20 ಸಾವಿರ ರೂಪಾಯಿಗೆ ಹುಲಿ ಉಗುರು ಖರೀದಿಸಿದ್ದರಂತೆ ವರ್ತೂರು ಸಂತೋಷ್ – ಸೆಲೆಬ್ರಿಟಿಗಳನ್ನು ಚುಚ್ಚುತ್ತಿದೆ ಹುಲಿ ಉಗುರು

ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಸಂತೋಷ್ ಈಗಾಗಲೇ ಜೈಲು ಸೇರಿಯಾಗಿದೆ. 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ವರ್ತೂರ್ ಸಂತೋಷ್ ನೀಡಿರುವ ಒಂದು ಮಾಹಿತಿ ಈಗ ಚರ್ಚೆಗೆ ಕಾರಣವಾಗಿದೆ. ಇನ್ನು ವರ್ತೂರು ಸಂತೋಷ್ ಪ್ರಕರಣ ಹೊರಬರುತ್ತಿದ್ದಂತೆ ಅನೇಕ ಹುಲಿ ಉಗುರು ಧರಿಸಿರುವ ಅನೇಕ ಸೆಲೆಬ್ರಿಟಿಗಳಿಗೆ ತಲೆನೋವು ಶುರುವಾಗಿದೆ.
14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ತಾವು ಧರಿಸಿದ್ದ ಹುಲಿ ಉಗುರಿನ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಹುಲಿ ಉಗುರನ್ನು 20 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದೇನೆ ಎಂದು ವರ್ತೂರು ಸಂತೋಷ್ ಹೇಳಿದ್ದಾರಂತೆ.
ಇನ್ನು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಎಂದು ನಟ, ಯುವರಾಜಕಾರಣಿ ನಿಖಿಲ್ ಕುಮಾರಸ್ವಾಮಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಮಾಧ್ಯಮಗಳಲ್ಲಿ ಈ ಕುರಿತು ಸಾಕಷ್ಟು ಸದ್ದು ಆಗುತ್ತಿದ್ದಂತೆಯೇ ನಿಖಿಲ್ ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ ನನ್ನ ಮದುವೆ ಸಮಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಇದು ಸತ್ಯಕ್ಕೆ ದೂರ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅದರ ಗಂಭೀರತೆ ಬಗ್ಗೆ ನನಗೆ ಖಂಡಿತಾ ಅರಿವಿದೆ. ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೊರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ವಿನಂತಿ ಮಾಡಿಕೊಳ್ಳುತ್ತೇನೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಒಂದು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ ಅವರು ಹುಲಿ ಉಗುರು ಧರಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಸಂಬಂಧ ನಟ ಜಗ್ಗೇಶ್ ವಿರುದ್ಧ ಮಾಜಿ ಎಂಎಲ್ಸಿ ಪಿ.ಆರ್ ರಮೇಶ್, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರಿಗೆ ದೂರು ನೀಡಿದ್ದಾರೆ. ನಟ ಜಗ್ಗೇಶ್ ಹುಲಿ ಉಗುರು ಧರಿಸಿರುವ ಮತ್ತು ಇದು ಒರಿಜಿನಲ್ ಅಂತ ಅವರೇ ಹೇಳಿಕೊಂಡಿರುವ ವೀಡಿಯೋವನ್ನು ಹಲವಾರು ಜನ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಕಳುಹಿಸಿದ್ದಾರೆ. ಈ ವಿಡಿಯೋವನ್ನು ನೋಡಿದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದಿದ್ದಾರೆ. ಇದರಿಂದ ಸಂಸದ ಜಗ್ಗೇಶ್ ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಸ್ಯಾಂಡಲ್ ವುಡ್ ಸಿಲೆಬ್ರಿಟಿಗಳು ಅಲ್ಲದೇ, ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕೂತಿರುವ ಮತ್ತು ಅರ್ಚಕರೊಬ್ಬರು ಹುಲಿ ಉಗುರಿನ ಸರ ಹಾಕಿರುವ ಕುರಿತಾಗಿಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಹೀಗಾಗಿ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಎಲ್ಲರಿಗೂ ನೋಟಿಸ್ ಕೊಡುವುದಾಗಿ ಉನ್ನತ ಮಟ್ಟದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.