ಶನಿವಾರ, ಭಾನುವಾರ ವರ್ಷದ ಕೊನೆಯ ಚಂದ್ರಗ್ರಹಣ – 30 ವರ್ಷಗಳಿಗೊಮ್ಮೆ ಸಂಭವಿಸುವ ವಿಸ್ಮಯಕ್ಕೆ ಭಾರತ ಸಾಕ್ಷಿ!
ಈ ವರ್ಷದ ಕೊನೆಯ ಹಾಗೂ ಎರಡನೇ ಚಂದ್ರಗ್ರಹಣ ಅಕ್ಟೋಬರ್ 28-29 ರ ಮಧ್ಯರಾತ್ರಿ ಸಂಭವಿಸಲಿದೆ. ಈ ಹಿಂದೆ ಅಕ್ಟೋಬರ್ 14 ರಂದು ವರ್ಷದ ಎರಡನೇ ಸೂರ್ಯಗ್ರಹಣ ಸಂಭವಿಸಿತ್ತು. ಇದಾಗಿ 14 ದಿನಗಳ ನಂತರ ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಅಪರೂಪದ ವಿದ್ಯಮಾನಕ್ಕೆ ಭಾರತ ಸಾಕ್ಷಿಯಾಗುತ್ತಿದೆ.
ವರ್ಷದ ಕೊನೆಯ ಭಾಗಶಃ ಚಂದ್ರಗ್ರಹಣ ಅಕ್ಟೋಬರ್ 28ರ ಮಧ್ಯರಾತ್ರಿಯ ಸುಮಾರಿಗೆ ಭಾರತದ ಎಲ್ಲಾ ಸ್ಥಳಗಳಲ್ಲಿ ಗೋಚರಿಸುತ್ತದೆ. ಭಾರತೀಯ ಸಮಯದ ಪ್ರಕಾರ ಅಕ್ಟೋಬರ್ 28 ರ ಶನಿವಾರ ರಾತ್ರಿ ಪ್ರಾರಂಭವಾಗಲಿದೆ. ಈ ಗ್ರಹಣದ ಒಟ್ಟು ಅವಧಿ 03 ಗಂಟೆ 07 ನಿಮಿಷಗಳು. ಗ್ರಹಣ ಆರಂಭದ ಹಂತವು ಅಕ್ಟೋಬರ್ 29 ರಂದು ಭಾರತೀಯ ಕಾಲಮಾನ 01 ಗಂಟೆ 05 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮತ್ತು ಭಾರತೀಯ ಕಾಲಮಾನ 02 ಗಂಟೆ 24 ನಿಮಿಷಕ್ಕೆ ಕೊನೆಗೊಳ್ಳುತ್ತದೆ ಎಂದು ವಿಜ್ಞಾನ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ಚಂದ್ರನತ್ತ ಜನರನ್ನ ಕಳುಹಿಸಲು ಮತ್ತೊಂದು ಹೆಜ್ಜೆ ಇಟ್ಟ ಚೀನಾ – ಗಗನಯಾತ್ರಿಗಳೊಂದಿಗೆ ಬಾಹ್ಯಾಕಾಶಕ್ಕೆ ಹಾರಿದ ಮಿಷನ್
ಭಾಗಶಃ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿದೆಯೇ?
ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ, ಏಷ್ಯಾ, ಯುರೋಪ್, ಆಫ್ರಿಕಾ, ಪೂರ್ವ ದಕ್ಷಿಣ ಅಮೆರಿಕ, ಈಶಾನ್ಯ ಉತ್ತರ ಅಮೆರಿಕ, ಅಟ್ಲಾಂಟಿಕ್ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಗ್ರಹಣ ಗೋಚರಿಸಲಿದೆ. ಭಾಗಶಃ ಚಂದ್ರಗ್ರಹಣವು ಮಧ್ಯರಾತ್ರಿಯ ಸುಮಾರಿಗೆ ಭಾರತದ ಎಲ್ಲ ಸ್ಥಳಗಳಿಂದ ಗೋಚರಿಸುತ್ತದೆ ಎಂದು ವಿಜ್ಞಾನ ಸಚಿವಾಲಯ ಮಾಹಿತಿ ನೀಡಿದೆ.
ಭಾಗಶಃ ಚಂದ್ರಗ್ರಹಣದ ವಿಶೇಷತೆ ಏನು..?
ಶನಿವಾರ ಹಾಗೂ ಭಾನುವಾರ ಸಂಭವಿಸುವ ಗ್ರಹಣ ರಾಹುಗ್ರಸ್ಥ ಚಂದ್ರಗ್ರಹಣವಿದು. ಭಾರತದಲ್ಲಿ ಪಾಶ್ರ್ವವಾಗಿ ಗೋಚರಿಸಲಿದೆ. ಶರದ್ ಪೂರ್ಣಿಮೆಯ ರಾತ್ರಿಯಲ್ಲಿ ಈ ಗ್ರಹಣ ಸಂಭವಿಸಲಿದೆ. ಗಜಕೇಸರಿ ಯೋಗದಲ್ಲಿ ಈ ಬಾರಿ ಚಂದ್ರಗ್ರಹಣ ಸಂಭವಿಸಲಿದ್ದು, ಸಾಮಾನ್ಯವಾಗಿ ಗಜಕೇಸರಿ ಯೋಗದಲ್ಲಿ ಗ್ರಹಣ ಬಹಳ ಅಪರೂಪವಾಗಿದೆ. 30 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಗ್ರಹಣ ಇದಾಗಿದೆ. ಈ ರೀತಿಯ ಗ್ರಹಣ ಬಂದಾಗ ಕೆಲವೊಮ್ಮೆ ಮಹಾ ಅಪತ್ತು ಬರುವ ಸಾಧ್ಯತೆಯೂ ಇರಲಿದೆ. ಪ್ರಾಕೃತಿಕ ವಿಕೋಪ, ಧರ್ಮ ಸಂಘರ್ಷಗಳು ನಡೆಯುವ ಸಾಧ್ಯತೆಯೂ ಇದೆ.
ಚಂದ್ರಗ್ರಹಣ ವೀಕ್ಷಿಸುವುದು ಹೇಗೆ?
ವಿಜ್ಞಾನಿಗಳ ಪ್ರಕಾರ, ಭಾಗಶಃ ಚಂದ್ರಗ್ರಹಣ ವೀಕ್ಷಿಸಲು ಗ್ರಹಣ ಕನ್ನಡಕಗಳಂತಹ ಅತ್ಯಾಧುನಿಕ ಉಪಕರಣಗಳನ್ನು ಹೊಂದುವ ಅಗತ್ಯವಿಲ್ಲ ಮತ್ತು ಇದನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ನೀವು ಸರಿಯಾದ ಸಮಯಕ್ಕೆ ಆಕಾಶ ವೀಕ್ಷಣೆ ಮಾಡಿದರೆ ಸಾಕು, ಗ್ರಹಣವನ್ನು ಕಣ್ಣುಂಬಿಕೊಳ್ಳಬಹುದು.
ಗ್ರಹಣ ಲೈವ್ ಸ್ಟ್ರೀಮಿಂಗ್ ಪ್ರಸಾರ?
ಗ್ರಹಣ ಗೋಚರಿಸದ ಸ್ಥಳದಲ್ಲಿ ಇರುವವರು ಯುಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಗ್ರಹಣ ವೀಕ್ಷಿಸಬಹುದು. Time and Date YouTube ಹೆಸರಿನ ಯುಟ್ಯೂಬ್ ಚಾನೆಲ್ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ನೋಡಬಹುದು.
ಭಾರತದಲ್ಲಿ ಮತ್ತೆ ಚಂದ್ರಗ್ರಹಣ ಕಾಣಿಸುವುದು ಯಾವಾಗ?
ಪಿಐಬಿ ಹೇಳಿಕೆಯ ಪ್ರಕಾರ, ಮುಂದಿನ ಚಂದ್ರ ಗ್ರಹಣವು ಸಂಪೂರ್ಣ ಚಂದ್ರ ಗ್ರಹಣವಾಗಿದ್ದು, ಇದು 2025 ರ ಸೆಪ್ಟೆಂಬರ್ 7 ರಂದು ಭಾರತದಲ್ಲಿ ಗೋಚರವಾಗಲಿದೆ. ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತದೆ. ಭಾರತದಲ್ಲಿ 2022 ರ ನವೆಂಬರ್ 8 ರಂದು ಕೊನೆಯ ಬಾರಿಗೆ ಪೂರ್ಣ ಚಂದ್ರ ಗ್ರಹಣ ಸಂಭವಿಸಿತ್ತು.