ಪಂಚರಾಜ್ಯ ಚುನಾವಣೆ ಗೆಲ್ಲಲು ಕಾಂಗ್ರೆಸ್ ಗ್ಯಾರಂಟಿ ಅಸ್ತ್ರ – ಭರವಸೆಗಳು ಅಭಿವೃದ್ಧಿ ಕೆಲಸಗಳಿಗೆ ಮುಳುವಾಗುತ್ತಾ?
ಮೋದಿ ಅಲೆ ಎದುರು ಮಂಕಾಗಿದ್ದ ಕಾಂಗ್ರೆಸ್ಗೆ ಕರ್ನಾಟಕದ ಗೆಲುವು ಅತಿದೊಡ್ಡ ಬೂಸ್ಟ್ ನೀಡಿತ್ತು. ಐದು ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್ ಪ್ರಚಂಡ ಗೆಲುವಿಗೆ ಕಾರಣ ಅನ್ನೋದು ಗುಟ್ಟಾಗೇನು ಉಳಿದಿಲ್ಲ. ಸರ್ಕಾರ ರಚನೆಯಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಒಂದೊಂದೇ ಯೋಜನೆಗಳನ್ನ ಜಾರಿ ಕೂಡ ಮಾಡಿದೆ. ಇದೇ ಜೋಶ್ನಲ್ಲೇ ಪಂಚರಾಜ್ಯ ಚುನಾವಣೆಗೂ ಸಜ್ಜಾಗಿದೆ. ಅದೇ ಉತ್ಸಾಹದಲ್ಲಿ ಒಂದರ ಹಿಂದೆ ಒಂದರಂತೆ ಭರ್ಜರಿ ಕೊಡುಗೆಗಳನ್ನ ಘೋಷಣೆ ಮಾಡುತ್ತಿದೆ. ತೆಲಂಗಾಣ, ಮಧ್ಯಪ್ರದೇಶದಲ್ಲಿ ನೀಡಿರುವ ಭರವಸೆಗಳೇ ಹುಬ್ಬೇರಿಸುವಂತಿವೆ. ಆದ್ರೆ ಈ ಗ್ಯಾರಂಟಿಗಳ ಘೋಷಣೆ ಹಿಂದೆ ಹಲವು ಲೆಕ್ಕಾಚಾರಗಳು ಇವೆ.
ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್ಗಡ ಹಾಗೂ ಮಿಜೋರಾಂ ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಲೋಕಸಭಾ ಚುನಾವಣೆಗೆ ಇದು ಸೆಮಿಫೈನಲ್ ಎಂದೇ ಬಿಂಬಿಸಲಾಗ್ತಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನೇ ಅಸ್ತ್ರ ಮಾಡಿಕೊಂಡು ಪ್ರಚಂಡ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಈಗ ಪಂಚರಾಜ್ಯಗಳಲ್ಲೂ ಇದೇ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ತೆಲಂಗಾಣ, ಮಧ್ಯಪ್ರದೇಶದಲ್ಲಿ ಈಗಾಗಲೇ ಭರ್ಜರಿ ಕೊಡುಗೆಗಳನ್ನೇ ಘೋಷಿಸಿದೆ. ಭರವಸೆಗಳ ಮೂಲಕವೇ ಮತದಾರರ ಮನಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯೋ ತವಕದಲ್ಲಿದೆ.
ಇದನ್ನೂ ಓದಿ : ಮದುವೆ ಸಮಾರಂಭವೊಂದರಲ್ಲಿ ಸಚಿವರ ಕಾಲ ಕೆಳಗೆ ರಾಶಿ ರಾಶಿ ನೋಟು – ಶಿವಾನಂದ ಪಾಟೀಲ್ ವಿರುದ್ಧ ಸಾರ್ವಜನಿಕರ ಆಕ್ರೋಶ
ತೆಲಂಗಾಣದಲ್ಲಿ ಸದ್ಯ BRS ಪಕ್ಷದ ಆಡಳಿತವಿದ್ದು ಚುನಾವಣೆ ಗೆಲ್ಲಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಇದಕ್ಕಾಗಿ ಕರ್ನಾಟಕ ಮಾದರಿಯಲ್ಲಿ ತೆಲಂಗಾಣದಲ್ಲಿ 6 ಗ್ಯಾರಂಟಿ ಯೋಜನೆಗಳ ಘೋಷಣೆ ಮಾಡಿದೆ. ಮಹಾಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ನೆರವು ನೀಡುವುದಾಗಿ ಭರವಸೆ ನೀಡಿದೆ. ಆರ್ಟಿಸಿ ಬಸ್ ಗಳಲ್ಲಿ ಸ್ತ್ರೀಯರಿಗೆ ಫ್ರೀ ಪ್ರಯಾಣ, 500 ರೂಪಾಯಿಗೆ LPG ಸಿಲಿಂಡರ್ ರೈತ ಭರೋಸಾ ಯೋಜನೆಯಡಿ ರೈತರಿಗೆ ವಾರ್ಷಿಕ 15 ಸಾವಿರ ನೆರವು ನೀಡೋದಾಗಿ ಘೋಷಿಸಿದೆ. ಕೃಷಿ ಕಾರ್ಮಿಕರಿಗೆ ₹12 ಸಾವಿರ, ಕ್ವಿಂಟಾಲ್ ಭತ್ತಕ್ಕೆ 500 ರೂ ಬೆಂಬಲ ಬೆಲೆಯ ಭರವಸೆ ನೀಡಿದೆ. ಗೃಹಜ್ಯೋತಿ ಯೋಜನೆಯಡಿ ಪ್ರತೀ ಮನೆಗೆ 200 ಯೂನಿಟ್ ವರೆಗೆ ಫ್ರೀ ವಿದ್ಯುತ್ ನೀಡೋದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಯುವ ವಿಕಾಸಂ ಯೋಜನೆಯಡಿ ಯುವಕರಿಗೆ 5 ಲಕ್ಷ ಮೌಲ್ಯದ ವಿದ್ಯಾ ಭರೋಸಾ ಕಾರ್ಡ್. ಹಿರಿಯ ನಾಗರಿಕರಿಗೆ ಮಾಸಿಕ ವೃದ್ಧಾಪ್ಯ ವೇತನ 4,000 ರೂಪಾಯಿ ನೀಡುತ್ತೇವೆ. ರಾಜೀವ್ ಆರೋಗ್ಯ ಶ್ರೀ ಯೋಜನೆಯಲ್ಲಿ ₹10 ಲಕ್ಷದವರೆಗೆ ಆರೋಗ್ಯ ವಿಮೆ ನೀಡುತ್ತೇವೆ. ಇಂದಿರಮ್ಮ ಮನೆ ಯೋಜನೆಯಡಿ ಸ್ವಂತ ಮನೆ ಇಲ್ಲದವರಿಗೆ ಸೈಟ್, ₹5 ಲಕ್ಷ ಕ್ಯಾಶ್ ಹೀಗೆ ಕಾಂಗ್ರೆಸ್ ಭರವಸೆಗಳ ಮಹಾಪೂರವೇ ಹರಿಸಿದೆ.
ಹೀಗೆ ತೆಲಂಗಾಣವನ್ನ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಹಲವು ದಾಳ ಉರುಳಿಸುತ್ತಿದೆ. 6 ಗ್ಯಾರಂಟಿ ಯೋಜನೆಗಳ ಹೊರತಾಗಿಯೂ ಮದುವೆ ವೇಳೆ ವಧುವಿಗೆ ಭರ್ಜರಿ ಗಿಫ್ಟ್ ನೀಡಲು ಪ್ಲ್ಯಾನ್ ರೂಪಿಸಿದೆ. ಮದುವೆ ಸಮಯದಲ್ಲಿ ವಧುವಿಗೆ 1 ಲಕ್ಷ ರೂಪಾಯಿ ನಗದು ಜೊತೆಗೆ 10 ಗ್ರಾಂ ಚಿನ್ನವನ್ನು ಹೆಚ್ಚುವರಿಯಾಗಿ ಕೊಡಲು ಪ್ರಣಾಳಿಕೆ ಸಿದ್ಧಪಡಿಸಿದೆ. ಇದನ್ನ ಖುದ್ದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಿ ಶ್ರೀಧರ್ ಬಾಬು ಘೋಷಣೆ ಮಾಡಿದ್ದಾರೆ. ಇದು ತೆಲಂಗಾಣ ಕಥೆಯಾದ್ರೆ ಮಧ್ಯಪ್ರದೇಶದಲ್ಲೂ ಮಂಗಳವಾರವಷ್ಟೇ ಹಲವು ಯೋಜನೆಗಳನ್ನ ಘೋಷಿಸಿದೆ.
ಮಧ್ಯಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ ಐಪಿಎಲ್ ತಂಡವನ್ನೇ ಕಟ್ಟೋದಾಗಿ ಕಾಂಗ್ರೆಸ್ ಭರವಸೆ ಕೊಟ್ಟಿದೆ. 2 ಲಕ್ಷ ರೂಪಾಯಿವರೆಗಿನ ರೈತರ ಕೃಷಿ ಸಾಲಗಳನ್ನು ಮನ್ನಾ ಮಾಡುವ ಭರವಸೆ ನೀಡಿದೆ. 500 ರೂಪಾಯಿಗೆ ಎಲ್ಪಿಜಿ ಸಿಲಿಂಡರ್, ಒಬಿಸಿಗಳಿಗೆ ಶೇ.27 ಮೀಸಲಾತಿ ಸೌಲಭ್ಯ. ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ 25 ಲಕ್ಷ ರೂಪಾಯಿಯ ಆರೋಗ್ಯ ವಿಮೆ. 100 ಯೂನಿಟ್ವರೆಗೆ ಉಚಿತ ವಿದ್ಯುತ್, 200 ಯೂನಿಟ್ವರೆಗೆ ಅರ್ಧದಷ್ಟು ಬಿಲ್. ರೈತರಿಂದ ಕ್ವಿಂಟಾಲ್ ಗೋಧಿಗೆ ₹2,600, ಭತ್ತಕ್ಕೆ ₹2,500 ನೀಡಿ ಖರೀದಿಸುವ ಭರವಸೆ ನೀಡಿದೆ.
ಹೀಗೆ ಮಧ್ಯಪ್ರದೇಶವನ್ನೂ ಗೆಲ್ಲಲು ಕಾಂಗ್ರೆಸ್ ಗ್ಯಾರಂಟಿಗಳನ್ನೇ ಗುರಾಣಿಯಾಗಿ ಬಳಸುತ್ತಿದೆ. ಹಾಗೇ ಮಿಜೋರಾಮ್ನಲ್ಲೂ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದು 15 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ, ಹಳೆಯ ಪಿಂಚಣಿ ಯೋಜನೆ, ಬಡ ಕುಟುಂಬಗಳಿಗೆ 750 ರೂಪಾಯಿಗೆ ಸಿಲಿಂಡರ್ ನೀಡುವುದಾಗಿ ಘೋಷಿಸಿದೆ. ವೃದ್ಧಾಪ್ಯ ವೇತನ 2 ಸಾವಿರ ರೂಪಾಯಿ ನೀಡೋದಾಗಿ ಭರವಸೆ ನೀಡಿದೆ. ಹಾಗೇ ರಾಜಸ್ಥಾನ ಹಾಗೂ ಛತ್ತೀಸ್ಗಡದಲ್ಲಿ ಕಾಂಗ್ರೆಸ್ ಸರ್ಕಾರವೇ ಆಡಳಿತ ನಡೆಸುತ್ತಿದ್ದು ಹಿಂದೆ ನೀಡಿದ್ದ ಭರವಸೆಗಳನ್ನೇ ಮುಂದುವರಿಸೋದಾಗಿ ಘೋಷಿಸಿದೆ. ಆದ್ರೆ ಕಾಂಗ್ರೆಸ್ ಪಕ್ಷ ರಾಜ್ಯಗಳಲ್ಲಿ ಗೆದ್ದು ಅಧಿಕಾರಕ್ಕೆ ಬರುವ ಸಲುವಾಗಿ ನೀಡುತ್ತಿರುವ ಭರವಸೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಟೀಕೆಯೂ ವ್ಯಕ್ತವಾಗುತ್ತಿದೆ. ಜನರಿಗೆ ಆಮಿಷವೊಡ್ಡಿ ಅಭಿವೃದ್ಧಿಗೆ ಹಿನ್ನಡೆ ಮಾಡುತ್ತಿದೆ ಅನ್ನುವ ಆರೋಪವೂ ಇದೆ.
ಗ್ಯಾರಂಟಿ ಯೋಜನೆಗಳ ಜಾರಿಯಿಂದ ಅಭಿವೃದ್ಧಿಯ ಮೇಲೆ ನೇರ ಪರಿಣಾಮ ಬೀರುತ್ತೆ. ಯೋಜನೆಗಳ ಜಾರಿಗೆ ಹಣವನ್ನ ಮೀಸಲಿಡಲೇಬೇಕಾದ ಅನಿವಾರ್ಯತೆ ಎದುರಾಗುತ್ತೆ. ಒಂದೊಂದು ಯೋಜನೆಗೆ ಇಂತಿಷ್ಟು ಹಣ ಅಂತಾ ಬಜೆಟ್ ನಲ್ಲಿ ಮೀಸಲಿಡಬೇಕಾಗುತ್ತೆ. ಬಜೆಟ್ ಗಾತ್ರ ಹೆಚ್ಚಿಸುವುದರಿಂದ ಆರ್ಥಿಕ ಕೊರತೆಯಾಗಿ ಸಾಲ ಪಡೆಯುವ ಅನಿವಾರ್ಯತೆ ಎದುರಾಗುತ್ತೆ. ಪ್ರತೀ ವರ್ಷ ಸಾವಿರಾರು ಕೋಟಿ ಹಣವನ್ನ ಗ್ಯಾರಂಟಿ ಯೋಜನೆಗಳಿಗೇ ನೀಡಬೇಕು. ಆಯವ್ಯಯ ಸರಿ ಹೋಗದೆ ರಾಜ್ಯದ ಇತರೆ ಅಭಿವೃದ್ಧಿಗೆ ದೊಡ್ಡ ಹೊಡೆತ ಬೀಳುತ್ತೆ. ಕ್ಷೇತ್ರಗಳ ಅಭಿವೃದ್ಧಿಗೆ ಶಾಸಕರಿಗೆ ನೀಡುವ ಅನುದಾನದಲ್ಲೂ ಕಡಿತಗೊಳಿಸಬೇಕು. ಅನುದಾನ ಸಿಗದೇ ಇದ್ದಾಗ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತವೆ. ಇದ್ರಿಂದ ಸ್ವಪಕ್ಷ ಸೇರಿದಂತೆ ರಾಜ್ಯದ ಶಾಸಕರು ಸರ್ಕಾರದ ವಿರುದ್ಧವೇ ತಿರುಗಿ ಬೀಳುವ ಸಾಧ್ಯತೆ ಇದೆ. ಹೀಗಾಗಿ ಆದಾಯ ಮೂಲವನ್ನ ಹೆಚ್ಚಿಸಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗುತ್ತದೆ. ಅದಕ್ಕಾಗಿ ಅನಿವಾರ್ಯವಾಗಿ ದಿನಬಳಕೆ ವಸ್ತುಗಳು, ಮದ್ಯ ಸೇರಿದಂತೆ ಕೆಲ ಉತ್ಪನ್ನಗಳ ಬೆಲೆ ಹೆಚ್ಚಿಸಬೇಕಾಗುತ್ತೆ. ಬೆಲೆ ಹೆಚ್ಚಳವಾದಾಗ ಸಹಜವಾಗಿ ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರುತ್ತೆ.