ಹುತಾತ್ಮ ಪೊಲೀಸ್ ಸಿಬ್ಬಂದಿಯ ವಿಮಾ ಮೊತ್ತ ಏರಿಕೆ – 20 ಲಕ್ಷದಿಂದ 50 ಲಕ್ಷಕ್ಕೆ ವಿಮಾ ಮೊತ್ತ ಹೆಚ್ಚಳ!
ಬೆಂಗಳೂರು: ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಯ ಗುಂಪು ವಿಮೆ ಮೊತ್ತವನ್ನು ಹೆಚ್ಚಳ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ಪೊಲೀಸ್ ಸಂಸ್ಮರಣ ದಿನದ ಅಂಗವಾಗಿ ಮೈಸೂರು ರಸ್ತೆಯ ಹುತಾತ್ಮರ ಉದ್ಯಾನವನದಲ್ಲಿ ಹುತಾತ್ಮರಿಗೆ ಪುಷ್ಪಚಕ್ರ ಅರ್ಪಿಸಿ ನಮನ ಸಲ್ಲಿಸಿ ಮಾತನಾಡಿದ್ದಾರೆ. ಈ ವೇಳೆ ಕರ್ತವ್ಯದ ಮೇಲಿದ್ದಾಗ ಹುತಾತ್ಮರಾಗುವ ಪೊಲೀಸ್ ಸಿಬ್ಬಂದಿಯ ಗುಂಪು ವಿಮಾ ಮೊತ್ತವನ್ನು 20 ಲಕ್ಷದಿಂದ 50 ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.
ಇದನ್ನೂ ಓದಿ: ರಾಜ್ಯೋತ್ಸವದಂದು ಕನ್ನಡದ 5 ಗೀತೆಗಳ ಗಾಯನ ಕಡ್ಡಾಯ – ರಾಜ್ಯ ಸರ್ಕಾರ ಆದೇಶ!
ಪೊಲೀಸ್ ವ್ಯವಸ್ಥೆ ರಾಜ್ಯದ , ಸರ್ಕಾರದ ಘನತೆಯನ್ನು ಹೆಚ್ಚಿಸುವಂತೆ ಕೆಲಸ ಮಾಡುತ್ತದೆ. ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಗೆ ನೇರ ಸಂಬಂಧವಿದೆ. ಯಾವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿರುತ್ತದೋ ಅಲ್ಲಿಗೆ ಬಂಡವಾಳ ಹೆಚ್ಚಾಗಿ ಬರುತ್ತದೆ. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಾಗಿ, ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತದೆ. ಇದರ ಪರಿಣಾಮ ನಾಡಿನ ಜನರ ತಲಾ ಆದಾಯದ ಪ್ರಮಾಣವೂ ಹೆಚ್ಚಾಗುತ್ತದೆ. ಆದ್ದರಿಂದ ನಾಡಿನ ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕಟ್ಟು ನಿಟ್ಟಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.
ತಂತ್ರಜ್ಞಾನ ಬೆಳೆದಂತೆ ಪೊಲೀಸ್ ವ್ಯವಸ್ಥೆ ಹೊಸ ಹೊಸ ಸವಾಲುಗಳಿಗೆ ಮುಖಾಮುಖಿ ಆಗುತ್ತದೆ. ಸೈಬರ್ ತಂತ್ರಜ್ಞಾನದ ಜತೆಗೇ ಸೈಬರ್ ಅಪರಾಧಗಳೂ ಹೆಚ್ಚಾಗುತ್ತಿವೆ. ಇದನ್ನು ಪರಿಣಾಮಕಾರಿಯಾಗಿ ತಡೆ ಹಿಡಿಯಬೇಕು. ಸುಳ್ಳು ಸುದ್ದಿಗಳು, ಅಶಾಂತಿ ಸೃಷ್ಟಿಸುವ ಸುಳ್ಳುಗಳನ್ನು, ದ್ವೇಷ ಹರಡುವ ಸುಳ್ಳುಗಳನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಸರ್ವರನ್ನೂ ಸಮಾನವಾಗಿ ಕಾಣುವ ಮತ್ತು ಸಮಾನವಾಗಿ ನಡೆಸಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಮೇಲಿದೆ ಎಂದರು.
ಮಹಿಳೆ, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ರಕ್ಷಣೆ ಕೊಡುವ ಅಗತ್ಯವಿದೆ. ಸುಗಮ ಸಂಚಾರ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಹೀಗಾಗಿ ಹೆಚ್ಚುವರಿ ಪೊಲೀಸ್ ಹುದ್ದೆ ಸೃಷ್ಟಿಸಿದ್ದೇವೆ. ಹೆಚ್ಚುವರಿ ಮಹಿಳಾ ಮತ್ತು ಸಂಚಾರ ಠಾಣೆಗಳನ್ನು ಆರಂಭಿಸಿದ್ದೇವೆ. ಹೊಸ ವಾಹನ ಖರೀದಿಗೆ 100 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದರು.
2125 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು 450 ಕೋಟಿ ನೀಡಲಾಗುವುದು. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಆರೋಗ್ಯ ಭಾಗ್ಯಕ್ಕಾಗಿ 100 ಕೋಟಿ ರೂ ಒದಗಿಸಲಾಗಿದೆ. ನಿವೃತ್ತ ಸಿಬ್ಬಂದಿಯ ಆರೋಗ್ಯ, ಚಿಕಿತ್ಸೆಗಾಗಿ ನಿಶ್ಚಿತ ಠೇವಣಿ ಇಡಲಾಗಿದೆ. ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕಾಗಿ 7 ಜಿಲ್ಲೆಗಳಲ್ಲಿ 7 ಪೊಲೀಸ್ ಪಬ್ಲಿಕ್ ಶಾಲೆ ಆರಂಭಿಸಲಾಗುತ್ತಿದೆ. ಇವುಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರ್ಕಾರ ಬದ್ದವಾಗಿದೆ. ಪೊಲೀಸ್ ಕ್ಯಾಂಟೀನ್ ಗಳನ್ನು ಆರಂಭಿಸಲಾಗುತ್ತಿದೆ ಎಂದರು.