ಹಮಾಸ್ ಪರ ಯುದ್ಧಕ್ಕಿಳಿದ ಯೆಮೆನ್.. ರಷ್ಯಾದಲ್ಲಿ ಇಸ್ರೇಲಿಗರ ಮೇಲೆ ದಾಳಿ – ಜಗತ್ತಿಗೇ ಹರಡಿತಾ ಯುದ್ಧ?
ಸಂಘರ್ಷದ ರಕ್ತಸಿಕ್ತ ಹಾದಿಯಲ್ಲಿ ಸಾವಿರಾರು ಜನರ ಮಾರಣಹೋಮ ನಡೆದಿದೆ. ದಿನದಿನಕ್ಕೂ ಯುದ್ಧದ ತೀವ್ರತೆ ಘೋರ ಸ್ವರೂಪ ಪಡೆಯುತ್ತಿದೆ. ಇದೇ ಕಾರಣಕ್ಕೆ ಎರಡು ರಾಷ್ಟ್ರಗಳ ನಡುವಿನ ಕದನ ಇತರೆ ರಾಷ್ಟ್ರಗಳಿಗೂ ಹಬ್ಬೋಕೆ ಶುರು ಮಾಡಿದೆ. ಪ್ಯಾಲೆಸ್ತೀನ್ ನ ಇಡೀ ಗಾಜಾಪಟ್ಟಿಯನ್ನೇ ನಿರ್ನಾಮ ಮಾಡಲು ಹೊರಟಿರುವ ಇಸ್ರೇಲ್ ನ ಕಿಚ್ಚು ಗಲ್ಫ್ ರಾಷ್ಟ್ರಗಳಿಗೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಈಗಾಗಲೇ ಸೌದಿ, ಇರಾನ್, ಯಮೆನ್, ಲೆಬನಾನ್ ರಾಷ್ಟ್ರಗಳು ಪ್ಯಾಲೆಸ್ತೀನ್ಗೆ ಬೆಂಬಲ ಘೋಷಣೆ ಮಾಡಿವೆ. ಅಲ್ಲದೆ ನೇರವಾಗಿ ಯುದ್ಧದ ಭಾಗವಾಗಬಹುದಾ ಎಂಬ ಚರ್ಚೆಗಳೂ ಆರಂಭವಾಗಿದೆ. ಯಾಕಂದ್ರೆ ಇಸ್ರೇಲ್ ವಿರುದ್ಧ ಯೆಮನ್ ರಾಷ್ಟ್ರ ಅಧಿಕೃತವಾಗಿ ಯುದ್ಧ ಘೋಷಣೆ ಮಾಡಿದೆ. ಯೆಮನ್ನ ಹೌಥಿ ಬಂಡುಕೋರ ಪಡೆ ಪ್ಯಾಲೆಸ್ತೀನ್ ಪರವಾಗಿ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿರೋದಾಗಿ ಹೇಳಿಕೊಂಡಿದೆ.
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನ ಹೊಂದಿರುವ ಇಸ್ರೇಲ್ ಸೇನೆ ಹಮಾಸ್ ವಿರುದ್ಧ ಯುದ್ಧ ನಿಲ್ಲಿಸೋ ಮಾತೇ ಇಲ್ಲ ಎನ್ನುತ್ತಿದೆ. ಮಕ್ಕಳು, ಮಹಿಳೆಯರು ಅನ್ನೋದನ್ನೂ ಲೆಕ್ಕಿಸದೆ ಇಡೀ ಗಾಜಾನಗರವನ್ನೇ ಧ್ವಂಸ ಮಾಡ್ತಿದೆ. ವಿಶ್ವಸಂಸ್ಥೆ ಕೂಡ ಇಸ್ರೇಲ್ ಯುದ್ಧಾಪರಾಧಗಳನ್ನ ಎಸಗುತ್ತಿದ್ದು, ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿದೆ. ಆದ್ರೆ ಇಸ್ರೇಲ್ ಸೇನೆ ಮಾತ್ರ ಯಾರ ಒತ್ತಡಕ್ಕೂ ಕ್ಯಾರೇ ಎನ್ನದೆ ಹಮಾಸ್ ಪಡೆ ಮತ್ತು ಅವರ ಸಂಪೂರ್ಣ ಸುರಂಗಗಳನ್ನ ನಿರ್ನಾಮ ಮಾಡೋವರೆಗೂ ಯುದ್ಧ ನಿಲ್ಲಲ್ಲ ಎಂದು ಶಪಥ ಮಾಡಿದ್ದಾರೆ. ಇಸ್ರೇಲ್ನ ಈ ನಡೆ ಹಲವು ರಾಷ್ಟ್ರಗಳನ್ನ ಕೆರಳಿಸಿದೆ. ಗಲ್ಫ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಕೆಂಡ ಕಾರುತ್ತಿದ್ದು ದಾಳಿ ನಡೆಸಲು ತುದಿಗಾಲಲ್ಲಿ ನಿಂತಿವೆ. ಈಗಾಗಲೇ ಲೆಬನಾನ್, ಹಿಜ್ಬುಲ್ಲಾ ಸಂಘಟನೆ ಇಸ್ರೇಲ್ ವಿರುದ್ಧ ದಾಳಿಗೆ ಸಜ್ಜಾಗಿದ್ದರೆ, ಇನ್ನೊಂದೆಡೆ ಯೆಮನ್ ನ ಹೌಥಿ ಬಂಡುಕೋರ ಪಡೆ ಪ್ಯಾಲೆಸ್ತೀನ್ ವಿರುದ್ಧ ರಾಕೆಟ್ ದಾಳಿ ನಡೆಸಿರೋದಾಗಿ ಹೇಳಿಕೊಂಡಿದೆ. ಯುದ್ಧ ನಡೆಯುತ್ತಿರುವ ಸ್ಥಳದಿಂದ ಸಾವಿರ ಮೈಲಿಗಳಿಗಿಂತಲೂ ದೂರ ತಮ್ಮ ಅಧಿಕಾರ ಕೇಂದ್ರ ಇದ್ದರೂ ಹೌಥಿಗಳು ಈ ಯುದ್ಧದಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ. ಅಲ್ಲದೆ ತಾವು ಇಸ್ರೇಲ್ನತ್ತ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ. ಎರಡು ರಾಷ್ಟ್ರಗಳ ನಡುವಿನ ಯುದ್ಧದಲ್ಲಿ ಮೂರನೇ ರಾಷ್ಟ್ರ ಅಖಾಡಕ್ಕೆ ಧುಮುಕಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಾಷ್ಟ್ರಗಳಿಗೆ ಈ ಸಂಘರ್ಷ ಹಬ್ಬುವ ಆತಂಕ ಎದುರಾಗಿದೆ. ಇಸ್ರೇಲ್ ಮೇಲೆ ಯುದ್ಧ ಸಾರಿರುವ ಯೆಮನ್ ಉದ್ದೇಶವನ್ನ ನಾವಿಲ್ಲಿ ತಿಳಿದುಕೊಳ್ಳಬೇಕಾಗುತ್ತೆ.
ಇದನ್ನೂ ಓದಿ : ಗಾಜಾ ಬೆಂಬಲಕ್ಕೆ ನಿಂತಿದ್ದೇಕೆ ನಂ.1 ಶ್ರೀಮಂತ? -ಮಸ್ಕ್, ಬೈಡೆನ್ ಗೆ ಇಸ್ರೇಲ್ ಗುದ್ದು?
ಗಾಜಾಪಟ್ಟಿ ಮೇಲೆ ಇಸ್ರೇಲ್ ನಿರಂತರ ದಾಳಿಗೆ ಮುಸ್ಲಿಂ ರಾಷ್ಟ್ರಗಳು ಸಿಟ್ಟಾಗಿದ್ದು, ಅಮಾಯಕರ ಮೇಲೆ ದಾಳಿ ನಿಲ್ಲಿಸುವಂತೆ ಇಸ್ರೇಲ್ ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದ್ರೆ ವಿಶ್ವಸಂಸ್ಥೆ ಮನವಿಗೇ ಕೇರ್ ಮಾಡದ ಇಸ್ರೇಲ್ ಮಾತ್ರ ದಾಳಿ ಮುಂದುವರಿಸಿದೆ. ಪರಿಣಾಮ ಇಸ್ರೇಲ್ ವಿರುದ್ಧ ಯೆಮನ್ ರಾಷ್ಟ್ರ ಯುದ್ಧ ಘೋಷಣೆ ಮಾಡಿದೆ. ಹಮಾಸ್ ಪರವಾಗಿ ಇಸ್ರೇಲ್ ವಿರುದ್ಧ ಅಧಿಕೃತವಾಗಿ ಯುದ್ಧ ಘೋಷಿಸಿದ ಮೊದಲ ರಾಷ್ಟ್ರ ಯೆಮನ್. ಯೆಮನ್ ಯುದ್ಧ ಘೋಷಣೆ ಕುರಿತು ಭದ್ರತಾ ಪಡೆ ವಕ್ತಾರ ಯಹ್ಯಾ ಸೆರಿ ವಿಡಿಯೋ ರಿಲೀಸ್ ಮಾಡಿದೆ. ಇಸ್ರೇಲ್ ಮೇಲೆ ಮಿಸೈಲ್ ದಾಳಿ ಕೂಡ ಆರಂಭಿಸಿದೆ. ಪ್ಯಾಲೆಸ್ತೀನ್ ಸಹೋದರ, ಸಹೋದರಿಯರಿಗಾಗಿ ನಾವು ಹೋರಾಟ ಆರಂಭಿಸಿದ್ದೇವೆ. ಇಸ್ರೇಲ್ ದಾಳಿ ನಿಲ್ಲಿಸುವವರೆಗೆ ಯೆಮನ್ ಶಸಸ್ತ್ರ ಪಡೆಗಳು ಭೀಕರ ದಾಳಿ ನಡೆಸಲಿವೆ. ಇದ್ರಿಂದ ಇಸ್ರೇಲ್ ಘೋರ ಪರಿಣಾಮ ಎದುರಿಸಬೇಕಾಗಲಿದೆ ಎಂದು ಯೆಮೆನ್ ಎಚ್ಚರಿಕೆ ನೀಡಿದೆ. ಅರಬ್ ರಾಷ್ಟ್ರಗಳ ದಾಳಿಯನ್ನು ನಿರೀಕ್ಷಿಸಿದ್ದ ಇಸ್ರೇಲ್ ಕೂಡ ಪ್ರತಿದಾಳಿ ಶುರು ಮಾಡಿದೆ. ಈಗಾಗಲೇ ಹಮಾಸ್ ಉಗ್ರರು, ಹೆಝ್ಬುಲ್ಲಾ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದ್ದು ಇವರ ಜೊತೆ ಯೆಮನ್ ಸೇನೆ ಕೂಡ ಅಖಾಡಕ್ಕಿಳಿದಿದೆ. ಸುತ್ತ ಮುತ್ತ ವೈರಿ ರಾಷ್ಟ್ರಗಳನ್ನೇ ಇಟ್ಟುಕೊಂಡಿರುವ ಇಸ್ರೇಲ್ಗೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಬೆಂಬಲ ನೀಡಿವೆ. ಆದ್ರೆ ಯುದ್ಧದಲ್ಲಿ ಮಾತ್ರ ಇಸ್ರೇಲ್ ಏಕಾಂಗಿಯಾಗಿ ಹೋರಾಡುತ್ತಿದೆ. ಹಮಾಸ್ ಉಗ್ರರ ವಶದಲ್ಲಿರುವ ತನ್ನ ನಾಗರಿಕರನ್ನು ಬಿಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.
ಯುದ್ಧ ಘೋಷಣೆಯಾದಾಗಿನಿಂದಲೂ ಇಸ್ರೇಲ್ ಬೆನ್ನಿಗೆ ನಿಂತಿರುವ ಅಮೆರಿಕ ಬೇರೆ ರಾಷ್ಟ್ರಗಳಿಗೆ ಎಚ್ಚರಿಕೆ ನೀಡುತ್ತಲೇ ಬಂದಿತ್ತು. ಯಾರಾದ್ರೂ ಇಸ್ರೇಲ್ ವಿರುದ್ಧ ನಿಂತ್ರೆ ದೊಡ್ಡ ಮೊತ್ತದ ಬೆಲೆ ತೆರಬೇಕಾಗುತ್ತದೆ ಎಂದು ವಾರ್ನಿಂಗ್ ಕೂಡ ನೀಡಿತ್ತು. ಆದ್ರೆ ವಿಶ್ವದ ದೊಡ್ಡಣ್ಣನ ಮಾತಿಗೆ ಸೊಪ್ಪು ಹಾಕದ ಯೆಮನ್ ನೇರವಾಗಿ ಯುದ್ಧದ ಅಖಾಡಕ್ಕೆ ಇಳಿದಿದೆ. ಯೆಮನ್ ದಾಳಿಗೆ ಇಸ್ರೇಲ್ ನಾಶವಾಗಲಿದೆ ಎಂದು ಯೆಮೆನ್ ಸೇನಾ ವಕ್ತಾರ ಹೇಳಿದ್ದಾರೆ ಅರಬ್ ರಾಷ್ಟ್ರಗಳು ಒಂದೊಂದಾಗಿ ಇಸ್ರೇಲ್ ವಿರುದ್ಧ ಮುಗಿಬೀಳಲು ಆರಂಭಿಸಿದೆ.. ಇಲ್ಲಿ ಯೆಮನ್ ದೇಶ ಮಾತ್ರವಲ್ಲದೆ ಇಸ್ರೇಲ್ ವಿರುದ್ಧ ದಾಳಿ ನಡೆಸಲು ಒಂದು ದೊಡ್ಡ ಕೂಟವೇ ರೆಡಿಯಾಗ್ತಿದೆ. ರಹಸ್ಯ ಸಭೆ ಕೂಡ ನಡೆದಿದೆ.
ಹಿಜ್ಬುಲ್ಲಾ ಸಂಘಟನೆ ಮುಖ್ಯಸ್ಥ ಸಯ್ಯದ್ ಹಸ್ಸನ್ ನಸ್ರಲ್ಲಾಹ್ ನೇತೃತವ್ದಲ್ಲಿ ರಹಸ್ಯ ಸಭೆ ನಡೆಸಲಾಗಿದೆ. ಇರಾನ್ ಮತ್ತು ಲೆಬನಾನ್ ಬೆಂಬಲಿತ ಉಗ್ರ ಸಂಘಟನೆಯಾಗಿರುವ ಹಿಜ್ಬುಲ್ಲಾ ಸಂಘಟನೆ ಮುಖ್ಯಸ್ಥ, ಪ್ಯಾಲೆಸ್ತೀನ್ ನ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದಾರೆ. ಹಮಾಸ್ ಉಪನಾಯಕ ಸಲೇಹ್ ಅಲ್ ಅರೌರಿ, ಇಸ್ಲಾಮಿಕ್ ಜಿಹಾದ್ನ ನಾಯಕ ಜೈದ್ ಅಲ್ ನಖ್ಲಾ ಜೊತೆ ರಹಸ್ಯ ಸಭೆ ನಡೆಸಿದ್ದು, ಸಭೆಯಲ್ಲಿ ಗಾಜಾಪಟ್ಟಿಯನ್ನ ಗೆಲ್ಲಲು ಮತ್ತು ಪ್ಯಾಲೆಸ್ತೀನಿಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಪ್ರತಿದಾಳಿ ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ. ಉಗ್ರ ಸಂಘಟನೆಗಳ ರಹಸ್ಯ ಸಭೆ, ಗಲ್ಫ್ ರಾಷ್ಟ್ರಗಳ ಯುದ್ಧೋತ್ಸಾಹದ ನಡುವೆ ಹಲವು ದೇಶಗಳಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಅಷ್ಟೇ ಯಾಕೆ ಇಸ್ರೇಲ್ ಗೆ ಬೆಂಬಲ ನೀಡಿರುವ ಅಮೆರಿಕದಲ್ಲೂ ಪ್ಯಾಲೆಸ್ತೀನ್ ಪರವಾಗಿ ದೊಡ್ಡ ಮಟ್ಟದಲ್ಲಿ ಹೋರಾಟಗಳು ನಡೆದಿವೆ. ಯಾಕಂದ್ರೆ ಇಸ್ರೇಲ್ ನಡೆಸುತ್ತಿರುವ ಮಾರಣ ಹೋಮ ಜನರನ್ನ ಕೆರಳುವಂತೆ ಮಾಡಿದೆ. ಹಮಾಸ್ ಬಂಡುಕೋರರ ಸರ್ವನಾಶಕ್ಕಾಗಿ ಇಡೀ ಗಾಜಾಪಟ್ಟಿಯನ್ನೇ ಧ್ವಂಸ ಮಾಡುತ್ತಿರೋದು, ವಿದ್ಯುತ್, ಮೂಲಸೌಕರ್ಯ ಸೇರಿದಂತೆ ಎಲ್ಲವನ್ನೂ ಬಂದ್ ಮಾಡಿರೋದು, ಆಸ್ಪತ್ರೆಗಳ ಮೇಲಿನ ದಾಳಿ, ಪುಟ್ಟ ಪುಟ್ಟ ಮಕ್ಕಳ ಸಾವು ಜಗತ್ತಿನ ಮುಂದಿದೆ. ಇದೇ ಕಾರಣಕ್ಕೆ ಹಲವು ರಾಷ್ಟ್ರಗಳಲ್ಲಿ ಯಹೂದಿ ರಾಷ್ಟ್ರದ ವಿರುದ್ಧ ಆಕ್ರೋಶ ಭುಗಿಲೇಳುತ್ತಿದೆ. ಇತ್ತೀಚೆಗಷ್ಟೇ ರಷ್ಯಾದಲ್ಲಿ ಇಸ್ರೇಲ್ ನಿಂದ ಬಂದ ವಿಮಾನಕ್ಕೆ ಮುತ್ತಿಗೆ ಕೂಡ ಹಾಕಲಾಗಿದೆ. ಅರೆ ವಿಮಾನಕ್ಕೆ ಯಾಕೆ ಮುತ್ತಿಗೆ ಹಾಕಿದ್ರು ಅಂತಾ ನಿಮಗೆ ಅನ್ನಿಸಬಹುದು. ಅದಕ್ಕೆ ಕಾರಣವೂ ಇದೆ.
ಪ್ಯಾಲೆಸ್ತೀನ್ನ ಗಾಜಾಪಟ್ಟಿ ಮೇಲೆ ಇಸ್ರೇಲ್ ನಡೆಸುತ್ತಿರುವ ಅಮಾನವೀಯ ದಾಳಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇಸ್ರೇಲ್ ರಾಷ್ಟ್ರದ ಪ್ರಜೆಗಳನ್ನು ಗುರಿಯಾಗಿಸಿ ಇತರೆ ರಾಷ್ಟ್ರಗಳಲ್ಲಿ ಅವರನ್ನು ವಿರೋಧಿಸುವ ಕೆಲಸ ನಡೆಯುತ್ತಿದೆ. ಇಸ್ರೇಲ್ ನಿಂದ ರಷ್ಯಾಗೆ ವಿಮಾನವೊಂದು ಆಗಮಿಸುತ್ತಿದ್ದು, ಡಾಗೆಸ್ತಾನ್ ಪ್ರಾಂತ್ಯದ ಮಖಚ್ಕಲಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ಈ ವಿಮಾನ ಇಸ್ರೇಲ್ನಿಂದ ಬಂದಿದ್ದು, ವಿಮಾನದಲ್ಲಿ ಇಸ್ರೇಲ್ ಪ್ರಜೆಗಳಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಕೂಡಲೇ ರಷ್ಯಾದಲ್ಲಿದ್ದ ಪ್ಯಾಲೆಸ್ತೀನ್ ಮೂಲದ ನೂರಾರು ಪ್ರಜೆಗಳು ತಮ್ಮ ದೇಶದ ಧ್ವಜವನ್ನು ಹಿಡಿದು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ್ದಾರೆ. ಇಸ್ರೇಲ್ ಪ್ರಜೆಗಳು ಎಂದು ಭಾವಿಸಿ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನ ತಡೆದಿದ್ದಾರೆ. ನೀವು ಯಾರು? ಎಲ್ಲಿಂದ ಬಂದಿದ್ದು? ಪಾಸ್ಪೋರ್ಟ್ ಗಳನ್ನು ತೋರಿಸಿ. ಗಾಜಾಪಟ್ಟಿಯಲ್ಲಿನ ಪುಟ್ಟ ಪುಟ್ಟ ಮಕ್ಕಳನ್ನು ಕೊಂದವರಿಗೆ ಇಲ್ಲಿ ಜಾಗವಿಲ್ಲ ಎಂಬ ಫಲಕಗಳನ್ನು ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ಹಾಗೇ ಮತ್ತೊಂದಷ್ಟು ಜನರ ಗುಂಪು ವಿಮಾನ ನಿಲ್ದಾಣದ ಟರ್ಮಿನಲ್ ನೊಳಗೆ ಬಾಗಿಲುಗಳನ್ನು ಹೊಡೆಯಲು ಯತ್ನಿಸಿದೆ. ಯಹೂದಿ ರಾಷ್ಟ್ರದ ನಿರಾಶ್ರಿತರು ಇಲ್ಲಿಗೆ ಬರಬಾರದು. ತಮ್ಮ ರಾಷ್ಟ್ರಕ್ಕೆ ವಾಪಸ್ ಹೋಗುವಂತೆ ವಿಮಾನದಲ್ಲಿದ್ದವರಿಗೆ ಒತ್ತಾಯ ಮಾಡಿದ್ದಾರೆ. ಈ ವೇಳೆ ತನ್ನ ಪ್ರಜೆಗಳನ್ನು ರಷ್ಯಾ ರಕ್ಷಣೆ ಮಾಡಬೇಕು ಎಂದು ಇಸ್ರೇಲ್ ಒತ್ತಾಯಿಸಿದೆ. ಬಳಿಕ ರಷ್ಯಾ ಡಾಗೆಸ್ತಾನ್ ಗವರ್ನರ್ ಘಟನೆಗೆ ಕಾರಣರಾದವರನ್ನು ಶಿಕ್ಷಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ವಿಮಾನನಿಲ್ದಾಣದಲ್ಲಿ ಪ್ಯಾಲೆಸ್ತೀನ್ ಪ್ರಜೆಗಳ ಪ್ರತಿಭಟನೆ ವೇಳೆ ಹಲವರು ಗಾಯಗೊಂಡಿದ್ದಾರೆ. ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ಕಾರಣ ನವೆಂಬರ್ 6ರವರೆಗೆ ವಿಮಾನ ನಿಲ್ದಾಣವನ್ನೇ ಸಂಪೂರ್ಣವಾಗಿ ಮುಚ್ಚಲಾಗಿದೆ. ಈ ಮೂಲಕ ಇಸ್ರೇಲ್ -ಪ್ಯಾಲೆಸ್ತೀನ್ ನಡುವಿನ ಯುದ್ಧ ಮತ್ತೊಂದು ಹಂತಕ್ಕೆ ತಲುಪುತ್ತಿದೆ. ಯೆಮನ್ ರಾಷ್ಟ್ರ ಅಧಿಕೃತವಾಗಿ ಯುದ್ಧಕ್ಕೆ ಇಳಿದಿದೆ. ಗಲ್ಫ್ ರಾಷ್ಟ್ರಗಳು ಇಸ್ರೇಲ್ ಸೇನೆ ವಿರುದ್ಧ ಮುಗಿಬೀಳೋಕೆ ತುದಿಗಾಲಲ್ಲಿ ನಿಂತಿವೆ. ಹಾಗೇನಾದ್ರೂ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ವಿರುದ್ಧ ಯುದ್ಧ ಸಾರಿದ್ರೆ ಆದ್ರೆ ಇಸ್ರೇಲ್ ಪರ ನಿಂತಿರುವ ಅಮೆರಿಕ ಕೂಡ ಅಖಾಡಕ್ಕೆ ಇಳಿಯಬೇಕಾಗುತ್ತದೆ. ಬಳಿಕ ನಡೆಯೋ ಘೋರ ಕದನ ಮತ್ತೆಷ್ಟು ನಗರಗಳನ್ನ ನರಕ ಮಾಡುತ್ತೋ ಅನ್ನೋದೇ ಆತಂಕದ ವಿಚಾರ.