ವಿಶ್ವಕಪ್ ಪಾಯಿಂಟ್ ಟೇಬಲ್ನಲ್ಲಿ ಮೊದಲ ಸ್ಥಾನಕ್ಕೇರಿದ ಭಾರತ – ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ ದಾಖಲೆ ಮುರಿದ ಮಹಮ್ಮದ್ ಶಮಿ
ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಟೀಂ ಇಂಡಿಯಾದ ಭರ್ಜರಿ ಪ್ರದರ್ಶನ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನ ಬಗ್ಗು ಬಡಿದಿದ್ದ ರೋಹಿತ್ ಶರ್ಮಾ ನೇತೃತ್ವದ ಪಡೆ ಬಳಿಕ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಭಾನುವಾರ ನ್ಯೂಝಿಲೆಂಡ್ ವಿರುದ್ಧ ಜಯ ಸಾಧಿಸುವ ಮೂಲಕ ಅತ್ಯುತ್ತಮ ಫಾರ್ಮ್ನಲ್ಲಿದೆ. ಟೀಮ್ ಇಂಡಿಯಾ ಇದೀಗ ಆಡಿದ ಐದು ಪಂದ್ಯಗಳ ಪೈಕಿ ಐದರಲ್ಲೂ ಗೆಲುವು ಸಾಧಿಸಿ ಒಟ್ಟು ಹತ್ತು ಅಂಕ ಸಂಪಾದಿಸಿ ವಿಶ್ವಕಪ್ ಪಾಯಿಂಟ್ ಟೇಬಲ್ನಲ್ಲಿ ಮೊದಲ ಸ್ಥಾನದಲ್ಲಿದೆ.
ಇದನ್ನೂ ಓದಿ : ಸ್ಮಾರ್ಟ್ ಫೋನ್ ಗಳನ್ನು ಹಾಳಾಗುವವರೆಗೂ ಉಪಯೋಗಿಸಬಹುದಾ – ಎಷ್ಟು ವರ್ಷಕ್ಕೊಮ್ಮೆ ಮೊಬೈಲ್ ಗಳನ್ನ ಬದಲಿಸಬೇಕು?
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಮಹಮ್ಮದ್ ಶಮಿ ಅದ್ಭುತ ಪ್ರದರ್ಶನ ನೀಡಿದರು. ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ವೇಗಿ ಮಹಮದ್ ಶಮಿ ಭಾರತ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ ಅವರ ದಾಖಲೆ ಮುರಿದು ಎಲೈಟ್ ಕ್ಲಬ್ ಸೇರಿದ್ದಾರೆ. ಭಾನುವಾರ ಧರ್ಮಶಾಲಾದ ಹೆಚ್ ಪಿಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ 4 ಪಂದ್ಯಗಳಿಂದ ಬೆಂಚ್ ಕಾದಿದ್ದ ಮೊಹಮ್ಮದ್ ಶಮಿ, ವೇಗದ ಆಲ್ ರೌಂಡರ್ ಶಾರ್ದುಲ್ ಠಾಕೂರ್ ಜಾಗದಲ್ಲಿ ಸ್ಥಾನ ಪಡೆದಿದ್ದರು. ಪಂದ್ಯದ ತಮ್ಮ ಮೊದಲ ಎಸೆತದಲ್ಲೇ ಸ್ಫೋಟಕ ಆಟಗಾರ ವಿಲ್ ಯಂಗ್ ವಿಕೆಟ್ ಕಬಳಿಸಿದ ಮೊಹಮ್ಮದ್ ಶಮಿ, ನಂತರದ ಓವರ್ ಗಳಲ್ಲೂ ಉತ್ತಮ ಬೌಲಿಂಗ್ ಮಾಡಿದ್ರು. ಹಾಗೇ ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ ಹಾಗೂ ಮ್ಯಾಟ್ ಹೆನ್ರಿ ವಿಕೆಟ್ ಪಡೆದರು. ತಮ್ಮ 10 ಓವರ್ ಗಳಲ್ಲಿ 54 ರನ್ ಬಿಟ್ಟುಕೊಟ್ಟರು. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಶಮಿ 5 ವಿಕೆಟ್ ಪಡೆದಿದ್ದರು.
ಏಕದಿನ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಟೀಮ್ ಇಂಡಿಯಾ ಪರ 2 ಬಾರಿ 5 ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ದಾಖಲೆಗೆ ವೇಗಿ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ. ತಮ್ಮ ಈ ಪ್ರದರ್ಶನದಿಂದ ನ್ಯೂಜಿಲೆಂಡ್ ತಂಡವನ್ನು 273 ರನ್ ಗಳಿಗೆ ನಿಯಂತ್ರಿಸಿದ್ದಾರೆ. ಇನ್ನು ಇಂದಿನ 5 ವಿಕೆಟ್ ಗಳ ಸಾಧನೆ ಮೂಲಕ ಶಮಿ ವಿಶ್ವಕಪ್ ನಲ್ಲಿ ತಾವು ಪಡೆದ ವಿಕೆಟ್ ಗಳ ಸಂಖ್ಯೆಯನ್ನು 36ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ. ಕುಂಬ್ಳೆ ವಿಶ್ವಕಪ್ ನಲ್ಲಿ 31 ವಿಕೆಟ್ ಕಬಳಿಸಿದ್ದಾರೆ. ಇನ್ನು ಭಾರತದ ವಿಶ್ವಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪೈಕಿ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಜಂಟಿ ಅಗ್ರಸ್ಥಾನದಲ್ಲಿದ್ದು, ಜಹೀರ್ ಮತ್ತು ಶ್ರೀನಾಥ್ ತಲಾ 44 ವಿಕೆಟ್ ಗಳನ್ನು ಗಳಿಸಿದ್ದಾರೆ. 36 ವಿಕೆಟ್ ಗಳೊಂದಿಗೆ ಶಮಿ 2ನೇ ಸ್ಥಾನದಲ್ಲಿದ್ದು, 29 ವಿಕೆಟ್ ಪಡೆದಿರುವ ಬುಮ್ರಾ 4 ಮತ್ತು 28 ವಿಕೆಟ್ ಗಳನ್ನು ಕಬಳಿಸಿರುವ ಕಪಿಲ್ ದೇವ್ 5ನೇ ಸ್ಥಾನದಲ್ಲಿದ್ದಾರೆ.