ಇಸ್ರೇಲ್ ಒತ್ತಾಯಕ್ಕೆ ಮಣಿದು ಹಮಾಸ್ ಗೆ ಉಗ್ರ ಪಟ್ಟ ಕಟ್ಟುತ್ತಾ ಭಾರತ – ಭಯೋತ್ಪಾದಕ ಸಂಘಟನೆ ಎಂದು ಘೋಷಿಸುತ್ತಾರಾ ಮೋದಿ?
ಹಮಾಸ್ ಉಗ್ರರ ನಿರ್ನಾಮಕ್ಕೆ ಪಣ ತೊಟ್ಟಿರುವ ಇಸ್ರೇಲ್ ಸೇನೆ ಪ್ಯಾಲೆಸ್ತೀನ್ನ ನಗರವನ್ನೇ ನಿರ್ನಾಮ ಮಾಡುತ್ತಿದೆ. ರಾಕೆಟ್ಗಳ ಸುರಿಮಳೆಗೆ ಇಡೀ ಗಾಜಾಪಟ್ಟಿಯೇ ಸ್ಮಶಾನದಂತಾಗಿದೆ. ಇಸ್ರೇಲ್ ಭೂಸೇನೆ ಗಾಜಾಪಟ್ಟಿಗೆ ನುಗ್ಗಿದ್ದು ಹಮಾಸ್ ಉಗ್ರರನ್ನ ಹುಡುಕಿ ಹುಡುಕಿ ಕೊಲ್ಲುತ್ತಿದೆ.. ಸುರಂಗಗಳಲ್ಲಿ ಅಡಗಿರುವ ಬಂಡುಕೋರರನ್ನ ಬಗ್ಗುಬಡಿಯಲು ಸ್ಪಾಂಜ್ ಬಾಂಬ್ಗಳನ್ನ ಪ್ರಯೋಗಿಸಲಾಗುತ್ತಿದೆ. ಯುದ್ಧದ ತೀವ್ರತೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಇಡೀ ವಿಶ್ವವೇ ಆತಂಕದಿಂದ ನೋಡುತ್ತಿದೆ. ಇದರ ನಡುವೆ ಇಸ್ರೇಲ್ ಭಾರತದ ಮೇಲೆ ಒಂದು ಒತ್ತಡವನ್ನ ಹೇರುತ್ತಿದೆ.
ಯುದ್ಧ ನಡೆಯುತ್ತಿರೋದು ಹಮಾಸ್ ಮತ್ತು ಇಸ್ರೇಲ್ ನಡುವೆ ಆದ್ರೂ ಇತರೆ ರಾಷ್ಟ್ರಗಳೂ ಬಣಗಳಾಗಿ ಬದಲಾಗುತ್ತಿವೆ. ಯುದ್ಧದ ನಡುವೆಯೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ಗೆ ಭೇಟಿ ನೀಡಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವ್ರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ರು. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಅಭಯ ನೀಡಿದ್ದರು. ಬಳಿಕ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಇಸ್ರೇಲ್ಗೆ ತೆರಳಿ ನೆತನ್ಯಾಹು ಪರ ಬ್ಯಾಟ್ ಬೀಸಿದ್ರು. ಅಷ್ಟೇ ಅಲ್ಲದೆ ಫ್ರಾನ್ಸ್, ಇಟಲಿ ಸೇರಿದಂತೆ ಹಲವು ರಾಷ್ಟ್ರಗಳು ಬಹಿರಂಗವಾಗಿ ಇಸ್ರೇಲ್ಗೆ ಬೆಂಬಲ ಘೋಷಿಸಿವೆ. ಹಾಗೇ ಇರಾನ್ ಸೇರಿದಂತೆ ಅರಬ್ ರಾಷ್ಟ್ರಗಳು ಪ್ಯಾಲೆಸ್ತೀನ್ ಬೆನ್ನಿಗೆ ನಿಂತಿವೆ. ಆದ್ರೆ ಈ ವಿಚಾರದಲ್ಲಿ ಮಾತ್ರ ಭಾರತ ತಟಸ್ಥ ನಿಲುವು ತಾಳಿದೆ. ಇಸ್ರೇಲ್ ಅಥವಾ ಪ್ಯಾಲೆಸ್ತೀನ್ಗೆ ಅಧಿಕೃತವಾಗಿ ಬೆಂಬಲ ಘೋಷಿಸಿಲ್ಲ. ಮಾನವೀಯ ನೆಲೆಯಿಂದ ಗಾಜಾಪಟ್ಟಿಗೆ ಔಷಧಿ ಸೇರಿದಂತೆ ಆಹಾರ, ಅಗತ್ಯ ವಸ್ತುಗಳನ್ನ ಪೂರೈಕೆ ಮಾಡಿದೆ. ಆದ್ರೀಗ ಇಸ್ರೇಲ್ ರಾಷ್ಟ್ರ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸುವಂತೆ ಭಾರತವನ್ನ ಒತ್ತಾಯಿಸುತ್ತಿದೆ.
ಇತರ ರಾಷ್ಟ್ರಗಳಂತೆ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಪರಿಗಣಿಸಿ ನಿಷೇಧಿಸಲು ಭಾರತಕ್ಕೆ ಸೂಕ್ತ ಸಮಯ ಬಂದಿದೆ ಎಂದು ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಹೇಳಿದ್ದಾರೆ. ಹಮಾಸ್ ವಿರುದ್ಧದ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ ಇಸ್ರೇಲ್ಗೆ ಶೇ.100 ರಷ್ಟು ಬೆಂಬಲ ನೀಡಿದ್ದಕ್ಕೆ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಕ್ರೂರ ದಾಳಿ ನಡೆಸಿದ ನಂತರ ಹಮಾಸ್ ಉಗ್ರ ಸಂಘಟನೆ ಎಂದು ಘೋಷಿಸಲು ಇಸ್ರೇಲ್ ಸಂಬಂಧಿತ ಭಾರತೀಯ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಮೊದಲ ವಿಶ್ವ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರು. ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತ ನಮಗೆ ದೃಢವಾಗಿ ಬೆಂಬಲ ನೀಡುತ್ತಿದೆ. ಅಲ್ಲದೇ ಪ್ರಮುಖ ದೇಶಗಳು ನಮ್ಮೊಂದಿಗಿವೆ ಎಂದು ಗಿಲೋನ್ ಹೇಳಿದ್ದಾರೆ.
ಯುದ್ಧ ಆರಂಭವಾಗಲೇ ಇಸ್ರೇಲ್ ಪ್ರಧಾನಿ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ದೂರವಾಣಿಯಲ್ಲಿ ಮಾತನಾಡಿದ್ದರು. ನಾವು ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಸಂಕಷ್ಟದ ಸಮಯದಲ್ಲಿ ಭಾರತದ ಜನತೆ ಇಸ್ರೇಲ್ ಜೊತೆಗಿದ್ದಾರೆ ಎಂದಿದ್ದರು. ಇದರ ನಡುವೆ ಪ್ಯಾಲೆಸ್ತೀನಿಯಾದವರಿಗೆ ಸಹಾಯ ಮಾಡಲು ಭಾರತವು ಅಗತ್ಯ ವಸ್ತುಗಳನ್ನು ಕಳುಹಿಸಿದೆ. ಗಾಜಾಪಟ್ಟಿ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಪ್ಯಾಲೆಸ್ತೀನ್ ನಾಗರಿಕರ ಮಾರಣಹೋಮ ನಡೆಯುತ್ತಿದೆ. ಹೀಗಾಗಿ ಯುದ್ಧ ನಿಲ್ಲಿಸಿ ಜನರ ಜೀವ ಉಳಿಸಿ ಎಂದು ಪ್ಯಾಲೆಸ್ತೀನ್ ರಾಯಭಾರಿ ವಿಶ್ವಸಂಸ್ಥೆಯ ಸಭೆಯಲ್ಲಿ ಮನವಿ ಮಾಡಿದ್ದಾರೆ. ಆದ್ರೆ ಇಸ್ರೇಲ್ ರಾಜತಾಂತ್ರಿಕ ಅಧಿಕಾರಿ ಹಮಾಸ್ ಬಂಡುಕೋರರು ನಿರ್ನಾಮವಾಗುವವರೆಗೂ ಯುದ್ಧ ನಿಲ್ಲಲ್ಲ ಎಂದು ಘೋಷಿಸಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಇಸ್ರೇಲ್-ಹಮಾಸ್ ಯುದ್ಧವನ್ನು ನಿಲ್ಲಿಸುವ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ. ಪ್ರಸ್ತಾವನೆಯ ಪರವಾಗಿ 120 ಮತಗಳು ಚಲಾವಣೆಗೊಂಡರೆ, 14 ದೇಶಗಳು ವಿರೋಧವಾಗಿ ಮತ ಚಲಾಯಿಸಿವೆ. ಆದರೆ ಭಾರತ ಸೇರಿದಂತೆ 45 ದೇಶಗಳು ಮತದಾನ ಮಾಡಿಲ್ಲ. ಅಮೆರಿಕ ಮತ್ತು ಇಸ್ರೇಲ್ ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿವೆ. ಇಸ್ರೇಲ್-ಹಮಾಸ್ ಸಂಘರ್ಷಕ್ಕೆ ಸಂಬಂಧಪಟ್ಟಂತೆ ಗಾಜಾದಲ್ಲಿ ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕೆಂಬ ವಿಶ್ವಸಂಸ್ಥೆಯ ಮಹಾಸಭೆಯ ನಿರ್ಣಯದಿಂದ ಭಾರತ ಹೊರಗುಳಿದಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ಉಕ್ರೇನ್ ಮತ್ತು ಯುಕೆ ದೇಶಗಳು ಸೇರಿದೆ. ಇದರ ನಡುವೆ ಹಮಾಸ್ ಅನ್ನು ಉಗ್ರಸಂಘಟನೆಯೆಂದು ಘೋಷಿಸುವಂತೆ ಭಾರತಕ್ಕೆ ಇಸ್ರೇಲ್ ಒತ್ತಾಯಿಸುತ್ತಿದೆ. ಈಗಾಗಲೇ ಇಸ್ರೇಲ್, ಅಮೆರಿಕ, ಯುರೋಪಿಯನ್ ಒಕ್ಕೂಟ, ಕೆನಡಾ, ಈಜಿಪ್ಟ್ ಮತ್ತು ಜಪಾನ್ ದೇಶಗಳು ಹಮಾಸ್ ಅನ್ನು ಜಾಗತಿಕವಾಗಿ ಉಗ್ರ ಸಂಘಟನೆ ಎಂದು ಘೋಷಿಸಿವೆ.
1987ರಲ್ಲಿ ಈಜಿಪ್ಟ್ನ ಬ್ರದರ್ಹುಡ್ ಗುಂಪಿನ ಅಂಗ ಸಂಘಟನೆಯಾಗಿ ಅಹ್ಮದ್ ಯಾಸಿನ್ ಮತ್ತು ಅಬ್ದೆಲ್ ಅಜೀಜ್ ಅಲ್ ರಾಂಟಿಸ್ಸಿ ಹಮಾಸ್ ಅನ್ನು ಸ್ಥಾಪನೆ ಮಾಡಿದ್ರು. ಹಮಾಸ್ ವಿಸ್ತೃತ ರೂಪ ಹರಕತ್ ಅಲ್- ಮುಕವಾಮಹ್ ಅಲ್ ಇಸ್ಲಾಮಿಯ್ಯಾ ಎಂದು. ಅಂದರೆ ಇಸ್ಲಾಮಿಕ್ ಪ್ರತಿರೋಧ ಚಳವಳಿ, ಹಮಾಸ್ ಎಂದರೆ ಉತ್ಸಾಹ ಎಂಬ ಅರ್ಥ. ಇಸ್ರೇಲ್, ಪಶ್ಚಿಮ ಬ್ಯಾಂಕ್ ಮತ್ತು ಗಾಜಾ ಪಟ್ಟಿ ಒಳಗೊಂಡ ಇಸ್ಲಾಮಿಕ್ ದೇಶ ಸ್ಥಾಪನೆ ಗುರಿ ಹೊಂದಿರುವ ಹಮಾಸ್ಗೆ ಮಧ್ಯಪ್ರಾಚ್ಯದ ಇತರೆ ದೇಶಗಳು ಬೆಂಬಲ ನೀಡುತ್ತಿವೆ. ಇರಾನ್, ಸಿರಿಯಾ ಮತ್ತು ಯೆಮನ್ ದೇಶಗಳು ದಾಳಿ ವಿಚಾರವಾಗಿ ಹಮಾಸ್ ಬೆನ್ನಿಗೆ ನಿಲ್ಲುತ್ತವೆ. ಹಮಾಸ್ ಉಗ್ರರು ಗಾಜಾ ಪಟ್ಟಿಯಲ್ಲಿ ಪ್ರಾಬಲ್ಯವಾಗಿ ನೆಲೆಯೂರಿದ್ದು, ಅಲ್ಲಿಂದಲೇ ಇಸ್ರೇಲ್ ಮೇಲೆ ದಾಳಿ ಮಾಡುತ್ತಾರೆ. ಗಾಜಾದ ವಾಯು ಪ್ರದೇಶ ಮತ್ತು ಸಮುದ್ರ ತೀರದ ಮೇಲೆ ಇಸ್ರೇಲ್ ನಿಯಂತ್ರಣ ಹೊಂದಿದ್ದು, ಬಾರ್ಡರ್ ಕ್ರಾಸಿಂಗ್ ನಲ್ಲಿ ಒಳಬರಲು ಹಾಗೂ ಹೊರ ಹೋಗಲು ಅನುಮತಿ ಕಡ್ಡಾಯಗೊಳಿಸಿದೆ. ಯಹೋದಿಗಳ ಇಸ್ರೇಲ್ ದೇಶವನ್ನ ಪರಿಗಣನೆಗೆ ತೆಗೆದುಕೊಳ್ಳದ ಹಮಾಸ್ ಬಂಡುಕೋರರು ಇಸ್ರೇಲ್ ವಿರುದ್ಧ ಹೋರಾಡುತ್ತಲೇ ಇದ್ದಾರೆ. 2017ರಲ್ಲಿ ಹಮಾಸ್ ನ ಸರ್ವೋಚ್ಚ ನಾಯಕನಾಗಿ ಇಸ್ಮಾಯಿಲ್ ಹನಿಯೆಹ್ನನ್ನ ಆಯ್ಕೆ ಮಾಡಿದ್ದು, ಸದ್ಯ ಈತನೇ ಹಮಾಸ್ ಪಡೆಯನ್ನ ಮುಂದುವರಿಸುತ್ತಿದ್ದಾನೆ.
ಇನ್ನು ಇಸ್ರೇಲ್ 1948ರಲ್ಲಿ ದೇಶವಾಗಿ ಘೋಷಣೆಯಾಗಿತ್ತು. ಯಹೂದಿಗಳ ದೇಶವನ್ನು ಪ್ಯಾಲೆಸ್ತೀನ್ ಇದುವರೆಗೂ ಗುರುತಿಸಿಲ್ಲ. ಸುತ್ತಲೂ ಇಸ್ಲಾಮಿಕ್ ರಾಷ್ಟ್ರಗಳ ಒತ್ತಡ ಹಾಗೂ ಬೆದರಿಕೆಗಳನ್ನು ಎದುರಿಸುತ್ತಾ ಬಂದಿರುವ ಇಸ್ರೇಲ್, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿ ಹೋರಾಟ ನಡೆಸುತ್ತಿದೆ. ಈ ಬಾರಿ ಹಮಾಸ್ ಪಡೆ ಅತಿದೊಡ್ಡ ದಾಳಿ ನಡೆಸಿದ್ದು ಇಸ್ರೇಲ್ ಸೇನೆ ಕೂಡ ಪ್ರತಿಯಾಗಿ ಮಾರಣಹೋಮ ನಡೆಸುತ್ತಿದೆ. ಈ ಬೆಳವಣಿಗೆಗಳ ನಡುವೆ ಹಮಾಸ್ ನಿಯೋಗ ರಷ್ಯಾಗೆ ಭೇಟಿ ನೀಡಿದೆ. ಇರಾನ್ ಮಧ್ಯಸ್ತಿಕೆಯಲ್ಲಿ ರಷ್ಯಾತೆ ತೆರಳಿದ್ದು, ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೆದಂತೆ ಕಾಣ್ತಿದೆ. ಯಾಕೆ ಅಂದ್ರೆ ಅದಕ್ಕೆ ಕಾರಣ ಬದ್ಧವೈರಿ ರಾಷ್ಟ್ರಗಳ ನಡುವಿನ ದ್ವೇಷ.
ಇದನ್ನೂ ಓದಿ: ಮಾಲ್ಡೀವ್ಸ್ ನಲ್ಲಿ ‘ಇಂಡಿಯಾ ಔಟ್’ ಅಭಿಯಾನ – ಭಾರತದ ನೆರವನ್ನೇ ಮರೆತರಾ ನೂತನ ಅಧ್ಯಕ್ಷ?
ಹಮಾಸ್ ಮೇಲೆ ಯುದ್ಧ ಘೋಷಿಸುತ್ತಿದ್ದಂತೆ ಹಿಂದೆ ಮುಂದೆ ಯೋಚಿಸದೆ ಇಸ್ರೇಲ್ ಗೆ ಅಮೆರಿಕ ಬೆಂಬಲ ಘೋಷಿಸಿತ್ತು. ಖುದ್ದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಗೆ ಭೇಟಿ ನೀಡಿ ಇಸ್ರೇಲ್ ಪ್ರಧಾನಿ ಜೊತೆ ಚರ್ಚೆ ನಡೆಸಿದ್ದರು. ಬಳಿಕ ಇಸ್ರೇಲ್ಗೆ ಶಸ್ತ್ರಾಸ್ತ್ರಗಳ ಪೂರೈಕೆ ಜೊತೆ ಯುದ್ಧನೌಕೆಯನ್ನೂ ಅಮೆರಿಕದಿಂದ ಕಳಿಸಲಾಗಿತ್ತು. ಇದರ ನಡುವೆ ಸಿರಿಯಾದಲ್ಲಿ ಇರಾನ್ ಬೆಂಬಲಿತ ಉಗ್ರ ಸಂಘಟನೆಗಳ ಮೇಲೆ ಅಮೆರಿಕ ದಾಳಿ ದಾಳಿ ನಡೆಸಿದೆ. ಮತ್ತೊಂದೆಡೆ ಹಮಾಸ್ ನ ನಿಯೋಗವನ್ನ ರಷ್ಯಾದ ಮಾಸ್ಕೋಗೆ ಕರೆಸಿಕೊಂಡು ರಷ್ಯಾದ ಉಪ ವಿದೇಶಾಂಗ ಸಚಿವ ಮಿಖಾಯಿಲ್ ಬೊಗ್ಡಾನೋವ್ ಚರ್ಚೆ ನಡೆಸಿದ್ದಾರೆ. ಇರಾನ್ನ ಉಪ ವಿದೇಶಾಂಗ ಸಚಿವ ಅಲಿ ಬಘೇರಿ ಕಾನಿ, ಹಮಾಸ್ ನ ಅಂತರರಾಷ್ಟ್ರೀಯ ಸಂಬಂಧಗಳ ಕಚೇರಿ ಮುಖ್ಯಸ್ಥ ಮೂಸಾ ಅಬು ಮರ್ಜೌಕ್, ಗಾಜಾದ ಮಾಜಿ ಹಮಾಸ್ ಆರೋಗ್ಯ ಸಚಿವ ಬಾಸೆಮ್ ನೈಮ್ ಸೇರಿದಂತೆ ಹಲವರು ಭಾಗಿಯಾಗಿ ರಷ್ಯಾದ ಮಾಸ್ಕೋದಲ್ಲಿ ಇವರೆಲ್ಲರೂ ಚರ್ಚೆ ನಡೆಸಿದ್ದಾರೆ.
ಅಷ್ಟಕ್ಕೂ ಇಲ್ಲಿ ಮೊದ್ಲಿಂದಲೂ ಹಮಾಸ್ಗೆ ಬೆಂಬಲ ನೀಡ್ತಿರೋದೇ ಇರಾನ್. ಹಣಕಾಸಿನ ನೆರವು, ಶಸ್ತ್ರಾಸ್ತ್ರಗಳ ಪೂರೈಕೆ ಸೇರಿದಂತೆ ಹಲವು ಸೌಲಭ್ಯಗಳನ್ನ ಒದಗಿಸುತ್ತಿದೆ. ಇದೀಗ ಇರಾನ್ ಮಧ್ಯಸ್ಥಿಕೆಯಲ್ಲೇ ಹಮಾಸ್ ನಿಯೋಗ ರಷ್ಯಾಗೆ ತೆರಳಿ ಉಪ ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಿದ್ದಾರೆ. ಹಾಗಂತ ಹಮಾಸ್ ನಿಯೋಗ ಭೇಟಿಗೆ ಬಂದಿದೆ ಅಂತಾ ರಷ್ಯಾ ಏನು ದಿಢೀರ್ ಹಮಾಸ್ ಬೆನ್ನಿಗೆ ನಿಂತು ಶಸ್ತ್ರಾಸ್ತ್ರಗಳನ್ನ ಪೂರೈಸೋದಾಗ್ಲಿ, ಸೈನ್ಯ ಕಳಿಸೋದಾಗ್ಲಿ ಮಾಡಲ್ಲ. ಪ್ಯಾಲೆಸ್ತೀನ್ ಪರ ನಿಲ್ಲೋದ್ರಿಂದ ರಷ್ಯಾಗೇನು ಲಾಭ ಇಲ್ಲ. ಯಾಕಂದ್ರೆ ಒಂದೂವರೆ ವರ್ಷದಿಂದ ರಷ್ಯಾ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿದೆ. ಇದ್ರಿಂದಾಗಿ ಭಾರೀ ಹೊಡೆತವನ್ನೇ ತಿಂದಿದೆ. ತನ್ನ ಬಳಿಯೇ ಶಸ್ತ್ರಾಸ್ತ್ರಗಳಿದೆ ಉತ್ತರಕೊರಿಯಾದ ಮೊರೆ ಹೋಗಿದೆ. ಹೀಗಿರುವಾಗ ಹಮಾಸ್ ಗೆ ಜೊತೆಗೂಡಿ ಯುದ್ಧಕ್ಕಂತೂ ಧುಮುಕಲ್ಲ. ಆದ್ರೆ ನಮ್ಮ ಬೆಂಬಲ ಇದೆ ಅಂತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಿಕೊಳ್ಳುತ್ತೆ. ಯಾಕಂದ್ರೆ ರಷ್ಯಾದ ಬದ್ಧವೈರಿ ರಾಷ್ಟ್ರ ಅಂದ್ರೆ ಅದು ಅಮೆರಿಕ. ಅಮೆರಿಕ ಉತ್ತರ ಅಂದ್ರೆ ರಷ್ಯಾ ದಕ್ಷಿಣ ಎನ್ನುತ್ತೆ. ಎರಡೂ ರಾಷ್ಟ್ರಗಳ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಇದೇ ಕಾರಣಕ್ಕೆ ಅಮೆರಿಕ ಇಸ್ರೇಲ್ ಬೆನ್ನಿಗೆ ನಿಂತ್ರೆ ರಷ್ಯಾ ಹಮಾಸ್ ಪರ ಸಾಫ್ಟ್ ಕಾರ್ನರ್ ಹೊಂದಿದೆ. ಆದ್ರಿಲ್ಲಿ ನಾವು ಒಂದನ್ನ ಸೂಕ್ಷ್ಮವಾಗಿ ಗಮನಿಸಬೇಕು. ಈಗಾಗಲೇ ಇಸ್ರೇಲ್ ಪರ ಒಂದಷ್ಟು ರಾಷ್ಟ್ರಗಳು ಹಮಾಸ್ ಪರ ಮತ್ತೊಂದಷ್ಟು ದೇಶಗಳು ಬೆಂಬಲ ಘೋಷಿಸಿದೆ. ದಿನದಿನಕ್ಕೂ ಈ ಬೆಂಬಲಿತ ಬಣ ಹೆಚ್ಚುತ್ತಲೇ ಇದೆ. ಎರಡೂ ಕಡೆಯ ಕೂಟಗಳು ಪ್ರಬಲವಾಗುತ್ತಾ ಹೋದರೆ ಅದು 3ನೇ ಮಹಾಯುದ್ಧಕ್ಕೆ ಕುಮ್ಮಕ್ಕು ನೀಡೋದ್ರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ ಒಂದು ಮತ್ತು ಎರಡನೇ ಮಹಾಯುದ್ಧದಲ್ಲಿ ಕೂಟಗಳ ರಚನೆಯಿಂದಲೇ ಯುದ್ಧಗಳು ನಡೆದಿತ್ತು. ಹೀಗಾಗಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಮತ್ತೊಂದು ವಿಶ್ವಯುದ್ಧಕ್ಕೆ ಕಾರಣವಾಗುತ್ತಾ ಅನ್ನೋದೇ ಪ್ರಶ್ನೆ.