ಒಂದು ವಾರದ ಬ್ರೇಕ್ ಬಳಿಕ ಟೀಂ ಇಂಡಿಯಾ ಮತ್ತೆ ಅಖಾಡಕ್ಕೆ – ಇಂಗ್ಲೆಂಡ್ ವಿರುದ್ದ ಫಸ್ಟ್ ಬ್ಯಾಟಿಂಗ್ ಅಥವಾ ಬೌಲಿಂಗ್?
ಒಂದು ವಾರದ ಬ್ರೇಕ್ ಬಳಿಕ ಟೀಂ ಇಂಡಿಯಾ ಮತ್ತೆ ಅಖಾಡಕ್ಕಿಳಿಯುತ್ತಿದೆ. ಈಗ ಟೀಂ ಇಂಡಿಯಾ ಆಡ್ತಿರೋದು ದುರ್ಬಲ ಇಂಗ್ಲೆಂಡ್ ತಂಡದ ವಿರುದ್ಧ. ಡಿಫೆಂಡಿಂಗ್ ಚಾಂಪಿಯನ್ಸ್ಗಳನ್ನ ವೀಕ್ ಟೀಂ ಅನ್ನೋ ಪರಿಸ್ಥಿತಿ ಬಂದಿದೆ. ಆಡಿರೋ 5 ಮ್ಯಾಚ್ಗಳ ಪೈಕಿ 4 ಪಂದ್ಯಗಳನ್ನ ಇಂಗ್ಲೆಂಡ್ ಸೋತಿದೆ. ಇಂಗ್ಲೆಂಡ್ಗಿಂತ ಈ ಬಾರಿ ಅಫ್ಘಾನಿಸ್ತಾನವೇ ಸ್ಟ್ರಾಂಗ್ ಟೀಂ ಎನ್ನಿಸಿಕೊಂಡಿದೆ. ಹೀಗಾಗಿ ಇಂಗ್ಲೆಂಡ್ ಅನ್ನು ವೀಕ್ ಟೀಂ ಅನ್ನದೆ ಬೇರೆ ವಿಧಿಯೇ ಇಲ್ಲ. ಆದ್ರೆ ಟೀಂ ಇಂಡಿಯಾ ಆಡಿರುವ ಎಲ್ಲಾ 5 ಮ್ಯಾಚ್ಗಳನ್ನ ಕೂಡ ಗೆದ್ದಿರೋದ್ರಿಂದ ಇಂಗ್ಲೆಂಡ್ ವಿರುದ್ಧವೂ ರೋಹಿತ್ ಪಡೆಯೇ ಗೆಲ್ಲುವ ಕುದುರೆಯಾಗಿದೆ. ಇಂಗ್ಲೆಂಡ್ಗೆ ಈ ಪಂದ್ಯ ಮರ್ಯಾದೆ ಪ್ರಶ್ನೆಯಷ್ಟೇ. ಹೇಗೂ ಟೂರ್ನಿ ಔಟ್ ಆಗಿಯಾಗಿದೆ. ಫ್ಲೈಟ್ ಹತ್ತೋ ಮುನ್ನ ಒಂದೆರಡು ಪಂದ್ಯಗಳನ್ನಾದ್ರೂ ಗೆದ್ದು ಮರ್ಯಾದೆ ಉಳಿಸ್ಕೊಳ್ಳೋಣ ಅನ್ನೋ ಲೆಕ್ಕಾಚಾರದಲ್ಲಿ ಆಂಗ್ಲರಿದ್ದಾರೆ. ಆದ್ರೆ ಟೀಂ ಇಂಡಿಯಾಗೆ ಇಲ್ಲಿ ಗೆಲುವು ತುಂಬಾನೆ ಇಂಪಾರ್ಟೆಂಟ್. ಪಾಯಿಂಟ್ಸ್ ಟೇಬಲ್ನಲ್ಲಿ ಭಾರತ ಈಗ 2ನೇ ಸ್ಥಾನದಲ್ಲಿದೆ. ಹೀಗಾಗಿ ಮುಂದಿನ ಎಲ್ಲಾ ಮ್ಯಾಚ್ಗಳನ್ನ ಕೂಡ ಗೆಲ್ಲೋದು ಇಂಪಾರ್ಟೆಂಟ್ ಆಗುತ್ತೆ. ಹಾಗಿದ್ರೆ ಭಾರತ-ಇಂಗ್ಲೆಂಡ್ ಮಧ್ಯೆ ಮ್ಯಾಚ್ ನಡೆಯುವ ಲಕ್ನೋ ಸ್ಟೇಡಿಯಂನ ಪಿಚ್ ಹೇಗಿದೆ? ಬ್ಯಾಟಿಂಗ್ ಪಿಚ್ಚಾ ಇಲ್ಲಾ ಬೌಲಿಂಗ್ ಪಿಚ್ಚಾ? ಟೀಂ ಇಂಡಿಯಾದ ಪ್ಲೇಯಿಂಗ್-11ನಲ್ಲಿ ಯಾರೆಲ್ಲಾ ಆಡ್ತಾರೆ? ಹಾರ್ದಿಕ್ ಪಾಂಡ್ಯಾ ಕಥೆಯೇನು? ಇವೆಲ್ಲದರ ಕುರಿತ ಮಾಹಿತಿ ಈ ಲೇಖನದಲ್ಲಿದೆ.
ಇದನ್ನೂ ಓದಿ: ಸತತ ಸೋಲಿನ ಬಳಿಕ ಭಾರತವನ್ನು ಎದುರಿಸಲಿದೆ ಇಂಗ್ಲೆಂಡ್ –ಚಾಂಪಿಯನ್ ಟೀಮ್ ಎಡವುತ್ತಿರುವುದು ಎಲ್ಲಿ?
ಫಸ್ಟ್ & ಫೋರ್ ಮೋಸ್ಟ್.. ಪಿಚ್ ರಿಪೋರ್ಟ್.. ವಾಸ್ತವಾಗಿ ಲಕ್ನೋ ಪಿಚ್ ಕೂಡ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಫೇವರ್ ಆಗಿದೆ. ಆದ್ರೂ ಈ ಬಾರಿಯ ವರ್ಲ್ಡ್ಕಪ್ನಲ್ಲಿ ಈ ಗ್ರೌಂಡ್ನಲ್ಲಿ ಇದುವರೆಗೆ ನಡೆದ ಪಂದ್ಯಗಳನ್ನ ನೋಡಿದ್ರೆ ಇದೊಂದು ಬ್ಯಾಲೆನ್ಸ್ಡ್ ಪಿಚ್ ಅಂತಾನೆ ಹೇಳಬಹುದು. ವಿಶೇಷವಾಗಿ ಸ್ಪಿನ್ನರ್ಸ್ಗಳಿಗೆ ಇಲ್ಲಿ ಹೆಚ್ಚಿನ ಅಡ್ವಾಂಟೇಜ್ ಇದೆ. ಹೀಗಾಗಿ ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ರೋಲ್ ತುಂಬಾನೆ ಮುಖ್ಯವಾಗಿರುತ್ತೆ. ಆರಂಭದಲ್ಲಿ ಒಂದಷ್ಟು ರನ್ ಬಂದ್ರೂ ಕೂಡ ಮಿಡ್ಲ್ ಓವರ್ಸ್ಗಳಲ್ಲಿ ಸ್ಪನ್ನರ್ಸ್ಗಳು ತಮ್ಮ ಆಟ ಶುರು ಮಾಡಬಹುದು. ಇದು ಸ್ಲೋ ಪಿಚ್ ಆಗಿದ್ದು, ಬೃಹತ್ ಸ್ಕೋರ್ ಎಕ್ಸ್ಪೆಕ್ಟ್ ಮಾಡೋಕೆ ಸಾಧ್ಯವಿಲ್ಲ. ಈ ವರ್ಲ್ಡ್ಕಪ್ನಲ್ಲಿ ಲಕ್ನೋ ಗ್ರೌಂಡ್ನಲ್ಲಿ ಒಟ್ಟು ಮ್ಯಾಚ್ಗಳು ನಡೆದಿದ್ದು ಈ ಪೈಕಿ ಎರಡು ಪಂದ್ಯಗಳನ್ನ ಚೇಸಿಂಗ್ ಮಾಡಿದವರು ಗೆದ್ದಿದ್ದಾರೆ. ಹಾಗಂತಾ ಚೇಸಿಂಗ್ ಮಾಡಿದ್ರಷ್ಟೇ ಗೆಲ್ಲೋಕೆ ಸಾಧ್ಯ ಅಂತಾ ಹೇಳೋಕೆ ಆಗಲ್ಲ. ಫಸ್ಟ್ ಬ್ಯಾಟಿಂಗ್ ಮಾಡಿದವರೂ ಗೆಲ್ಲಬಹುದು.. ಚೇಸಿಂಗ್ ಮಾಡಿದವರು ಬೇಕಾದ್ರೂ ಗೆಲ್ಲಬಹುದು. ಹೀಗಾಗಿ ಈ ಹಿಂದಿನ ಪಂದ್ಯಗಳಂತೆ ಟಾಸ್ ಅಷ್ಟೊಂದು ಇಂಪಾರ್ಟೆಂಟ್ ಏನೂ ಆಗಲ್ಲ. ಫಸ್ಟ್ ಬ್ಯಾಟಿಂಗ್ ಮಾಡಿದ್ರೂ ಅಥವಾ ಬೌಲಿಂಗ್ ಮಾಡಿದ್ರೂ ಟೀಂ ಪರ್ಫಾಮೆನ್ಸ್ ಮೇಲೆಯೇ ರಿಸಲ್ಟ್ ನಿಂತಿದೆ. ಅಫ್ಕೋಸ್ ಎಲ್ಲಾ ಮ್ಯಾಚ್ನಲ್ಲೂ ಪರ್ಫಾಮೆನ್ಸ್ ಮೇಲೆಯೇ ಫಲಿತಾಂಶ ಬರೋದು. ಆದ್ರೆ ಕೆಲ ಪಿಚ್ಗಳಲ್ಲಿ ನಿಮಗೆ ಗೊತ್ತಿರೋ ಹಾಗೆ ಟಾಸ್ ಗೆದ್ರಾ-ಸೋತ್ರಾ ಅನ್ನೋದು ಕೂಡ ಮುಖ್ಯವಾಗುತ್ತೆ. ಹೀಗಾಗಿ ಲಕ್ನೋ ಗ್ರೌಂಡ್ನಲ್ಲಿ ಇಂಗ್ಲೆಂಡ್ ವಿರುದ್ಧದ ಮ್ಯಾಚ್ನಲ್ಲಿ ಟಾಸ್ ಗೆದ್ರೆ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ತಾರಾ? ಇಲ್ಲಾ ಬೌಲಿಂಗ್ ಮಾಡ್ತಾರಾ ಅನ್ನೋದು ತುಂಬಾ ಕುತೂಹಲಕಾರಿಯಾಗಿದೆ. ಯಾಕಂದ್ರೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಟೀಂ ಇಂಡಿಯಾ ಫಸ್ಟ್ ಬ್ಯಾಟಿಂಗ್ ಮಾಡಿಲ್ಲ. ಹೀಗಾಗಿ ಈ ಸವಾಲು ಇಂಗ್ಲೆಂಡ್ ವಿರುದ್ಧ ಎದುರಾಗುತ್ತಾ ಅನ್ನೋದನ್ನು ಕಾದುನೋಡಬೇಕಿದೆ.
ಇನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ ವಿರುದ್ಧದ ಮ್ಯಾಚ್ನಲ್ಲೂ ಆಡೋದಿಲ್ಲ. ಪಾಂಡ್ಯ ಇನ್ನೂ ಕೂಡ ಕಂಪ್ಲೀಟ್ ಆಗಿ ಫಿಟ್ ಆಗಿಲ್ಲ. ಹೀಗಾಗಿ ಧರ್ಮಶಾಲಾದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಮ್ಯಾಚ್ನಲ್ಲಿ ಆಡಿದ ತಂಡವೇ ಲಕ್ನೋದಲ್ಲೂ ಅಖಾಡಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಇಂಗ್ಲೆಂಡ್ ಮ್ಯಾಚ್ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನ ನೋಡೋಣ.
ಟೀಂ ಇಂಡಿಯಾ PLAYING-11
ರೋಹಿತ್ ಶರ್ಮಾ, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ OR ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್ಪ್ರಿತ್ ಬುಮ್ರಾ ಇದು ಇಂಗ್ಲೆಂಡ್ ಮ್ಯಾಚ್ಗೆ ಟೀಂ ಇಂಡಿಯಾದ ಸಂಭಾವ್ಯ ತಂಡ. ಮೊಹಮ್ಮದ್ ಶಮಿ ಕಳೆದ 5 ವಿಕೆಟ್ಗಳನ್ನ ಪಡೆದಿದ್ದಾರೆ ಅನ್ನೋದೇನೊ ನಿಜ. ಆದ್ರೆ ಇಲ್ಲಿ ಆರ್.ಅಶ್ವಿನ್ ಕೂಡ ಪ್ಲೇಯಿಂಗ್-11 ರೇಸ್ನಲ್ಲಿದ್ದಾರೆ. ಯಾಕಂದ್ರೆ ಆಗ್ಲೇ ಹೇಳಿದ ಹಾಗೆ ಇದು ಸ್ಪಿನ್ನರ್ಸ್ಗಳಿಗೆ ಫೇವರ್ ಆಗಿರುವಂಥಾ ಪಿಚ್ ಆಗಿರೋದ್ರಿಂದ ಅಶ್ವಿನ್ ಸೆಲೆಕ್ಟ್ ಆದ್ರೂ ಆಶ್ಚರ್ಯ ಇಲ್ಲ.
ಇನ್ನು ಭಾರತ-ಇಂಗ್ಲೆಂಡ್ ತಂಡ ಒನ್ ಡೇ ವಿಶ್ವಕಪ್ನಲ್ಲಿ ಇದುವರೆಗೆ 8 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ 4 ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದಿದೆ. 3 ಮ್ಯಾಚ್ಗಳಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಿದೆ. 2011ರಲ್ಲಿ ನಡೆದ ಮ್ಯಾಚ್ ಮಾತ್ರ ಟೈ ಆಗಿತ್ತು.