ಪರಮಾಣು ಪರೀಕ್ಷೆ ನಡೆಸಿದ ವಿಶ್ವದ ದೊಡ್ಡಣ್ಣ – ರಷ್ಯಾದ ಜಿದ್ದಿಗೆ ಎಡವಟ್ಟು ಮಾಡಿತಾ ಅಮೆರಿಕ?

ಪರಮಾಣು ಪರೀಕ್ಷೆ ನಡೆಸಿದ ವಿಶ್ವದ ದೊಡ್ಡಣ್ಣ – ರಷ್ಯಾದ ಜಿದ್ದಿಗೆ ಎಡವಟ್ಟು ಮಾಡಿತಾ ಅಮೆರಿಕ?

ರಷ್ಯಾ ಉಕ್ರೇನ್ ಯುದ್ಧ ಶುರುವಾಗಿ ಎರಡು ವರ್ಷಗಳಾಗ್ತಾ ಬಂತು. ಆದ್ರೆ ಸಂಘರ್ಷ ಮಾತ್ರ ನಿಂತಿಲ್ಲ. ಇದೀಗ ಇಸ್ರೇಲ್-ಹಮಾಸ್ ನಡುವಿನ ಕದನ ಜಗತ್ತನ್ನೇ ಇಬ್ಭಾಗ ಮಾಡ್ತಿದೆ. ದೇಶಗಳ ನಡುವಿನ ದ್ವೇಷಕ್ಕೆ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಳ್ತಿದ್ದಾರೆ. ಇಷ್ಟಾದ್ರೂ ಬುದ್ಧಿ ಕಲಿಯದ ನಾಯಕರು ಮತ್ತೊಂದು ವಿನಾಶಕಾರಿ ಅಸ್ತ್ರ ಪ್ರಯೋಗಿಸಲು ಸಜ್ಜಾಗ್ತಿದ್ದಾರೆ. ಪರಮಾಣು ಪರೀಕ್ಷೆ ಮೂಲಕ ಮೂರನೇ ವಿಶ್ವಯುದ್ಧದ ಭೀತಿ ಸೃಷ್ಟಿಸಿದ್ದಾರೆ. ಜಗತ್ತಿನ ಬಲಿಷ್ಠ ರಾಷ್ಟ್ರಗಳಾದ ಅಮೆರಿಕ ಮತ್ತು ರಷ್ಯಾ ಅಧಿಪತಿಗಳು ಸರ್ವನಾಶದ ಪರೀಕ್ಷೆಗೆ ಕೈ ಹಾಕಿದ್ದಾರೆ. ನ್ಯೂಕ್ಲಿಯರ್ ಬಾಂಬ್ ಗಳ ಪರೀಕ್ಷೆ ನಡೆಸುತ್ತಿದ್ದಾರೆ.

ಯುದ್ಧ ಅಂದ್ರೆನೆ ವಿನಾಶ. ರಾಷ್ಟ್ರಗಳ ನಡುವಿನ ಪ್ರತಿಷ್ಠೆಗೆ ಸಾವಿರಾರು ಮಂದಿಯ ಮಾರಣಹೋಮ ನಡೀತಿದೆ. ರಷ್ಯಾ, ಉಕ್ರೇನ್ ಹಾಗೂ ಇಸ್ರೇಲ್, ಪ್ಯಾಲೆಸ್ತೀನ್ ನಡುವಿನ ಕದನದಲ್ಲಿ ಹಲವು ನಗರಗಳು ಹೇಳಹೆಸರಿಲ್ಲದಂತಾಗಿವೆ. ಇಷ್ಟಾದ್ರೂ ಬುದ್ಧಿ ಕಲಿಯದ ರಾಷ್ಟ್ರಗಳು ಯುದ್ಧೋತ್ಸಾಹಿಗಳ ಬೆಂಬಲಕ್ಕೆ ನಿಂತಿದ್ದಾರೆ. ಈಗಾಗಲೇ ಎರಡೆರಡು ಮಹಾಯುದ್ಧ ಕಂಡಿರುವ ಜಗತ್ತಿಗೆ ಮತ್ತೊಂದು ಮಹಾಯುದ್ಧದ ಭೀತಿ ಎದರಾಗಿದೆ. ಜನತ್ತಿನ ಬಲಿಷ್ಠ ರಾಷ್ಟ್ರಗಳಾದ ಅಮೆರಿಕ ಹಾಗೂ ರಷ್ಯಾ ಪರಮಾಣು ಬಾಂಬ್ ಪರೀಕ್ಷೆಗೆ ಮುಂದಾಗಿದ್ದು, ಸರ್ವನಾಶದ ಮುನ್ಸೂಚನೆ ನೀಡುತ್ತಿದೆ. ಅಷ್ಟಕ್ಕೂ ಈ ನ್ಯೂಕ್ಲಿಯರ್ ಬಾಂಬ್​ಗಳು ಎಷ್ಟು ಡೇಂಜರಸ್ ಅನ್ನೋದಕ್ಕೆ 75 ವರ್ಷಗಳ ಹಿಂದೆ ನಡೆದಿದ್ದ ಘಟನೆ ಇನ್ನೂ ಜೀವಂತವಾಗಿದೆ. 1945ರ ಆಗಸ್ಟ್ 6 ಮತ್ತು ಆಗಸ್ಟ್ 9, ಇಡೀ ಮನುಕುಲವನ್ನೇ ಮುಗಿಸಲುವಂಥ ದಾಳಿ ನಡೆಸಲಾಗಿತ್ತು. ಎರಡನೇ ಮಹಾಯುದ್ಧದ ವೇಳೆ ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಹಾಕಿದ್ದ ಪರಮಾಣು ಬಾಂಬ್ ಎರಡು ನಗರಗಳನ್ನೇ ಭಸ್ಮ ಮಾಡಿತ್ತು. ಅಮೆರಿಕ ಎಸಗಿದ್ದ ಈ ಕ್ರೌರ್ಯ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಈ ದಾಳಿ ನಡೆದು ಮುಕ್ಕಾಲು ಶತಮಾನ ಕಳೆದ್ರೂ ಇವತ್ತಿಗೂ ಜಪಾನ್ ಜನರು ನರಳುತ್ತಿದ್ದಾರೆ. ಆರೋಗ್ಯ ಸಮಸ್ಯೆ ಕಾಡುತ್ತಿದೆ. ಭೂಮಿ ಫಲವತ್ತತೆಯನ್ನೇ ಕಳೆದುಕೊಂಡಿದೆ. ಇಂಥ ಘನಘೋರ ಸತ್ಯ ನಮ್ಮ ಕಣ್ಣ ಮುಂದಿದ್ರೂ ಜಗತ್ತಿನ ಬೇರೆ ದೇಶಗಳು ಮಾತ್ರ ಪಾಠ ಕಲಿತಂತೆ ಕಾಣ್ತಿಲ್ಲ. ಇದೇ ಕಾರಣಕ್ಕೆ ರಷ್ಯಾ ಮತ್ತು ಅಮೆರಿಕ ಮಧ್ಯೆ ದಿಢೀರ್ ಪರಮಾಣು ಅಸ್ತ್ರಗಳ ಪರೀಕ್ಷೆಗೆ ರೇಸ್ ಶುರುವಾಗಿದೆ.

ರಕ್ತಕ್ಕೆ ರಕ್ತ, ಸೇಡಿಗೆ ಸೇಡು ಎನ್ನುತ್ತಿರೋ ಇಸ್ರೇಲ್ ಹಾಗೂ ಹಮಾಸ್ ಯುದ್ಧ ಪ್ರತಿನಿತ್ಯ ನೂರಾರು ಜನರನ್ನ ಬಲಿ ಪಡೆಯುತ್ತಿದೆ. ಇದರ ನಡುವೆ ಬೇರೆ ಬೇರೆ ರಾಷ್ಟ್ರಗಳು ಬಣಗಳಾಗಿ ಬೇರ್ಪಟ್ಟಿರೋದು ಕೂಡ ಸ್ಪಷ್ಟವಾಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ಅಮೆರಿಕ ನಾಯಕರ ವಿರುದ್ಧ ಗುಡುಗಿದ್ದಾರೆ. ಉಕ್ರೇನ್ ವಿಚಾರದಲ್ಲಿ ತಲೆ ಹಾಕುತ್ತಿದ್ದ ಅಮೆರಿಕ ಈಗ ಯಾಕೆ ಯುದ್ಧ ನಿಲ್ಲಿಸುವ ಮಾತನಾಡಿಲ್ಲ ಎಂಬ ಪ್ರಶ್ನೆಯನ್ನ ಕೂಡ ಮುಂದಿಟ್ಟಿದ್ದಾರೆ. ಇಷ್ಟೆಲ್ಲಾ ಗೊಂದಲದ ನಡುವೆ ರಷ್ಯಾ ಮತ್ತೆ ಪರಮಾಣು ಅಸ್ತ್ರ ಪರೀಕ್ಷೆಗೆ ಮುಂದಾಗಿದೆ. ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಎಳ್ಳು-ನೀರು ಬಿಟ್ಟು ತನ್ನ ತಾಕತ್ ತೋರಿಸಲು ಹೊರಟಿದೆ. ಅಂದ್ರೆ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದವನ್ನ ರದ್ದುಗೊಳಿಸಲು ರಷ್ಯಾ ಸಂಸತ್​ನಲ್ಲಿ ಅನುಮೋದಿಸಲಾಗಿದೆ. ಇಂಥ ಸಮಯದಲ್ಲೇ ಅಮೆರಿಕ ಕೂಡ ಪರಮಾಣು ಪರೀಕ್ಷೆ ನಡೆಸಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಹಾಗೇನಾದ್ರೂ ಅಮೆರಿಕ, ರಷ್ಯಾ ರಾಷ್ಟ್ರಗಳು ಪರಮಾಣು ಪರೀಕ್ಷೆಗೆ ಮುಂದಾಗಿದ್ದೇ ಆದಲ್ಲಿ ಜಗತ್ತಿನ ಇತರೆ ರಾಷ್ಟ್ರಗಳು ತಣ್ಣನೆ ಕೂರಲು ಸಾಧ್ಯವೇ ಇಲ್ಲ. ಒಂದರ ಹಿಂದೆ ಒಂದರಂತೆ ಎಲ್ಲಾ ರಾಷ್ಟ್ರಗಳು ಪರಣಾಣು ಪರೀಕ್ಷೆಗೆ ಮುಂದಾಗಲಿವೆ. ಆಗ ಸ್ಪರ್ಧೆ ಶುರುವಾಗುತ್ತದೆ. ಹಾಗೇನಾದ್ರೂ ಆಗಿದ್ದೇ ಆದಲ್ಲಿ ಇಡೀ ವಿಶ್ವವೇ ವಿನಾಶದತ್ತ ಸಾಗುತ್ತದೆ. ಯಾಕಂದ್ರೆ ಈಗಿನ ಲೆಕ್ಕಾಚಾರದ ಪ್ರಕಾರ ಜಗತ್ತಿನಾದ್ಯಂತ ಒಟ್ಟು 13,000 ಪರಮಾಣು ಅಸ್ತ್ರಗಳು ಶೇಖರಣೆಯಾಗಿವೆ. ಈ ಪೈಕಿ ರಷ್ಯಾ ಹಾಗೂ ಅಮೆರಿಕ ಬಳಿಯೇ ಮುಕ್ಕಾಲು ಭಾಗಕ್ಕೂ ಹೆಚ್ಚು ಅಸ್ತ್ರಗಳು ಇವೆ. ಬದ್ಧವೈರಿಗಳಾಗಿರೋ ಈ ರಾಷ್ಟ್ರಗಳು ಜಿದ್ದಿಗೆ ಬಿದ್ದಿದ್ದೇ ಆದಲ್ಲಿ ಪರಮಾಣು ಬಾಂಬ್ ಮೂಲಕ ದೇಶಗಳನ್ನೇ ನಿರ್ನಾಮ ಮಾಡುತ್ತವೆ. ತಾವು ನಾಶವಾಗೋದು ಮಾತ್ರವಲ್ಲದೆ ಇಡೀ ವಿಶ್ವವನ್ನೇ ವಿನಾಶ ಮಾಡುತ್ತವೆ.

ಅಸಲಿಗೆ 2010ರ ಏಪ್ರಿಲ್ 8ರಂದು ಅಮೆರಿಕ ಮತ್ತು ರಷ್ಯಾ ಮಧ್ಯೆ ಒಪ್ಪಂದ ನಡೆದಿತ್ತು. ಒಪ್ಪಂದದ ಪ್ರಕಾರ ಡೆಡ್ಲಿ ನ್ಯೂಕ್ಲಿಯರ್ ಬಾಂಬ್‌ಗಳನ್ನು ನಾಶ ಮಾಡಿ ಹಿಡಿತಕ್ಕೆ ತರುವ ಒಪ್ಪಂದಕ್ಕೂ ಬರಲಾಗಿತ್ತು. ಒಬಾಮಾ ಇದ್ದಾಗ ಈ ಮಹತ್ವದ ಕಾರ್ಯ ನಡೆದಿತ್ತು, ಆದರೆ ಈಗ ಪರಿಸ್ಥಿತಿ ಹಾಳಾಗಿದೆ. ಉಭಯ ರಾಷ್ಟ್ರಗಳ ನಡುವಿನ ದ್ವೇಷ ದುಪ್ಪಟ್ಟಾಗಿದೆ. ಇದೇ ಕಾರಣಕ್ಕೆ ರಷ್ಯಾ ಪರಮಾಣು ಪರೀಕ್ಷಾ ನಿಷೇಧ ಒಪ್ಪಂದವನ್ನ ರದ್ದುಗೊಳಿಸೋಕೆ ಮುಂದಾದಂತೆ ಕಾಣ್ತಿದೆ. ರಷ್ಯಾ ಈ ನಡೆ ಬೆನ್ನಲ್ಲೇ ಅಮೆರಿಕ ನ್ಯೂಕ್ಲಿಯರ್ ಬಾಂಬ್ ಪರೀಕ್ಷೆ ನಡೆಸಿದೆ ಎನ್ನಲಾಗ್ತಿದೆ. ಅಮೆರಿಕದ ನೆವಾಡಾ ರಾಜ್ಯದ ಪರಮಾಣು ಪರೀಕ್ಷಾ ಸ್ಥಳದಲ್ಲಿ ಸ್ಫೋಟಕಗಳ ಪ್ರಯೋಗ ನಡೆದಿದೆ ಎನ್ನಲಾಗಿದೆ. ರಷ್ಯಾವು ಪರಮಾಣು-ಶಸ್ತ್ರ ಪರೀಕ್ಷೆಯ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಅಮೆರಿಕದಲ್ಲಿ ಈ ಆಘಾತಕಾರಿ ಬೆಳವಣಿಗೆ ನಡೆದಿದೆ. ಸ್ಫೋಟ ಮಾದರಿಗಳನ್ನು ಮೌಲ್ಯೀಕರಿಸಲು ರಾಸಾಯನಿಕಗಳು ಮತ್ತು ರೇಡಿಯೊ ಐಸೋಟೋಪ್‌ಗಳನ್ನ ಬಳಸಿ ಸ್ಪೋಟ ನಡೆದಿದೆ. ಭೂಗತ ಪರಮಾಣು ಸ್ಫೋಟಕವನ್ನು ಪತ್ತೆ ಹಚ್ಚುವ ಮೂಲಕ ಜಾಗತಿಕ ಪರಮಾಣು ಬೆದರಿಕೆಗಳನ್ನು ಕಡಿಮೆ ಮಾಡಲು ಈ ಪರೀಕ್ಷೆ ಸಹಾಯ ಮಾಡುತ್ತದೆ ಎಂದು ಹೇಳಿಕೊಂಡಿದೆ. ಅಮೆರಿಕದ ಭಂಡತನಕ್ಕೆ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ರಷ್ಯಾ ರೊಚ್ಚಿಗೆದ್ದ ವೇಳೆ ಶಾಂತಿ ಮಾತುಕತೆ ಮಾರ್ಗವನ್ನು ಅನುಸರಿಸಬೇಕಿದ್ದ ಅಮೆರಿಕ ರಷ್ಯಾವನ್ನ ಮತ್ತಷ್ಟು ರೊಚ್ಚಿಗೆಬ್ಬಿಸಿ ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧಕ್ಕೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಅಷ್ಟಕ್ಕೂ ಜಾಗತಿಕ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದವನ್ನ 1996 ರಲ್ಲಿ ತರಲಾಯ್ತು. ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಯನ್ನ ನಿಷೇಧಿಸುವುದು ಮತ್ತು ದೇಶಗಳ ನಡುವಿನ ನ್ಯೂಕ್ಲಿಯರ್ ಬಾಂಬ್ ಸ್ಪರ್ಧೆಯನ್ನ ತಡೆಗಟ್ಟುವುದು ಇದರ ಮೂಲ ಉದ್ದೇಶವಾಗಿತ್ತು. ಪರಮಾಣು ಪರೀಕ್ಷಾ ಸ್ಫೋಟಗಳಿಂದ ಉಂಟಾಗುವ ಆರೋಗ್ಯ ಮತ್ತು ಪರಿಸರ ಹಾನಿಯನ್ನು ತಡೆಗಟ್ಟುವುದು ಇದರ ಗುರಿಯಾಗಿದೆ. ಹಾಗೇ ಹೊಸ ಶಸ್ತ್ರಾಸ್ತ್ರಗಳ ಅಭಿವೃದ್ಧಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ವಿನ್ಯಾಸಗಳ ಸುಧಾರಣೆಯನ್ನು ತಡೆಗಟ್ಟುತ್ತದೆ. ಒಪ್ಪಂದದ ಪ್ರಕಾರ ಪ್ರಪಂಚದೆಲ್ಲೆಡೆ ಎಲ್ಲಾ ಪರಮಾಣು ಸ್ಫೋಟಗಳನ್ನು ನಿಷೇಧಿಸುತ್ತದೆ. ಆದ್ರೆ ಈ ಒಪ್ಪಂದ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ. ಯಾಕಂದ್ರೆ ಯುಎಸ್ ಜೊತೆಗೆ, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ, ಇಸ್ರೇಲ್, ಇರಾನ್ ಮತ್ತು ಈಜಿಪ್ಟ್ ರಾಷ್ಟ್ರಗಳು ಇನ್ನೂ ಅನುಮೋದನೆ ನೀಡಿಲ್ಲ.

ಹೀಗೆ ಜಾಗತಿಕ ಪರಮಾಣು ಪರೀಕ್ಷೆ ನಿಷೇಧ ಒಪ್ಪಂದ ಸಂಪೂರ್ಣ ಜಾರಿಗೇ ಬಂದಿಲ್ಲ. ಅದಾಗಲೇ ಪರಮಾಣು ಪರೀಕ್ಷೆ ರೇಸ್ ಶುರುವಾಗಿದೆ. ಅಮೆರಿಕ ಮತ್ತು ರಷ್ಯಾ ನಡುವೆ ಬಿದ್ದಿರುವ ಈಈ ಕಿಡಿ ಜಗತ್ತನ್ನೇ ಸುಡುವಷ್ಟು ಬಲಿಷ್ಠವಾಗಿದೆ. ಅತ್ತ ಉಕ್ರೇನ್ ಮತ್ತು ರಷ್ಯಾ ಬಡಿದಾಡುವಾಗ ಅಮೆರಿಕ ಮಧ್ಯಪ್ರವೇಶ ಮಾಡಿತ್ತು. ಹಾಗೇ ಉಕ್ರೇನ್‌ಗೆ ಸಹಾಯ ಮಾಡುವ ನೆಪದಲ್ಲಿ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನ ಅಮೆರಿಕ ನೀಡಿದ ಆರೋಪ ಇದೆ. ಮತ್ತೊಂದು ಕಡೆ ಇಸ್ರೇಲ್ ಮತ್ತು ಹಮಾಸ್ ನಡುವೆ ಬೆಂಕಿ ಬಿದ್ದಿದೆ. ಹೀಗಾಗಿ 3ನೇ ಮಹಾಯುದ್ಧದ ಕಿಡಿ ಮೆಲ್ಲಗೆ ಹೊತ್ತಿಕೊಳ್ತಿದೆ ಎಂದೇ ಬಣ್ಣಿಸಲಾಗ್ತಿದೆ. ದೇಶ ದೇಶಗಳ ನಡುವೆ ದ್ವೇಷದ ಬೆಂಕಿ ಬಿದ್ದಿದ್ರೂ ವಿಶ್ವಸಂಸ್ಥೆಗೆ ಮಾತ್ರ ಇದನ್ನ ತಡೆಯುವ ಶಕ್ತಿ ಇಲ್ಲ ಅನ್ನೋದೇ ದುರಂತ

 

Shantha Kumari