ಐತಿಹಾಸಿಕ ಕ್ಷಣಕ್ಕೆ ಸಜ್ಜಾದ ಸಿಲಿಕಾನ್ ಸಿಟಿ – ಕಂಬಳ ನಡೆಯುವ ಮೊದಲೇ ದಾಖಲೆ ಬರೆದ ಬೆಂಗಳೂರು ಕಂಬಳ..!

ಐತಿಹಾಸಿಕ ಕ್ಷಣಕ್ಕೆ ಸಜ್ಜಾದ ಸಿಲಿಕಾನ್ ಸಿಟಿ – ಕಂಬಳ ನಡೆಯುವ ಮೊದಲೇ ದಾಖಲೆ ಬರೆದ ಬೆಂಗಳೂರು ಕಂಬಳ..!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಯಲಿದೆ. ನವೆಂಬರ್‌ 25, 26 ರಂದು ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದೆ. ಐತಿಹಾಸಿಕ ಕ್ಷಣಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹೀಗಿರುವಾಗಲೇ ಕಂಬಳಕ್ಕೆ ಮೊದಲೇ ಬೆಂಗಳೂರು ಕಂಬಳ ಹೊಸ ದಾಖಲೆ ಬರೆಯಲು ಹೊರಟಿದೆ. ಅದು ಕಂಬಳ ಕರೆಯ ಮೂಲಕ!

ಹೌದು ಕಂಬಳಕ್ಕೆ ಕೇವಲ ಒಂದು ತಿಂಗಳಷ್ಟೇ ಬಾಕಿ ಉಳಿದಿದೆ. ಅರಮನೆ ಮೈದಾನದಲ್ಲಿ ಭರದ ಸಿದ್ದತೆಗಳು ನಡೀತಿವೆ. ಬೆಂಗಳೂರಿನ ಕಂಬಳದಲ್ಲಿ ಭಾಗವಹಿಸಲು ಬರೋಬ್ಬರಿ 78 ಕೋಣಗಳು ನೋಂದಣಿಯಾಗಿದೆ. ಬೆಂಗಳೂರು ಕಂಬಳ, ಕಂಬಳ ಕರೆಯ ಹೊಸ ದಾಖಲೆ ಬರೆಯಲು ಹೊರಟಿದೆ. ಕಂಬಳ ಕರೆ ಎಂದರೆ ಕೋಣಗಳು ಓಡುವ ಟ್ರ್ಯಾಕ್. ಇಲ್ಲಿಯವರೆಗೆ ಕಂಬಳ ನಡೆಯುತ್ತಿದ್ದ ಅಷ್ಟೂ ಟ್ರ್ಯಾಕ್ ಗಳ ಪೈಕಿ ಪುತ್ತೂರು ಕಂಬಳದ ಟ್ರ್ಯಾಕ್ 149 ಮೀ ಇತ್ತು. ಇದೇ ಇಲ್ಲಿಯವರೆಗೆ ಅತೀ ದೊಡ್ಡ ಟ್ರ್ಯಾಕ್ ಎಂದು ಕರೆಸಿಕೊಳ್ಳುತ್ತಿತ್ತು. ಆದರೆ ಸದ್ಯ ಈ ಶ್ರೇಯಸ್ಸು ಬೆಂಗಳೂರು ಕಂಬಳ ಕರೆಯ ಪಾಲಾಗಲಿದೆ. ಬೆಂಗಳೂರು ಕಂಬಳ ಕರೆ ಸುಮಾರು 151 ಮೀ ಉದ್ದವಾಗಿದ್ದು ಇಲ್ಲಿಯವರೆಗೆ ಕಂಬಳ ಕರೆಗಳ ಪೈಕಿ ಅತೀ ಉದ್ದದ ಕಂಬಳ ಟ್ರ್ಯಾಕ್ ಇದಾಗಿದೆ.

ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ ಕೌಂಟ್‌ಡೌನ್ ಶುರು –  78 ಜೋಡಿ ಕೋಣಗಳು ನೋಂದಣಿ!

ಬೆಂಗಳೂರು ತುಳುಕೂಟಕ್ಕೆ 50 ವರ್ಷ ಸಂದಿರುವ ನಿಟ್ಟಿನಲ್ಲಿ ಬೆಂಗಳೂರು ಕಂಬಳ ನಡೆಸಲಾಗುತ್ತಿದ್ದು, ಈ ಘಳಿಗೆಯನ್ನು ಅಜರಾಮರವಾಗಿಸಬೇಕೆಂದು ಈ ಕಂಬಳ ಟ್ರ್ಯಾಕ್ ನಿರ್ಮಾಣ ಮಾಡಿದ್ದೇವೆ ಎಂದು ಬೆಂಗಳೂರು ಕಂಬಳ ಸಮಿತಿ ಮಾಹಿತಿ ನೀಡಿದೆ.

ಪುತ್ತೂರು ಶಾಸಕ ಅಶೋಕ್ ರೈ ಸಾರಥ್ಯದಲ್ಲಿ ಬೆಂಗಳೂರು ಕಂಬಳ ನಮ್ಮ ಕಂಬಳ ಎಂಬ ಟ್ಯಾಗ್ ಲೈನ್ ನೊಂದಿಗೆ ನವೆಂಬರ್ 25, 26ರಂದು ಕಂಬಳ ನಡೆಯಲಿದ್ದು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಉದ್ಯಮಿ ಪ್ರಕಾಶ್ ಶೆಟ್ಟಿ ಬಂಜಾರ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದರೆ. ಗಾಯಕ ಗುರುಕಿರಣ್ ಮತ್ತು ಉದ್ಯಮಿ ಗುಣರಂಜನ್ ಶೆಟ್ಟಿ ಸಾರಥ್ಯದಲ್ಲಿ ವಿವಿಧ ಸಮಿತಿಗಳು ನಿರ್ಮಾಣವಾಗಿದ್ದು ಹಲವು ಸಿನಿಮಾ ಕಲಾವಿದರು, ಕ್ರೀಡಾಪಟುಗಳು, ರಾಜಕಾರಣಿಗಳು ಭಾಗವಹಿಸುವ ನಿರೀಕ್ಷೆ ಇದೆ.

Shwetha M