ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮತ್ತೊಂದು ಅಗ್ನಿ ಅವಘಡ! – ಮನೆಯ ಸಿಲಿಂಡರ್ ಸ್ಫೋಟ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಗ್ನಿ ಅವಘಡ ಮುಂದುವರಿದಿದೆ. ಕೊರಮಂಗಲದ ಅಗ್ನಿ ಅವಘಡ ಮುನ್ನವೇ ಈ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ಬಳಿಯ ಬನ್ನೇರುಘಟ್ಟದ ಸುದರ್ಶನ್ ಲೇಔಟ್ನ ಮನೆಯೊಂದರಲ್ಲಿನ ಸಿಲಿಂಡರ್ ಸ್ಫೋಟಗೊಂಡಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ಮುಂಜಾನೆ ಈ ಅವಘಡ ಸಂಭವಿದೆ. ರಾಜೇಂದ್ರ ಎಂದಿನಂತೆ ಬೆಳಿಗ್ಗೆ 5 ಗಂಟೆಗೆ ಸಿಲಿಂಡರ್ ಆನ್ ಮಾಡಲು ಹೋಗಿದ್ದರು. ಈ ವೇಳೆ ಏಕಾಏಕಿ ಸಿಲಿಂಡರ್ ಸ್ಪೋಟಗೊಂಡಿದೆ. ಸ್ಪೋಟದಿಂದಾಗಿ ರಾಜೆಂದ್ರ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಪೋಟ ಸಂಭವಿಸಿದ ಮನೆಯಲ್ಲಿ ರಾಜೇಂದ್ರ ಹಾಗೂ ಮಗಳು ಇದ್ದರು.
ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ 3-4 ಮನೆಗಳಿಗೂ ಹಾನಿಯಾಗಿದೆ. ಅಕ್ಕಪಕ್ಕ ಮನೆಯ ಬಾಗಿಲು, ಡೋರ್ ಹಾಗೂ ಮನೆಯಲ್ಲಿದ್ದ ವಸ್ತುಗಳೆಲ್ಲ ಛಿದ್ರ ಛಿದ್ರ ಆಗಿವೆ. ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಹಾಗೂ ಬೈಕ್ಗಳಿಗೂ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿ, ಬನ್ನೇರುಘಟ್ಟ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಮಾರ್ಗಸೂಚಿ ಬಿಡುಗಡೆ – ಎಲ್ಲೆಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ?
ಅಕ್ಟೋಬರ್ 18 ರಂದು ಬೆಂಗಳೂರು ನಗರದ ಕೊರಮಂಗಲದ ಫೋರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಷೋ ರೂಂನ ನಾಲ್ಕನೇ ಮಹಡಿಯಲ್ಲಿದ್ದ ಮಡ್ ಪೈಪ್ ಹುಕ್ಕಾ ಕೆಫೆನಲ್ಲಿದ್ದ ಕಟ್ಟಡದಲ್ಲಿದ್ದ 8 ರಿಂದ 10 ಸಿಲಿಂಡರ್ಗಳು ಸ್ಫೋಟಗೊಂಡಿದ್ದವು. ಪ್ರಾಣ ಉಳಿಸಿಕೊಳ್ಳಲು ಪ್ರೇಮ್ ಎಂಬುವರು ನಾಲ್ಕನೇ ಮಹಡಿಯಿಂದ ಗಿಡದ ಮೇಲೆ ಜಿಗಿದಿದ್ದರು. ಅವರಿಗೆ ಗಾಯಗಳಾಗಿದ್ದು, ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಕ್ಕದ ಕಟ್ಟಡಕ್ಕೂ ಬೆಂಕಿ ಹರಡಿತ್ತು. ಈ ಅವಘಡಕ್ಕೂ ಮುನ್ನ ಅಂದರೆ ಅಕ್ಟೋಬರ್ 8 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಲಾರಿಯಿಂದ ಪಟಾಕಿ ಅನ್ಲೋಡ್ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ ಪಟಾಕಿ ಅಂಗಡಿ ಹೊತ್ತಿ ಉರಿದಿತ್ತು. ಅವಘಡದಿಂದ 17 ಜನರು ಮೃತಪಟ್ಟಿದ್ದರು. ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗಿತ್ತು. 1 ಕ್ಯಾಂಟ್ರೋ, 2 ಬೊಲೆರೋ, 7 ಬೈಕ್ಗಳು ಸಹ ಬೆಂಕಿಗಾಹುತಿ ಆಗಿದ್ದವು. ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದರು.