ಹುಲಿಕುಣಿತದ ವೇಳೆ ನಡೆಯಿತು ದುರಂತ – ಕಸರತ್ತು ಪ್ರದರ್ಶ ಮಾಡುವಾಗ ಹುಲಿವೇಷದ ಪಾತ್ರಧಾರಿಗೆ ಗಾಯ!
ಕರಾವಳಿಯಲ್ಲಿ ಹುಲಿ ಕುಣಿತ ಫೇಮಸ್. ನವರಾತ್ರಿ ವೇಳೆ ನೂರಾರು ಮಂದಿ ಹುಲಿ ವೇಷ ಹಾಕಿ ಕುಣಿಯುತ್ತಾರೆ. ಹುಲಿವೇಷ ಹಾಕಿ ದೇವಿಯ ಮುಂದೆ ಕುಣಿದರೆ ದೇವಿಗೆ ಸಂತಸವಾಗುತ್ತದೆ ಹಾಗೂ ದೇವಿಯೂ ಪ್ರಸನ್ನಳಾಗಿ ಹರಸುತ್ತಾಳೆ ಎಂಬ ನಂಬಿಕೆ ಕರಾವಳಿಗರದ್ದು. ಮಂಗಳೂರಿನ ಮಂಗಳಾದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷ ನವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷವೂ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಭಾರಿ ದೇವಸ್ಥಾನದ ವಠಾರದಲ್ಲಿ ಹುಲಿವೇಷ ಕುಣಿತದ ವೇಳೆ ಹುಲಿವೇಷಧಾರಿಯೊಬ್ಬ ಆಯ ತಪ್ಪಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ.
ಇದನ್ನೂ ಓದಿ: ಜಂಬೂಸವಾರಿಗೆ ಕರೆತಂದಿದ್ದ ಆನೆಗೆ ಹೆರಿಗೆ! – ಹೆಣ್ಣು ಮರಿಗೆ ಜನ್ಮ ನೀಡಿದ ನೇತ್ರಾವತಿ!
ಸೋಮವಾರ ಮುಳಿಹಿತ್ಲು ಎಂಬಲ್ಲಿನ ಹುಲಿವೇಷ ತಂಡ ಹುಲಿ ಕುಣಿತ ಆಯೋಜಿಸಲಾಗಿತ್ತು. ದೇವರ ಎದುರು ಹುಲಿವೇಷ ಧರಿಸಿ ಪ್ರದರ್ಶನದ ವೇಳೆ ಘಟನೆ ನಡೆದಿದೆ. ಹುಲಿವೇಷಧಾರಿಯೊಬ್ಬರು ಕಸರತ್ತು ಪ್ರದರ್ಶನದ ವೇಳೆ ರಿವರ್ಸ್ ಪಲ್ಟಿ ಹೊಡೆಯುತ್ತಿದ್ದರು. ಈ ವೇಳೆ ಆಯ ತಪ್ಪಿ ತಲೆ ನೆಲಕ್ಕೆ ಬಡಿದು ಅನಾಹುತ ನಡೆದಿದೆ. ತಲೆ ನೆಲಕ್ಕೆ ಬಡಿದು ಕತ್ತು ಉಳುಕಿದ ಪರಿಣಾಮ ಹುಲಿವೇಷಧಾರಿಗೆ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಹುಲಿವೇಷಧಾರಿ ಯುವಕನಿಗೆ ಚಿಕಿತ್ಸೆ ನೀಡಲಾಗಿದೆ.
ಸದ್ಯ ಯುವಕ ಸಣ್ಣ-ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಯುವಕ ಪಾರಾಗಿದ್ದಾನೆ. ನಿರಂತರ ಅಭ್ಯಾಸದ ಜೊತೆಗೆ ಹಲವು ವರ್ಷಗಳಿಂದ ಹುಲಿವೇಷ ಕಸರತ್ತು ನಡೆಸಲಾಗುತ್ತದೆ. ಹರಕೆಯ ಕಾರಣಕ್ಕೆ ಮಂಗಳಾದೇವಿ ದೇವರ ಎದುರು ಕಸರತ್ತು ನಡೆಸುವುದು ಹಾಗೂ ನವರಾತ್ರಿ ಹಿನ್ನೆಲೆ ಹುಲಿವೇಷ ಧರಿಸಿ ಕುಣಿತ ಮತ್ತು ಕಸರತ್ತು ಪ್ರದರ್ಶಿಸುವ ಸಂಪ್ರದಾಯ ಇದೆ.