ತಿಮ್ಮಪ್ಪನ ಭಕ್ತರಿಗೆ ಮತ್ತೆ ಕರಡಿ, ಚಿರತೆ ಕಾಟ! – ಗುಂಪು ಗುಂಪಾಗಿ ತೆರಳಲು ಟಿಟಿಡಿ ಮನವಿ
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ಟಿಟಿಡಿ ಎಚ್ಚರಿಕೆಯೊಂದನ್ನು ನೀಡಿದೆ. ತಿರುಮಲ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ಚಿರತೆ, ಹುಲಿ, ಕರಡಿಗಳ ಕಾಟ ಮತ್ತೆ ಎದುರಾಗಿದೆ ಎನ್ನಲಾಗಿದೆ. ಹಾಗಾಗಿ ಅಲಿಪಿರಿ ನಡಿಗೆಯಿಂದ ತಿರುಮಲಕ್ಕೆ ಹೋಗುವ ಭಕ್ತರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕಾಲ್ನಡಿಗೆಯ ಸುತ್ತಲೂ ಹುಲಿಗಳು ಅಥವಾ ಇತರ ಕಾಡು ಪ್ರಾಣಿಗಳ ಚಲನವಲನವಿದೆಯೇ ಎಂಬುದನ್ನು ಕಂಡುಹಿಡಿಯಲು ಟಿಟಿಡಿ ಸ್ಥಾಪಿಸಿದ ಟ್ರ್ಯಾಪ್ ಕ್ಯಾಮೆರಾಗಳಲ್ಲಿ ಇತ್ತೀಚಿನ ದೃಶ್ಯಗಳು ದಾಖಲಾಗಿವೆ. ಒಂದು ಹುಲಿ ಮತ್ತು ಇನ್ನೊಂದು ಕರಡಿ ತಿರುಗಾಡುತ್ತಿರುವ ಫೋಟೋಗಳು ಕ್ಯಾಮೆರಾ ಟ್ರ್ಯಾಪ್ ಗಳಲ್ಲಿ ದಾಖಲಾಗಿವೆ.
ಇದನ್ನೂ ಓದಿ:ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಪೂಜೆ, ದೇವರ ದರ್ಶನದಲ್ಲಿ ಭಾರಿ ಬದಲಾವಣೆ!
ಕೆಲ ತಿಂಗಳ ಹಿಂದೆ ಬಾಲಕ ಹಾಗೂ ಬಾಲಕಿಯ ಮೇಲೆ ಹುಲಿ ದಾಳಿ ನಡೆದ ಹಿನ್ನೆಲೆಯಲ್ಲಿ ಟಿಟಿಡಿ ಮುನ್ನೆಚ್ಚರಿಕೆ ವಹಿಸಿರುವುದು ಗೊತ್ತಾಗಿದೆ. ಅಲಿಪಿರಿ ನಡಿಗೆಯಲ್ಲೂ ಭಕ್ತರ ಸಂಖ್ಯೆ ಕಡಿಮೆ ಆಗಿರುವುದರಿಂದ ಭಯ ನಿವಾರಣೆಗೆ ಟಿಟಿಡಿ ಮುಂದಾಗಿದೆ. ಭಕ್ತರಿಗೆ ಕೈ ಕೋಲುಗಳನ್ನು ನೀಡಲಾಗಿದೆ. ವಾಕ್ವೇಯಲ್ಲಿ ವರ್ಷಗಟ್ಟಲೆ ಹುಲಿ ಸಂಚಾರ ಇಲ್ಲದಿರುವುದರಿಂದ ಆ ಭಯ ಸ್ವಲ್ಪ ಕಡಿಮೆಯಾಗಿದೆ.
ಹುಲಿ ಮತ್ತು ಕರಡಿಗಳು ಸುತ್ತಾಡುತ್ತಿರುವುದನ್ನು ನೋಡಿದ ಟಿಟಿಡಿ ಭಕ್ತರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದು, “ಯಾತ್ರಾರ್ಥಿಗಳಿಗೆ ಒಂದು ಮನವಿ. ಈ ತಿಂಗಳ 24 ಮತ್ತು 27 ರ ನಡುವೆ, ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಸ್ಥಾನದಿಂದ ತಿರುಮಲಕ್ಕೆ ಹೋಗುವ ವಾಕ್ವೇನಲ್ಲಿರುವ ರಿಪೀಟರ್ನ ಮಧ್ಯದ ಪ್ರದೇಶದಲ್ಲಿ ಚಿರತೆ ಮತ್ತು ಕರಡಿ ಓಡಾಟ ಕ್ಯಾಮೆರಾ ಟ್ರ್ಯಾಪ್ನಲ್ಲಿ ದಾಖಲಾಗಿದೆ. ಹೀಗಾಗಿ ಭಕ್ತರು ಪಾದಯಾತ್ರೆಯಲ್ಲಿ ಜಾಗೃತರಾಗುವಂತೆ” ಟಿಟಿಡಿ ಮನವಿ ಮಾಡಿದೆ. ಭಕ್ತರು ಗುಂಪು ಗುಂಪಾಗಿ ತೆರಳಲು ಕೋರಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಪ್ರಕಟಣೆ ಹೊರಡಿಸಿದೆ.