ವನ್ಯಜೀವ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅರೆಸ್ಟ್ ಆಗಿದ್ದರು ಸೆಲೆಬ್ರೆಟಿಗಳು – ಇಂಥಾ ಪ್ರಕರಣದಲ್ಲಿ ಜೈಲು ಶಿಕ್ಷೆಯ ಪ್ರಮಾಣ ಎಷ್ಟು?
ಬಿಗ್‌ಬಾಸ್‌ಗೆ ಬರುವಾಗಲೇ ಮೈತುಂಬಾ ಚಿನ್ನ ಹೇರಿಕೊಂಡು ಬಂದಿದ್ದ ಶೋಕಿ ಶ್ರೀಮಂತ ವರ್ತೂರು ಸಂತೋಷ್ ನೋಡಿ ಎಲ್ಲರೂ ಹುಬ್ಬೇರಿಸಿದ್ದರು. ಇದು ಬರೀ ಸ್ಯಾಂಪಲ್ ಅಷ್ಟೇ ಎಂಬಂತೆಯೂ ವರ್ತೂರು ಬಿಗ್ ಬಾಸ್ ಮನೆಯಲ್ಲಿ ಮಾತಾಡಿದ್ದರು. ನಾನು ರೈತ, ಬಂಗಾರದ ಬೆಳೆ ಬೆಳೆದು ಇಷ್ಟೆಲ್ಲಾ ಧರಿಸಿಕೊಂಡಿದ್ದೀನಿ ಎಂದು ವರ್ತೂರು ಸಂತೋಷ್ ಹೇಳಿದಾಗಲೂ ಗೌರವವೇ ಮೂಡಿತ್ತು. ಆದರೆ, ಯಾವಾಗ ಹುಲಿ ಉಗುರು ಕಾಣಿಸಿಕೊಂಡಿತೋ, ಅಲ್ಲಿಂದಲೇ ವರ್ತೂರು ಸಂತೋಷ್ ಗೆ ಶನಿಕಾಟ ಶುರುವಾಗಿತ್ತು. ಇದು ವರ್ತೂರು ಸಂತೋಷ್ ಮಾತ್ರವಲ್ಲ. ವನ್ಯಜೀವ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಸೆಲೆಬ್ರೆಟಿಗಳು ಕೂಡಾ ಅರೆಸ್ಟ್ ಆಗಿದ್ದರು.
ಇದನ್ನೂ ಓದಿ: ವರ್ತೂರು ಸಂತೋಷ್‌ಗೆ 14 ದಿನ ನ್ಯಾಯಾಂಗ ಬಂಧನ – ಲಾಕೆಟ್ ಮಾಡಿಕೊಟ್ಟ ಚಿನ್ನದ ಅಂಗಡಿ ಮಾಲೀಕನಿಗೂ ಸಂಕಷ್ಟ
ವನ್ಯಜೀವ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಸೆಲೆಬ್ರೆಟಿಗಳು ಅರೆಸ್ಟ್ ಆಗಿರೋದು ಇದೇ ಮೊದಲೇನಲ್ಲ. ಬಾಲಿವುಡ್ ಬ್ಯಾಡ್ಬಾಯ್ ಸಲ್ಮಾನ್ ಖಾನ್ 1998ರಲ್ಲಿ ರಾಜಸ್ಥಾನದ ಜೋಧ್ಪುರ್ನಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಕೃಷ್ಣಮೃಗವನ್ನು ಗುಂಡಿಕ್ಕಿ ಕೊಂದಿದ್ದರು. ಈ ಕೇಸ್ನಲ್ಲಿ ಜೈಲುಪಾಲಾಗಿದ್ದ ಸಲ್ಮಾನ್ ಖಾನ್ ಈಗಲೂ ಈ ಪ್ರಕರಣವನ್ನ ಎದುರಿಸುತ್ತಿದ್ದಾರೆ. ಕೋರ್ಟ್ನಿಂದ ಅಂತಿಮ ತೀರ್ಪು ಇನ್ನಷ್ಟೇ ಹೊರಬರಬೇಕಿದೆ.
ನಮ್ಮ ರಾಜ್ಯದಲ್ಲೂ ಹಲವೆಡೆ ಆಹಾರಕ್ಕಾಗಿ ಅಕ್ರಮವಾಗಿ ಜಿಂಕೆಗಳನ್ನ ಕೊಲ್ಲಲಾಗ್ತಿದೆ. ಕಾಡು ಹಂದಿಗಳನ್ನ ಬೇಟೆಯಾಡ್ತಿದ್ದಾರೆ. ಮಂಗಗಳನ್ನೂ ಕೊಲ್ಲುತ್ತಿದ್ದಾರೆ. ಇವೆಲ್ಲವೂ ಶಿಕ್ಷಾರ್ಹ ಅಪರಾಧವೇ. ಇನ್ನು ಮನುಷ್ಯನ ಶೋಕಿಗಾಗಿ ಪ್ರಾಣಿಗಳನ್ನ ಕೊಂದು ಉಗುರು, ಹಲ್ಲುಗಳನ್ನ ಕೀಳೋದು ಅಪರಾಧವೇ. ಈಗ ವರ್ತೂರ್ ಸಂತೋಷ್ ಪ್ರಕರಣ ಎಲ್ಲರಿಗೂ ಒಂದು ಪಾಠ. ಇನ್ನೂ ಯಾರಾದರೂ ಹುಲಿಯುಗುರು ಧರಿಸುವಂತಾ ಶೋಕಿ ಹೊಂದಿದ್ದರೆ ಮೊದಲು ಬಿಟ್ಟು ಬಿಡಲಿ. ಮನುಷ್ಯನ ಶೋಕಿಗಾಗಿ ಪ್ರಾಣಿಗಳಿಗೆ ಹಿಂಸೆ ನೀಡೋದು ಎಷ್ಟು ಸರಿ?.