ಗಾಜಾ ಆಸ್ಪತ್ರೆ ಮೇಲೆ ರಾಕೆಟ್ ದಾಳಿ ನಡೆದಿದ್ದೇ ಸುಳ್ಳಾ..? – ಸ್ಫೋಟದ ಹಿಂದೆ ಹಮಾಸ್ ಉಗ್ರರ ಕೈವಾಡ ಇದೆ ಎಂದ ಇಸ್ರೇಲ್

ಗಾಜಾ ಆಸ್ಪತ್ರೆ ಮೇಲೆ ರಾಕೆಟ್ ದಾಳಿ ನಡೆದಿದ್ದೇ ಸುಳ್ಳಾ..? – ಸ್ಫೋಟದ ಹಿಂದೆ ಹಮಾಸ್ ಉಗ್ರರ ಕೈವಾಡ ಇದೆ ಎಂದ ಇಸ್ರೇಲ್

ಇಸ್ರೇಲ್ ಹಾಗೂ ಹಮಾಸ್ ಬಂಡುಕೋರರ ನಡುವಿನ ಕಾಳಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಯುದ್ಧದಲ್ಲಿ ಸಾವಿರಾರು ಜನ ಪ್ರಾಣ ಬಿಟ್ಟಿದ್ದು, ದಿನದಿನಕ್ಕೂ ಬಿಕ್ಕಟ್ಟು ಹೆಚ್ಚುತ್ತಲೇ ಇದೆ. ಇದರ ನಡುವೆ ಗಾಜಾ ನಗರದ ಆಸ್ಪತ್ರೆ ಮೇಲೆ ರಾಕೆಟ್ ದಾಳಿ ನಡೆದಿದ್ದು, ಸುಮಾರು 500 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆಸ್ಪತ್ರೆ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸಿದೆ ಎಂದು ಹಮಾಸ್ ಬಂಡುಕೋರರು ಆರೋಪಿಸಿದ್ದಾರೆ. ಅಮೆರಿಕ ಸೇರಿದಂತೆ ಎಲ್ಲಾ ರಾಷ್ಟ್ರಗಳು ಕೂಡ ಈ ದಾಳಿಗೆ ಖಂಡನೆ ವ್ಯಕ್ತಪಡಿಸಿವೆ.

ದಾಳಿ ಆರೋಪವನ್ನ ತಳ್ಳಿ ಹಾಕಿರುವ ಇಸ್ರೇಲ್, ವಿಡಿಯೋ ರಿಲೀಸ್ ಮಾಡಿ ತಿರುಗೇಟು ನೀಡಿದೆ. ಇದು ಇಸ್ಲಾಮಿಕ್ ಜಿಹಾದ್ ಸಂಘಟನೆ ಉಡಾಯಿಸಿದ ರಾಕೆಟ್ ಮಿಸ್‌ಫೈರ್ ಆಗಿ ನಡೆದ ಅವಘಡ ಎಂದು ಆರೋಪಿಸಿದೆ. ಇದಕ್ಕೆ ಸಾಕ್ಷಿಯಾಗಿ ಆಡಿಯೋ ರೆಕಾರ್ಡಿಂಗ್ ಒಂದನ್ನು ಇಸ್ರೇಲ್ ಸೇನೆ ಬಿಡುಗಡೆ ಮಾಡಿದೆ. ಇಸ್ಲಾಮಿಕ್ ಜಿಹಾದ್‌ನ ರಾಕೆಟ್ ಮಿಸ್‌ ಫೈರಿಂಗ್ ಬಗ್ಗೆ ಹಮಾಸ್ ಉಗ್ರರು ಚರ್ಚೆ ನಡೆಸುತ್ತಿರುವ ಆಡಿಯೋ ಎಂದು ಅದು ಪ್ರತಿಪಾದಿಸಿದೆ. ಇಸ್ರೇಲ್ ಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಈ ದಾಳಿಯನ್ನ ಇಸ್ರೇಲ್ ನಡೆಸಿಲ್ಲ ಎಂದಿದ್ದಾರೆ.

ಇದನ್ನೂ ಓದಿ : ಇಸ್ರೇಲ್‌ ಹಾಗೂ ಹಮಾಸ್‌ ನಡುವೆ ಭೀಕರ ಯುದ್ಧ – ಇಸ್ರೇಲ್ ಪೊಲೀಸರಿಗೆ ಸಮವಸ್ತ್ರ ಪೂರೈಕೆ ಸ್ಥಗಿತಗೊಳಿಸಿದೆ ಕೇರಳ

ಗಾಜಾಪಟ್ಟಿಯ ಅಲ್ ಅಹಿಲ್ ಬ್ಯಾಪ್ಟಿಸ್ಟ್ ಆಸ್ಪತ್ರೆಯ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡವಿದೆ ಅಂತಾ ಪ್ಯಾಲೆಸ್ತೀನ್ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳು ಆರೋಪಿಸ್ತಿವೆ. ಸ್ಫೋಟದಲ್ಲಿ ಸುಮಾರು 500 ಮಂದಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಕೂಡ ಆರೋಪಿಸಿತ್ತು. ಆದ್ರೆ ಆಸ್ಪತ್ರೆ ಮೇಲಿನ ದಾಳಿ ಆರೋಪವನ್ನ ಇಸ್ರೇಲ್ ಸೇನೆ ತಳ್ಳಿ ಹಾಕಿದೆ. ಸ್ಫೋಟದ ಹಿಂದೆ ಇಸ್ಲಾಮಿಕ್ ಜಿಹಾದ್ ಕೈವಾಡವಿದೆ ಅಂತಾ ಇಸ್ರೇಲ್ ಪ್ರಧಾನಿ ಹೇಳಿದ್ರು.

ಪ್ರಾಥಮಿಕ ವಿಶ್ಲೇಷಣೆಗಳ ಪ್ರಕಾರ ರಾಕೆಟ್ ಅಸ್ಪತ್ರೆಯ ಕಾರು ಪಾರ್ಕಿಂಗ್​ನಲ್ಲೇ ಸ್ಫೋಟವಾಗಿದೆ. ಸ್ಫೋಟದಲ್ಲಿ ಯಾರೂ ಸಾವನ್ನಪ್ಪಿರುವ ಸಾಧ್ಯತೆಗಳಿಲ್ಲ ಅಂತಾನೂ ಹೇಳಲಾಗ್ತಿದೆ.  ರಾಕೆಟ್‌ ದಾಳಿಯಿಂದ 15 ಕಾರುಗಳು ಬೆಂಕಿಯಲ್ಲಿ ಸುಟ್ಟು ಹೋಗಿರೋದು ಸ್ಪಷ್ಟವಾಗಿ ಕಾಣ್ತಿದೆ. ಕಾರುಗಳ ಅವಶೇಷಗಳು ಕಾಣುತ್ತಿವೆಯೇ ವಿನಃ ಶವಗಳು ಕಾಣುತ್ತಿಲ್ಲ. ಆಸ್ಪತ್ರೆಗೂ ಹಾನಿಯಾಗಿಲ್ಲ ಅಂತಾ ಹೇಳಲಾಗ್ತಿದೆ. ನಿಜವಾಗಿಯೂ 500 ಮಂದಿ ಕೊಲ್ಲಲ್ಪಟ್ಟಿದ್ದರೆ ಎಲ್ಲಾ ದೇಹಗಳು ಎಲ್ಲಿವೆ ಅನ್ನೋದು ಇಸ್ರೇಲ್ ಸೇನೆಯ ಪ್ರಶ್ನೆ. ಗಾಜಾ ಆಸ್ಪತ್ರೆ ಮೇಲೆ ರಾಕೆಟ್ ದಾಳಿ ನಡೆದಿದ್ದು ದಾಳಿಯನ್ನ ಇಸ್ರೇಲ್ ಮಾಡಿಲ್ಲ. ಜೊತೆಗೆ ಸ್ಫೋಟದಿಂದ ನೂರಾರು ಜನ ಸಾವನ್ನಪ್ಪಿಲ್ಲ ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಗಾಜಾ ಪಟ್ಟಿಯಲ್ಲಿನ ಆಸ್ಪತ್ರೆಯ ಮೇಲೆ ನಡೆದಿರುವ ದಾಳಿಗೆ ಇಸ್ಲಾಮಿಕ್‌ ಜಿಹಾದ್‌ ಸಂಘಟನೆ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ. ಇಸ್ಲಾಮಿಕ್‌ ಜಿಹಾದ್‌ ಸಂಘಟನೆಯ ಉಗ್ರರು ಹಾರಿಸಿದ ರಾಕೆಟ್‌ ಇದಾಗಿದ್ದು ಮಿಸ್‌ಫೈರ್‌ ಆಗಿ ದಿಕ್ಕು ತಪ್ಪಿ, ಆಸ್ಪತ್ರೆ ಮೇಲೆ ಬಿದ್ದಿದೆ ಎಂಬ ಆರೋಪ ಕೇಳಿ ಬರ್ತಿದೆ.

ಮತ್ತೊಂದೆಡೆ ಗಾಜಾ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗೆ ಸೌದಿ ಅರೇಬಿಯಾ ತುರ್ತು ಸಭೆಯನ್ನು ಕರೆದಿದೆ. 57 ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯಾದ ಒಐಸಿ ಸಭೆಯಲ್ಲಿ ಭಾಗಿಯಾಗಲಿದೆ. ಜೆಡ್ಡಾದಲ್ಲಿ ನಡೆಯಲಿರುವ ಸಭೆಯಲ್ಲಿ ಇಸ್ರೇಲ್ ನ ಸೇನಾ ದಾಳಿ, ಮಧ್ಯಪ್ರಾಚ್ಯದ ಸ್ಥಿರತೆ ಮತ್ತು ಭದ್ರತೆಯ ಬಗ್ಗೆಯೂ ಚರ್ಚೆ ನಡೆಯಲಿದೆ. ಹಾಗೇ ಮುಂದಿನ ಹೋರಾಟದ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

 

Shantha Kumari