ರಾಜ್ಯದಲ್ಲಿ ಹೆಚ್ಚಾಯ್ತು ಡೆಂಘೀ ಜ್ವರ ಪ್ರಕರಣ – ಕೇವಲ 20 ದಿನದಲ್ಲಿ 1404 ಪ್ರಕರಣ!
ಬೆಂಗಳೂರು: ಮಳೆಗಾಲ ಮುಗಿಯುತ್ತಿದ್ದಂತೆ ಒಂದೊಂದೇ ಖಾಯಿಲೆಗಳು ವಕ್ಕರಿಸಿಕೊಳ್ಳುತ್ತಿವೆ. ಇದೀಗ ರಾಜ್ಯದ ಜನತೆಗೆ ಡೆಂಘೀ ಜ್ವರದ ಕಾಟ ಶುರುವಾಗಿದೆ. ಕರ್ನಾಟಕದಲ್ಲಿ ದಿನೇ ದಿನೆ ಡೆಂಘೀ ಜ್ವರ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಕಳೆದ 20 ದಿನಗಳಲ್ಲಿ 1,404 ಮಂದಿಗೆ ಜ್ವರ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಲ್ಲಿವರೆಗೆ ಬೆಂಗಳೂರು ನಗರದಲ್ಲಿ ಮಾತ್ರ ಡೆಂಘೀ ಜ್ವರದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದವು. ಆದರೆ ಇದೀಗ ರಾಜ್ಯದಾದ್ಯಂತ ಈ ಮಹಾಮಾರಿ ಕಾಟ ಶುರುವಾಗಿದೆ. ಕಳೆದ 20 ದಿನಗಳಿಂದ ಬೆಂಗಳೂರುನಗರಕ್ಕಿಂತ ವೇಗವಾಗಿ ರಾಜ್ಯದ ಇತರೆ ಪ್ರದೇಶಗಳಲ್ಲಿ ಡೆಂಘೀ ಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ. ನಿರ್ಲಕ್ಷ್ಯ ಮಾಡಿದರೆ ಮಾರಣಾಂತಿಕವಾಗಬಲ್ಲ ಜ್ವರದ ಬಗ್ಗೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
ಪ್ರಸಕ್ತ ವರ್ಷದಲ್ಲಿ ಅ.1ರ ವೇಳೆಗೆ ಬೆಂಗಳೂರು ನಗರದಲ್ಲಿ 5,767 ಪ್ರಕರಣ ವರದಿಯಾಗಿದ್ದವು. ಬೆಂಗಳೂರು ನಗರ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ 4,505 ಪ್ರಕರಣ ವರದಿಯಾಗಿದ್ದವು. ಈ ಪ್ರಕರಣಗಳ ಸಂಖ್ಯೆ ಅ.20ರ ವೇಳೆಗೆ ಬೆಂಗಳೂರು ನಗರದಲ್ಲಿ 6,139 ಆಗಿದ್ದು, 372 ಪ್ರಕರಣ ಹೆಚ್ಚಾಗಿದೆ. ಇನ್ನು ರಾಜ್ಯದ ಇತರೆಡೆ 4,505 ರಷ್ಟಿದ್ದ ಪ್ರಕರಣಗಳು 5,571ಕ್ಕೆ ಏರಿಕೆಯಾಗಿದ್ದು, 20 ದಿನಗಳಲ್ಲಿ 1,066 ಮಂದಿಗೆ ಡೆಂಘೀ ಸೋಂಕು ದೃಢಪಟ್ಟಿದೆ. ಇವು ಆರೋಗ್ಯ ಇಲಾಖೆಗೆ ವೈದ್ಯರು ವರದಿ ಮಾಡಿರುವ ಅಂಕಿ-ಅಂಶಗಳಾಗಿದ್ದು, ವಾಸ್ತವವಾಗಿ ಇನ್ನೂ ಹೆಚ್ಚಿನ ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಡೆಂಘೀ ಜ್ವರದ ಲಕ್ಷಣಗಳೇನು?
ಈಡಿಸ್ ಈಜಿಪ್ಟ್ ಎಂಬ ಸೊಳ್ಳೆಯಿಂದ ಡೆಂಘೀ ಜ್ವರ ಹರಡುತ್ತದೆ. ಸೊಳ್ಳೆ ಕಚ್ಚಿದ 4-5 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೈಕೈ ನೋವು, ಕೀಲು ನೋವು, ವಿಪರೀತ ಜ್ವರ, ರಕ್ತದಲ್ಲಿ ಪ್ಲೇಟ್ಲೆಟ್ ಕಣಗಳ ಪ್ರಮಾಣ ಕುಸಿಯುವಿಕೆ ಪ್ರಮುಖ ಲಕ್ಷಣಗಳು. ಪ್ಲೇಟೈಟ್ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಕಡಿಮೆಯಾದರೆ ರೋಗಿಯ ಸಾವಿಗೂ ಕಾರಣವಾಗಬಹುದು.
ಡೆಂಘೀ ಜ್ವರದಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?
- ಹಗಲಿನ ವೇಳೆ ಕಚ್ಚುವ ಸೊಳ್ಳೆಯಿಂದ ಎಚ್ಚರದಿಂದ ಇರಬೇಕು
- ಮನೆಯಲ್ಲಿರುವ ನೀರಿನ ಸಂಗ್ರಾಹಕಗಳನ್ನು ಸ್ವಚ್ಛಗೊಳಿಸಬೇಕು
- ಸೊಳ್ಳೆ ಇರುವ ಒಡೆದ ಬಾಟಲಿ, ಟೈರು, ತೆಂಗಿನ ಚಿಪ್ಪು ವಿಲೇ ಮಾಡಿ
- ಏರ್ ಕೂಲರ್, ಫ್ರಿಡ್ಜ್ಗಳಲ್ಲಿನ ನೀರನ್ನು ಆಗಾಗ್ಗೆ ಸ್ವಚ್ಛಗೊಳಿಸಬೇಕು
- ಸ್ಥಳೀಯ ಸಂಸ್ಥೆಗಳು ಸೊಳ್ಳೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು
- ನೀರಿನ ಸಂಪ್, ನೀರು ನಿಲುಗಡೆ ಜಾಗದಲ್ಲಿನ ಲಾರ್ವಾ ನಾಶ ಮಾಡಿ
- ಸೊಳ್ಳೆ ಹೆಚ್ಚಿರುವ ಕಡೆ ಧೂಮೀಕರಣದಂತಹ ಕ್ರಮ ಕೈಗೊಳ್ಳಬೇಕು
- ತೀವ್ರ ಜ್ವರದ ಲಕ್ಷಣಗಳು ಕಂಡುಬಂದರೆ ವೈದ್ಯರ ಸಂಪರ್ಕಿಸಬೇಕು