ಮಾತಿನ ಬಿಸಿಯ ನಡುವೆ ತಂಗಾಳಿಯಂತೆ ಬಂದ ನಟಿ ತಾರಾ – ಹಬ್ಬದ ದಿನ ಬಿಗ್ಬಾಸ್ ಮನೆಯಲ್ಲಿ ಸಂಭ್ರಮ, ಸಿರಿಗೆ ಕೂಡಿ ಬರುತ್ತಾ ಕಂಕಣ?
ಮಾತಿಗೆ ಮಾತು, ವಾದ, ದ್ವೇಷ, ಸಿಟ್ಟಿನಲ್ಲಿ ಪ್ರತಿಬಾರಿಯೂ ಬಿಸಿಯಾಗಿಯೇ ಇದ್ದ ಬಿಗ್ಬಾಸ್ ಮನೆೆಗೆ ಹಬ್ಬದ ದಿನ ತಂಗಾಳಿಯೊಂದು ಬೀಸಿತ್ತು. ನಟಿ ತಾರಾ ಅವರು ತಂಗಾಳಿಯಂತೆ ಬಂದು ಇದ್ದಷ್ಟು ಹೊತ್ತು ಸ್ಪರ್ಧಿಗಳ ಮುಖದಲ್ಲಿ ನಗು ತರಿಸಿದರು. ನವಿರಾಗಿಯೇ ಕಿವಿ ಹಿಂಡಿ ಬುದ್ದಿ ಮಾತು ಹೇಳಿದರು. ಜೊತೆಗೆ ಮನೆಗೆ ತಮ್ಮಿಂದ ಆದಷ್ಟು ಉಪಕಾರ ಮಾಡಿದರು. ಅದರಲ್ಲೂ ವಿನಯ್ ಗೌಡ ಮತ್ತು ಸಿರಿ ಜೊತೆ ತಾರಾ ಆಡಿದ ಮಾತು ವೀಕ್ಷಕರಿಗೂ ಹಿಡಿಸಿತು.
ಇದನ್ನೂ ಓದಿ: ಬಿಗ್ಬಾಸ್ ಮನೆಗೆ ನಟಿ ತಾರಾ ಎಂಟ್ರಿ – ಸ್ಪರ್ಧಿಗಳಿಗೆ ಒಂದೆಡೆ ಶಾಕಿಂಗ್, ಮತ್ತೊಂದೆಡೆ ಸರ್ಪ್ರೈಸ್
ಬಿಗ್ಬಾಸ್ ಮನೆಗೆ ತಂಗಾಳಿಯಂತೆ ಎಂಟ್ರಿ ಕೊಟ್ಟ ನಟಿ ತಾರಾ ದೊಡ್ಮನೆಗೆ ಹೊಸ ಕಳೆ ತಂದರು. ಮನಸಲ್ಲೇ ದ್ವೇಷ ಕಾರುತ್ತಿದ್ದವರನ್ನು ಸರಿ ಮಾಡಲು ಆಗದಿದ್ದರೂ, ಇದ್ದ ಒಂದು ದಿನ ಸ್ಪರ್ಧಿಗಳಿಗೆ ಸಂತಸ ಹಂಚಿದರು. ಜೊತೆಗೆ ಒಬ್ಬೊಬ್ಬರ ಬಳಿ ಮಾತನಾಡುತ್ತಾ ಅವರ ಸೀಕ್ರೆಟ್ ರಿವೀಲ್ ಮಾಡಿದರು. ಅದರಲ್ಲೂ ಸಿರಿ ಜೊತೆ ತಾರಾ ಮಾತುಕತೆ ನಿಜಕ್ಕೂ ಸ್ವಾರಸ್ಯಕರವಾಗಿತ್ತು. ನಿಮಗೆ ಸೂಕ್ತ ವರ ಸಿಕ್ಕಿದರೆ ಮದುವೆಯಾಗುತ್ತೀರಾ ಎಂದು ಕೇಳಿದರು. ಖಂಡಿತವಾಗಿಯೇ ಮದುವೆಯಾಗುತ್ತೇನೆ ಎಂದು ಸಿರಿ ಹೇಳಿದರು. ಆಗ ನಟಿ ಸಿರಿ ಅವರ ಬಳಿ ಬೇಗನೆ ಮದುವೆ ಆಗುವಂತೆ ಹೇಳಿದರು. ಮದುವೆಯಾಗಿ ‘ರಾಜಾ ರಾಣಿ’ ಶೋಗೆ ಬನ್ನಿ. ಅಲ್ಲಿಂದ ಒಂದು ವರ್ಷದಲ್ಲಿ ‘ನಮ್ಮಮ್ಮ ಸೂಪರ್ ಸ್ಟಾರ್’ಗೆ ಬನ್ನಿ ಎಂದು ಹೇಳಿ ತಮಾಷೆ ಮಾಡಿದರು.
ಆ ಬಳಿಕ ವಿನಯ್ ಬಳಿ ಮಾತನಾಡುತ್ತಾ, ಭಾಷೆಯನ್ನು ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು. ಜೊತೆಗೆ ಹೋಳಿಗೆ ತಿನ್ನಿಸುವಾಗ ಇದು ಡ್ರೋನ್ ಪ್ರತಾಪ್ ಮಾಡಿದ್ದು ಎಂಬುದನ್ನು ಮತ್ತೆ ಮತ್ತೆ ಹೇಳುವ ಮೂಲಕ ವಿನಯ್ಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಆ ಬಳಿಕ ಹಬ್ಬದ ವಿಶೇಷವಾಗಿ ಮನೆಯ ಎಲ್ಲಾ ಸದಸ್ಯರಿಗೆ ಹಲ್ದಿರಾಮ್ಸ್ ಕಡೆಯಿಂದ ಹಬ್ಬದ ಅಡುಗೆಯನ್ನು ಕಳಿಸಲಾಯ್ತು. ಚೋಲೆ ಬಟೂರೆ ಸೇರಿದಂತೆ ಹಲವು ತಿಂಡಿ ತಿನಿಸುಗಳನ್ನು ಮನೆಯ ಎಲ್ಲ ಸದಸ್ಯರಿಗಾಗಿ ಬಿಗ್ಬಾಸ್ ಕಳಿಸಿದರು. ತಾರಾ ಅವರೊಟ್ಟಿಗೆ ಸೇರಿ ಎಲ್ಲರೂ ರುಚಿಯಾದ ಊಟ ಸವಿದರು. ಬಳಿಕ ಬಿಗ್ಬಾಸ್ ಅಣತಿಯಂತೆ ಪ್ರತಿಯೊಬ್ಬರೂ ಒಂದೊಂದು ಹಾಡಿಗೆ ನರ್ತಿಸಿ ಆ ಹಾಡನ್ನು ಯಾರಿಗೆ ಡೆಡಿಕೇಟ್ ಮಾಡುವುದಾಗಿ ಹೇಳಬೇಕಿತ್ತು. ಅಂತೆಯೇ ನಮ್ರತಾ-ಸ್ನೇಹಿತ್ಗೆ, ಸ್ನೇಹಿತ್-ನಮ್ರತಾಗೆ ಹಾಡು ಡೆಡಿಕೇಟ್ ಮಾಡಿದರು. ಸಂಗೀತಾ ಹಾಗೂ ಕಾರ್ತಿಕ್ ಒಟ್ಟಿಗೆ ಡ್ಯಾನ್ಸ್ ಸಹ ಮಾಡಿದರು. ಡ್ರೋನ್ ಪ್ರತಾಪ್ ಸರದಿ ಬಂದಾಗ ಬಂಡಲ್ ಬಡಾಯಿ ಮಾದೇವ ಹಾಡು ಹಾಕಲಾಯ್ತು. ಅದನ್ನು ಅವರು ಸಂತುಗೆ ಡೆಡಿಕೇಟ್ ಮಾಡಿದರು. ಎಲ್ಲರೊಟ್ಟಿಗೆ ಬೆರೆತು ಬಿಗ್ಬಾಸ್ ಮನೆಯ ಸದಸ್ಯರಿಗೆ ಹಬ್ಬವನ್ನು ತಂದ ತಾರಾ ಅವರು ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿ, ಎಲ್ಲರೊಟ್ಟಿಗೆ ಡ್ಯಾನ್ಸ್ ಮಾಡಿ ಬಿಗ್ಬಾಸ್ ಮನೆಗೆ ಹಬ್ಬದ ಕಳೆ ತಂದರು. ಕೊನೆಗೆ ಬಿಗ್ಬಾಸ್ ಅಣತಿಯಂತೆ ಎಲ್ಲರಿಗೂ ಧನ್ಯವಾದ ಹೇಳಿ ನಿರ್ಗಮಿಸಿದರು.