ಮಸಾಲೆ ಚೆನ್ನಾಗಿದ್ರೂ ಮೀನಿನ ಖಾದ್ಯ ಚೆನ್ನಾಗಿಲ್ಲ ಅಂದ್ರೆ ಅದು ನಿಮ್ಮ ತಪ್ಪಲ್ಲ – ಫಿಶ್ ಖರೀದಿಗೂ ಮುನ್ನ ಈ ಎಡವಟ್ಟು ಮಾಡಬೇಡಿ
ನಾನ್ವೆಜ್ ಪ್ರಿಯರಿಗೆ ಮೀನು ಅಂದ್ರೆ ಅಚ್ಚುಮೆಚ್ಚು. ತವಾಫ್ರೈ, ಸುಕ್ಕಾ, ಕಬಾಬ್, ಸಾಂಬಾರ್ ಹೀಗೇ ವಿವಿಧ ಬಗೆಯ ರೆಸಿಪಿಗಳನ್ನ ಮಾಡಿಕೊಂಡು ಬಾಯಿ ಚಪ್ಪರಿಸ್ತಾರೆ. ಆದ್ರೆ ಮೀನು ಖರೀದಿಗೂ ಮುನ್ನ ಈ ವಿಚಾರಗಳನ್ನ ನೀವು ತಿಳಿದುಕೊಂಡಿರುಬೇಕು. ಯಾಕಂದ್ರೆ ಮೀನು ಚೆನ್ನಾಗಿದ್ರೆ ಮಾತ್ರವೇ ನೀವು ಮಾಡುವ ರೆಸಿಪಿ ಚೆನ್ನಾಗಿರುತ್ತೆ.
ಮೀನು ಸೇವನೆ ಆರೋಗ್ಯಕ್ಕೆ ತುಂಬಾನೇ ಒಳ್ಳೇದು. ಜೊತೆಗೆ ಮೆದುಳಿನ ಕ್ಷಮತೆಯನ್ನು ಕೂಡ ಹೆಚ್ಚಿಸುತ್ತದೆ. ಹೀಗಾಗಿ ತುಂಬಾ ಜನ ಫಿಶ್ ರೆಸಿಪಿಗಳನ್ನ ಇಷ್ಟ ಪಟ್ಟು ತಿಂತಾರೆ. ಆದ್ರೆ ಮೀನಿನ ಖಾದ್ಯ ಅಂದ್ರೆ ಬರೀ ಮಸಾಲೆ ಮಾತ್ರ ಚೆನ್ನಾಗಿದ್ರೆ ಸಾಕಾಗಲ್ಲ. ಮೀನು ಕೂಡ ಫ್ರೆಶ್ ಆಗಿರಬೇಕು. ಇಲ್ಲದಿದ್ದರೆ ರುಚಿ ಹಾಳಾಗುತ್ತೆ. ಅನಾರೋಗ್ಯಕ್ಕೂ ಕಾರಣವಾಗುತ್ತೆ. ಮೀನಿನ ಅಡುಗೆ ಮಾಡುವಾಗ ಮೀನು ಆದಷ್ಟೂ ತಾಜಾ ಇರಬೇಕೆಂದು ನಾವು ಬಯಸುತ್ತೇವೆ. ಆದರೆ, ಮೀನು ಮಾರುವ ಸ್ಥಳದಲ್ಲಿ ಮೀನುಗಳನ್ನು ಮಂಜುಗಡ್ಡೆಯ ಮೇಲೆ ಅಡ್ಡಲಾಗಿ ಇರಿಸಿರುತ್ತಾರೆ. ಅಲ್ಲದೇ ಮೀನು ಮಾರುವವರು ತಮ್ಮ ಮೀನೇ ಜಗತ್ತಿನಲ್ಲಿ ಅತ್ಯುತ್ತಮ ಎಂಬ ಬಣ್ಣದ ಮಾತುಗಳಿಂದ ಗ್ರಾಹಕರನ್ನು ಆಕರ್ಷಿಸುವ ಕಾರಣ ಗ್ರಾಹಕ ಕೆಲವೊಮ್ಮೆ ತಾಜಾ ಮೀನು ಎಂದು ಭಾವಿಸಿ ಹಳೆಯ ದಾಸ್ತಾನಿನ ಮೀನನ್ನು ಮನೆಗೆ ಕೊಂಡು ಹೋಗಬಹುದು. ಮೇಲ್ನೋಟಕ್ಕೆ ತಾಜಾ ಎಂದು ಕಾಣಿಸುವ ಮೀನು ವಾಸ್ತವದಲ್ಲಿ ಕೆಲವು ವ್ಯಕ್ತಿಗಳ ಕುತಂತ್ರದಿಂದ ಹಾಗೆ ಕಾಣಿಸುತ್ತಿರಬಹುದು. ಗ್ರಾಹಕರು ಆದಷ್ಟೂ ಮಟ್ಟಿಗೆ ತಾವಾಗಿ ಮೀನನ್ನು ಚೆನ್ನಾಗಿ ನೋಡಿ ತಾಜಾ ಇರುವುದನ್ನು ಖಚಿತಪಡಿಸಿಯೇ ಕೊಳ್ಳಬೇಕು.
ಇದನ್ನೂ ಓದಿ : ಮೀನುಗಾರರ ಬಲೆಗೆ ಬಿತ್ತು 300 ಕೆಜಿ ತೂಕದ ಮುರು ಮೀನು! – ಮೀನು ಮಾರಾಟವಾದ ಬೆಲೆ ಎಷ್ಟು ಗೊತ್ತಾ?
ಮೀನಿನ ವಾಸನೆ ನಮಗೆ ಅಷ್ಟೊಂದು ಹಿಡಿಸದು. ಆದರೆ, ತಜ್ಞರ ಪ್ರಕಾರ, ಮೀನಿನ ತಾಜಾತನವನ್ನು ನೋಡಲು ಅದರ ವಾಸನೆಯನ್ನು ಪರಿಗಣಿಸಬೇಕು. ಮೀನು ತಾಜಾ ಇದ್ದಾಗ ಇದರ ವಾಸನೆ ಕೊಂಚ ನಸುವಾಗಿರುತ್ತದೆ, ಅಂದರೆ, ತೀರಾ ಘಾಟೂ ಅಲ್ಲದ, ಪ್ರತಿ ಮೀನಿನ ವಿಶಿಷ್ಟ ಮೀನಿನ ಪರಿಮಳ ಹೊಂದಿರುತ್ತದೆ. ಮೀನಿನ ಮಾರುಕಟ್ಟೆಯಲ್ಲಿ ನೂರಾರು ವಿಧಗಳ ಮೀನಿನ ಒಟ್ಟಾರೆ ವಾಸನೆ ಕಟುವಾಗಿರುತ್ತದೆ. ಈ ವಾಸನೆಯ ನಡುವೆ ನೀವು ಮೀನಿನ ವಾಸನೆಯ ಸೂಕ್ಷ್ಮ ವ್ಯತ್ಯಾಸವನ್ನು ಕಂಡುಕೊಳ್ಳುವುದಾದರೂ ಹೇಗೆ? ಅಷ್ಟೇ ಅಲ್ಲ, ಮೀನು ಮಾರುಕಟ್ಟೆಗೆ ಹೋದಾಕ್ಷಣ ಅಲ್ಲಿನ ಪ್ರಬಲ ಮೀನಿನ ವಾಸನೆಯಿಂದ ನಮ್ಮ ಮೂಗಿನ ಘ್ರಾಣಗ್ರಂಥಿಗಳು ತುಂಬಿಕೊಂಡು ಹೊಸ ವಾಸನೆಯನ್ನು ಪರಿಗಣಿಸಲು ಅಸಮರ್ಥವಾಗುತ್ತವೆ. ಇದಕ್ಕಾಗಿ ನೀವು ಕೊಂಚ ಕಾಫಿ ಬೀಜಗಳನ್ನು ಜೇಬಿನಲ್ಲಿ ಇರಿಸಿಕೊಂಡು ಹೋಗಿ. ಯಾವ ಮೀನಿನ ವಾಸನೆಯನ್ನು ನೀವು ಆಘ್ರಾಣಿಸಿ ಪರೀಕ್ಷಿಸಬೇಕೆಂದಿದ್ದೀರೋ ಆ ಕ್ಷಣಕ್ಕೂ ಮೊದಲು ಈ ಕಾಫಿ ಬೀಜಗಳನ್ನು ಮೂಸಿ ಆಳವಾಗಿ ಉಸಿರು ಎಳೆದುಕೊಳ್ಳಿ. ಹಿಂದಿನ ಮೀನಿನ ವಾಸನೆಗಳು ತೆರವುಗೊಂಡು ಮೂಗು ಹೊಸ ವಾಸನೆ ಪಡೆಯಲು ಸಮರ್ಥವಾಗುತ್ತದೆ. ಈಗ ಮೀನಿನ ವಾಸನೆ ಅತಿ ಘಾಟು ಹೊಂದಿರಬಾರದು. ಸಾಧ್ಯವಾದರೆ ಕಿವಿರನ್ನು ಕೊಂಚವೇ ತೆರೆದು ಮೂಸಿ. ಈಗ ಮೀನು ನಸು ಪರಿಮಳವನ್ನು ಮಾತ್ರ ಸೂಸಬೇಕು. ಇದು ಅತಿಯಾಗಿದ್ದರೆ ಮೀನು ತಾಜಾ ಅಲ್ಲ ಎಂದು ಪರಿಗಣಿಸಬಹುದು. ಹೀಗೆ, ಪ್ರತಿ ಮೀನಿನ ವಾಸನೆ ನೋಡುವ ಮುನ್ನ ಕಾಫಿ ಬೀಜಗಳನ್ನು ಆಘ್ರಾಣಿಸಲು ಮರೆಯದಿರಿ.
ಹಾಗೇ ಮೀನಿನ ಕಣ್ಣುಗಳು ಸ್ಪಷ್ಟ ಬಿಳಿಯ ಹಾಗೂ ಉಬ್ಬಿದಂತಿರಬೇಕು. ಒಂದು ವೇಳೆ ಕಣ್ಣುಗುಡ್ಡೆಗಳು ಪೇಲವವಾಗಿದ್ದರೆ ಅಥವಾ ಕೆಳಕ್ಕಿಳಿದಂತೆ ತೋರಿದರೆ ಅಥವಾ ಹೊಳಪು ಕಳೆದುಕೊಂಡಂತೆ ಅನ್ನಿಸಿದರೆ, ಮೀನಿನ ಕಣ್ಣಿನ ಬಿಳಿಭಾಗ ಮೋಡ ಮೋಡವಾಗಿದ್ದರೆ ಇವು ಮೀನು ತಾಜಾ ಅಲ್ಲ. ಸಾಮಾನ್ಯವಾಗಿ ನಾವು ಮೀನಿನ ಹೊರಮೈ ವಿನ್ಯಾಸದಿಂದಲೇ ಮೀನನ್ನು ಗುರುತಿಸುತ್ತೇವೆ. ಈ ವಿನ್ಯಾಸ ಸ್ಪಷ್ಟ, ಹೊಳಪುಳ್ಳ ಮತ್ತು ಯಾವುದೇ ರೀತಿಯಲ್ಲಿ ಅಸಹಜವಾಗಿಲ್ಲ ಎಂಬುದನ್ನು ನೋಡಬೇಕು. ಹೆಚ್ಚಿನ ಮೀನುಗಳ ಹೊರಮೈ ಲೋಹದ ತಗಡನ್ನು ಚೆನ್ನಾಗಿ ಪಾಲಿಶ್ ಮಾಡಿದರೆ ಹೇಗೆ ಹೊಳೆಯುತ್ತದೆಯೋ ಹಾಗೆ ಹೊಳೆಯುತ್ತದೆ. ಮುಟ್ಟಿದಾಗ ಈ ಹೊಳಪು ಬೆರಳಿಗೆ ಅಂಟಬಾರದು. ಅಂಟಿದರೆ ಮೀನು ತಾಜಾ ಅಲ್ಲ ಎಂದು ಪರಿಗಣಿಸಬಹುದು.
ಮೀನನ್ನು ಕೊಂಚವೇ ಒತ್ತಿ ನೋಡಿದಾಗ ಮೀನಿನ ಚರ್ಮ ಬಿಗಿಯಾಗಿದ್ದು ಬೆರಳು ಬಿಟ್ಟ ತಕ್ಷಣ ಬಿದ್ದ ಕುಳಿ ಮತ್ತೆ ಹಿಂದಿನಂತಾಗಬೇಕು. ಮೀನು ತಾಜಾ ಇಲ್ಲದಿದ್ದರೆ ಬೆರಳಿನಿಂದ ಒತ್ತಿದಲ್ಲಿ ಕುಳಿ ಬಿದ್ದು ಇದು ಹಿಂದೆ ಬರುವುದಿಲ್ಲ. ಮೀನು ಹಳೆಯದಾದಷ್ಟೂ ಹೊಳಪು ಕಳೆದುಕೊಳ್ಳುತ್ತಾ ಹೋಗುತ್ತದೆ. ಹೊರಮೈ ಮೇಲೆ ಹುರುಪೆಗಳಿದ್ದರೆ, ಇವು ಸುಲಭವಾಗಿ ಬರುತ್ತಿಲ್ಲ ಎಂಬುದನ್ನು ಖಚಿತಪಡಿಸಿ. ಒಂದು ಹುರುಪೆ ಎಳೆದಾಗ ಸುಲಭವಾಗಿ ಕಳಚಿ ಬಂದರೆ ಈ ಮೀನು ತಾಜಾ ಅಲ್ಲ. ಸಾಧ್ಯವಾದರೆ ಮೀನನ್ನು ಕತ್ತರಿಸಿ ನೋಡಿ. ಕತ್ತರಿಸಿದ ಭಾಗದಿಂದ ತಾಜಾ ರಕ್ತ ಜಿನುಗಬೇಕು ಹಾಗೂ ರಕ್ತದ ಬಣ್ಣ ಪ್ರಖರ ಗುಲಾಬಿ ಬಣ್ಣದ್ದಾಗಿರಬೇಕು. ರಕ್ತ ಗಾಢ ಕೆಂಪು ಅಥವಾ ಕಪ್ಪಗಾಗಿದ್ದರೆ ಇದು ತಾಜಾ ಅಲ್ಲ. ಮೀನಿನ ಕಿವಿಯ ಭಾಗವನ್ನು ತೆರೆದು ಕಿವಿರುಗಳನ್ನು ಗಮನಿಸಿ. ಇವು ಸ್ಪಷ್ಟ ಕೆಂಪು ಬಣ್ಣದ್ದಾಗಿರಬೇಕು. ಒಂದು ವೇಳೆ ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಮೀನು ಹಾಳಾಗಿದೆ ಎಂದು ಅರ್ಥ. ಕೆಲವು ದುರುಳರು ಈ ಕಿವಿರು ಕೆಂಪಾಗಿಯೇ ಇರುವಂತೆ ಮಾಡಲು ಮರಳನಿಂದ ತಿಕ್ಕಿ ತೊಳೆದಿರುತ್ತಾರೆ. ಹೀಗೆ ಮಾಡುವಾಗ ಕಿವಿರುಗಳ ನಡುವೆ ಎಲ್ಲೋ ಒಂದು ಕಣ ಮರಳು ಇದ್ದೇ ಇರುತ್ತದೆ. ಹೀಗೆ ಮರಳು ಸಿಕ್ಕಿಕೊಂಡಿದ್ದರೆ ಅಥವಾ ಕಿವಿರುಗಳು ತುಂಡು ತುಂಡಾಗಿದ್ದರೆ ಮೀನು ತಾಜಾ ಅಲ್ಲ ಎಂದು ಪರಿಗಣಿಸಬಹುದು. ತಾಜಾ ಮೀನಿನ ಕಿವಿರು ನೀರಿನಿಂದ ಒದ್ದೆಯಾಗಿರುತ್ತದೆ. ಮೀನು ಹಳೆಯದಾದಷ್ಟೂ ಇದು ಒಣಗುತ್ತಾ ಹೋಗುತ್ತದೆ. ಹೀಗಾಗಿ ಮೀನು ಖರೀದಿಸುವ ಮುನ್ನ ಕೆಲ ಟ್ರಿಕ್ಸ್ ಗಳನ್ನ ಬಳಸಿ ತಾಜಾ ಮೀನನ್ನು ಖರೀದಿ ಮಾಡಿ.