ಕೋಲಿನಿಂದ ಹೊಡೆದಾಡಿಕೊಳ್ಳುವ ಜಾತ್ರೆಯಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಗಾಯ – ಮೂವರ ಸ್ಥಿತಿ ಗಂಭೀರ
ದೇಶದಾದ್ಯಂತ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಒಂದೊಂದು ಊರಿನಲ್ಲಿ ಅಲ್ಲಿನ ಸಂಪ್ರದಾಯಗಳಿಗನುಗುಣವಾಗಿ ಆಚರಿಸಲಾಗಿದೆ. ಆಂಧ್ರದ ಕರ್ನೂಲು ಜಿಲ್ಲೆಯ ಹೊಳಗುಂದ ಮಂಡಲದ ದೇವರಗುಡ್ಡ ಎಂಬಲ್ಲಿ ಕೋಲುಗಳನ್ನು ಹಿಡಿದು ಬಡಿದಾಡಿಕೊಳ್ಳುವ ಜಾತ್ರೆ ಈ ಬಾರಿಯೂ ನಡೆದಿದ್ದು, ಇದರ ಆಚರಣೆ ವೇಳೆ ಮತ್ತೊಮ್ಮೆ ರಕ್ತ ಸುರಿದಿದೆ.
ಹೊಳಗುಂದ ಮಂಡಲದ ದೇವರಗುಡ್ಡದಲ್ಲಿ ಹಲವು ವರ್ಷಗಳಿಂದ ಈ ಸಂಪ್ರದಾಯವನ್ನು ಆಚರಿಸಲಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ವಿಜಯದಶಮಿಯಂದು ಆಚರಿಸಲಾಗಿದ್ದು ಈ ವೇಳೆ ನೂರಾರು ಮಂದಿ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಬೀರವಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಗಾಜಾ ಪಟ್ಟಿ ಮೇಲೆ ಮತ್ತೆ ದಾಳಿ ನಡೆಸಿದ ಇಸ್ರೇಲ್ – 24 ಗಂಟೆಗಳಲ್ಲಿ 700 ಮಂದಿ ಸಾವು
ಏನಿದು ಸಂಪ್ರದಾಯ?
ಆಂಧ್ರಪ್ರದೇಶದ ಗಡಿ ಭಾಗದಲ್ಲಿ ದೇವರ ಗುಡ್ಡದಲ್ಲಿ ವಿಜಯದಶಮಿಯ ರಾತ್ರಿ ವಿಶಿಷ್ಠ ಆಚರಣೆಯೊಂದು ನಡೆಯುತ್ತದೆ. ನೆರಣಕಿ ಗ್ರಾಮಕ್ಕೆ ಸೇರಿದ ಮೀಸಲು ಅರಣ್ಯಪ್ರದೇಶದ ಗುಡ್ಡದ ಮೇಲಿರೋ ಮಾಳ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಜಯದಶಮಿ ದಿನರಾತ್ರಿ ಇಲ್ಲಿನ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಗೆ ಕಲ್ಯಾಣೋತ್ಸವ ನಡೆಯುತ್ತದೆ. ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ನೆರಣಕಿ ಗ್ರಾಮದ ಭಕ್ತರು ಬೆಟ್ಟಕ್ಕೆ ಬರುತ್ತಾರೆ.
ಬರುವಾಗ ಮತ್ತು ಹೋಗುವಾಗ ಈ ಉತ್ಸವ ಮೂರ್ತಿಗಳನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಬೇಕೆಂದು ಸುತ್ತಮುತ್ತಲಿನ ಗ್ರಾಮಸ್ಥರು ಪ್ರಯತ್ನಿಸುತ್ತಾರೆ. ಈ ವೇಳೆ ಪರಸ್ಪರ ಬಡಿಗೆ ಹಿಡಿದು ಕೊಂಡು ಹೊಡೆದಾಡಿಕೊಳ್ಳುತ್ತಾರೆ. ಇದನ್ನು ನೋಡಲು ಮತ್ತು ಅದರಲ್ಲಿ ಪಾಲ್ಗೊಳ್ಳಲು ಈ ಬೆಟ್ಟ ಪ್ರದೇಶದಕ್ಕೆ ಸಾವಿರಾರು ಜನ ಬಂದು ಸೇರುತ್ತಾರೆ. ಮಧ್ಯರಾತ್ರಿ 1 ರಿಂದ 3 ಗಂಟೆವರೆಗೆ ಈ ಕಾಳಗ ನಡೆಯುತ್ತದೆ. ಈ ಕಾಳಗಕ್ಕೆ ನಿಷೇಧವಿದ್ರೂ ಪೊಲೀಸರ ಎದುರಿಗೇ ಈ ಕಾಳಗ ನಡೆದು ಪರಸ್ಪರ ಬಡಿದಾಡಿಕೊಳ್ಳುತ್ತಾರೆ.