ಅರಣ್ಯಾಧಿಕಾರಿಗಳಿಗೂ ಹುಲಿ ಉಗುರಿನ ಕಂಟಕ – ಉಪ ವಲಯ ಅರಣ್ಯಾಧಿಕಾರಿ ಅಮಾನತು
ರಾಜ್ಯದಲ್ಲಿ ಈಗ ಹುಲಿ ಉಗುರು ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಬಿಗ್ಬಾಸ್ ಸ್ಪರ್ಥಿ ವರ್ತೂರು ಸಂತೋಷ್ ಅರೆಸ್ಟ್ ಆದ ಬೆನ್ನಲ್ಲೇ ಚಿತ್ರರಂಗದ ಪ್ರಮುಖರ ವಿರುದ್ಧ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ ಕೇಳಿಬಂತು. ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರಿಂದ ಪೆಂಡೆಂಟ್ ವಶಪಡಿಸಿ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಲು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ರಾಜಕಾರಣಿಗಳು, ಉದ್ಯಮಿಗಳು, ಅರಣ್ಯಾಧಿಕಾರಿಗಳು ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ ಕೇಳಿಬಂತು. ಇದೀಗ ಕಳಸದ ಅರಣ್ಯಾಧಿಕಾರಿಯೊಬ್ಬರು ಹುಲಿ ಉಗುರು ಧರಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಅಮಾನತುಗೊಂಡಿದ್ದಾರೆ.
ಕಳಸ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಹುಲಿ ಉಗುರಿನ ಪೆಂಡೆಂಟ್ ಧರಿಸುತ್ತಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಅವರ ಮೇಲೆ ದೂರು ದಾಖಲಾಗಿತ್ತು. ದರ್ಶನ್ ತನಿಖೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕೊಪ್ಪ ಡಿಎಫ್ಒ ನಂದೀಶ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ಗೆ ಸಿಕ್ತು ಬಿಗ್ ರಿಲೀಫ್ – ಹುಲಿ ಉಗುರು ಕೇಸ್ನಲ್ಲಿ ಸಿಕ್ತು ಜಾಮೀನು
ಅರಣ್ಯ ಇಲಾಖೆಯ ಕಳಸ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ತನಿಖೆ ನಡೆಸಿ, ಕ್ರಮಕೈಗೊಳ್ಳಿ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಅರೆನೂರು ಗ್ರಾಮದ ಸುಪ್ರೀತ್ ಮತ್ತು ಅಬ್ದುಲ್ ಅವರು ಚಿಕ್ಕಮಗಳೂರು ಜಿಲ್ಲೆ ಆಲ್ದೂರು ವಲಯ ಅರಣ್ಯಾಧಿಕಾರಿಗೆ ಲಿಖಿತ ದೂರು ನೀಡಿದ್ದರು.
ಇನ್ನು ಮತ್ತೊಬ್ಬ ಅರಣ್ಯಾಧಿಕಾರಿ ಹುಲಿ ಉಗುರು ಪೆಂಡೆಂಟ್ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಲಯ ಅರಣ್ಯಾಧಿಕಾರಿ (RFO) ಮುನಿರಾಜ್ ಕೂಡ ಹುಲಿ ಉಗುರು ಧರಿಸಿರುವ ಕುರಿತು ದೂರು ದಾಖಲಾಗಿದೆ. ಈ ವಿಚಾರವಾಗಿ ವನ್ಯಜೀವಿ ಸ್ವಯಂ ಸೇವಕ ಬಾಬು ಎಂಬವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ. ಇಮೇಲ್ ಮುಖಾಂತರ ದೂರು ನೀಡಲಾಗಿದ್ದು, ವಲಯ ಅರಣ್ಯಾಧಿಕಾರಿ ಮುನಿರಾಜ್ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಉಲ್ಲಂಘನೆಗಾಗಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.