ಅಮರನಾಥ ಯಾತ್ರಿಕರಿಗೆ ಗುಡ್ ನ್ಯೂಸ್! – ಅಮರನಾಥ ಗುಹೆಗೆ ನಿರ್ಮಾಣಗೊಳ್ಳಲಿದೆ ರಸ್ತೆ
ಅಮರನಾಥ ಹಿಂದೂ ಧರ್ಮದ ಪವಿತ್ರ ಮತ್ತು ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಈ ಪವಿತ್ರ ಸ್ಥಾನವು ಸಮುದ್ರ ಮಟ್ಟದಿಂದ 13,600 ಅಡಿ ಎತ್ತರದಲ್ಲಿದೆ. ಭಾರತದ ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಈಶಾನ್ಯಕ್ಕೆ 135 ಕಿಮೀ ದೂರದಲ್ಲಿದೆ. ಕೆಲವರು ಅಮರನಾಥವನ್ನು ಸ್ವರ್ಗದ ದಾರಿ ಎಂದು ಕರೆದರೆ, ಕೆಲವರು ಮೋಕ್ಷದ ಸ್ಥಳ ಎಂದು ಕರೆಯುತ್ತಾರೆ. ಬಾಬಾ ಬರ್ಫಾನಿಯನ್ನು ಭೇಟಿ ಮಾಡಲು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇದೀಗ ಅಮರನಾಥ ಯಾತ್ರೆಗೆ ಗುಡ್ ನ್ಯೂಸ್ ಒಂದಿದೆ. ಯಾತ್ರಿಗಳ ಅನುಕೂಲಕ್ಕಾಗಿ ಪವಿತ್ರ ಅಮರನಾಥ ಗುಹೆಗೆ ರಸ್ತೆ ಮಾರ್ಗ ನಿರ್ಮಾಣ ಮಾಡಲಾಗುತ್ತಿದೆ.
ಅಮರನಾಥ ಯಾತ್ರೆಯಲ್ಲಿ ಲಕ್ಷಾಂತರ ಮಂದಿ ಹೋಗುತ್ತಾರೆ. ಆದರೆ ಅಮರನಾಥದ ಪವಿತ್ರ ಗುಹೆಯನ್ನು ತಲುಪುವುದು ಸುಲಭವಲ್ಲ. ದೀರ್ಘ ಪ್ರಯಾಣ ಮಾಡಬೇಕಾಗುತ್ತದೆ. ದುರ್ಗಮ ರಸ್ತೆಯಲ್ಲಿ ಸಾಗಬೇಕಾಗುತ್ತಿದೆ. ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದೀಗ ಯಾತ್ರಿಗಳ ಅನುಕೂಲಕ್ಕಾಗಿ ಪವಿತ್ರ ಅಮರನಾಥ ಗುಹೆಗೆ ರಸ್ತೆ ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಶೀಘ್ರದಲ್ಲೇ ಇದು ಜನ ಸೇವೆಗೆ ಲಭ್ಯವಾಗಲಿದೆ ಎಂದು ಗಡಿ ರಸ್ತೆ ಪ್ರಾಧಿಕಾರ ಹೇಳಿದೆ.
ಇದನ್ನೂ ಓದಿ: ಈ ದೇವಸ್ಥಾನದ ಹೆಸರು ಕೇಳಿದ್ರೆ ಪಾಕ್ ಸೇನೆಗೆ ಗಡಗಡ – ಪಾಕ್ ಯೋಧರಿಗೆ ದೇವಿ ಮೇಲೆ ಏಕೆ ಇಷ್ಟೊಂದು ಭಯ?
ಸಮುದ್ರ ಮಟ್ಟದಿಂದ ಸುಮಾರು 3888 ಮೀ. ಎತ್ತರದಲ್ಲಿರುವ ಈ ಗುಹೆಯ ಹಾದಿಯಲ್ಲಿ ಈಗಾಗಲೇ ಗಡಿ ರಸ್ತೆ ಪ್ರಾಧಿಕಾರ ರಸ್ತೆ ಅಗಲೀಕರಣ ಕಾರ್ಯವನ್ನು ಆರಂಭಿಸಿದೆ. ಬಾಲ್ಟಾಲ್ವರೆಗೆ ಬಹುಪಾಲು ರಸ್ತೆ ನಿರ್ಮಾಣವಾಗಿದೆ. ಸಣ್ಣ ಟ್ರಕ್ ಮತ್ತು ಇತರ ವಾಹನಗಳನ್ನು ಬಳಸಿಕೊಂಡು ಗುಹೆವರೆಗೂ ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ಪ್ರಾಧಿಕಾರ ಹೇಳಿದೆ.
ಅಲ್ಲದೇ ಚಂದನ್ಬಾರಿ ಕಡೆಯಿಂದ ಅಮರನಾಥಕ್ಕೆ ಹೋಗುವ ದಾರಿಯಲ್ಲಿ ಶೇಷನಾಗ್ ಮತ್ತು ಪಂಚತಾರಿಣಿ ನಡುವೆ ಸುಮಾರು 10.8 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ ಮಾಡಲು ಸಹ ಯೋಜಿಸಲಾಗಿದೆ. ಇದರಿಂದಾಗಿ ಹವಾಮಾನ ವೈಪರೀತ್ಯದ ಸಮಯದಲ್ಲೂ ಯಾತ್ರಿಗಳು ಸುರಕ್ಷಿತವಾಗಿ ಮತ್ತು ತಡೆಯಿಲ್ಲದೇ ಅಮರನಾಥ ಯಾತ್ರೆ ಕೈಗೊಳ್ಳಬಹುದಾಗಿದೆ. ಇದರೊಂದಿಗೆ ಪಂಚತಾರಿಣಿಯಿಂದ ಗುಹೆಯವರೆಗೆ 5 ಕಿ.ಮೀ. ಉದ್ದದ ಮತ್ತು ಐದುವರೆ ಮೀ. ಅಗಲದ ರಸ್ತೆ ನಿರ್ಮಾಣ ಸಹ ಮಾಡಲಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ. ಈ ರಸ್ತೆ ನಿರ್ಮಾಣವಾದರೆ ಅಮರನಾಥ ಯಾತ್ರಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಅಷ್ಟೇ ಅಲ್ಲದೇ ಕಡಿಮೆ ಅವಧಿಯಲ್ಲಿ ಅಮನಾಥ ಗುಹೆಗೆ ತಲುಪಬಹುದಾಗಿದೆ.