಕರುನಾಡು ಎಂದೆಂದಿಗೂ ಮರೆಯದ ಮಹಾಪುರುಷ -ರಾ.ಹಾ ದೇಶಪಾಂಡೆ ಬಗ್ಗೆ ನಿಮಗೆಷ್ಟು ಗೊತ್ತು?
ಕರುನಾಡು ಎಂದೆಂದಿಗೂ ನೆನಪಿಟ್ಟುಕೊಳ್ಳುವ ಮತ್ತೊಬ್ಬ ಮಹಾಪುರುಷ ಅಂದರೆ ರಾ.ಹಾ ದೇಶಪಾಂಡೆ. ‘ಸಿರಿಗನ್ನಡಂ ಗೆಲ್ಗೆ’ ಎಂಬ ಕನ್ನಡ ಅಭಿಮಾನದ ಮಂತ್ರವನ್ನು ನಾಡಿಗೆ ನೀಡಿದವರು ಇವರೆ. ರಾ.ಹ.ದೇಶಪಾಂಡೆಯವರು ಕನ್ನಡ ಭಾಷೆಗಾಗಿ, ಕರ್ನಾಟಕಕ್ಕೆ ದುಡಿದ ಮಹಾಶಕ್ತಿ.
ಇದನ್ನೂ ಓದಿ: ಧಾರವಾಡದಲ್ಲಿ ಮೊಳಗಿತ್ತು ಕನ್ನಡದ ಕಹಳೆ – ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯೊಂದಿಗೆ ಏಕೀಕರಣ ಚಳುವಳಿ
‘ಸಿರಿಗನ್ನಡಂ ಗೆಲ್ಗೆ’ ಎಂದು ನಾವು ಹೇಳುವ ಹೆಮ್ಮೆಯ ಘೋಷವಾಕ್ಯ. ಈ ಮಂತ್ರವನ್ನು ಮೊದಲು ಉದ್ಘೋಷಿಸಿದವರು ರಾಮಚಂದ್ರ ಹಣಮಂತರಾಯ ದೇಶಪಾಂಡೆ. ರಾ.ಹ ದೇಶಪಾಂಡೆ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಜನಿಸಿದರು. ಉತ್ತರ ಕರ್ನಾಟಕದಲ್ಲಿ ಕನ್ನಡದ ಧ್ವನಿಯಾಗುವಂತಹ ಸಂಸ್ಥೆಯೊಂದನ್ನು ಕಟ್ಟಲು ಸತತ ಪರಿಶ್ರಮಪಟ್ಟಿದ್ದರು. ರಾ.ಹ.ದೇಶಪಾಂಡೆಯವರ ಪರಿಶ್ರಮದ ಫಲಶ್ರುತಿಯಾಗಿ 1890ರ ವರ್ಷದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಸ್ಥಾಪನೆಗೊಂಡಿತು. ರಾ. ಹ. ದೇಶಪಾಂಡೆ ಅವರು ಆ ಸಂಸ್ಥೆಯ ಪ್ರಥಮ ಕಾರ್ಯದರ್ಶಿಗಳಾದರು. ಮೊದಮೊದಲು ತಮ್ಮ ಪತ್ರವ್ಯವಹಾರಗಳಲ್ಲೆಲ್ಲಾ ಕನ್ನಡ ಬೆಳೆಯಲಿ ಎನ್ನುವ ಘೋಷವಾಕ್ಯವನ್ನು ಬರೆಯುತ್ತಿದ್ದರು. ನಂತರ 1893ರಲ್ಲಿ ಸಿರಿಗನ್ನಡಂ ಗೆಲ್ಗೆ ಎನ್ನುವ ಘೋಷವಾಕ್ಯವನ್ನು ಪ್ರಾರಂಭಿಸಿದರು. ಈ ಘೋಷವಾಕ್ಯದಿಂದ ತುಂಬಾ ಪ್ರಭಾವಿತರಾದವರು ಆಚಾರ್ಯ ಬಿ.ಎಮ್.ಶ್ರೀಕಂಠಯ್ಯನವರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲೂ ರಾ.ಹ. ದೇಶಪಾಂಡೆ ಅವರು ಪ್ರಮುಖ ಪಾತ್ರವಹಿಸಿದ್ದರು. ಸರ್. ಎಂ. ವಿಶ್ವೇಶ್ವರಯ್ಯ ಅವರಿಗೂ ಆಪ್ತರಾಗಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ರಚನೆಗಾಗಿ ಕನ್ನಡ ಭಾಷಾಭಿವೃದ್ಧಿಗಾಗಿ ನಿರಂತರ ಸಲಹೆ ನೀಡುತ್ತಾ ಬಂದರು. 1918ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ನಾಂದಿಯಾದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ರಾ.ಹ. ದೇಶಪಾಂಡೆಯವರು ಉಪಸ್ಥಿತರಿದ್ದರು. ಕರ್ನಾಟಕ ಕಾಲೇಜಿನ ಸ್ಥಾಪನೆಗಾಗಿ ರಾ.ಹ.ದೇಶಪಾಂಡೆಯವರು ಧನಸಂಗ್ರಹಕ್ಕಾಗಿ ಮನೆಮನೆಗೆ, ಊರೂರಿಗೆ ಅಲೆದು ಪರಿಶ್ರಮ ಪಟ್ಟರು. ಕನ್ನಡ ಭಾಷೆಯ ವಿವಿಧ ಪ್ರಾಂತ್ಯಗಳು ಒಂದಾಗಬೇಕೆಂಬುದು ಅವರ ಅಂತರಂಗದ ಕನಸಾಗಿತ್ತು. ಅದಕ್ಕಾಗಿ ಎಲ್ಲ ಪ್ರಾಂತ್ಯಗಳ ಕನ್ನಡದ ಅಗ್ರಗಣ್ಯರೊಡನೆ ಅವರು ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಹೀಗಾಗಿ ಕರ್ನಾಟಕ ಏಕೀಕರಣಕ್ಕಾಗಿ ಪರಿಶ್ರಮಪಟ್ಟ ಮೊದಲಿಗರಲ್ಲಿ ರಾ.ಹ.ದೇಶಪಾಂಡೆಯವರೂ ಪ್ರಮುಖರು.