ಹಿರೋಶಿಮಾ ಬಾಂಬ್ ಗಿಂತ 24 ಪಟ್ಟು ಶಕ್ತಿಶಾಲಿ ಪರಮಾಣು ಬಾಂಬ್ – ‘ರಷ್ಯಾ, ಚೀನಾ’ ಅಮೆರಿಕ ಟಾರ್ಗೆಟ್?
ರಷ್ಯಾ ಉಕ್ರೇನ್ ಯುದ್ಧ ಒಂದು ಕಡೆ. ಹಮಾಸ್ ಇಸ್ರೇಲ್ ಸಂಘರ್ಷ ಮತ್ತೊಂದು ಕಡೆ. ಇವುಗಳ ನಡುವೆ ಯೆಮೆನ್, ಲೆಬನಾನ್, ಇರಾನ್ ಸೇರಿದಂತೆ ಹಲವು ರಾಷ್ಟ್ರಗಳು ಯುದ್ಧಕ್ಕೆ ಧುಮುಕಲು ಹವಣಿಸುತ್ತಿವೆ. ಇದರ ನಡುವೆ ಜಗತ್ತಿನ ಪ್ರಬಲ ರಾಷ್ಟ್ರಗಳು ಅಣ್ವಸ್ತ್ರ ತಯಾರಿ ಮತ್ತು ಪ್ರಯೋಗದ ಮೂಲದ ಶಕ್ತಿಪ್ರದರ್ಶನಕ್ಕೆ ಮುಂದಾಗಿವೆ. ಈಗಾಗಲೇ ರಷ್ಯಾ ವಿಶ್ವ ಪರಮಾಣು ಬಾಂಬ್ ಪರೀಕ್ಷೆ ನಿಷೇಧ ಒಪ್ಪಂದದಿಂದ ಹಿಂದೆ ಸರಿಯೋದಾಗಿ ಹೇಳಿತ್ತು. ಮತ್ತೊಂದೆಡೆ ಚೀನಾ ಪರಮಾಣು ಬಾಂಬ್ಗಳ ಸಂಗ್ರಹದಲ್ಲಿ ತೊಡಗಿದೆ. ಇದೀಗ ಅಮೆರಿಕ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಅಮೆರಿಕದ ನಡೆ ಜಗತ್ತನ್ನೇ ವಿನಾಶ ಮಾಡುವಂತಹ ಭಯ ಮೂಡಿಸಿದೆ. ಯಾಕಂದ್ರೆ ಅಮೆರಿಕ ತಯಾರಿಸಲು ಹೊರಟಿರುವ ಬಾಂಬ್ ಎರಡನೆಯ ಮಹಾಯುದ್ಧದಲ್ಲಿ ಹಿರೋಶಿಮಾ ನಗರದ ಮೇಲೆ ಹಾಕಲಾದ ಬಾಂಬ್ ಗಿಂತಲೂ 24 ಪಟ್ಟು ಹೆಚ್ಚು ಶಕ್ತಿಶಾಲಿ ಆಗಿರಲಿದ್ಯಂತೆ.
ವಿಶ್ವದ ದೊಡ್ಡಣ್ಣ ಅಂತಾನೇ ಕರೆಸಿಕೊಳ್ಳುವ ಅಮೆರಿಕ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ರಾಷ್ಟ್ರ. ಹಾಗೇ ಪ್ರಬಲ ಶತ್ರುಗಳನ್ನೂ ಹೊಂದಿರುವ ದೇಶ. ಇದೇ ಕಾರಣಕ್ಕೆ ಶಸ್ತ್ರಾಸ್ತ್ರಗಳ ತಯಾರಿಯಲ್ಲೂ ಅಮೆರಿಕ ಸದಾ ಪ್ರಯೋಗಶಾಲಿಯಾಗಿರುತ್ತೆ. ಇದೀಗ ಅದೇ ಅಮೆರಿಕ ವಿಶ್ವವನ್ನೇ ವಿನಾಶ ಮಾಡುವಂತಹ ಆಘಾತಕಾರಿ ಹೆಜ್ಜೆ ಇಟ್ಟಿದೆ. ಮಹಾ ಅಣುಬಾಂಬ್ ತಯಾರಿಸುವ ತವಕದಲ್ಲಿದೆ. ಅದೂ ಕೂಡ ಒಂದು ಮೋಸ್ಟ್ ಪವರ್ಫುಲ್ ಹೊಸ ಪರಮಾಣು ಬಾಂಬ್ ಸೃಷ್ಟಿಸಲು ತುದಿಗಾಲಲ್ಲಿ ನಿಂತಿದೆ. ಅಮೆರಿಕ ತಯಾರಿಸಿಲು ಹೊರಟಿರುವ ಈ ಬಾಂಬ್ ಅದೆಷ್ಟು ವಿನಾಶಕಾರಿ, ಶಕ್ತಿಶಾಲಿ ಅನ್ನೋದೇ ಭಯ ಹುಟ್ಟಿಸುತ್ತಿದೆ. ನಗರಗಳನ್ನೇ ನಿರ್ನಾಮ ಮಾಡುವಂತಿರೋ ಈ ಬಾಂಬ್ನ ಸಾಮರ್ಥ್ಯದ ಬಗ್ಗೆ ಅಮೆರಿಕದ ರಕ್ಷಣಾ ಇಲಾಖೆಯೇ ಘೋಷಿಸಿಕೊಂಡಿದೆ.
ಇದನ್ನೂ ಓದಿ : 81.5 ಕೋಟಿ ಭಾರತೀಯರ ಆಧಾರ್ ಮತ್ತು ಪಾಸ್ ಪೋರ್ಟ್ ಡೇಟಾ ಸೋರಿಕೆ? -ಗೌಪ್ಯತೆ ಕಾಪಾಡುವಲ್ಲಿ ಎಡವಿದ್ರಾ ಮೋದಿ?
ಹೆಚ್ಚು ಶಕ್ತಿಶಾಲಿ ಅಣುಬಾಂಬ್ ಅಭಿವೃದ್ಧಿಪಡಿಸಲು ಅಮೆರಿಕ ಮುಂದಾಗಿದೆ. 2ನೇ ಮಹಾಯುದ್ಧದ ವೇಳೆ ಹಿರೋಶಿಮಾ ಮೇಲೆ ಅಮೆರಿಕ ಅಣುಬಾಂಬ್ ಹಾಕಿತ್ತು. ಹಿರೋಶಿಮಾ ಮೇಲೆ ಹಾಕಿದ್ದ ಬಾಂಬ್ ಗಿಂತ 24 ಪಟ್ಟು ಹೆಚ್ಚು ಈ ಬಾಂಬ್ ಶಕ್ತಿಶಾಲಿಯಾಗಿರಲಿದೆ. ಅಮೆರಿಕದ ರಕ್ಷಣಾ ಇಲಾಖೆಯಿಂದಲೇ ಹೊಸ ಬಾಂಬ್ ತಯಾರಿ ಬಗ್ಗೆ ಪ್ರಕಟಣೆ ನೀಡಲಾಗಿದೆ. B61-13 ಪರಮಾಣು ಗುರುತ್ವಾಕರ್ಷಣೆಯ ಬಾಂಬ್ ನ ಆಧುನಿಕ ಆವೃತ್ತಿಯಾಗಿದ್ದು, ಇದನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು US ರಕ್ಷಣಾ ಇಲಾಖೆ ಘೋಷಣೆ ಮಾಡಿದೆ. ಪರಮಾಣು ಬಾಂಬ್ ಅಭಿವೃದ್ಧಿ ಪಡಿಸಲು US ಕಾಂಗ್ರೆಸ್ ಅನುಮತಿಗೆ ಮನವಿ ಮಾಡಲಾಗಿದ್ದು, ಅಮೆರಿಕದ ಸಂಸತ್ ಅನುಮತಿ ನೀಡುತ್ತದೆ. ಹಿರೋಶಿಮಾ ಮೇಲೆ ಹಾಕಿದ್ದ ಬಾಂಬ್ ಸುಮಾರು 15 ಕಿಲೋಟನ್ಸಿಡಿತಲೆ ಹಾಗೂ ನಾಗಸಾಕಿಯ ಮೇಲೆ ಬೀಳಿಸಿದ ಬಾಂಬ್ 25 ಕಿಲೋಟನ್ ಸಿಡಿತಲೆ ಹೊಂದಿತ್ತು. ಆದರೆ ಈಗ ತಯಾರಿಸುತ್ತಿರುವ ಅಣುಬಾಂಬ್ ಇವುಗಳಿಗಿಂತ 24 ಪಟ್ಟು ದೊಡ್ಡದು. ವಿಶ್ವದ ಪ್ರಸ್ತುತ ಭದ್ರತಾ ಪರಿಸ್ಥಿತಿ ಮತ್ತು ವಿರೋಧಿಗಳ ಬೆದರಿಕೆಗಳಿಗೆ ಈ ಬಾಂಬ್ ತಯಾರಿಕೆ ಅನಿವಾರ್ಯವಾಗಿದೆ. ತನ್ನ ಮಿತ್ರರಾಷ್ಟ್ರಗಳಿಗೆ ಅಗತ್ಯ ನೆರವು ನೀಡುವ & ದಾಳಿಗಳನ್ನು ಪ್ರತಿರೋಧಿಸುವ ಜವಾಬ್ದಾರಿಯನ್ನ ಅಮೆರಿಕ ಹೊಂದಿದೆ ಎಂದು ಬಾಹ್ಯಾಕಾಶ ನೀತಿಯ ರಕ್ಷಣಾ ಸಹಾಯಕ ಕಾರ್ಯದರ್ಶಿ ಜಾನ್ ಪ್ಲಂಬ್ ಹೇಳಿದ್ದಾರೆ.
ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತಯಾರಿಸುತ್ತಿರುವ ಈ ಬಾಂಬ್ ಬರೋಬ್ಬರಿ 360 ಕಿಲೋಟನ್ ಇರಲಿದೆ. 1945 ರಲ್ಲಿ ಹಿರೋಶಿಮಾ ಮೇಲೆ ಹಾಕಿದ್ದ ಬಾಂಬ್ ನ ತೂಕ 15 ಕಿಲೋಟನ್ ಮಾತ್ರವೇ ಇತ್ತು. ಆದರೆ ಅದೇ ಬಾಂಬ್ ಸೃಷ್ಟಿಸಿದ ಭೀಕರತೆ ಮನುಕುಲವನ್ನೇ ಭಯಗೊಳಿಸಿತ್ತು. ಅಂಥಾದ್ರಲ್ಲಿ ಈ ಬಾಂಬ್ ಅದಕ್ಕಿಂತ 24 ಪಟ್ಟು ಅಂದ್ರೆ 360 ಕಿಲೋಟನ್ ಇದೆ ಅಂದ್ರೆ ಅದರ ಪರಿಣಾಮವನ್ನ ಊಹಿಸೋಕೂ ಸಾಧ್ಯವಾಗಲ್ಲ ಬಿಡಿ. ಅಷ್ಟಕ್ಕೂ ಜಗತ್ತಿನ ಇತಿಹಾಸದಲ್ಲೇ ಮೊದಲ ಮತ್ತು ಏಕೈಕ ಬಾರಿ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದ ಏಕೈಕ ದೇಶ ಅಮೆರಿಕ. ಮನುಕುಲ ಹಿಂದೆಂದೂ ಕಂಡು ಕೇಳರಿಯದ ಅಣುಬಾಂಬ್ ಪ್ರಯೋಗ ನಡೆಸಿತ್ತು.
ಎರಡನೇ ಮಹಾಯುದ್ಧದ ವೇಳೆ ಹಿರೋಶಿಮಾದ ಮೇಲೆ ಮಾಡಿದ್ದ ಪರಮಾಣು ದಾಳಿಗೆ ‘ಲಿಟಲ್ ಬಾಯ್’ ಎಂದು ಹೆಸರಿಡಲಾಗಿತ್ತು. ನಾಗಸಾಕಿ ಮೇಲೆ ಬೀಳಿಸಿದ ಬಾಂಬ್ ಗೆ ‘ಫ್ಯಾಟ್ ಮ್ಯಾನ್’ ಎಂದು ಕರೆಯಲಾಗಿತ್ತು. ಲಿಟಲ್ ಬಾಯ್ ಯುರೇನಿಯಂನಿಂದ ಮಾಡಿದ ಬಾಂಬ್ ಆದ್ರೆ ಫ್ಯಾಟ್ ಮ್ಯಾನ್ ಪ್ಲುಟೋನಿಯಂನಿಂದ ಮಾಡಿದ ಬಾಂಬ್ ಆಗಿತ್ತು. ಆಗಸ್ಟ್ 6, 1945 ರಂದು ಹಿರೋಶಿಮಾದ ಮೇಲೆ ‘ಲಿಟಲ್ ಬಾಯ್’ ಸ್ಫೋಟವಾಗಿತ್ತು. ಹಿರೋಶಿಮಾದ ಬಾಂಬ್ ದಾಳಿ ನಡೆದ 3 ದಿನಗಳ ಬಳಿಕ ಅಂದ್ರೆ ಆಗಸ್ಟ್ 9, 1945 ರಂದು, B-29 ನಾಗಸಾಕಿಯ ಮೇಲೆ ‘ಫ್ಯಾಟ್ ಮ್ಯಾನ್’ ದಾಳಿ ಮಾಡಿತ್ತು. ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಬಾಂಬ್ ದಾಳಿಯಿಂದ ಸುಮಾರು 1,40,000 ಜನ ಸಾವನ್ನಪ್ಪಿದ್ದರು. ಇದಾದ ಬಳಿಕ ಆಗಸ್ಟ್ 15, 1945 ರಂದು ಎರಡನೇ ಮಹಾಯುದ್ಧವನ್ನು ಅಧಿಕೃತವಾಗಿ ಕೊನೆಗೊಳಿಸಲಾಗಿತ್ತು. ಯುದ್ಧ ಕೊನೆಯಾದ್ರೂ ದಶಕಗಳವರೆಗೆ ಅಲ್ಲಿನ ಜನ ವಿಕಿರಣ ಕಾಯಿಲೆ, ಕ್ಯಾನ್ಸರ್ ಮತ್ತು ದೀರ್ಘಕಾಲೀನ ಅನಾರೋಗ್ಯದಿಂದ ಬಳಲಿದ್ದರು.
ಮಾನವ ಇತಿಹಾಸದಲ್ಲೇ ನಡೆದ ಅತ್ಯಂತ ಘೋರ ಮತ್ತು ಹೀನಾಯ ಕೃತ್ಯ ಎಂದರೆ ಅದು ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ನಡೆದಿದ್ದ ಪರಮಾಣು ಬಾಂಬ್ ದಾಳಿ. ದಾಳಿ ನಡೆದು ದಶಕಗಳೇ ಕಳೆದ್ರೂ ಅದರ ಪರಿಣಾಮವನ್ನು ಅಲ್ಲಿನ ಜನ ಇಂದಿಗೂ ಅನುಭವಿಸುತ್ತಿದ್ದಾರೆ. ಆ ಘಟನೆಯಲ್ಲಿ ಬದುಕಿ ಉಳಿದವರು ಹೀನಾಯವಾಗಿ ಬದುಕು ದೂಡಿದ್ದರು. ಈಗಲೂ ಸಹ ಎರಡು ನಗರಗಳು ಹಲವು ಸಮಸ್ಯೆಗಳನ್ನ ಎದುರಿಸುತ್ತಿವೆ. ಇಂಥಾ ಘೋರ ಸನ್ನಿವೇಶ ಕಣ್ಣ ಮುಂದಿದ್ರೂ ಅಮೆರಿಕ ಈಗ ಅದಕ್ಕಿಂತ ಭೀಕರ ನ್ಯೂಕ್ಲಿಯರ್ ಬಾಂಬ್ ತಯಾರಿಗೆ ಮುಂದಾಗಿರೋಕೆ ಅಂದ್ರೆ ಅದು ಭವಿಷ್ಯದ ಭಯ. ರಷ್ಯಾ, ಚೀನಾ, ಮತ್ತು ಉತ್ತರಕೊರಿಯಾ ದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ವಿಶ್ವದ ದೊಡ್ಡಣ್ಣನಿಗೆ ಆತಂಕ ಉಂಟು ಮಾಡಿವೆ.
ವಿಶ್ವದ ಅತಿದೊಡ್ಡ ರಕ್ಷಣಾ ಸಚಿವಾಲಯ ಹೊಂದಿರುವ ಅಮೆರಿಕದ ಪೆಂಟಗಾನ್ ಮಾಹಿತಿ ಪ್ರಕಾರ ಚೀನಾ ಬಳಿ 500 ಪರಮಾಣು ಬಾಂಬ್ ಗಳು ಸಿದ್ಧವಾಗಿವೆ. ಅಲ್ಲದೆ 2030ರ ಒಳಗೆ 1,000ಕ್ಕೂ ಹೆಚ್ಚು ಪರಮಾಣು ಬಾಂಬ್ ಗಳನ್ನ ಚೀನಾ ಸಿದ್ಧಗೊಳಿಸುತ್ತೆ ಅಂತಾ ಅಮೆರಿಕದ ಭದ್ರತಾ ಕೇಂದ್ರ ಪೆಂಟಗಾನ್ ತನ್ನ ವರದಿಯ ಮೂಲಕ ಆರೋಪ ಮಾಡಿದೆ. ಈವರೆಗೂ ಜಗತ್ತಿನ ನಂಬರ್ 1 ದೇಶ ಎಂಬ ಪಟ್ಟ ಹೊಂದಿರುವ ಅಮೆರಿಕ ಅದನ್ನ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ. ಇಂತಹ ಅಮೆರಿಕಕ್ಕೆ ನ್ಯೂಕ್ಲಿಯರ್ ವೆಪನ್ ಗಳೇ ಆನೆ ಬಲ ಇದ್ದಂತೆ. ಆದ್ರೆ ಈಗ ನ್ಯೂಕ್ಲಿಯರ್ ವೆಪನ್ ವಿಚಾರದಲ್ಲೂ ಅಮೆರಿಕಕ್ಕೆ ಭಾರೀ ಹಿನ್ನಡೆಯಾಗುತ್ತಿದೆ. ಯಾಕಂದ್ರೆ ಇತ್ತೀಚೆಗಷ್ಟೇ ಜಗತ್ತಿನ ಪ್ರಬಲ ನೌಕಾಸೇನೆ ಹೊಂದಿರುವ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿತ್ತು. ಇಷ್ಟು ದಿನ ಅಮೆರಿಕ ಹೆಸರಲ್ಲಿದ್ದ ಪಟ್ಟಕ್ಕೆ ಚೀನಾ ಕೂಡ ಎಂಟ್ರಿ ಕೊಟ್ಟಿತ್ತು. ಇದೀಗ ಪರಮಾಣು ಬಾಂಬ್ ಗಳ ಅಭಿವೃದ್ಧಿಯಲ್ಲಿ ರಷ್ಯಾ & ಚೀನಾ ಒಗ್ಗೂಡುತ್ತಿವೆ. ಜಗತ್ತಿನ ಬಲಿಷ್ಠ ರಾಷ್ಟ್ರಗಳಾದ ರಷ್ಯಾ-ಅಮೆರಿಕ ಒಟ್ಟಾಗಿರುವುದು ಅಮೆರಿಕದ ನಾಯಕರಿಗೆ ಚಿಂತೆ ಉಂಟು ಮಾಡಿವೆ. ಅಲ್ಲದೆ ರಷ್ಯಾ ಅಣುಬಾಂಬ್ ಪರೀಕ್ಷೆ ನಿಷೇಧ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿತ್ತು. ಮತ್ತೊಂದೆಡೆ ಅಮೆರಿಕದ ಮತ್ತೊಂದು ಬದ್ಧ ವೈರಿ ರಾಷ್ಟ್ರ ಎಂದರೆ ಅದು ಉತ್ತರಕೊರಿಯಾ. ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಷ್ಯಾ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಮೂರೂ ದೇಶಗಳು ಅಮೆರಿಕಕ್ಕೆ ಬದ್ಧ ವೈರಿ ರಾಷ್ಟ್ರಗಳಾಗಿದ್ದು, ವೈರಿ ರಾಷ್ಟ್ರಗಳೆಲ್ಲಾ ಒಗ್ಗೂಡುವ ಆತಂಕ ಅಮೆರಿಕಕ್ಕಿದೆ.
ಅಷ್ಟಕ್ಕೂ ಮನುಕುಲ ನಾಶ ಮಾಡಬಲ್ಲ ಅಣುಬಾಂಬ್ ಮೊಟ್ಟಮೊದಲಿಗೆ ಕಂಡುಹಿಡಿದಿದ್ದೇ ಅಮೆರಿಕ. ಮೊದಲಿಗೆ ತನ್ನ ಅಣುಬಾಂಬ್ ಪ್ರಯೋಗ ಮಾಡಿದ್ದು ಜಪಾನ್ ಮೇಲೆ. ನಂತರ ಈ ಬಾಂಬ್ ತಂತ್ರಜ್ಞಾನ ರಷ್ಯಾ ಮತ್ತಿತರ ರಾಷ್ಟ್ರಗಳಿಗೂ ಗೊತ್ತಾಗಿತ್ತು. ಹೀಗಾಗಿ ನಂತರದ ದಿನಗಳಲ್ಲಿ ಅಣುಬಾಂಬ್ ದಾಳಿ ತಡೆಹಿಡಿಯಲಾಗಿತ್ತು. ಅಷ್ಟಕ್ಕೂ ಈಗಿನ ಲೆಕ್ಕಾಚಾರದಂತೆ ಜಗತ್ತಿನಾದ್ಯಂತ 13,000 ಪರಮಾಣು ಅಸ್ತ್ರ ಶೇಖರಣೆಯಾಗಿವೆ. ಈ ಪೈಕಿ ರಷ್ಯಾ ಹಾಗೂ ಅಮೆರಿಕ ಬಳಿ ಮುಕ್ಕಾಲು ಭಾಗಕ್ಕೂ ಹೆಚ್ಚು ಅಸ್ತ್ರಗಳು ಇವೆ. ಈಗ ಅಮೆರಿಕ ಅತಿದೊಡ್ಡ ಅಣುಬಾಂಬ್ ತಯಾರಿಸೋಕೆ ಹೊರಟಿದೆ. ಹಾಗೇನಾದ್ರೂ ಈ ಬಾಂಬ್ ಸಿದ್ಧವಾಗಿದ್ದೇ ಆದಲ್ಲಿ ವೈರಿ ರಾಷ್ಟ್ರಗಳು ಕೈಕಟ್ಟಿ ಕೂರೋದಿಲ್ಲ. ಹೀಗಾಗಿ ಈ ಬೆಳವಣಿಗೆ ಮಾನವನ ಭವಿಷ್ಯಕ್ಕೆ ಮಾರಕವಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.